ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳಿಗಿಲ್ಲಿ ಹಿಂದೂಸ್ತಾನಿ ಅಮೃತ

ನಾದದ ಬೆನ್ನೇರಿ...
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚನ ಗಾಯನಕ್ಕೆ ಸಂಗೀತ ಪ್ರಕಾರಗಳಲ್ಲಿ ವಿಶಿಷ್ಟ ಸ್ಥಾನವಿದೆ. ಬಸವಣ್ಣ, ಅಕ್ಕಮಹಾದೇವಿ ಮುಂತಾದವರ ವಚನಗಳು ಸಮಾಜಕ್ಕೆ ಹತ್ತಿರವಾದವು, ಸಾಮಾಜಿಕ ಆಗು ಹೋಗುಗಳನ್ನು ಪ್ರಚುರಪಡಿಸುವುದಲ್ಲದೆ ಸಾಮಾಜಿಕ ಕಳಕಳಿಯನ್ನೂ ಹೊಂದಿರುವಂಥವು. ಇಂಥ ವಚನಗಳನ್ನು ಭಾವಪೂರ್ಣವಾಗಿ ಹಾಡಿದರೆ ಅವು ಮನಸ್ಸನ್ನು ತಟ್ಟುತ್ತವೆ. ವಚನವನ್ನು ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯಲ್ಲಿ ರಾಗಬದ್ಧವಾಗಿ ಹೇಳಿಕೊಡುವ ಸಂಗೀತ ಶಾಲೆಗಳು ನಗರದಲ್ಲಿ ವಿರಳ.

ಇಂತಹ ಅಪರೂಪದ ಸಂಗೀತ ಶಾಲೆ ‘ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರ’. ಇದು ಜೆ.ಪಿ. ನಗರದ ಆರನೇ ಹಂತದಲ್ಲಿರುವ ಜರಗನಹಳ್ಳಿಯಲ್ಲಿದೆ. ವಿದುಷಿ ವಡವಾಟಿ ಶಾರದಾ ಭರತ್ ಇಲ್ಲಿ ಕಳೆದ 10 ವರ್ಷಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಚನ, ಭಜನ್ಸ್, ಭಾವಗೀತೆ, ನಾಡಗೀತೆ, ದೇಶಭಕ್ತಿಗೀತೆಗಳನ್ನು ಹೇಳಿಕೊಡುತ್ತಿದ್ದಾರೆ. ಸುಮಾರು 35 ಮಕ್ಕಳು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಆರರಿಂದ 60 ವರ್ಷ ವಯಸ್ಸಿನ ಶಿಷ್ಯಂದಿರು ಇಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಪಾಠ ಇಲ್ಲಿ ಸಿಗುತ್ತದೆ.

‘ನಮಗೆ ಕಲಿಯುವ ಮಕ್ಕಳ ಸಂಖ್ಯೆ ಗೌಣ. ಆಸಕ್ತಿಯಷ್ಟೇ ಮುಖ್ಯ. ಹೆಚ್ಚು ಜನರನ್ನು ತುಂಬಿಕೊಂಡು ಹೇಳಿಕೊಡುವುದಕ್ಕಿಂತ ಕೆಲವೇ ಮಂದಿಗೆ ಪ್ರಾಮಾಣಿಕವಾಗಿ ಕಲಿಸುತ್ತೇನೆ. ಇದರಿಂದ ಪ್ರತಿಯೊಂದು ಮಗುವಿನ ಮೇಲೂ ಸಂಪೂರ್ಣ ಗಮನವಿಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ವಿದುಷಿ ಶಾರದಾ. 

‘ನಾನು ಸಂಗೀತ ಹೇಳಿಕೊಡುವಾಗ ಹಾರ್ಮೋನಿಯಂ ಸಾಥಿ ಜತೆಗೇ ಹೇಳಿಕೊಡುತ್ತೇನೆ. ಇದರಿಂದ ಮಕ್ಕಳಲ್ಲಿ ಸುಲಭವಾಗಿ ಸ್ವರ ಜ್ಞಾನ ಬರುತ್ತದೆ. ಸ್ವರ ತಪ್ಪು ಮಾಡುತ್ತಿದ್ದಾಗ ಮಕ್ಕಳಿಗೆ ತಮ್ಮ ತಪ್ಪನ್ನು ಅರಿಯಲು ಸಹಾಯಕವಾಗುತ್ತದೆ. ಅಲ್ಲದೆ ಮಕ್ಕಳೇ ಹಾರ್ಮೋನಿಯಂ ನುಡಿಸಿಕೊಂಡು ಹಾಡುವ ಮಟ್ಟಕ್ಕೆ ಬರಲು ಸಾಧ್ಯವಾಗುತ್ತದೆ. ಮುಂದೆ ಅವರು ಸ್ವತಃ ರಾಗ ಸಂಯೋಜನೆ ಮಾಡುವಾಗ  ಸರಿಯಾದ ಸ್ವರಜ್ಞಾನ ಅರಿಯಲು ಇದು ಬಹಳ ಸಹಕಾರಿಯಾಗುತ್ತದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಇಲ್ಲಿ ಬರುವ ಮಕ್ಕಳಲ್ಲಿ ಕೆಲವರು ಕಲಾವಿದರಾಗಬೇಕೆಂಬ ಆಸಕ್ತಿಯಿಂದ ಕಲಿತರೆ, ಮತ್ತೆ ಕೆಲವರು ಹವ್ಯಾಸಕ್ಕಾಗಿ ಮಾತ್ರ ಕಲಿಯುತ್ತಾರೆ. ಶಾಲಾ ಕಾಲೇಜುಗಳ ಮಕ್ಕಳು ಇಲ್ಲಿ ಸಂಗೀತ ಕಲಿತು ಅನೇಕ ಗೀತ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದ್ದಾರೆ.

ಪರೀಕ್ಷಾ ಸಮಯದಲ್ಲೂ..
‘ಕೆಲವು ತಂದೆ ತಾಯಿಯರು ಒಂದು ಸಣ್ಣ ಪಠ್ಯದ ಪರೀಕ್ಷೆಗೆ ಹೆದರಿ ಸಂಗೀತ ತರಗತಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ವಾರ್ಷಿಕ ಪರೀಕ್ಷೆ ಇದ್ದರೂ ಸಂಗೀತ ತರಗತಿಗಳನ್ನು ತಪ್ಪಿಸಬಾರದು. ಪರೀಕ್ಷಾ ಸಮಯದಲ್ಲಿ ಓದು, ಒತ್ತಡ ಮಕ್ಕಳನ್ನು ಖಿನ್ನತೆಗೆ ದೂಡುತ್ತದೆ. ಇವುಗಳಿಂದ ಸ್ವತಂತ್ರವಾಗಿ ಮನಸ್ಸನ್ನು ಹಿಡಿತದಲ್ಲಿಡಲು ಸಂಗೀತ ಕಲಿಕೆ ಅಗತ್ಯ.

ಅದು ಮನಸ್ಸನ್ನು ಪ್ರಫುಲ್ಲಗೊಳಿಸಿ ಮತ್ತಷ್ಟು ಕಲಿಯಲು ಪ್ರೇರೇಪಿಸುತ್ತದೆ; ನೆನಪಿನ ಶಕ್ತಿಗೂ ಅದು ಪೂರಕ. ಪರೀಕ್ಷಾ ಸಂದರ್ಭದಲ್ಲಿ ಇದೊಂದು ರೀತಿ ‘ಸಂಗೀತ ಥೆರಪಿ’. ಹಾಗಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯ ಸಮಯದಲ್ಲೂ ಮಕ್ಕಳಿಗೆ ಸಂಗೀತ ಒಂದು ಪೂರಕ ಅಂಶವಾಗಿ ಹೆಚ್ಚು ಅಂಕ ಗಳಿಸಲು ಸಹಾಯಕವಾಗಬಹುದು’ ಎನ್ನುತ್ತಾರೆ ವಿದುಷಿ.

ಸಂಗೀತದ ಹಿನ್ನೆಲೆ
ವಡವಾಟಿ ಶಾರದಾ ಭರತ್ ಅವರಿಗೆ ಉತ್ತಮ ಸಂಗೀತದ ಹಿನ್ನೆಲೆಯಿದೆ. ಖ್ಯಾತ ಕ್ಲಾರಿಯೊನೆಟ್ ವಾದಕರಾದ ತಂದೆ ಪಂ. ನರಸಿಂಹಲು ವಡವಾಟಿ ಅವರ ಬಳಿ ಸಂಗೀತ ಕಲಿತವರು. ಬಳಿಕ ಗ್ವಾಲಿಯರ್ ಘರಾಣೆಯನ್ನು ಗಾನಯೋಗಿ ಪಂಚಾಕ್ಷರಿ ಗವಾಯಿ ಹಾಗೂ ಜೈಪುರ್ ಘರಾಣೆಯನ್ನು ಪಂ. ಮಲ್ಲಿಕಾರ್ಜುನ ಮನ್ಸೂರ್, ಪಂ.ಸಿದ್ದರಾಮ ಜಂಬಲದಿನ್ನಿ ಅವರ ಬಳಿ ಕಲಿತರು. ಮಹಾರಾಷ್ಟ್ರ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದ ಡೀನ್ ಆಗಿರುವ ಡಾ. ಭಾರತಿ ವೈಶಂಪಾಯನ ಅವರಿಂದಲೂ ಗುರುಕುಲ ಪದ್ಧತಿಯಲ್ಲಿ ಸಂಗೀತ ಅಭ್ಯಾಸ ಮಾಡಿದವರು.

ಓದಿದ್ದು ಸಂಗೀತದಲ್ಲಿ ಸ್ನಾತಕೋತ್ತರ ಪದವಿ. ತಮ್ಮ ಸಂಗೀತ ಕಛೇರಿಗಳನ್ನು ರಾಜ್ಯದ ನಾನಾ ಭಾಗಗಳಲ್ಲಿ ನೀಡಿ ರಂಜಿಸಿದ್ದಾರೆ. ಅಲ್ಲದೆ ಕರ್ನೂಲ್,  ಹೈದರಾಬಾದ್‌ನಲ್ಲೂ ಹಾಡಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ರಾಗ ಸುಧೆಯನ್ನು ಹರಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಗ್ರೇಡೆಡ್ ಕಲಾವಿದರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಬಸವೇಶ್ವರರ ವಚನಗಳ ‘ಮಾನ್ಸೂನ್’, ‘ಬಸವೇಶ್ವರ ವಚನಾಮೃತ’, ‘ಸಂಗನ ಬಸವ’ ಇತ್ಯಾದಿ ಧ್ವನಿ ಸುರುಳಿಗಳು ಈಗಾಗಲೇ ಜನಪ್ರಿಯಗೊಂಡಿವೆ.

ಟಿ.ವಿ. ಧಾರಾವಾಹಿಯ ಗೀತೆಯೊಂದಕ್ಕೆ ಶಾರದಾ ಕಂಠದಾನ ಮಾಡಿದ್ದಾರೆ. ಅನೇಕ ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಭಾಗವಹಿಸಿದ್ದಾರೆ. ಶಾಸ್ತ್ರೀಯ ಸಂಗೀತ, ವಚನ ಗಾಯನ, ಸುಗಮ ಸಂಗೀತ, ದಾಸರ ಪದಗಳು, ಭಜನ್, ದೇಶಭಕ್ತಿಗೀತೆಗಳು, ನಾಡಗೀತೆಗಳು ಇತ್ಯಾದಿ ಪ್ರಕಾರಗಳನ್ನೂ ವಿದುಷಿ ಶಾರದಾ ಸುಶ್ರಾವ್ಯವಾಗಿ ಹಾಡುತ್ತಾರೆ.

‘ವಚನ ಸಂಗೀತ ಎಂದರೆ ಅದು ಸುಗಮ ಸಂಗೀತವಲ್ಲ, ಇದೊಂದು ರೀತಿಯ  ಶಾಸ್ತ್ರೀಯ ಸಂಗೀತ. ಇದರಲ್ಲಿ ರಾಗವನ್ನು ಬೆಳೆಸಬಹುದು. ವಚನಗಳನ್ನು ಚೀಜ್‌ಗಳಾಗಿ ಬಳಸಬಹುದೆಂದು ತೋರಿಸಿಕೊಟ್ಟವರು ಸಂಗೀತ ವಿದ್ವಾಂಸ ಪಂ. ಸಿದ್ದರಾಮ ಜಂಬಲದಿನ್ನಿ’ ಎನ್ನುತ್ತಾರೆ ವಿದುಷಿ ಶಾರದಾ.

‘ವಚನಗಳ ಅರ್ಥವನ್ನು ಭಾವಪೂರ್ಣವಾಗಿ ಹಾಡಿದರೆ ಅದು ಮನಸ್ಸನ್ನು ತಟ್ಟುತ್ತದೆ. ಇದಕ್ಕಾಗಿ ನಾನು ವಚನ ಹೇಳಿಕೊಡುವಾಗಲೇ ಅದರ ಅರ್ಥವನ್ನು ಸರಿಯಾಗಿ ವಿವರಿಸಿ ಹೇಳುತ್ತೇನೆ. ಇದನ್ನು ಮಕ್ಕಳು ಆಸಕ್ತಿ, ಕುತೂಹಲದಿಂದ ಕೇಳಿಸಿಕೊಂಡು ಕಲಿಯುತ್ತಾರೆ’ ಎನ್ನುತ್ತಾರೆ ಅವರು.

ಹಾರ್ಮೋನಿಯಂ ಸ್ವರಜ್ಞಾನಕ್ಕೆ ಸಹಕಾರಿ

ನಾನು ಫಿಸಿಯೋಥೆರಪಿ ಓದುತ್ತಿದ್ದು, ಕಳೆದ ಎರಡು ವರ್ಷಗಳಿಂದ ಭಾರತ್ ಕಲಾ ಕೇಂದ್ರದಲ್ಲಿ ಸಂಗೀತ ಕಲಿಯುತ್ತಿದ್ದೇನೆ. ಇಲ್ಲಿ ಶಾಸ್ತ್ರೀಯ ಸಂಗೀತ, ವಚನಗಳನ್ನು ಹಾರ್ಮೋನಿಯಂ ಸಾಥಿಯೊಂದಿಗೆ ಹೇಳಿಕೊಡುವುದರಿಂದ ನಮಗೆ ‘ಸ್ವರ ಜ್ಞಾನ’ ಚೆನ್ನಾಗಿ ಬರುತ್ತದೆ.

ರಿಯಾಜ್ ಮಾಡುವಾಗಲೂ ಸ್ವರಗಳ ಕಡೆಗೆ ಹೆಚ್ಚಿನ ಗಮನ ಕೊಡುವುದರಿಂದ ಕಾರ್ಯಕ್ರಮಗಳಲ್ಲಿ ಹಾಡುವಾಗ ಸ್ವರಸ್ಥಾನ ತಪ್ಪುವುದಿಲ್ಲ. ಗುಣಮಟ್ಟದ ಸಂಗೀತ ಶಿಕ್ಷಣ ಇಲ್ಲಿ ಸಿಗುತ್ತದೆ.

ವಚನಗಳನ್ನು ಹೇಳಿಕೊಡುವಾಗ ಗುರು ಶಾರದಾ ಅವರು ಅದರ ಅರ್ಥವನ್ನೂ ವಿವರಿಸಿ ಹೇಳುವುದರಿಂದ ಪ್ರತಿಯೊಂದು ಕ್ಲಾಸ್ ಕೂಡ ಸಂಗೀತದಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತದೆ. ಸಂಗೀತದಲ್ಲಿ ಸಾಧಿಸುವಂಥದ್ದು ಬಹಳಷ್ಟು ಇದೆ.
– ಸಂಜನಾ

ವಿಳಾಸ: ನಂ. 60, 2ನೇ ಅಡ್ಡರಸ್ತೆ, 2ನೇ ಮುಖ್ಯ ರಸ್ತೆ, ಜರಗನಹಳ್ಳಿ, ಜೆ.ಪಿ. ನಗರ 6ನೇ ಹಂತ, ಬೆಂಗಳೂರು-78. ಫೋನ್: 9886536275, 9448523187.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT