ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ ಕಾಲೇಜು ಶಿರಸಿಗೆ ಸ್ಥಳಾಂತರ

Last Updated 8 ಜೂನ್ 2011, 10:10 IST
ಅಕ್ಷರ ಗಾತ್ರ

ಯಾದಗಿರಿ: ಇದುವರೆಗೆ ಕೇಂದ್ರ ಸರ್ಕಾರ ಇರುವ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿತ್ತು. ಈಗ ರಾಜ್ಯ ಸರ್ಕಾರದ ಸರದಿ. ಸಾಕ್ಷರತೆ, ಶಿಕ್ಷಣ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದುಳಿದ ಜಿಲ್ಲೆಯಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕಾದ ಸರ್ಕಾರವೇ ಇದೀಗ, ಇರುವ ಶೈಕ್ಷಣಿಕ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರ ಮಾಡುತ್ತಿದೆ.

ಶಹಾಪುರ ತಾಲ್ಲೂಕಿನ ವಡಗೇರಾದಲ್ಲಿದ್ದ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಈ ಶೈಕ್ಷಣಿಕ ವರ್ಷದಿಂದ ಕಾರವಾರ ಜಿಲ್ಲೆಯ ಶಿರಸಿಗೆ ಸ್ಥಳಾಂತರ ಮಾಡಿ, ಆದೇಶ ಹೊರಡಿಸಲಾಗಿದೆ. 25 ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇರುವ ಕಾಲೇಜುಗಳನ್ನು ಅಗತ್ಯವಿರುವ ಇತರ ಸ್ಥಳಗಳಿಗೆ ಸ್ಥಳಾಂತರ ಮಾಡುವುದು ಸೂಕ್ತವೆಂದು ತಿಳಿದು, ಈ ಆದೇಶ ಹೊರಡಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಆಧೀನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ವಡಗೇರಾದ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಹುದ್ದೆಗಳ ಸಮೇತ, ಶಿರಸಿಗೆ ವರ್ಗಾವಣೆ ಮಾಡಲಾಗಿದ್ದು, ಈ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿದ್ದಲ್ಲಿ ಅಂಥವರನ್ನು ಸಮೀಪದ ಸರ್ಕಾರಿ ಅಥವಾ ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಸ್ಥಳಾಂತರಿಸುವಂತೆಯೂ ತಿಳಿಸಲಾಗಿದೆ.

ಆದರೆ ಈ ಬಾರಿ ದ್ವಿತೀಯ ಪಿಯುಸಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸಮೀಪದಲ್ಲಿ ಯಾವುದೇ ಸರ್ಕಾರಿ ಅಥವಾ ಅನುದಾನಿತ ಪದವಿಪೂರ್ವ ಕಾಲೇಜುಗಳೇ ಇಲ್ಲ.

ಎರಡನೇ ಬಾರಿ ಸ್ಥಳಾಂತರ:ಯಾದಗಿರಿಯ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ವಡಗೇರಾದ ಪದವಿಪೂರ್ವ ಕಾಲೇಜನ್ನು ಆರಂಭಿಸಲಾಗಿತ್ತು. 2-3 ವರ್ಷಗಳ ನಂತರ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಮೊದಲ ಬಾರಿಗೆ ಈ ಕಾಲೇಜನ್ನು ಸ್ಥಳಾಂತರ ಮಾಡಲಾಗಿತ್ತು.

ಡಾ. ವೀರಬಸವಂತರೆಡ್ಡಿ ಮುದ್ನಾಳ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಭಾಗದ ಜನರ ಒತ್ತಾಯದಂತೆ ಮತ್ತೆ ವಡಗೇರಾದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಬಾಗಿಲು ತೆರೆಯಿತು. ಅಲ್ಲಿಂದ ಸುಸೂತ್ರವಾಗಿ ನಡೆಯುತ್ತಿದ್ದ ಕಾಲೇಜಿನಲ್ಲಿ ಮತ್ತೊಮ್ಮೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಆಗುತ್ತ ಬಂತು. ಇದರ ಪರಿಣಾಮವಾಗಿ ಎರಡನೇ ಬಾರಿಗೆ ಈ ಕಾಲೇಜನ್ನು ಶಿರಸಿಗೆ ಸ್ಥಳಾಂತರಿಸಲಾಗಿದೆ.

ಉಪನ್ಯಾಸಕರ ನಿಷ್ಕಾಳಜಿ: ವಡಗೇರಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸ್ಥಳಾಂತರಕ್ಕೆ ಉಪನ್ಯಾಸಕರ ನಿಷ್ಕಾಳಜಿಯೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಡಗೇರಾದ ಸುತ್ತಲಿರುವ ಹಾಲಗೇರಾ, ಕೊಂಕಲ್, ಬೆಂಡೆಗಂಬಳಿ, ವಡಗೇರಾ, ತುಮಕೂರು ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳಿವೆ. ಇಲ್ಲಿಂದ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ವಡಗೇರಾದ ಪದವಿಪೂರ್ವ ಕಾಲೇಜು ಅನುಕೂಲಕರವಾಗಿತ್ತು.

ಈ ಬಗ್ಗೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು, ವಡಗೇರಾದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯವಂತೆ ಉಪನ್ಯಾಸಕರು ಮಾಡಬಹುದಿತ್ತು. ನಿಷ್ಕಾಳಜಿ ತೋರಿದ್ದರಿಂದ, ಇದೀಗ ಶಿರಸಿಗೆ ಸ್ಥಳಾಂತರ ಆಗಿದೆ. ಎಲ್ಲ ಹುದ್ದೆಗಳೂ ಶಿರಸಿಗೆ ಸ್ಥಳಾಂತರವಾಗಿದ್ದು, ಎಲ್ಲ ಉಪನ್ಯಾಸಕರು ಶಿರಸಿಯಲ್ಲಿ ಕೆಲಸ ಮಾಡುವಂತಾಗಲಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.

ಶಿರಸಿಗೇ ಏಕೆ?
ಜಿಲ್ಲೆಯಲ್ಲಿ ಒಟ್ಟು 45 ಪದವಿಪೂರ್ವ ಕಾಲೇಜುಗಳಿದ್ದು, ಅವುಗಳಲ್ಲಿ 23 ಮಾತ್ರ ಸರ್ಕಾರಿ ಪದವಿಪೂರ್ವ ಕಾಲೇಜುಗಳು. 3 ಅನುದಾನಿತ ಹಾಗೂ 19 ಅನುದಾನರಹಿತ ಪದವಿಪೂರ್ವ ಕಾಲೇಜುಗಳಿವೆ.

ಇದರಿಂದಾಗಿ ಇರುವ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯಾದಗಿರಿಯ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1500 ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಇದೆ. ಜೊತೆಗೆ ಜಿಲ್ಲೆಯ ಕೆಲವೆಡೆ ಪದವಿಪೂರ್ವ ಕಾಲೇಜುಗಳ ಅಗತ್ಯತೆ ಇದೆ.

ಆದೇಶದಲ್ಲಿ ತಿಳಿಸಿರುವಂತೆ ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ವಡಗೇರಾದಲ್ಲಿ ವಿದ್ಯಾರ್ಥಿಗಳ ಕೊರತೆ ಇದ್ದರೂ, ಜಿಲ್ಲೆಯ ಬೇರೆಡೆ ವಿದ್ಯಾರ್ಥಿಗಳಿಗೆ ಕಾಲೇಜು ಇಲ್ಲದಾಗಿದೆ. ಅಂಥ ಸ್ಥಳಗಳಿಗೆ ಈ ಕಾಲೇಜನ್ನು ಸ್ಥಳಾಂತರಿಸಬಹುದಿತ್ತು. ಅದು ಬಿಟ್ಟು ಶಿರಸಿಗೆ ಸ್ಥಳಾಂತರಿಸಿದ್ದು ಏಕೆ ಎಂಬ ಪ್ರಶ್ನೆ  ಕಾಡುತ್ತಿದೆ.

ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯೇ ಈ ಕಾಲೇಜನ್ನು ಯಲ್ಹೇರಿ ಅಥವಾ ಕಂದಕೂರ ಕ್ರಾಸ್‌ಗೆ ಸ್ಥಳಾಂತರಿಸುವಂತೆ ಮಾಡಿದ ಮನವಿಯನ್ನು ಬದಿಗಿಟ್ಟು, ಶಿರಸಿಗೆ ಸ್ಥಳಾಂತರಿಸುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ತವರು ಜಿಲ್ಲೆಯ ಪ್ರೀತಿಯನ್ನು ತೋರಿಸುತ್ತದೆ ಎಂದು ಜನರು ಹೇಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT