ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರಮುಷ್ಟಿಯ ಜಟ್ಟಿಗಳು!

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭಾರತದ ಅತ್ಯಂತ ಹಳೆಯ ಸಮರಕಲೆಗಳಲ್ಲಿ ವಜ್ರಮುಷ್ಟಿ ಕಾಳಗವೂ ಒಂದು. ಜಟ್ಟಿ ಜನಾಂಗದವರಿಗೆ ಸಿದ್ದಿಸಿರುವ ಕಲೆ ಇದು. ರಾಜಾಶ್ರಯದಲ್ಲಿ ಬೆಳೆದ ಈ ಕಲೆ ಮತ್ತು ಜನಾಂಗ ಇವತ್ತು ನೇಪಥ್ಯಕ್ಕೆ ಸರಿಯುತ್ತಿವೆ.

ಇದೇ ಸಮುದಾಯದ ಮಾಜಿ ಅಥ್ಲೀಟ್, ಮತ್ತು ಸಾಧ್ವಿ ಪ್ರತಿಷ್ಠಾನದ ಸಿ.ಮಹೇಶ್ವರನ್ ಅವರ ಅಪ್ರಕಟಿತ `ಎಥೋಸ್ ಅ್ಯಂಡ್ ಇಟಿಕ್ವಿಟೀಸ್ ಆಫ್ ಜಟ್ಟೀಸ್~ ಕೃತಿಯು ಈ ಕಲೆಯ ಶ್ರೀಮಂತಿಕೆ ಮತ್ತು ಅವನತಿಯ ಆತಂಕವನ್ನು ಬಿಚ್ಚಿಡುತ್ತದೆ. ಕುಸ್ತಿಗಿಂತ ಕೊಂಚ ಭಿನ್ನವಾದ ಕಲೆಯಿದು. ಕುಸ್ತಿಯಲ್ಲಿ ಮುಷ್ಟಿಪ್ರಹಾರ ಮಾಡುವುದಿಲ್ಲ. ಆದರೆ ವಜ್ರಮುಷ್ಠಿಯಲ್ಲಿ ವಜ್ರನಖದ ಸಹಾಯದಿಂದ ಮುಷ್ಟಿಯುದ್ಧ ಮಾಡಲಾಗುತ್ತದೆ.

ಈ ಸಮರ ಕಲೆಯ ಜನ್ಮಭೂಮಿ ಗುಜರಾತ್. ಅಲ್ಲಿಯ ಮೊದೇರಾದ ಮೋದಮಲ್ ಬ್ರಾಹ್ಮಣ ಸಮುದಾಯವೇ ಮುಷ್ಟಿಮಲ್ಲರ ಜನಾಂಗ. ಇವರು ಸಸ್ಯಾಹಾರಿಗಳು. ಭಾರತದ ಬೇರೆ ಬೇರೆ ಭಾಗಗಳಲ್ಲಿ ಇವರನ್ನು ಜೇಥಿ, ಜಟ್ಟಿ, ಮಲ್ಲ ಎನ್ನುತ್ತಾರೆ. ಸಂಸ್ಕೃತ ಶಬ್ದವಾದ ಜೇಷ್ಟಿಯಿಂದ ನಿಷ್ಪನ್ನವಾದ ಶಬ್ದವಿದು. `ಮಲ್ಲಪುರಾಣ~ದಲ್ಲಿ ಈ ಜನಾಂಗದ ಬಗ್ಗೆ ಒಂದು ಐತಿಹ್ಯವಿದೆ.

ಮೊದೇರಾ ಪ್ರದೇಶದಲ್ಲಿ ಅತ್ಯಂತ ಬಲಿಷ್ಠವಾದ ಮಲ್ಲನನ್ನು ಶ್ರೀಕೃಷ್ಣ ಪರಮಾತ್ಮನ ಅಣ್ಣ ಬಲರಾಮ ಮಣಿಸುತ್ತಾನೆ. ಅದರೊಂದಿಗೆ ತಾನು ಜಗತ್ತಿನ ಅತ್ಯಂತ ಬಲಾಢ್ಯ ವ್ಯಕ್ತಿ ಎಂಬ ಅಹಂ ನೆತ್ತಿಗೇರುತ್ತದೆ. ಸಹೋದರನ ಅಹಂಕಾರವನ್ನು ನಾಶ ಮಾಡಲು ಕೃಷ್ಣ ತಂತ್ರ ಹೂಡುತ್ತಾನೆ.

ಈ ಊರಿನಿಂದ ಹೋಗುವಾಗ ಇಲ್ಲಿಯ ಜನರಿಗೆ ಒಂದು ಅಮೂಲ್ಯವಾದ ಕಾಣಿಕೆ ಕೊಡು ಎಂದು ಬಲರಾಮನಿಗೆ ಹೇಳುವ ಕೃಷ್ಣ, `ನಿನ್ನ ಮಲ್ಲಯುದ್ಧ ಪ್ರಾವಿಣ್ಯವನ್ನು ಈ ಜನಾಂಗಕ್ಕೆ ಧಾರೆಯೆರೆ~ ಎಂದು ಸಲಹೆಯನ್ನೂ ನೀಡುತ್ತಾನೆ. ಬಲರಾಮ ಅದೇ ರೀತಿ ಮಾಡುತ್ತಾನೆ. ಆಗಿನಿಂದ ಇವರು ಜಟ್ಟಿಗಳಾಗಿ ಪ್ರಸಿದ್ಧರಾದರು ಎನ್ನುವುದು ಪುರಾಣದ ಕಥೆ.

ಜಟ್ಟಿಗಳ ಬಗ್ಗೆ ಇತಿಹಾಸದಲ್ಲೂ ದಾಖಲೆಗಳಿವೆ. `ಜಟ್ಟಿಗಳ ಮುಷ್ಟಿಪ್ರಹಾರಗಳು ಶಕ್ತಿಶಾಲಿಯಾಗಿರುತ್ತವೆ. ಮುಖದ ಆಕಾರವನ್ನೇ ಬದಲಿಸಿಬಿಡುವಷ್ಟು ಬಲಯುತವಾಗಿರುತ್ತವೆ. ದವಡೆ, ಕಣ್ಣು, ಮೂಗುಗಳು ಉದುರಿ ಬೀಳುವಂತೆ ಕಾದಾಡುತ್ತಾರೆ.

ಫಲಿತಾಂಶದ ನಂತರ ಪರಸ್ಪರರನ್ನು ಗೌರವದಿಂದಲೇ ಅಭಿನಂದಿಸುತ್ತಾರೆ~ ಎಂದು ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ಪೋರ್ಚುಗೀಸ್ ಪ್ರವಾಸಿಗ ಡೆಮಿಂಗೋ ಪೇಸ್ ವಜ್ರಮುಷ್ಟಿ ಕಾಳಗದ ಕುರಿತು ಬರೆದಿದ್ದಾನೆ. `ಕ್ರೂರ ಆಟ ಎಂದೆನಿಸಿದರೂ ಈ ಜಟ್ಟಿಗಳ ಕೌಶಲ ಬೆರಗು ಹುಟ್ಟಿಸುತ್ತದೆ. ವಿಶೇಷ ಸಮುದಾಯಕ್ಕೆ ಸೇರಿದ ಜಟ್ಟಿಗಳು ತಮ್ಮ ಪೂರ್ವಜರಿಂದ ಕಲಿತದ್ದನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದಾರೆ~ ಎಂದು ಲೇಖಕ ಇ.ಥ್ರಸ್ಟನ್ ದಾಖಲಿಸಿದ್ದಾರೆ. 
 
ರಾಜರ ಆಶ್ರಯದಲ್ಲಿ...
ಇವರ ಬಲಿಷ್ಠ ದೇಹ, ಮುಷ್ಟಿಕಾಳಗದ ಕೌಶಲ್ಯಗಳು ದೇಶದೆಲ್ಲೆಡೆ ಪ್ರಸಿದ್ಧಿ ಪಡೆದವು. ರಾಜ-ಮಹಾರಾಜರು ಕರೆದು ಆಶ್ರಯ ಕೊಟ್ಟು, ಆಸ್ಥಾನ ಮಲ್ಲರನ್ನಾಗಿ ನೇಮಿಸಿಕೊಂಡರು. ಈ ಜನಾಂಗವನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಬೆಳೆಸಿದ್ದು ಮೈಸೂರಿನ ಮಹಾರಾಜರು. ಮರ್ಮ ಕಲೆಯನ್ನು ಬಲ್ಲವರಾಗಿದ್ದ ಜಟ್ಟಿಗಳು ತಮ್ಮ ಪ್ರಭುಗಳಿಗೆ ನಿಷ್ಠರಾಗಿದ್ದರು.

`ಜಟ್ಟಿಗಳನ್ನು ಆಮಂತ್ರಿಸಲು ರಾಜರು ವಿಶೇಷ ಅಧಿಕಾರಿಗಳನ್ನೇ ನೇಮಿಸಿದ್ದರು. ಆನೆಯೊಂದಿಗೆ ಚಿನ್ನದ ಸರವನ್ನು ಕೊಟ್ಟು ಜಟ್ಟಿಗಳನ್ನು ಅಮಂತ್ರಿಸುವ ಪರಂಪರೆ ಇತ್ತು~ ಎಂದು ಮಾನಸೋಲ್ಲಾಸ ಗ್ರಂಥದಲ್ಲಿ ಉಲ್ಲೇಖವಿದೆ. 

ರಾಜರ ಆಡಳಿತವಿರುವಲ್ಲಿ ಆಶ್ರಯ ಪಡೆದಿದ್ದ ಜಟ್ಟಿಗಳು, ಜನಸಂಖ್ಯೆ ಹೆಚ್ಚಿದಂತೆ ಬೇರೆಬೇರೆ ಕಡೆ ವಲಸೆ ಹೋದರು. 12ನೇ ಶತಮಾನದ ಕೊನೆಯಲ್ಲಿ ಆಂಧ್ರಪ್ರದೇಶವನ್ನು ದಾಟಿ ಕರ್ನಾಟಕಕ್ಕೆ ಬಂದರು. ಉಂಡಿಗನಾಳಕ್ಕೆ (ಈಗಿನ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನಲ್ಲಿದೆ) ಬಂದು ನೆಲೆಸಿದರು.

ನಂತರ ವಿವಿಧ ಸಂಸ್ಥಾನಗಳಿಗೆ ಕೆಲವರು ಆಶ್ರಯ ಅರಸಿ ಹೋದರು. 14ನೇ ಶತಮಾನದಲ್ಲಿ ಬಹುತೇಕರು ಮೈಸೂರಿಗೆ ಬಂದು ರಾಜಾಶ್ರಯ ಪಡೆದರು. ಆಗಿನಿಂದ ಮೈಸೂರು ಅವರ ತಾಯ್ನೆಲವೇ ಆಯಿತು. ಈ ಜಟ್ಟಿಗಳು ಹುಲಿ, ಸಿಂಹ, ಆನೆಗಳಂಥ ವನ್ಯಮೃಗಗಳನ್ನು ಸೋಲಿಸಿ ಬಿರುದು ಬಾವಲಿ ಪಡೆಯುತ್ತಿದ್ದರು. ರಾಜರಿಗೆ ಅಂಗರಕ್ಷಕರಾಗಿಯೂ ಇರುತ್ತಿದ್ದರು.

ಒಂದು ಸಲ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕಾಡಿಗೆ ಹೋಗಿದ್ದಾಗ ಕರಡಿಯೊಂದು ದಾಳಿ ನಡೆಸಿತು. ಆಗ ಬೆಂಗಾವಲಿಗಿದ್ದ ಸದಾನಂದ ಸುಬ್ಬಾ ಜಟ್ಟಪ್ಪನವರು ರಾಜರನ್ನು ರಕ್ಷಿಸಿದರು. ಇದರಿಂದ ಅವರಿಗೆ ಮೈಸೂರಿನ ನಜರಬಾದಿನಲ್ಲಿ ಗರಡಿಮನೆ ಆರಂಭಿಸಲು ದೊಡ್ಡ ಜಾಗೆ ನೀಡಿದರು.

ಇದೇ ಪ್ರದೇಶದಲ್ಲಿಯೇ ನೂರಾರು ಜಟ್ಟಿ ಕುಟುಂಬಗಳು ನೆಲೆಸಿದವು. ಜಟ್ಟಿ ಬೀದಿಯೆಂಬ ಫಲಕಗಳು ಇಂದಿಗೂ ಇವೆ. ಆ ಗರಡಿ ಮನೆ ಈಗ ನಿಂಬಜಾದೇವಿಯ ದೇಗುಲ ಮತ್ತು ಕಲ್ಯಾಣಮಂಟಪವಾಗಿ ಬೆಳೆದಿದೆ. ಟಿಪ್ಪು ಸುಲ್ತಾನನೂ ಬ್ರಿಟಿಷ್ ಅಧಿಕಾರಿಗಳನ್ನು ಜಟ್ಟಿಗಳ ಮೂಲಕ ಕೊಲ್ಲಿಸಿದ್ದೆನೆಂದು ಇತಿಹಾಸ ಹೇಳುತ್ತದೆ.

ಏನಿದು ವಜ್ರಮುಷ್ಟಿ?
ದೇಹದ ಶಕ್ತಿಯ ಸಮರ್ಪಕ ಬಳಕೆ ಮತ್ತು ಸೂಕ್ಷ್ಮ ತಂತ್ರಗಳೇ ವಜ್ರಮುಷ್ಟಿಯ ಜೀವಾಳ. `ವಜ್ರನಖ~ ಎಂಬ ಚೂಪಾದ ಆಯುಧವನ್ನು ಮುಷ್ಟಿಗೆ ಕಟ್ಟಿಕೊಂಡು ಸೆಣಸಾಡುತ್ತಾರೆ. ಹುರಿಗಟ್ಟಿದ ದೇಹದ ಈ ಜಟ್ಟಿಗಳು ತಲೆಯನ್ನು ಬೋಳಿಸಿಕೊಂಡಿರುತ್ತಾರೆ. ಹೂವು ಹಾಕಿ ಪೂಜಿಸಿದ ಮಟ್ಟಿಯ ಮೇಲೆ ವಜ್ರಮುಷ್ಟಿ ಕಾಳಗ ನಡೆಯುತ್ತದೆ.
 
ಈಗ ಪ್ರತಿವರ್ಷ ದಸರಾ ಉತ್ಸವದಲ್ಲಿ ಇದನ್ನು ಸಾಂಕೇತಿಕವಾಗಿ ಆಯೋಜಿಸಲಾಗುತ್ತದೆ. ಕಾಳಗ ನಡೆದಾಗ ಇಬ್ಬರಲ್ಲಿ ಒಬ್ಬರ ನೆತ್ತಿಯಿಂದ ರಕ್ತ ಚಿಮ್ಮಿದರೆ ಸ್ಪರ್ಧೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಪ್ರಸ್ತುತ ಜಟ್ಟಿ ಜನಾಂಗ ಈ ಸಮರ ಕಲೆಯಿಂದ ದೂರವಾಗುತ್ತಿದೆ. ರಾಜಾಶ್ರಯವಿಲ್ಲದ ಮತ್ತು ಅಸ್ತಿತ್ವವೂ ಇಲ್ಲದ ಈ ಕಲೆಯಿಂದ ದೂರವಾಗಿರುವ ಯುವಜನರು ಜೀವನಪಥ ಬದಲಿಸಿದ್ದಾರೆ. ಸಹಜವಾಗಿಯೇ ಬಂದಿರುವ ದೈಹಿಕ ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ಕೆಲವರು ಕ್ರೀಡಾಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ.

ನಿಯೋ ಸ್ಪೋರ್ಟ್ಸ್ ಚಾನೆಲ್‌ನ ನಿರ್ಮಾಪಕರಾಗಿರುವ ಎಸ್.ಮಹೇಶ್ 2006ರಲ್ಲಿ ರಾಷ್ಟ್ರಮಟ್ಟದ ಶಾಟ್‌ಪುಟ್ ಅಥ್ಲೀಟ್ ಆಗಿದ್ದವರು. ಕೃಷ್ಣ ಜಟ್ಟಿ ರಾಜ್ಯ ಫುಟ್‌ಬಾಲ್ ತಂಡದ ನಾಯಕರಾಗಿದ್ದರು. ಶ್ರೀನಿವಾಸ ಜಟ್ಟಿ ರಾಷ್ಟ್ರೀಯ ಸೈಕ್ಲಿಸ್ಟ್ ಆಗಿ ಮಿಂಚಿದವರು. ಕೆ.ವೆಂಕಟೇಶ್ ಫುಟ್‌ಬಾಲ್ ಆಟಗಾರನಾಗಿ ಹೆಸರು ಮಾಡಿದ್ದರು.
ಸಿ.ಮಹೇಶ್ವರನ್ ಓಟದ ಸ್ಪರ್ಧೆಗಳಲ್ಲಿ ಸಾಮರ್ಥ್ಯ ಪ್ರದರ್ಶಿಸಿದ್ದರು.

ಮೈಸೂರಿನಲ್ಲಿ ಸದ್ಯ 2500 ಜಟ್ಟಿ ಕುಟುಂಬಗಳು ವಾಸವಾಗಿವೆ. 15000 ಜನಸಂಖ್ಯೆ ಈ ಜನಾಂಗದ್ದು. ಚಾಮರಾಜನಗರ, ಬೆಂಗಳೂರು, ಶಿವಮೊಗ್ಗಗಳಲ್ಲಿ ಒಂದಷ್ಟು ಕುಟುಂಬಗಳಿವೆ. ಮಹಾರಾಜರ ಕಾಲದಲ್ಲಿ ದೊರೆಯುತ್ತಿದ್ದ ಗೌರವದ ಅರ್ಧದಷ್ಟೂ ಈಗಿನ ವ್ಯವಸ್ಥೆಯಲ್ಲಿ ಸಿಗುತ್ತಿಲ್ಲ ಎನ್ನುವ ಕೊರಗು ಇವರದು. ಸಂಪ್ರದಾಯ ಎನ್ನುವಂತೆ ದಸರೆಗೆ ಇವರ ನೆನಪಾಗುತ್ತದೆ. ವಜ್ರಮುಷ್ಟಿ ಕಾಳಗ ನಡೆಯುತ್ತದೆ. 
 
ವಜ್ರನಖ
ಜಟ್ಟಿಗಳು ಧರಿಸುವ ವಜ್ರನಖಗಳನ್ನು ಮೊದಲು ಆನೆದಂತದಿಂದ ತಯಾರಿಸುತ್ತಿದ್ದರು. ಮುಷ್ಟಿಯ ನಾಲ್ಕು ಬೆರಳುಗಳಿಗೆ ಹಾಕುವಂತೆ ತಯಾರಿಸಲಾಗಿರುತ್ತಿತ್ತು. ನಂತರ ಅವುಗಳಲ್ಲಿ ಕಬ್ಬಿಣದಲ್ಲಿಯೂ ತಯಾರಿಸುತ್ತಿದ್ದರು. ಈಗ ಪ್ರಾಣಿಗಳ ಕೊಂಬಿನಿಂದ ತಯಾರು ಮಾಡುತ್ತಾರೆ. ಅಭ್ಯಾಸ ಮಾಡುವಾಗ ಮರದಿಂದ ತಯಾರಿಸಿದ ನಖಗಳನ್ನು ಧರಿಸಿರುತ್ತಾರೆ. ಇದರ ಮುಂದಿನ ತುದಿಗಳು ಉಗುರಿನಂತೆ ಚೂಪಾಗಿರುತ್ತವೆ.

ಶಿವಾಜಿ ಮಹಾರಾಜ ತನ್ನ ಶತ್ರುಗಳನ್ನು ಕೊಲ್ಲಲು ಬಳಸುತ್ತಿದ್ದ ವ್ಯಾಘ್ರನಖ (ಹುಲಿ ಉಗುರುಗಳ ಆಯುಧ) ಕೂಡ ಇದೇ ಮಾದರಿಯಲ್ಲಿತ್ತು ಎನ್ನುವ ಉಲ್ಲೇಖಗಳು ಮರಾಠಿ ಗ್ರಂಥಗಳಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT