ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರ ವೈಡೂರ್ಯಗಳ ನಡುವೆ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿರುವ ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಮಳಿಗೆಯಲ್ಲಿ ಹೂಬನದ ಕಂಪು ಹರಡಿಕೊಂಡಿತ್ತು. ಬಿಳಿ ಗುಲಾಬಿ ಬಟ್ಟೆಗಳ ಮಧ್ಯೆ ಅಲಂಕೃತಗೊಂಡಿದ್ದ ಈ ಹೂವುಗಳು ಬಂದವರಿಗೆ ಸ್ವಾಗತ ಕೋರುತ್ತಿದ್ದವು. ಪ್ರದರ್ಶನಕ್ಕಿಡಲಾಗಿದ್ದ ಪ್ಲಾಟಿನಂ, ವಜ್ರ, ಚಿನ್ನ, ಬೆಳ್ಳಿ ಆಭರಣಗಳು ವೀಕ್ಷಿಸಲು ಬಂದವರನ್ನು ಸೆಳೆಯುತ್ತಿದ್ದವು.

ಗಲ್ಫ್‌, ಸ್ವೀಡನ್‌, ಸ್ವಿಟ್ಜರ್ಲೆಂಡ್‌ ಹೀಗೆ ಪ್ರಪಂಚದ ನಾನಾ ಕಡೆಯಿಂದ ಆಮದು ಮಾಡಿಕೊಳ್ಳಲಾಗಿರುವ ವಜ್ರಾಭರಣಗಳನ್ನು ಈ ಪ್ರದರ್ಶನದಲ್ಲಿಡಲಾಗಿದೆ. ಡಿಸೆಂಬರ್‌ 15ರವರೆಗೆ ನಡೆಯುವ ಪ್ರದರ್ಶನದಲ್ಲಿ ಕಣ್ಸೆಳೆಯುವ ವಿನ್ಯಾಸ, ಮನಸ್ಸು ಬಯಸುವ ವಿನ್ಯಾಸವನ್ನು ಹೊಂದಿರುವ ಆಭರಣಗಳು ಗಮನ ಸೆಳೆಯುತ್ತವೆ.

ರಿಂಗ್‌, ಕಿವಿಯೋಲೆ, ಬಳೆ, ವಿವಿಧ ವಿನ್ಯಾಸದ ಅದ್ದೂರಿ ಸರಗಳು, ನೆಕ್ಲೆಸ್‌, ಡಾಬು ಮುಂತಾದವುಗಳಿವೆ. ಅವುಗಳಲ್ಲಿ ಕೃಷ್ಣ–ರಾಧೆ, ಗಣೇಶ, ಲಕ್ಷ್ಮಿ ಸರಸ್ವತಿ ಮುಂತಾದ ದೇವತೆಗಳಿದ್ದ ಪೆಂಡೆಂಟ್‌ಗಳು ಆಕರ್ಷಕವಾಗಿವೆ. ಫಳಫಳ ಹೊಳೆಯುವ ವಜ್ರ, ಚಿನ್ನಗಳ ಮಧ್ಯೆ ರೂಪು ತಳೆದ ದೇವರೂ ಶ್ರೀಮಂತನಾಗಿ ಕಾಣುತ್ತಿದ್ದಾನೆ.

ನಲವತ್ತರಿಂದ ಐವತ್ತು ಕೋಟಿ ಮೌಲ್ಯದ ಆಭರಣಗಳಿದ್ದು, ಆಭರಣಗಳ ಬೆಲೆ ₨3000ದಿಂದ ಒಂದು ಕೋಟಿವರೆಗೂ ಇದೆ. ಲೇಸ್‌ ಸಂಗ್ರಹ, ನವರತ್ನ ಸಂಗ್ರಹ, ಸಾಲಿಟೇರ್‌ ಸಂಗ್ರಹ ಹೀಗೆ ಅನೇಕ ಸಂಗ್ರಹಗಳಿದ್ದು, ಒಂಬತ್ತು ರತ್ನಗಳಿಂದ ಮಾಡಲಾದ ಆಭರಣಗಳು ಅತ್ಯಂತ ವಿರಳವಾಗಿ ದೊರೆಯುತ್ತವೆ ಎಂಬುದು ಮಳಿಗೆಯವರ ಅಭಿಪ್ರಾಯ.

‘ಬೆಂಗಳೂರಿನಲ್ಲಿ ಎಲ್ಲೂ ಸಿಗದಷ್ಟು ವಿವಿಧ ವಿನ್ಯಾಸಗಳ ಸಂಗ್ರಹ ನಮ್ಮಲ್ಲಿದೆ. ಗ್ರಾಹಕ ಬಯಸುವ ಎಲ್ಲಾ ರೀತಿಯ ವಿನ್ಯಾಸಗಳು ನಮ್ಮಲ್ಲಿವೆ. ವಜ್ರ ಮೊದಲೇ ದುಬಾರಿ. ಹೀಗಾಗಿಯೇ ಜನಸಾಮಾನ್ಯರನ್ನೂ ತಲುಪುವ ಉದ್ದೇಶದಿಂದ ಮೂರು ಸಾವಿರ ರೂಪಾಯಿಯಿಂದ ಆಭರಣಗಳು ಲಭ್ಯವಾಗುವಂತೆ ಕಾಳಜಿ ವಹಿಸಿದ್ದೇವೆ. ಗಂಡಸರಿಗೆ ಬೇಕಾದ ಅನೇಕ ಪ್ಲಾಟಿನಂ ಆಭರಣಗಳು ಇಲ್ಲಿ ಲಭ್ಯ’ ಎಂದು ಮಾಹಿತಿ ನೀಡುತ್ತಾರೆ ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ನ ಪ್ರಾದೇಶಿಕ ನಿರ್ದೇಶಕ ಇಫ್‌ಲುರ್ರಹಮಾನ್‌.

ಹೇಮಾ ಚೌಧರಿ, ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ ಹಾಗೂ ರಾಜಾಜಿನಗರದ ಸುತ್ತಮುತ್ತ ಇರುವ ಅನೇಕ ನಟ ನಟಿಯರು ಇಲ್ಲಿಯ ಗ್ರಾಹಕರಂತೆ. ಮಳಿಗೆಯ ಖಾಯಂ ಗ್ರಾಹಕರಾದ ನಟ ಶಿವಕುಮಾರ್‌ ಹಾಗೂ ಅವರ ಪತ್ನಿ ಶ್ರೀರಕ್ಷಾ ಇದೇ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು. ‘ಮೂರ್ನಾಲ್ಕು ವರ್ಷಗಳಿಂದ ನಾವು ಇಲ್ಲೇ ಬರುತ್ತೇವೆ. ಮನೆಗೆ ಹತ್ತಿರ ಎಂಬುದು ಒಂದು ಕಾರಣ. ಅದಕ್ಕಿಂತ ಹೆಚ್ಚಾಗಿ ಇಲ್ಲಿಯವರ ಆತ್ಮೀಯತೆ ನಮ್ಮನ್ನು ಸೆಳೆಯುತ್ತದೆ.

ಇಲ್ಲಿರುವ ಆಭರಣಗಳ ವೈವಿಧ್ಯ ಖುಷಿ ಎನಿಸುತ್ತದೆ. ಆಯ್ಕೆಗೆ ಹೆಚ್ಚು ಅವಕಾಶವಿದೆ. ಎಲ್ಲಾ ವಸ್ತುಗಳ ಬೆಲೆ ಏರುತ್ತಿರುವುದರಿಂದ ಆಭರಣಗಳನ್ನು ಕೊಳ್ಳುವುದು ಇಂದಿನ ಕಾಲಕ್ಕೆ ಕಷ್ಟ ನಿಜ. ಆದರೆ ಶ್ರೀಮಂತರು ಆಡಂಬರಕ್ಕಾಗಿ ಖರೀದಿಸುತ್ತಾರೆ. ಮಧ್ಯಮ ವರ್ಗದವರಿಗೆ ಮದುವೆ ಮುಂತಾದ ವಿಶೇಷ ಕಾರ್ಯಕ್ರಮಗಳಿಗಾಗಿ ಆಭರಣಗಳನ್ನು ಖರೀದಿಸಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಚಿನ್ನ, ಬೆಳ್ಳಿ, ವಜ್ರ ಇಂದಿನ ಆದ್ಯತೆ ಕೂಡ ಆಗುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT