ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಧಾಮವಲ್ಲ, ಇದು ಒಣಧಾಮ!

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಮಾಗಡಿ: ಮೊಸಳೆ ಕೊಳ ಬತ್ತಿ ಹೋಗಿದೆ. ಪಂಜರದಲ್ಲಿ ಬಾತುಕೋಳಿಗಳಿಲ್ಲ, ನವಿಲುಗಳು ನಾಪತ್ತೆಯಾಗಿವೆ. ಕೆಂಪೇಗೌಡರ ವಿಗ್ರಹದ ಹಿಂದಿದ್ದ ಟಿಪ್ಪುವಿನ ಕಾಲದ ಫಿರಂಗಿಯೂ ಕಾಣುತ್ತಿಲ್ಲ... ಹೀಗೆ ಏನೇನೂ ಇಲ್ಲದ ಉದ್ಯಾನವನಕ್ಕೆ ಒಂದು ರೂಪಾಯಿ ಶುಲ್ಕ ಕೊಟ್ಟು ಪ್ರವಾಸಿಗರು ಒಳ ಹೋಗಬೇಕು...!

ಇದು ತಾಲ್ಲೂಕಿನ ಪ್ರಸಿದ್ಧ ಗಿರಿಧಾಮ ಸಾವನದುರ್ಗದಲ್ಲಿರುವ ಕೆಂಪೇಗೌಡ ವನಧಾಮದ ಕಥೆ. ಈ ವನಧಾಮ ನಿರ್ವಹಣೆಯ ಕೊರತೆಯಿಂದ ಅಕ್ಷರಶಃ `ಒಣ~ ಧಾಮವಾಗಿದೆ.

ಕಾಂಗ್ರೆಸ್‌ನ ಎಚ್.ವಿಶ್ವನಾಥ್ ಅರಣ್ಯ ಸಚಿವರಾಗಿದ್ದ ಕಾಲದಲ್ಲಿ ಸಾವನದುರ್ಗ ಅಭಿವೃದ್ಧಿಯಾಗಿದ್ದು. ಸಚಿವರು ಒಮ್ಮೆ ಈ ಪರಿಸರವನ್ನು ಕಂಡು ಬೆರಗಾಗಿ `ಕೆಂಪೇಗೌಡ ವನಧಾಮ~ ನಿರ್ಮಾಣಕ್ಕೆ ಅನುಮತಿ ನೀಡಿದರು. ಅಂದು ಲಕ್ಷಾಂತ ರೂಪಾಯಿ ಹಣ ಖರ್ಚು ಮಾಡಿ ಜಿಂಕೆ ವನ, ಮೊಸಳೆ ಕೊಳ, ನವಿಲು, ಬಾತುಕೋಳಿ, ಕೊಕ್ಕರೆಗಳನ್ನು ಉದ್ಯಾನವನದಲ್ಲಿ ಬಿಡಲಾಗಿತ್ತು. ಇದರ ಜೊತಗೆ ಮಕ್ಕಳಿಗೆ ಆಟವಾಡುವ ಜಾರು ಬಂಡೆ, ಉಯ್ಯಾಲೆ ಇತ್ಯಾದಿಗಳನ್ನು ನಿರ್ಮಿಸಲಾಗಿತ್ತು.

ಈ  ವನಧಾಮದ ಪ್ರವೇಶದ್ವಾರದಲ್ಲಿ ಕೆಂಪೇಗೌಡರ  ಪುತ್ಥಳಿಯನ್ನು ನಿಲ್ಲಿಸಲಾಗಿದೆ. ಅದರ ಹಿಂದಿನ ಬೆಟ್ಟದ ಮೇಲೆ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಫಿರಂಗಿಯನ್ನು ನಿಲ್ಲಿಸಲಾಗಿತ್ತು. ನವಿಲು, ಮೊಸಳೆ, ಬಾತು ಕೋಳಿ, ಜಿಂಕೆಗಳ ಹಿಂಡು ವನಧಾಮದ ತುಂಬ ನೋಡುಗರ ಕಣ್ಮನ ಸೂರೆಗೊಳ್ಳುತ್ತಿತ್ತು. ಇದರ ಜೊತೆಗೆ ಕೆಂಪೇಗೌಡರ ಹಜಾರ, ಕಾಶಿ ವಿಶ್ವೇಶ್ವರಸ್ವಾಮಿ ದೇಗುಲ ದುರಸ್ತಿ, ಬಿದಿರು ಕಟ್ಟೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಅಷ್ಟೇ ಅಲ್ಲ, ಪ್ರವಾಸಿಗರು ವನ್ಯಧಾಮದಲ್ಲಿ ಉಳಿದುಕೊಳ್ಳಲು ವಸತಿ ಗೃಹದ ವ್ಯವಸ್ಥೆಯೂ ಇತ್ತು. ಚಾರಣ ಪ್ರಿಯರು, ಸಾವನದುರ್ಗ ಬೆಟ್ಟ ಏರಲು ಅನುಕೂಲವಾಗುವಂತೆ ಡೇರೆಗಳನ್ನು ನಿರ್ಮಿಸಲಾಗಿತ್ತು. ಕಾಲ ಕಳೆದಂತೆ ಅರಣ್ಯಾಧಿಕಾರಿಗಳ ಸ್ಥಳೀಯ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ವನಧಾಮ ಅವ್ಯವಸ್ಥೆಯ ತಾಣವಾಗಿದೆ.  ವನಧಾಮದ ಒಳಗಡೆ ಸಭೆ ಸಮಾರಂಭಗಳು ನಡೆಯಲು ಬೇಕಾಗಿದ್ದ ನಾಲ್ಕು ಕಡೆ ಬೃಹತ್ ಕಾಟೇಜ್‌ಗಳು ನಿರ್ವಹಣೆ ಕೊರತೆಯಿಂದ ಹಾಳಾಗಿದೆ.  ಕಳೆದ ಎರಡು ವರ್ಷಗಳಿಂದೀಚೆ ಪ್ರಾಣಿಗಳೂ ಇಲ್ಲ.

ಕೊಳಗಳಲ್ಲಿ ನೀರಿಲ್ಲ. ಪಂಜರದಲ್ಲಿದ್ದ ಪಕ್ಷಿಗಳಿಲ್ಲ. ನವಿಲು ನರ್ತನವಿಲ್ಲ. ಕೆಂಪೇಗೌಡರ ವಿಗ್ರಹದ ಹಿಂದಿದ್ದ ಟಿಪ್ಪುವಿನ ಕಾಲದ ಫಿರಂಗಿ ಕೂಡ ಕಾಣೆಯಾಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನು ವಿಚಾರಿಸಿದರೆ ಯಾವುದೇ ಉತ್ತರ ಲಭಿಸುತ್ತಿಲ್ಲ.

`ಪ್ರವೇಶ ಶುಲ್ಕ ಸಂಗ್ರಹದಿಂದಲೇ ಕೆಂಪೇಗೌಡ ವನಧಾಮವನ್ನು ನಿತ್ಯನೂತನವಾಗಿ ಇಟ್ಟುಕೊಳ್ಳಬಹುದಿತ್ತು. ಆದರೆ ಆ ಕೆಲಸ ಇಲ್ಲಿ ಸಾಧ್ಯವಾಗಿಲ್ಲ~ ಎಂಬುದು ಪರಿಸರ ಪ್ರೇಮಿ ನರಸಿಂಹಮೂರ್ತಿಯವರ ಅನಿಸಿಕೆ.

ಸಕಲ ಸಮೃದ್ಧತೆಯನ್ನು ತನ್ನ ಒಡಲೊಳಗೆ ಇಟ್ಟುಕೊಂಡು ನಗರಕ್ಕೆ 55 ಕಿ.ಮೀ ದೂರದಲ್ಲಿರುವ ಸಾವನದುರ್ಗ ಹಳೆಯ ಶಿಲಾಯುಗದ ಕಾಲದಿಂದಲೂ ಪಳೆಯುಳಿಕೆಗಳನ್ನು ಉಳಿಸಿಕೊಂಡು ಬಂದಿರುವ ನಾಡಿನ ಮೂಲ ಗಿರಿಧಾಮಗಳಲ್ಲೊಂದು ಕ್ರಿ.ಶ.1881ರಲ್ಲಿ ಸಾವನದುರ್ಗದ ನೆಲಪಟ್ಟಣಕ್ಕೆ ಭೇಟಿ ನೀಡಿದ್ದ  ಪ್ರವಾಸಿ ಕರ್ನಲ್ ಬ್ರಾನ್‌ಫಿಲ್ ಇಲ್ಲಿನ ಖಗ, ಮೃಗ, ಪಕ್ಷಿ, ಗಿಡಮೂಲಿಕೆಗಳ ಬಗ್ಗೆ ತನ್ನ ಪ್ರವಾಸಿ ಕಥನಗಳ ಬಗ್ಗೆ ದಾಖಲಿಸಿದ್ದಾನೆ.
 
ಎತ್ತೆತ್ತ ನೋಡಿದರು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯದ ನಡುವೆ ಬಿಳಿ ಕಲ್ಲು, ಕರಿ ಕಲ್ಲು ಬೆಟ್ಟಗಳಿರುವ ಬೃಹತ್ ಶಿಲಾವಲ್ಕಲ ಕೃಷ್ಣರಾಜಗಿರಿ, ಸಾವನದುರ್ಗ ಪುನರುಜ್ಜೀವನಕ್ಕೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಆಡಳಿತ ವ್ಯವಸ್ಥೆ ಗಮನ ಹರಿಸದಿರುವುದು ದುರಂತವೇ ಸರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT