ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ರಥೋತ್ಸವ ಇಂದು; ತಾಡೋಲೆ ಕಟ್ಟು ಅಡ್ಡಪಲ್ಲಕ್ಕಿ ನಾಳೆ

ಲಿಂ.ವಿಜಯ ಮಹಾಂತರ ಶರಣ ಸಂಸ್ಕೃತಿ ಮಹೋತ್ಸವ
Last Updated 2 ಸೆಪ್ಟೆಂಬರ್ 2013, 7:26 IST
ಅಕ್ಷರ ಗಾತ್ರ

ಇಳಕಲ್: ಚಿತ್ತರಗಿ ವಿಜಯ ಮಹಾಂತೇಶ್ವರ ನಿರಂಜನ ಪೀಠದ 16 ನೇ ಪೀಠಾಧಿಪತಿ, ಮಹಾತಪಸ್ವಿ, ಚಿತ್ತರಗಿ ಚಿ.ಜ್ಯೋತಿ ಲಿಂ.ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಸೆ.2 ರಂದು ವಚನ ಸಾಹಿತ್ಯದ ರಥೋತ್ಸವ ಹಾಗೂ ಸೆ.3 ರಂದು ತಾಡೋಲೆ ಕಟ್ಟುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ.

ವಿಜಯ ಮಹಾಂತರು ಹಾಸನ ಜಿಲ್ಲೆಯ ಸಸಿವಾಳ ಗ್ರಾಮದಲ್ಲಿ ವೀರಯ್ಯ ಹಾಗೂ ಗೌರಮ್ಮ ದಂಪತಿಗಳ ಮಗನಾಗಿ  ಕ್ರಿ.ಶ 1850 ರಲ್ಲಿ ಜನಿಸಿದರು. ಮಳೆಯಪ್ಪ ಅವರ ಮೂಲನಾಮ. ಚಿಕ್ಕಂದಿನಲ್ಲೆ ಸಮೀಪದ ಕಲ್ಬೆಟ್ಟದಲ್ಲಿದ್ದ ಸನ್ಯಾಸಿಗಳ ಪ್ರಭಾವಕ್ಕೆ ಒಳಗಾಗಿ ಅಧ್ಯಾತ್ಮದಲ್ಲಿ ಆಸಕ್ತರಾದರು.

ತರುಣ ವಯಸ್ಸಿನಲ್ಲೆ ಅನುಷ್ಠಾನ, ಜಪ-ತಪಗಳನ್ನು ಮಾಡಿ ಸಾಧಕರಾದರು. ನಂತರ ಬಳ್ಳಾರಿಯ ಸಕ್ರಿ ಕರಡೆಪ್ಪನವರ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಕೈಗೊಂಡರು. ಪೀಠದ ಪರಮ ಭಕ್ತರಾಗಿದ್ದ ಅಮರಾವತಿಯ ಶ್ರೀಮಂತ ರಾಮಪ್ಪ ದೇಸಾಯಿ ಅವರ ವಿನಂತಿ ಮೇರೆಗೆ ಮಳೆಯಪ್ಪನವರು  ಕ್ರಿ.ಶ 1879 ರಲ್ಲಿ ಚಿತ್ತರಗಿ ವಿಜಯ ಮಹಾಂತೇಶ್ವರರ ಸಂಸ್ಥಾನಮಠಕ್ಕೆ ವಿಜಯ ಮಹಾಂತ ಹೆಸರಿನೊಂದಿಗೆ ಪೀಠಾಧಿಪತಿಯಾದರು.

ಮಹಾಂತರು ಬಸವಾದಿ ಶರಣರ ವಚನಗಳ ತಾಡೋಲೆ ಕಟ್ಟುಗಳೊಂದಿಗೆ ಕುದುರೆಯ ಮೇಲೆ ನಾಡು ಸುತ್ತಿ, ಬಸವ ತತ್ವ ಪ್ರಸಾರ ಮಾಡಿದರು. ಕಾವಿ ಪೇಟ ಹೊರತುಪಡಿಸಿ ಉಳಿದಂತೆ ಶ್ವೇತ ವಸ್ತ್ರಧಾರಿ. ಪ್ರೀತಿಯ ಆಕಳು `ಮಹಾಂತಮ್ಮ' ಸದಾ ಜತೆಗೆ ಇರುತ್ತಿತ್ತು. ಅವರು  `ಬಸವಣ್ಣ'ನವರಿಗೆ `ಕಲ್ಯಾಣದಪ್ಪ' ಎನ್ನುತ್ತಿದ್ದರು. ಪೂಜೆ, ಪುನಸ್ಕಾರಕ್ಕಿಂತ ಭಕ್ತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದರು. ಭಕ್ತರ ಕಷ್ಟಗಳಿಗೆ ಅಂತಃಕರಣದಿಂದ ಸ್ಪಂದಿಸುತ್ತಿದ್ದ ಮಾನವೀಯತೆಯ ಸಾಕಾರ ಮೂರ್ತಿ ಅವರಾಗಿದ್ದರು. ಭಕ್ತರ ಸಹಕಾರದಿಂದ ಪೀಠದ ಎಲ್ಲಾ 64 ಶಾಖಾ ಮಠಗಳನ್ನು ಅಭಿವೃದ್ಧಿಗೊಳಿಸಿದರು. 

ವಿಜಯ ಮಹಾಂತರು ಭಕ್ತರ ಪಾಲಿಗೆ `ಪವಾಡ ಪುರುಷ'. ಆದರೆ ಅವರೆಂದೂ ಪವಾಡ ಮಾಡಿದವರಲ್ಲ. ಆದರೆ ಶ್ರೀಗಳು ಸಹಜವಾಗಿ ಆಡುತ್ತಿದ್ದ ಮಾತುಗಳು ಎಂದೂ ಹುಸಿ ಆಗುತ್ತಿರಲಿಲ್ಲವಂತೆ. ಹೀಗಾಗಿ ಭಕ್ತರು ಅವರನ್ನು ಪವಾಡ ಪುರುಷ ಎಂದೇ ನಂಬಿದ್ದರು. ವಿಜಯ ಮಹಾಂತ ಶಿವಯೋಗಿಗಳು ಗುರುತಿಸಿದ ಸ್ಥಳದಲ್ಲೇ (ಶಿವಯೋಗಮಂದಿರ) ಹಾನಗಲ್ ಕುಮಾರೇಶ್ವರ ಸ್ವಾಮೀಜಿ ಅವರು ವೀರಶೈವ ಮಠಗಳಿಗೆ ಪೀಠಾಧಿಪತಿಯಾಗುವ ವಟುಗಳ ತರಬೇತಿ ಕೇಂದ್ರ `ಮದ್ವಿರಶೈವ ಸಂಸ್ಕೃತ ಪಾಠಶಾಲೆ'ಯನ್ನು ಸ್ಥಾಪಿಸಿದರು.

ಶಿವಯೋಗಿಗಳು ತಾವು ಲಿಂಗೈಕ್ಯರಾದ ನಂತರ ತಮ್ಮ ಸಮಾಧಿ ಇಲ್ಲವೇ ಗದ್ದುಗೆ ಕಟ್ಟದಂತೆ ಭಕ್ತರಿಗೆ ಸೂಚಿಸಿದ್ದರು. `ಮಣ್ಣಿಗೆ ಸೇರಿ, ಸಸ್ಯಗಳಿಗೆ ಜೀವಾಮೃತವಾಗಿ, ಕಾಳಿನೊಳಗಿನ ಚೈತನ್ಯ ತಾವಾಗಬೇಕು' ಎಂಬ ಬಯಕೆ ಅವರದ್ದಾಗಿತ್ತು. ಶಿವಯೋಗಿಗಳು 1911 ರಲ್ಲಿ ಲಿಂಗೈಕ್ಯರಾದರು. ಆದರೆ  ಭಕ್ತರು ತಮ್ಮ ಆರಾಧ್ಯ ಗುರುವಿನ ಶಕ್ತಿ ಕೇಂದ್ರದಿಂದ ಸ್ಪೂರ್ತಿ ಪಡೆದು, ಧನ್ಯರಾಗಲು ಕರ್ತೃ ಗದ್ದುಗೆ ಕಟ್ಟಿದರು. ಇಂದು ಲಕ್ಷೋಪಲಕ್ಷ ಭಕ್ತರು ಗದ್ದುಗೆಯ ದರ್ಶನ ಮಾಡಿ, ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಪ್ರತಿ ವರ್ಷ ಶ್ರಾವಣದಲ್ಲಿ ಪೂಜ್ಯರ ಸ್ಮರಣೆಯಲ್ಲಿ ಶರಣ ಸಂಸ್ಕೃತಿ ಮಹೋತ್ಸವ ನಡೆಯುತ್ತದೆ, 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT