ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೆರೆ: ಜಾತಿ ನಿಂದನೆ ಪ್ರಕರಣ:ಆರೋಪಿ ಬಂಧನ ವಿಳಂಬ: ಪ್ರತಿಭಟನೆ

Last Updated 22 ಮೇ 2012, 9:55 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ವಡಗೆರೆ ಗ್ರಾಮದಲ್ಲಿ ಈಚೆಗೆ ನಡೆದ ಕೊಂಡೋತ್ಸವದ ವಿಚಾರವಾಗಿ ಜಾತಿ ನಿಂದನೆ ಮಾಡಿದ ಆರೋಪಿಗಳನ್ನು ಬಂಧಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ವಡಗೆರೆ ಗ್ರಾಮದ ದಲಿತರು ಭಾನುವಾರ ಮಧ್ಯರಾತ್ರಿ ರಸ್ತೆ ತಡೆ ನಡೆಸಿ, ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಘಟನೆ ಹಿನ್ನೆಲೆ: ಬಿದ್ದಾಂಜನೇಯ ರಥೋತ್ಸವವಾದ ನಂತರ ಕೊಂಡೋತ್ಸವ ನಡೆಯುವ ವಾಡಿಕೆ ಇದೆ. ಇದರಂತೆ ಮೇ 6 ರಂದು ರಥೋತ್ಸವ ನಡೆಯಿತು. ಅಂದು ರಾತ್ರಿ ದೇವರ ಉತ್ಸವಮೂರ್ತಿಯನ್ನು ಪ್ರತಿ ಬೀದಿಗೂ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ಕೊನೆಗೆ ಹರಿಜನರ ಬೀದಿಗೆ ಈ ಮೆರವಣಿಗೆ ಬರುತ್ತದೆ. ಆಗ ಕೆಲವು ಸವರ್ಣಿಯರು ದಲಿತರ ಪೂಜಾ ತಟ್ಟೆಯನ್ನು ಮುಟ್ಟಬಾರದೆಂದು ನಿರ್ಬಂಧ ಹೇರಿದ್ದರಿಂದ ಉಂಟಾದ ಮಾತಿನ ಚಕಮಕಿಯಲ್ಲಿ ಜಾತಿ ನಿಂದನೆ ನಡೆದಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ವಡಗೆರೆಯ ಪಿ.ಆನಂದ್‌ಕುಮಾರ್ ಎಂಬುವವರು ಗ್ರಾಮದ 25 ಜನರ ವಿರುದ್ಧ ದೂರು ಸಲ್ಲಿಸಿದ್ದಾರೆ. ಮೇ 9 ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ನಡೆಸಿ, ಈ ಸಮಸ್ಯೆ ಬಗೆಹರಿಸಲು 4 ದಿನ ಕಾಲಾವಕಾಶ ಕೇಳ್ದ್ದಿದರು. ಆ ಪ್ರಕಾರ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಭಾನುವಾರ ಮಧ್ಯರಾತ್ರಿ ವಿವಿಧ ದಲಿತ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಹಾದೇವಯ್ಯ ಭೇಟಿ ನೀಡಿ, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.ಯರಿಯೂರು ರಾಜಣ್ಣ, ಒಡನಾಡಿ ಮಹಾದೇವ್, ಯರಗಂಬಳ್ಳಿ ರಾಜಣ್ಣ, ಎಂ.ಚಕ್ರವರ್ತಿ, ವೈ.ಕೆ. ಮೋಳೆ ಪರಶಿವಮೂರ್ತಿ, ಕೃಷ್ಣಯ್ಯ, ಮಹಾದೇವಯ್ಯ, ಬಂಗಾರು, ಸೋಮಣ್ಣ, ನಾಗರಾಜು, ಮಂಜು ಹಾಗೂ ವಡಗೆರೆ ಗ್ರಾಮದ ದಲಿತ ಮುಖಂಡರು ಭಾಗವಹಿಸಿದ್ದರು.

ಸರ್ಕಲ್ ಇನ್ಸ್‌ಪೆಕ್ಟರ್ ಸ್ಪಷ್ಟನೆ: ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಾಗಿದೆ. ಆರೋಪಿಗಳಿಗಾಗಿ ಈಗಾಗಲೇ ಶೋಧ ನಡೆಸಲಾಗಿದೆ. ಎ. ಪ್ರಸನ್ನ ಎಂಬುವವರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನುಳಿದವರಿಗೆ ತೀವ್ರ ಶೋಧ ನಡೆಸುತ್ತಿರುವುದಾಗಿ ಸರ್ಕಲ್           ಇನ್ಸ್‌ಪೆಕ್ಟರ್ ಕೀರ್ತಿಕುಮಾರ್            ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT