ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರಗಳ ಪ್ರಭೆಯ ದೇವಕಾರ

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟು ಜಲಪಾತಗಳಿವೆ ಎಂಬುದಕ್ಕೆ ನಿಖರವಾದ ಲೆಕ್ಕವಿಲ್ಲ. ರಾಜ್ಯದಲ್ಲಿಯೇ ಅತಿಹೆಚ್ಚು ಅರಣ್ಯ ಪ್ರದೇಶ  ಹೊಂದಿರುವ ಉತ್ತರ ಕನ್ನಡ ತನ್ನ ಒಡಲಿಲ್ಲ ಅನೇಕ ಜಲಧಾರೆಗಳನ್ನು ಹುದುಗಿಸಿಕೊಂಡಿದೆ. ಇವುಗಳಲ್ಲಿ ದಟ್ಟ ಕಾಡಿನ ನಡುವೆ ಇರುವ ದೇವಕಾರ ಜಲಪಾತ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಸ್ಥಳೀಯರಿಂದ `ವಜ್ರಮಾಲ' ಎಂದು ಕರೆಸಿಕೊಳ್ಳುವ ದೇವಕಾರ ಜಲಪಾತವನ್ನು ನೋಡಬೇಕಾದರೆ ಆಸಕ್ತರು ಚಾರಣದಂತಹ ಸಾಹಸ ಮಾಡಲೇಬೇಕು.

ಯಲ್ಲಾಪುರದ ಕಳಚೆ ಗ್ರಾಮದ ಮಾರ್ಗದಲ್ಲಿನ ಹೆಬ್ಬಾರಕುಂಬ್ರಿ ಕ್ರಾಸ್ ದಾಟಿ ಈರಾಪುರ ಊರಿನತ್ತ ಮುಖಮಾಡಬೇಕು. ಮುಂದೆ ಭೆಂಡಘಾಟ ಹೆಸರಿನ ಹಸಿರುಗುಡ್ಡವನ್ನು ಇಳಿದು ಸುಮಾರು ಎಂಟು ಕಿ.ಮೀ. ನಡೆದರೆ ದೇವಕಾರ ಗ್ರಾಮ ಸಿಗುತ್ತದೆ. ಭೆಂಡಘಾಟ ತುದಿಯಿಂದ ಪ್ರಕೃತಿಯ ವಿಹಂಗಮ ನೋಟ ಕಣ್ಣಿಗೆ ಆಹ್ಲಾದವನ್ನು ತುಂಬಿ ನಡಿಗೆಯ ದಣಿವನ್ನು ಮರೆಸುತ್ತದೆ. ಇಲ್ಲಿಂದ ವಿಶಾಲವಾದ ಕಾಳಿ ನದಿ ಕಣಿವೆ ಪ್ರದೇಶ. ನದಿಯ ಹರಿವು, ದೇವಕಾರ, ಕುನ್ನಿಪೇಟೆ ಮತ್ತು ಕೈಗಾ ಊರುಗಳ ಪಕ್ಷಿನೋಟ ಸಾಧ್ಯ.

ದೇವಕಾರದಲ್ಲಿ ಜಲಪಾತವೆಲ್ಲಿಯೆಂದು ಸ್ಥಳೀಯರಲ್ಲಿ ಕೇಳಿದರೆ ನೀರಧಾರೆಗೆ ಹೋಗುವ ಮಾರ್ಗವನ್ನು ತೋರಿಸುತ್ತಾರೆ. ದೇವಕಾರದಲ್ಲಿ ಮುಂದೆ ಕಾಳಿನದಿಗೆ ಹೋಗಿ ಸೇರುವ ಎರಡು ಹಳ್ಳಗಳು ನಯನ ಮನೋಹರವಾದ ಫಾಲ್ಸ್ ಸೃಷ್ಟಿಸಿವೆ. ಇಲ್ಲಿಗೆ ಸಮೀಪದ ಬಾರೆ ಹಳ್ಳವು ಬಾರೆ ಗ್ರಾಮದಿಂದ ಕಾಡಿನಲ್ಲಿಯೇ ಸುತ್ತುತ್ತ ಕೋಟೆಗದ್ದೆ, ಬಳ್ಳೆಗದ್ದೆಯಂಥ ಪುಟ್ಟ ಗ್ರಾಮಗಳಲ್ಲಿ ಹರಿದು ಮುಂದೆ ಕಾನೂರ ಹಳ್ಳವನ್ನು ಸೇರಿ ಹರಿಯುತ್ತ ದೇವಕಾರ ಬೆಟ್ಟದ ತುತ್ತತುದಿಯ ಮೇಲಿಂದ ಧುಮುಕುತ್ತದೆ. 120ಕ್ಕೂ ಹೆಚ್ಚು ಅಡಿ ಎತ್ತರದಿಂದ ಬಳುಕಿ ನೀಳ ಬಂಡೆಯ ಮೇಲೆ ನಾಲ್ಕು ಹಂತಗಳಲ್ಲಿ ಚಿಮ್ಮಿ ನೆಲವನ್ನು ನೀರು ಸೋಕುವ ದೃಶ್ಯ ಕಣ್ಣಿಗೆ ಹಬ್ಬ.

ಬಿಸಿಲಿನ ಕಿರಣಗಳಿಗೆ ಮೈಯೊಡ್ಡಿ ನೀರಿನ ಧಾರೆಗಳು ಇಳಿಯುವುದರಿಂದ ವಜ್ರದ ಹೊಳಪಿನ ಛಾಯೆ ಮೂಡಿದಂತಾಗುತ್ತದೆ. ಅದಕ್ಕೆಂದೇ ಇಲ್ಲಿನವರು ಜಲಪಾತಕ್ಕೆ `ವಜ್ರಮಾಲ' ಎನ್ನುತ್ತಾರೆ. ಮಳೆಗಾಲದಲ್ಲಿ ದೇವಕಾರಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ ಭಾರೀ ನೀರನ್ನು ಉಕ್ಕಿಸುವ ವಜ್ರಮಾಲದ ಸೌಂದರ್ಯವನ್ನು ಕಾಣುವುದೆಂತು? ಇಲ್ಲಿನ ಬಂಡೆಗಳು ನೀಳವಾಗಿಯೂ, ಭಾರೀ ಅಗಲವನ್ನೂ ಹೊಂದಿರುವುದರಿಂದ ಬಂಡೆಪರ್ವತಗಳನ್ನು ನೆನಪಿಸುತ್ತವೆ. ಜಲಪಾತದ ನೀರು ಮುಂದೆ ಹರಿಯುತ್ತ ಹೋಗಿ ಕಾಳಿನದಿಯಲ್ಲಿ  ಕೂಡಿಕೊಳ್ಳುತ್ತದೆ.

ದೇವಕಾರ ಸುಲಭವಾಗಿ ಹೋಗಿ ನೋಡುವ ತಾಣವಲ್ಲವಿದು. ತಗ್ಗುದಿನ್ನೆಗಳನ್ನು ಹತ್ತಿ ಇಳಿಯಬೇಕು, ಇನ್ನು ಕೆಲವೆಡೆ ಸಣ್ಣ ಬಂಡೆಗಳನ್ನೇ ದಾಟಬೇಕು. ಒಟ್ಟಾರೆ ಇಲ್ಲಿಗೆ ಬರುವವರು ಸಾಹಸಪ್ರವೃತ್ತಿಯವರೇ ಆಗಿರಬೇಕೆಂದರೆ ತಪ್ಪಿಲ್ಲ. ಮುಗಿಲಿಗೆ ಏಣಿ ಹಾಕಲು ಅಣಿಯಾಗುತ್ತಿದೆಯೋನೋ ಎಂದು ಭಾಸವಾಗುವ ವನರಾಶಿ, ಅಲ್ಲಲ್ಲಿ ಝಳುಝುಳು ಸದ್ದುಮಾಡುತ್ತಿರುವ ನೀರಿನ ತೊರೆಗಳು, ಹಕ್ಕಿಗಳ ಕಲರವ ಇವು ಜಲಪಾತ ವೀಕ್ಷಣೆಗೆ ಹೋಗುವವರನ್ನು ಹುರುದುಂಬಿಸುತ್ತವೆ.

ಮಳೆಗಾಲವಿದ್ದಾಗ ಜಲಪಾತದ ಹತ್ತಿರ ಹೋಗಲು ಸಾಧ್ಯವಿಲ್ಲ. ದಾರಿಯುದ್ದದ ಸಣ್ಣ ಬಂಡೆಗಳು ಜಾರುತ್ತಿರುತ್ತವೆ. ರಕ್ತವನ್ನು ಹೀರುವ ಜಿಗಣೆಗಳು ಕಾಲಿಗೆ ಅಂಟಿಕೊಂಡಿದ್ದು ಗೊತ್ತಾಗುವುದೇ ಇಲ್ಲ. ಹಳ್ಳದ ತುಂಬ ನೀರು ಬಂದು ಜಲಪಾತವಿರುವ ಭಾಗದೆಡೆಗೆ ಹೋಗಲಾಗುವುದಿಲ್ಲ. ಮಳೆಯಿಲ್ಲದ ದಿನಗಳನ್ನು ಆಯ್ದುಕೊಂಡು ಸೆಪ್ಟೆಂಬರ್ ಬಳಿಕವೇ ಇತ್ತ ಮುಖ ಮಾಡುವುದು ಒಳ್ಳೆಯದು. ಒಂದು ಪೂರ್ತಿ ದಿನವನ್ನು ಇದಕ್ಕೇ ಮೀಸಲಿಡಬೇಕು.

ಯಲ್ಲಾಪುರದಿಂದ ಕಳಚೆ ಗ್ರಾಮದ ಮೊದಲ ಬಸ್ಸನ್ನು ಹಿಡಿದರೇನೇ ಅನುಕೂಲ. ಹುಬ್ಬಳ್ಳಿಯಿಂದ ಯಲ್ಲಾಪುರ 70 ಕಿ.ಮೀ.ಗಳ ಅಂತರದ್ದು. ಬೈಕ್ ಇದ್ದರೆ ಯಲ್ಲಾಪುರದಿಂದ ಕಳಚೆ ಹತ್ತಿರದ ಹೆಬ್ಬಾರಕುಂಬ್ರಿ ಕ್ರಾಸ್‌ವರೆಗೆ ಹೋಗಬಹುದು. ಮುಂದೆ ಏನಿದ್ದರೂ ಕಾಲ್ನಡಿಗೆಯೇ. ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಂಡು ಹೋಗುವುದನ್ನು ಮರೆಯದಿರಿ. ಕನಿಷ್ಠ ಐದಾರು ಜನರ ಗುಂಪಿದ್ದರೆ ಒಳ್ಳೆಯದು. ಇಲ್ಲಿ ಹಂತಹಂತಕ್ಕೂ ಮುಂದೆ ಕ್ರಮಿಸಬೇಕಾದ ದಾರಿಯನ್ನು ಕೇಳುತ್ತಿರಬೇಕು. ನಗರ-ಪಟ್ಟಣಗಳಲ್ಲಿನ ಜಂಜಾಟದಿಂದ ಬೇಸತ್ತವರಿಗೆ ದೇವಕಾರದ ವಜ್ರಮಾಲ ಹೇಳಿ ಮಾಡಿಸಿದಂತಹ ಚಾರಣ ತಾಣವೆನಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT