ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಿದಾಗ....

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಚನಗಳ ಉದ್ದೇಶವು ಜಾತಿವಿನಾಶ ಚಳವಳಿಯಲ್ಲ ಎಂಬ ನನ್ನ ಹಾಗೂ ನನ್ನ ಸಹಸಂಶೋಧಕರ ವಾದವು `ಪ್ರಜಾವಾಣಿ'ಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನನ್ನ ವಾದಕ್ಕೆ ಪ್ರತಿಕ್ರಿಯಿಸಿದವರೆಲ್ಲರೂ ನನ್ನ ವಾದವು ವಚನಗಳ ಹಿರಿಮೆಯನ್ನು ಅಲ್ಲಗಳೆಯುತ್ತಿದೆ ಎಂಬುದಾಗಿ ಭಾವಿಸಿದ್ದಾರೆ. ಅದನ್ನು ಸ್ಪಷ್ಟೀಕರಿಸಲು ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಬೇಕೆಂಬುದು ನಮ್ಮ ವಾದವೆಂಬುದನ್ನು ಓದುಗರ ಗಮನಕ್ಕೆ ತಂದಿದ್ದೂ ಆಗಿದೆ. ಆ ಹೇಳಿಕೆಯ ಕುರಿತೂ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಲ್ಲಿ ಪರೋಕ್ಷವಾಗಿ ಇವರೆಲ್ಲರೂ ಅಧ್ಯಾತ್ಮ ಸಂಪ್ರದಾಯವನ್ನು ಬ್ರಾಹ್ಮಣರಿಗೆ ಸಮೀಕರಿಸುವುದು ಕಂಡುಬರುತ್ತದೆ. ಇಲ್ಲಿ ಬಹುಶಃ ಈ ಅಭಿಪ್ರಾಯಗಳಿಗೆ ಉತ್ತರ ನೀಡುವುದಕ್ಕಿಂತ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಮತ್ತೂ ಸ್ಪಷ್ಟೀಕರಿಸುವುದು ಸೂಕ್ತ ಎನ್ನಿಸುತ್ತದೆ.

ಭಾರತೀಯ ಅಧ್ಯಾತ್ಮ ಪರಂಪರೆಯು ಇಂದಿನವರೆಗೂ ಐತಿಹಾಸಿಕ ಏಳು ಬೀಳುಗಳನ್ನೆಲ್ಲ ದಾಟಿಕೊಂಡು ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಅದರ ಕುರಿತು ಅಧಿಕೃತವಾಗಿ ತಿಳಿದುಕೊಳ್ಳುವ ಗುರಿಯನ್ನು ಸಮಾಜ ವಿಜ್ಞಾನವು ಇನ್ನೂ ತಲುಪಿಲ್ಲ. ಏಕೆಂದರೆ, ಅದರ ಒಂದು ವಿಶೇಷತೆಯೆಂದರೆ ಅದನ್ನು ಗುರು, ಶಿಷ್ಯವೃತ್ತಿ, ಸತತ ಸಾಧನೆ ಇತ್ಯಾದಿಗಳಿಂದಲೇ ಕಲಿಯಬೇಕಾಗುತ್ತದೆ. ಅದರ ಕುರಿತು ನಮ್ಮ ಆಧುನಿಕ ಪರಿಭಾಷೆಗಳಲ್ಲಿ ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ನಾವಿನ್ನೂ ಸರಿಯಾದ ಭಾಷೆಯನ್ನು ಬೆಳೆಸಿಕೊಂಡಿಲ್ಲವೆಂಬುದು ವಚನದ ಕುರಿತ ಈ ಚರ್ಚೆಯಿಂದ ದೃಢಪಡುತ್ತದೆ. ಏಕೆ ಈ ಸಂಪ್ರದಾಯವನ್ನು ಪ್ರವೇಶಿಸಲು ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಈಗ ಇರುವ ವಿವರಣೆಗಳೆಲ್ಲವೂ ಕ್ರೈಸ್ತ ಥಿಯಾಲಜಿಯನ್ನಾಧರಿಸಿ ಹುಟ್ಟಿದಂಥವು. ಅಂದರೆ, ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪ್ರಥಮವಾಗಿ ಸಮಾಜ ವಿಜ್ಞಾನದ ಪರಿಭಾಷೆಯಲ್ಲಿ ಇಟ್ಟ ಐರೋಪ್ಯರು ತಮಗೆ ಗೊತ್ತಿದ್ದ ಒಂದೇ ಒಂದು ಪರಿಭಾಷೆಯ ಲೋಕದಿಂದ ಇದನ್ನು ವರ್ಣಿಸಿದರು, ಅದೇ ಕ್ರೈಸ್ತರ ಥಿಯಾಲಜಿಯ ಲೋಕ. ಅಂದರೆ, ಇಂದು ಅಧ್ಯಾತ್ಮದ ಜ್ಞಾನದ ಹಿನ್ನೆಲೆಯನ್ನು ಹೊಂದಿದವರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಇಂದಿನ ಸಮಾಜ ವಿಜ್ಞಾನಿಗಳು ಸಂಶೋಧನಾ ಭಾಷೆಯಲ್ಲಿ ವರ್ಣಿಸಬೇಕಾದರೆ ಥಿಯಾಲಜಿಗೂ ಹೊರತಾದ ವೈಜ್ಞಾನಿಕ ಭಾಷೆಯೊಂದರ ಅಗತ್ಯವಿದೆ.

ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಕಾಣುವ ಮೇಲ್ನೋಟದ ವೈವಿಧ್ಯತೆಗಳ ಹಿಂದೆ ಒಂದು  ಗುರಿಯಿದೆ. ಈ ವೈವಿಧ್ಯತೆಗಳೆಲ್ಲವೂ ಮಾರ್ಗಗಳ ವ್ಯತ್ಯಾಸಗಳು ಅಷ್ಟೆ.  ಈ ವ್ಯತ್ಯಾಸಗಳನ್ನೇ ನಾವು ವ್ಯವಸ್ಥೆ, ಪ್ರತಿಭಟನೆ ಇತ್ಯಾದಿ ಪರಿಭಾಷೆಗಳಿಂದ ವರ್ಣಿಸುತ್ತಿದ್ದೇವೆ. ಆದರೆ ಇವರೆಲ್ಲರೂ ಸತ್ಯವನ್ನು ಹುಡುಕುತ್ತಿದ್ದರು. ಬುದ್ಧನು ಹುಡುಕಿದ್ದೂ, ಶಂಕರಾಚಾರ್ಯರು ಹುಡುಕಿದ್ದೂ,  ಅಲ್ಲಮನು ಹುಡುಕಿದ್ದೂ ಇದನ್ನೇ. ಅದನ್ನೇ ಈ ವೈವಿಧ್ಯಪೂರ್ಣ ಮಾರ್ಗಗಳಲ್ಲಿ ಹುಡುಕಿದ್ದಾರೆ. ನಮ್ಮ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ಕರ್ಮ ಮಾರ್ಗ, ಜ್ಞಾನ ಮಾರ್ಗ, ಭಕ್ತಿ ಮಾರ್ಗ ಇವೆಲ್ಲವುಗಳೂ ಸತ್ಯದ ಸಾಕ್ಷಾತ್ಕಾರಕ್ಕಾಗಿ ಇವೆ ಎಂದಿದೆ. ಹಾಗಾಗಿ ಜ್ಞಾನಮಾರ್ಗವನ್ನು ಹಿಡಿದ ಬುದ್ಧ, ಶಂಕರ ಇವರಂತೆ ಭಕ್ತಿ ಮಾರ್ಗವನ್ನು ಹಿಡಿದ ವಚನಕಾರರು ಬೇರೆಯಲ್ಲ. ಇವರೆಲ್ಲರೂ ಈ ಸತ್ಯವನ್ನೇ ಗುರಿಯಾಗಿಟ್ಟುಕೊಂಡಿದ್ದಾರೆ. ಅದನ್ನು ತಿಳಿದವನು ಈ ಭವದಿಂದ ಕಳಚಿಕೊಳ್ಳುತ್ತಾನೆ ಎನ್ನುತ್ತಾರೆ. ಆ ಸತ್ಯಕ್ಕೆ ಈ ಯಾವ ಪ್ರಾಪಂಚಿಕ ಉಪಾಧಿಗಳ ವಿಕಲ್ಪವೂ ಇಲ್ಲ. ಆ ಅವಸ್ಥೆಯನ್ನೇ ನಿರ್ವಾಣ, ಸಮಾಧಿ, ಸಾಯುಜ್ಯ, ಮೋಕ್ಷ, ಇತ್ಯಾದಿ ವಿಭಿನ್ನ ಶಬ್ದಗಳಿಂದ ಕರೆಯಲಾಗಿದೆ. ಅದನ್ನೇ ಶಿವ, ವಿಷ್ಣು, ಬ್ರಹ್ಮ, ಇತ್ಯಾದಿಯಾಗಿ ಬೇರೆ ಬೇರೆ ಹೆಸರಿನಲ್ಲಿ ಉಪಾಸಿಸಲಾಗುತ್ತದೆ ಎಂಬುದಾಗಿ ಭಾರತೀಯ ಸಂಪ್ರದಾಯವು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಒಂದೇ ಸತ್ಯವನ್ನು ತಿಳಿಯುವುದೇ ಈ ಎಲ್ಲಾ ಮಾರ್ಗಗಳ ಧ್ಯೇಯವೆಂಬುದನ್ನು ಯಾವುದೇ ಸಂದೇಹಕ್ಕೆ ಎಡೆ ಇಡದಂತೆ ನಮ್ಮ ಸಂಪ್ರದಾಯಗಳು ಒತ್ತಿ ಹೇಳಿವೆ.

ಈ ಮಾರ್ಗಗಳು ವೈವಿಧ್ಯಪೂರ್ಣವಾಗಿದ್ದರೂ ಕೂಡ ಸತ್ಯವನ್ನು ತಲುಪುವ ವಿಧಾನದಲ್ಲೂ ಒಂದು ಸಾಮಾನ್ಯ ಯುಕ್ತಿಯನ್ನು ಗುರುತಿಸಬಹುದು. ಅದೆಂದರೆ ಈ ಮಾರ್ಗಗಳನ್ನು ಆಯ್ದುಕೊಂಡ ಸಾಧಕನು ಕ್ರಮೇಣವಾಗಿ ಈ ಸಂಸಾರದ ಉಪಾಧಿಗಳಿಂದ ಕಳಚಿಕೊಂಡು ನಿರ್ಲಿಪ್ತತೆಯನ್ನು ಸಿದ್ಧಿಸಿಕೊಳ್ಳಬೇಕು. ಅವುಗಳಲ್ಲಿ ಪ್ರಾಕೃತಿಕ ಹಾಗೂ ಸಾಂಸಾರಿಕ ಪ್ರಭೇದಗಳಾದ ದೇಹ, ಜಾತಿ, ಕುಲ, ಮೇಲು-ಕೀಳು ಇತ್ಯಾದಿಗಳು, ಅಸ್ಮಿತೆ, ಅಹಂಕಾರಗಳು, ಅರಿಷಡ್ವರ್ಗಾದಿಗಳು, ಇವೆಲ್ಲವುಗಳ ಜೊತೆಗಿನ ಆಸಕ್ತಿಯನ್ನು ತ್ಯಜಿಸಬೇಕು ಎನ್ನಲಾಗುತ್ತದೆ. ಸನ್ಯಾಸವನ್ನು ಗ್ರಹಿಸಿದವರು ಸಂಸಾರದಿಂದಲೇ ಹೊರಗೆ ಹೋದರೆ, ಭಕ್ತಿಮಾರ್ಗವನ್ನು ತುಳಿದವರು ಸಂಸಾರದಲ್ಲಿದ್ದುಕೊಂಡೇ ಅದನ್ನು ಸಾಧಿಸಲು ವಿಧಾನಗಳನ್ನು ರೂಪಿಸಿದರು. ಈ ಪ್ರಭೇದಗಳು ಹಾಗೂ ಉಪಾಧಿಗಳಿಂದ ಕಳಚಿಕೊಳ್ಳದೇ ಆ ಪರಮ ಅವಸ್ಥೆಯನ್ನು ಹೊಂದಲು ಒಬ್ಬ ವ್ಯಕ್ತಿಗೆ ಸಾಧ್ಯವಿಲ್ಲ, ಅವು ಆ ಜ್ಞಾನವನ್ನು ಹೊಂದಲು ಅಡ್ಡಿಗಳಾಗಿವೆ ಎಂಬುದನ್ನು ಎಲ್ಲರೂ ಗುರುತಿಸಿಯೇ ಮಾರ್ಗಗಳನ್ನು ರಚಿಸಿದ್ದಾರೆ. ಈ ಗುರಿಯನ್ನು ಹೊಂದಲು ಉದ್ದೇಶಿಸಿದ ವ್ಯಕ್ತಿಯು ತನ್ನ ವಿಶಿಷ್ಟತೆಗನುಗುಣವಾಗಿ ಮಾರ್ಗವನ್ನೂ, ಗುರುಗಳನ್ನೂ ಆರಿಸಿಕೊಳ್ಳುತ್ತಿದ್ದುದೂ ತಿಳಿದುಬರುತ್ತದೆ.

ಈ ಮೇಲಿನ ಸಂಗತಿಯನ್ನು ನಾನು ನನ್ನದೇ ಆದ ಭಾಷೆಯಲ್ಲಿ ಇಡುತ್ತೇನೆ: ಅಂದರೆ ಒಬ್ಬ ವ್ಯಕ್ತಿಯು ಶಿಶುವಾಗಿರುವಾಗ ಅವನಿಗೆ ಈ ಪ್ರಪಂಚವು ಕೇವಲ ಇಂದ್ರಿಯಗಳ ಅರಿವಿಗೆ ಬರುತ್ತಿರುತ್ತದೆ, ಆದರೆ ಅರ್ಥವಾಗುವುದಿಲ್ಲ.  ಶೈಶವಾವಸ್ಥೆಯನ್ನು ದಾಟಿ ಬಾಲ್ಯಾವಸ್ಥೆಯನ್ನು ತಳೆಯುವಾಗ ತನ್ನ ಇಂದ್ರಿಯಗಳ ಅರಿವಿಗೆ ಬರುತ್ತಿರುವುದು ಏನು? ಎಂಬ ಅರ್ಥಪ್ರಪಂಚವನ್ನು ಅವನು ತನ್ನ ಸಮಾಜದಿಂದ ಪಡೆದುಕೊಳ್ಳುತ್ತಾನೆ. ಅಂದರೆ ಅವನ ಅರಿವು ಅನುಭವವಾಗಿ ಬದಲಾಗುತ್ತದೆ. ಪಾಶ್ಚಾತ್ಯರ ಪ್ರಕಾರ ಅನುಭವವೆಂದರೆ ನಮಗಾಗುವ ಸಂವೇದನೆಗಳು. ನನ್ನ ಪ್ರಕಾರ ಈ ಕಲ್ಪನೆ ಸರಿಯಲ್ಲ. ಏಕೆಂದರೆ ಅಂಥ ಸ್ಥಿತಿಯು ಮಾನಸಿಕ ಆಘಾತದಲ್ಲಿ ಮಾತ್ರ ಇರಬಲ್ಲದು. ಅದಕ್ಕೆ ಬದಲಾಗಿ, ಅನುಭವವೆಂದರೆ ಅರಿವನ್ನು ಒಂದು ಅರ್ಥವಿನ್ಯಾಸವನ್ನಾಗಿ ಮಾರ್ಪಡಿಸುವ ಕೌಶಲ್ಯ ಎಂದರೆ ಸೂಕ್ತ. ಅಂದರೆ ತಾನೇನನ್ನು ಅರಿಯುತ್ತಿದ್ದೇನೆ ಎಂಬುದನ್ನು ಒಂದು ವಿನ್ಯಾಸದಲ್ಲಿ ರಚಿಸಿಕೊಂಡು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಆ ಬಾಲಕನು ಪಡೆಯುತ್ತಾನೆ. ಇದರ ಭಾಗವಾಗಿಯೇ ಈ ಸಾಂಸಾರಿಕ ಪ್ರಭೇದಗಳು, ಸಂಬಂಧಗಳು, ವ್ಯಕ್ತಿವಿಶಿಷ್ಟತೆಗಳು ಇತ್ಯಾದಿಗಳೆಲ್ಲವೂ ಅವನಲ್ಲಿ ಆಕಾರ ತಳೆಯುತ್ತವೆ. ಇವೆಲ್ಲವುಗಳನ್ನು ಎಷ್ಟು ಸಮರ್ಥವಾಗಿ ವಿನ್ಯಾಸಗೊಳಿಸಿ ಅರ್ಥೈಸುವ ಶಕ್ತಿ ಒಬ್ಬನಿಗಿದೆಯೊ ಅವನನ್ನು ಅಷ್ಟರ ಮಟ್ಟಿಗೆ ಅನುಭವಸ್ಥನೆಂಬುದಾಗಿ ಜನರು ಕರೆಯುತ್ತಾರೆ. ಅರಿವಿದ್ದವರಿಗೆಲ್ಲವೂ ಅದರ ಸರಿಯಾದ ಅನುಭವ ಇದೆ ಎನ್ನಲಿಕ್ಕೆ ಬರುವುದಿಲ್ಲ. ಇಂಥ ಅನುಭವವು ಈ ಪ್ರಪಂಚದಲ್ಲಿ ವ್ಯವಹರಿಸಲು ಅತ್ಯಗತ್ಯ. ಹಾಗಾಗಿ ಅನುಭವವು ಸಾಂಸಾರಿಕ ಬದುಕಿನ ಜೊತೆಗೆ ನಮ್ಮನ್ನು ಗಟ್ಟಿಯಾಗಿ ಅಂಟಿಸುತ್ತದೆ. ಆದರೆ ಪ್ರಾಪಂಚಿಕ  ಸುಖ ದುಃಖಗಳೆಲ್ಲವೂ ಈ ಅನುಭವದ ಒಂದು ಭಾಗವಾಗಿ ನಮ್ಮನ್ನು ಅನಿವಾರ್ಯವಾಗಿ ಸುತ್ತಿಕೊಳ್ಳುತ್ತವೆ.

ಮನುಷ್ಯನು ಈ ಪ್ರಾಪಂಚಿಕ ದುಃಖಗಳಿಂದ ಬಿಡುಗಡೆ ಹೊಂದಿ ಆತ್ಯಂತಿಕ ಆನಂದವನ್ನು ಪಡೆಯುವುದು ಹೇಗೆ ಎಂಬುದನ್ನು ಎಲ್ಲಾ ಸಂಸ್ಕೃತಿಗಳೂ ಅರಸಿವೆ. ಅಧ್ಯಾತ್ಮವು ಕೂಡ ಅಂಥ ಹುಡುಕಾಟವೇ ಆಗಿದೆ. ಪಾಶ್ಚಾತ್ಯರ ಆನಂದದ ಕಲ್ಪನೆಯಲ್ಲಿ ಈ ಪ್ರಪಂಚವನ್ನೇ ಬದಲಿಸುವ ಕಾರ್ಯಕ್ರಮವು ಮೂಲಭೂತವಾಗಿರುತ್ತದೆ. ಆದರೆ ಭಾರತೀಯರ ಅಧ್ಯಾತ್ಮವು ಕಂಡುಕೊಂಡ ಉತ್ತರವೆಂದರೆ ಪ್ರಪಂಚವು ಈಗಿರುವಂತೆಯೇ ಮನುಷ್ಯನು ಯಾವುದೇ ಅವಸ್ಥೆಯಲ್ಲೂ ಆ ಆನಂದವನ್ನು ಹೊಂದುವುದು ಸಾಧ್ಯ. ಈ ಸ್ಥಿತಿಯನ್ನು ತಲುಪಲಿಕ್ಕೆ ಪ್ರಪಂಚವನ್ನು ಬದಲಿಸುವುದರ ಬದಲಾಗಿ ಒಬ್ಬನು ತನ್ನ ಪ್ರಾಪಂಚಿಕ ಅನುಭವದಿಂದಲೇ ಮುಕ್ತನಾಗಬೇಕು.  ಅಂದರೆ ತನ್ನ ಮನಸ್ಸಿನೊಳಗಿರುವ ಅರ್ಥ ವಿನ್ಯಾಸಗಳ ವಾಸ್ತವದಿಂದ ಕಳಚಿಕೊಳ್ಳಬೇಕು. ಆಗ ಆತನು ಮತ್ತೆ ಸಂಸಾರ ಚಕ್ರಕ್ಕೆ ಬಂಧಿತನಾಗುವುದಿಲ್ಲ ಅಥವಾ ಅದರಿಂದ ಮುಕ್ತನಾಗುತ್ತಾನೆ. ಆಗ ಹುಟ್ಟುವುದು ಅನುಭಾವ ಸ್ಥಿತಿ. ಅಂದರೆ ಇದು ಸಂಸಾರದಲ್ಲಿ ಬದುಕಲು ನಾವು ಯಾವ ಕೌಶಲ್ಯವನ್ನು ರೂಢಿಸಿಕೊಂಡಿದ್ದೇವೆಯೊ ಅದರಿಂದ ಉತ್ಪಾದನೆಯಾದ ತೊಳಲಾಟಗಳ ಬಂಧನದಿಂದ ಮುಕ್ತಿಯನ್ನು ಹೊಂದಿದ ಸ್ಥಿತಿ. ಈ ಸ್ಥಿತಿಯೇ ಮನುಷ್ಯನೊಬ್ಬನು ಹೊಂದಬಹುದಾದ ಆತ್ಯಂತಿಕ ಆನಂದ ಎಂಬುದು ಅಧ್ಯಾತ್ಮದ ಪ್ರತಿಪಾದನೆ. ಹಾಗೂ ಈ ಸ್ಥಿತಿಯನ್ನು ಬೇರೆ ಬೇರೆ ಹೆಸರಿನಿಂದ, ಮಾರ್ಗಗಳಿಂದ ಯೋಜಿಸಿದ್ದಾರೆ.

ಈ ಹಿನ್ನೆಲೆಯನ್ನು ಇಟ್ಟುಕೊಂಡು ನೋಡಿದಾಗ ವಚನಗಳು ಶಿವ ಸಾಯುಜ್ಯದ ಆರು ಹಂತಗಳ ಕುರಿತು ನಮಗೆ ತಿಳಿಸುತ್ತವೆ. ಸಾಂಸಾರಿಕನಾದ ಮನುಷ್ಯನೊಬ್ಬನನ್ನು ಅವು ಭವಿ ಎಂಬುದಾಗಿ ಗುರುತಿಸುತ್ತವೆ. ಅಂಥ ಭವಿಯೊಬ್ಬನು ಶರಣ ಮಾರ್ಗವನ್ನು ಹಿಡಿದಾಗ ಭಕ್ತನಾಗುತ್ತಾನೆ, ಅಂಥವನಿಗೆ ಅವನ ಭವದ ಅನುಭವದ ರಚನೆಗಳಿಂದ ಬಿಡಿಸಿ ಮುಕ್ತನನ್ನಾಗಿ ಮಾಡುವಾಗ ಮೊದಲು ಅವನು ತುಳಿಯುವ ಮಾರ್ಗದಲ್ಲಿ ಈ ಭವದ ಪ್ರಭೇದಗಳು ಒಡ್ಡುವ ಅಪಾಯದ ಕುರಿತು ಅವನಿಗೆ ಅರಿವು ಮೂಡಿಸಬೇಕಾಗುತ್ತದೆ.  ಅವುಗಳಿಂದ ಅವನನ್ನು ಹೊರತರಬೇಕಾಗುತ್ತದೆ. ವಚನಗಳಲ್ಲಿ ಜಾತಿ ಕುಲಗಳ ತರತಮಗಳ ಟೀಕೆಗಳನ್ನು ಈ ಪ್ರಯತ್ನದ ಒಂದು ಅಂಗವಾಗಿ ನೋಡಬೇಕು. ಇಂಥ ಭಕ್ತನನ್ನು ಅನ್ಯ ದೈವಗಳ ಕುರಿತ ಚಂಚಲತೆಯಿಂದ ತಪ್ಪಿಸಿ ಏಕಾಗ್ರತೆಗೆ ಒಯ್ಯಲು ಶಿವನಲ್ಲಿ ಕೇಂದ್ರೀಕರಿಸಲಾಗುತ್ತದೆ. ನಂತರ ಇಷ್ಟಲಿಂಗಕ್ಕೆ ಹೋಗಿ ತಾನೇ ಲಿಂಗ ಎನ್ನುವ ಅನುಭವ ತಳೆಯಲು ಕಲಿಸಲಾಗುತ್ತದೆ. ಕೊನೆಯ ಹಂತದಲ್ಲಿ ಈ ಭೇದವೂ ಅಳಿದು ಸಂಪೂರ್ಣವಾಗಿ ಅನುಭವದ ರಚನೆಗಳೆಲ್ಲವೂ ನಾಶವಾಗುತ್ತವೆ.  ಅದನ್ನು ಅನುಭಾವದ ಸ್ಥಿತಿ ಎಂದು ಗುರುತಿಸಲಾಗಿದೆ. ಭೇದ ಅಳಿಯುವುದು ಅಂದರೆ ಪ್ರಪಂಚದಲ್ಲಿ ನಮ್ಮಿಂದ ಹೊರಗೆ ಇವೆ ಎನ್ನಲಾದ ಮಾನಸಿಕ ರಚನೆಗಳು ಅಳಿದಂತೇ. ಲಿಂಗ ತನ್ನಿಂದ ಪ್ರತ್ಯೇಕವಾಗಿದೆ ಎಂಬ ಕಲ್ಪನೆಯೂ ಒಂದು ಅನುಭವವೇ. ಆ ಮಟ್ಟಿಗೆ ಅದೂ ಒಂದು ಭೇದವೇ. ಸಾಯುಜ್ಯ ಹೊಂದಿದವನು ಆ ಭೇದದಿಂದಲೂ ಕಳಚಿಕೊಳ್ಳಬೇಕು.  ಇದನ್ನು ಅಲ್ಲಮನ ವಚನಗಳಲ್ಲಿ ಕಾಣುತ್ತೇವೆ.

ಹಾಗಾಗಿ ವಚನಗಳು ಜಾತಿ ಕುಲ ಭೇದಗಳನ್ನು ಅಲ್ಲಗಳೆಯುತ್ತಿಲ್ಲ ಎಂಬುದು ನಮ್ಮ ವಾದವಲ್ಲ. ಅವು ನಾವು ಕಲ್ಪಿಸಿಕೊಂಡಂತೆ ಜಾತಿ ವಿರೋಧಿ ಹೇಳಿಕೆಗಳಲ್ಲ ಎಂಬುದು ನಮ್ಮ ವಾದ. ಅವು ಅನುಭಾವಕ್ಕೆ ಅಡ್ಡಿಯಾಗಬಹುದಾದ ಎಲ್ಲಾ ರಚನೆಗಳನ್ನೂ ಅಲ್ಲಗಳೆಯುತ್ತವೆ.  ಅಂದರೆ, ವಚನಗಳನ್ನು ಯಾರಿಗಾಗಿ ರಚಿಸಲಾಗಿದೆ ಎಂಬುದನ್ನು ಮರೆತರೆ ಅವು ಏನು ಹೇಳುತ್ತವೆ ಎಂಬುದೂ ದಿಕ್ಕು ತಪ್ಪಿ ಹೋಗುತ್ತದೆ. ಅವು ಸಾರ್ವಜನಿಕ ಭಾಷಣಗಳಂತೂ ಅಲ್ಲ. ಈ ಟೀಕೆಗಳನ್ನೆಲ್ಲ ಷಟ್ ಸ್ಥಲಗಳ ಕಲ್ಪನೆಯಲ್ಲಿಟ್ಟು, ಒಟ್ಟಾರೆಯಾಗಿ ನೋಡಿದಾಗ ಈ ಹೇಳಿಕೆಗಳು ಆ ಮಾರ್ಗದ ಸಾಧಕರ ಸಮುದಾಯವನ್ನು ಉದ್ದೇಶಿಸಿವೆ ಎಂಬುದು ಸ್ಪಷ್ಟವಾಗುತ್ತದೆ. ಸುಮ್ಮನೆ ವಿತಂಡವಾದದಲ್ಲಿ, ನನ್ನ ಚಾರಿತ್ರ್ಯ ಹರಣದಲ್ಲಿ ಕಾಲ ಕಳೆಯುವ ಬದಲಾಗಿ ಈ ಕುರಿತು ನಮ್ಮ ವಿಚಾರಗಳನ್ನು ತಿದ್ದಿಕೊಳ್ಳಲು, ವಚನಗಳ ಕುರಿತು ನಮ್ಮೆಲ್ಲರ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲು ಈ ಚರ್ಚೆಯು ಸಹಕರಿಸಬೇಕೆಂಬುದು ನನ್ನ ಆಶಯ.
ಲೇಖಕರು:  (ಪ್ರೊಫೆಸರ್, ಗೆಂಟ್ ವಿ.ವಿ. ಬೆಲ್ಜಿಯಂ)
ನಿಮ್ಮ ಅನಿಸಿಕೆತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT