ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಝೆಬುವಾರ ಸಂಗೀತಯಾತ್ರೆ!

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಾವಂತವಾಡಿಯ ಸಮೀಪವಿರುವ ಓಝೆರೆ ಗ್ರಾಮದಲ್ಲಿ ಜನಿಸಿದ ಪಂ.ರಾಮಕೃಷ್ಣಬುವಾ ವಝೆ ಸಂಗೀತ ಕಲಿಯುವುದಕ್ಕಾಗಿ ಹಲವಾರು ಊರುಗಳನ್ನು ಕಾಲ್ನಡಿಗೆಯಲ್ಲಿ ಸುತ್ತಿದವರು. ಕೊಲ್ಹಾಪುರ ಸಮೀಪದ ಕಾಗಲ್‌ದಿಂದ ಪುಣೆಯವರೆಗೆ ಮುನ್ನೂರು ಮೈಲು ನಡೆದು, ಅಲ್ಲಿಂದ ಮುಂಬೈಗೆ ಸಾಗಿ, ಅಲ್ಲಿಯೂ ನೆಲೆಗಾಣದೆ ವಾರಣಾಸಿಗೆ ಬಂದು ತಲುಪಿದ ವಝೆಯವರು ಅಲ್ಲಿದ್ದ ಛತ್ರೆಯವರ ಸರ್ಕಸ್ ಕಂಪನಿಯನ್ನು ಆಶ್ರಯಿಸಿದರು. ಆದರೇನು? ಅಲ್ಲಿದ್ದ ಭೂಗಂಧರ್ವರು ತಾವು ಯಾರಿಗೂ ಸಂಗೀತ ಕಲಿಸುವುದಿಲ್ಲವೆಂದು ಖಡಾಖಂಡಿತ ಹೇಳಿಬಿಟ್ಟರು!

ವಝೆಯವರ ಅದೃಷ್ಟ ಚೆನ್ನಾಗಿತ್ತು. ರೆಹಮತ್‌ಖಾನರು ಕಲಿಸುವುದಿಲ್ಲವೆಂದರೂ, ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ದೂರದ ಸಂಬಂಧಿ ಉಸ್ತಾದ ನಿಸ್ಸಾರಹುಸೇನ್‌ಖಾನರು ಸಂಗೀತ ಕಲಿಸಲು ಒಪ್ಪಿದರು. `ಇದಕ್ಕೂ ಮೊದಲು ಸಂಗೀತದ ಪಾಠವಾಗಿದೆಯೇ?~ ಎಂದು ಕೇಳಿದರು. ವಝೆಯವರು ತಾವು ಬಾಲ್ಯದಲ್ಲಿದ್ದಾಗ ಬಲವಂತರಾಯರ ಕಡೆಯಲ್ಲಿ, ಮಾಲವಣದಲ್ಲಿ ನೆಲೆಸಿದ್ದ ಕನ್ನಡಿಗ ವಿಷ್ಣು ಅಣ್ಣಾ ಹಡಪದ ಅವರ ಕಡೆಯಲ್ಲಿ ಕೆಲಕಾಲ ಕಲಿತಿದ್ದಾಗಿ ಹೇಳಿಕೊಂಡರು. ಒಂದಿಷ್ಟು ಹಾಡಿದ ಮೇಲೆ ನಿಸ್ಸಾರಹುಸೇನಖಾನರು ಕಲಿಸಲು ಸಮ್ಮತಿಸಿದರು.

ನಿಸ್ಸಾರಹುಸೇನ್‌ಖಾನರು ಗ್ವಾಲಿಯರ್ ಆಸ್ಥಾನ ಗಾಯಕರು. ಪಾಂಡಿತ್ಯದಲ್ಲಿ, ಹಾಡುಗಾರಿಕೆಯಲ್ಲಿ ರೆಹಮತ್‌ಖಾನರಿಗೆ ಸರಿಮಿಗಿಲು ಎನಿಸಿದವರು. ಇಂಥ ಗುರು ದೊರೆತದ್ದು ವಝೆಯವರಿಗೆ ಸಂತಸವನ್ನುಂಟು ಮಾಡಿತು. ಅವರು ಗುರುಗಳೊಂದಿಗೆ ಗ್ವಾಲಿಯರ್‌ಗೆ ತೆರಳಿದರು.

ನಿಸ್ಸಾರರಿಗೆ ಹಿಂದೂಧರ್ಮದಲ್ಲಿ ಅಪಾರನಂಬುಗೆಯಿತ್ತು. ಅವರು ಮಡಿಮೈಲಿಗೆ ಪಾಲಿಸುತ್ತಿದ್ದರು. ಅವರ ಆಚರಣೆಗಳನ್ನು ಕಂಡು ಗ್ವಾಲಿಯರ್‌ದ ಜನ ಅವರನ್ನು ತಮಾಷೆಯಿಂದ `ನಿಸ್ಸಾರಭಟ್ಟ~ ಎಂದು ಕರೆಯುತ್ತಿದ್ದರು. ಇಂಥ ಅಪರೂಪದ ಗುರುಗಳ ಸೇವೆಯನ್ನು ವಝೆಯವರು ಅತ್ಯಂತ ನಿಷ್ಠೆಯಿಂದ ಮಾಡಿದರು. ಗುರುಗಳ ಸೇವೆಯೇನೋ ಚೆನ್ನಾಗಿಯೇ ನಡೆಯಿತು. ಆದರೆ ಪಾಠ ಮಾತ್ರ ಹಿಂದಾಯಿತು. ನಿಸ್ಸಾರರು ಲಹರಿಯ ಮನುಷ್ಯ. ಸಂಗೀತಪಾಠ ಯಾವಾಗಲೋ ಒಮ್ಮೆ ನಡೆಯುತ್ತಿತ್ತು. ಇಲ್ಲವಾದರೆ, ಅವರು ಹಾಡುತ್ತ ಕುಳಿತಾಗ ಅದನ್ನು ಗಮನವಿಟ್ಟು ಕೇಳಿ ಕಲಿಯಬೇಕಾಗುತ್ತಿತ್ತು. ವಝೆ ಅವರಲ್ಲಿ ಬಹಳಷ್ಟನ್ನು ಕಲಿತದ್ದು ಇದೇ ರೀತಿಯಿಂದ. ಅವರು ಹಾಡುವಾಗ ಯಾರಾದರೂ ಬಂದಿಶ್‌ನ್ನು ಬರೆದುಕೊಳ್ಳತೊಡಗಿದರೆ ನಿಸ್ಸಾರಭಟ್ಟರಿಗೆ ಭಯಂಕರ ಸಿಟ್ಟು ಬರುತ್ತಿತ್ತು. ಒಮ್ಮೆ ನಿಸ್ಸಾರಭಟ್ಟರು ಹಾಡುತ್ತಿದ್ದಾಗ ರಾಮಕೃಷ್ಣಬುವಾ ಬಂದಿಶ್‌ನ್ನು ಬರೆದುಕೊಳ್ಳುವ ಪ್ರಯತ್ನ ಮಾಡಿದರು. ಖಾನರಿಗೆ ಸಿಟ್ಟುಬಂತು. ವಝೆಬುವಾರನ್ನು ಸಿಕ್ಕಾಪಟ್ಟೆ ಬೈದರು. ಮರುಕ್ಷಣವೇ ರಾಮಕೃಷ್ಣಬುವಾ ವಝೆ ಆ ಮನೆಯನ್ನು ತೊರೆದು ಹೊರನಡೆದರು- ಮತ್ತೊಬ್ಬ ಗುರುವನ್ನು ಅರಸಿ!
ಅಲ್ಲಿಂದ ಹೊರಬಿದ್ದ ವಝೆಬುವಾ ತಲುಪಿದ್ದು ಜೈಪುರಕ್ಕೆ. ಅಲ್ಲಿನ ದೊರೆ ರಾಮಸಿಂಗ್ ಸಂಗೀತಪೋಷಕ. ಸ್ವತಃ ಸಂಗೀತಜ್ಞ. ಕಾಲುನಡಿಗೆಯಲ್ಲಿ ಇಲ್ಲಿಯವರೆಗೆ ಬಂದ ಈ ಸಂಗೀತ ಪಿಪಾಸುವನ್ನು ಕಂಡು ದೊರೆಗೆ ಆನಂದವಾಯಿತು. ತನ್ನ ಆಸ್ಥಾನದಲ್ಲಿಯೇ ಆಶ್ರಯವನ್ನು ಪಡೆದಿದ್ದ ಉಸ್ತಾದ ಮಹಮ್ಮದ ಅಲಿಖಾನ ಕೋಠಿವಾಲೆ ಎಂಬ ವಿದ್ವಾಂಸರನ್ನು ಕರೆಸಿ ರಾಮಕೃಷ್ಣ ವಝೆಯವರನ್ನು ಅವರ ಸುಪರ್ದಿಗೆ ಒಪ್ಪಿಸಿದರು. ಅಲಿಖಾನರು ಸಂಗೀತವನ್ನು ಪಂ.ರಾಮಕೃಷ್ಣಬುವಾ ಅವರಿಗೆ ಪ್ರೀತಿಯಿಂದ ಧಾರೆ ಎರೆದರು. ವಝೆಬುವಾ ಅವರ ತಪಸ್ಸು ಫಲಿಸಿತು. ಗುರುವಿನ ದಯದಿಂದ ಅವರಿಗೆ ಸಂಗೀತ ಒಲಿಯಿತು. ಕೆಲವೇ ದಿನಗಳಲ್ಲಿ ಪಂ.ರಾಮಕೃಷ್ಣಬುವಾ ವಝೆಯವರ ಕೀರ್ತಿ ದೇಶವನ್ನೆಲ್ಲ ವ್ಯಾಪಿಸಿತು. ನೇಪಾಳದ ದೊರೆ ಅವರನ್ನು ಆಸ್ಥಾನ ಗಾಯಕರೆಂದು ಗೌರವಿಸಿದ.

ರಾಮಕೃಷ್ಣಬುವಾ ವಝೆಯವರ ಈ ಸಾಧನೆಯ ಹಿಂದೆ ಇರುವ ಕಷ್ಟಗಳ ಪರಂಪರೆ ಮಾತ್ರ ಅಗಣಿತವಾದದ್ದು. ಇವೆಲ್ಲವನ್ನೂ ಮೀರಿ ಅವರು ಬೆಳೆದುನಿಂತ ರೀತಿ ಅನನ್ಯ. ಬರಿಗೈಯಿಂದ ಮನೆ ತೊರೆದ ಅವರು ಸಂಗೀತಲೋಕದಲ್ಲೊಂದು ಶಾಶ್ವತವಾದ ಮನೆಯನ್ನು ಸಂಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT