ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತೆಗೆ ಮಣೆ ಹಾಕಿ, ಕಾಂಗ್ರೆಸ್ ಅಪ್ಪಿಕೊಂಡ ಕ್ಷೇತ್ರ

ಬಸವನ ಬಾಗೇವಾಡಿ
Last Updated 5 ಏಪ್ರಿಲ್ 2013, 5:00 IST
ಅಕ್ಷರ ಗಾತ್ರ

ವಿಜಾಪುರ: ಪ್ರಥಮ ಚುನಾವಣೆಯಲ್ಲಿಯೇ ಮಹಿಳೆಯೊಬ್ಬರನ್ನು ಗೆಲ್ಲಿಸಿದ ಕೀರ್ತಿ ಬಸವನ ಬಾಗೇವಾಡಿ ಕ್ಷೇತ್ರದ್ದು. ಇಲ್ಲಿಯ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಎಂಟು ಬಾರಿ ಗೆಲ್ಲಿಸಿದ್ದಾರೆ.

ಸುಶೀಲಾಬಾಯಿ ಶಹಾ ಎರಡು ಅವಧಿಗೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಿ.ಎಸ್. ಪಾಟೀಲ (ಮನಗೂಳಿ) ಅವರನ್ನು ನಾಲ್ಕು ಬಾರಿ ಕಾಂಗ್ರೆಸ್‌ನಿಂದ, ಒಮ್ಮೆ ಜನತಾ ಪಕ್ಷದಿಂದ ವಿಧಾನಸಭೆಗೆ ಕಳಿಸಿಕೊಟ್ಟಿದ್ದಾರೆ. ಜನತಾ ಪಕ್ಷ, ಬಿಜೆಪಿಗೆ ತಲಾ ಎರಡು ಅವಧಿಯನ್ನು ಇಲ್ಲಿಯ ಮತದಾರರು ನೀಡಿದ್ದಾರೆ.

1957, 1962ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸುಶೀಲಾಬಾಯಿ ಶಹಾ, 1967ರಲ್ಲಿ ಅದೇ ಪಕ್ಷದ ಪಿ.ಬಿ. ಸೋಮನಗೌಡ ಆಯ್ಕೆಯಾದರು. 1972ರ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ (ಸಂಸ್ಥಾ)ದಿಂದ ಕಣಕ್ಕಿಳಿದ ಬಿ.ಎಸ್. ಪಾಟೀಲ (ಮನಗೂಳಿ) 23,061 ಮತ ಪಡೆದು ಆಯ್ಕೆಯಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಜಿ.ವಿ. ಪಾಟೀಲ 16,250 ಮತ್ತು ಗೋಪಾಲ ರಾಮಪ್ಪ ಬಿದರಿ 1193 ಮತ ಪಡೆದರು.

1978ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಸ್. ಪಾಟೀಲ (ಮನಗೂಳಿ) 27,806 ಮತ ಪಡೆದು ಆಯ್ಕೆಯಾದರು. 1983ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ.ಎಸ್. ಪಾಟೀಲ (ಮನಗೂಳಿ) 34,386 ಮತ ಪಡೆದು ಆಯ್ಕೆಯಾದರೆ, ಬಿಜೆಪಿಯ ಆರ್.ವಿ. ಪಟ್ಟಣಶೆಟ್ಟಿ 15,577 ಮತ ಪಡೆದರು.

1985ರ ಚುನಾವಣೆಯಲ್ಲಿ ಜನತಾ ಪಕ್ಷದ ಕುಮಾರಗೌಡ ಎ. ಪಾಟೀಲ (ಕುದರಿ ಸಾಲವಾಡಗಿ) 29,320 ಮತ ಪಡೆದು ಆಯ್ಕೆಯಾದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ.ಟಿ. ಪಾಟೀಲ 23,744 ಮತ ಪಡೆದಿದ್ದರು.

1989ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ.ಎಸ್. ಪಾಟೀಲ (ಮನಗೂಳಿ) 37,868 ಮತ ಪಡೆದು ಆಯ್ಕೆಯಾದರೆ, ಜನತಾ ದಳದ ಕುಮಾರಗೌಡ ಎ. ಪಾಟೀಲ (ಕುದರಿ ಸಾಲವಾಡಗಿ) 25,235 ಮತ ಪಡೆದು ಪರಾಭವಗೊಂಡರು. 1994ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎಸ್. ಪಾಟೀಲ (ಮನಗೂಳಿ) 27,557 ಮತ ಪಡೆದು ಆಯ್ಕೆಯಾದರೆ, ಜನತಾ ದಳದ ಕುಮಾರಗೌಡ ಎ. ಪಾಟೀಲ (ಕುದರಿ ಸಾಲವಾಡಗಿ) 19,720, ಎಸ್. ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷದ ಎಸ್.ಕೆ. ಬೆಳ್ಳುಬ್ಬಿ 13,327, ಬಿಜೆಪಿಯ ಎಸ್.ಕೆ. ಚಿಕ್ಕೊಂಡ 12,463 ಮತ ಪಡೆದರು.

1999ರ ಚುನಾವಣೆಯಲ್ಲಿ ಎಸ್.ಕೆ. ಬೆಳ್ಳುಬ್ಬಿ ಬಿಜೆಪಿಯಿಂದ ಕಣಕ್ಕಿಳಿದು 50,543 ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್‌ನ ಬಿ.ಎಸ್. ಪಾಟೀಲ (ಮನಗೂಳಿ) 40,487 ಮತ ಪಡೆದು ಪರಾಭವಗೊಂಡರು. ಬಿಎಸ್‌ಪಿಯ ಬಸಪ್ಪ ಚಲವಾದಿ 1,678, ಜೆಡಿಎಸ್‌ನ ಆರ್.ಎಸ್. ಡೊಮನಾಳ 452, ಪಕ್ಷೇತರ ಹಣಮಂತ ಅರಕೇರಿ 548 ಮತ ಪಡೆದರು.

ತಿಕೋಟಾ ಕ್ಷೇತ್ರದಲ್ಲಿ ಎರಡು ಅವಧಿಗೆ ಬೇರೆ ಬೇರೆ ಪಕ್ಷಗಳಿಂದ ನಿರಂತರವಾಗಿ ಎರಡು ಬಾರಿ ಗೆಲುವು ಸಾಧಿಸಿದ್ದ ಶಿವಾನಂದ ಪಾಟೀಲ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2004ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದರು. 50,162 ಮತ ಪಡೆದು ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಒಂದೊಂದು ಚುನಾವಣೆಯಲ್ಲಿ ಒಂದೊಂದು ಪಕ್ಷದಿಂದ (ಜನತಾ ದಳ, ಬಿಜೆಪಿ ಹಾಗೂ ಕಾಂಗ್ರೆಸ್) ಸ್ಪರ್ಧಿಸಿ ಆಯ್ಕೆಯಾದ `ಕೀರ್ತಿ'ಗೂ ಪಾತ್ರರಾದರು.

2008ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಕೆ. ಬೆಳ್ಳುಬ್ಬಿ 48,481 ಮತ ಪಡೆದು ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ನ ಶಿವಾನಂದ ಪಾಟೀಲ (34,594 ಮತ) ಅವರನ್ನು ಪರಾಭವಗೊಳಿಸಿದರು. ಈ ಚುನಾವಣೆಯಲ್ಲಿ ಕಣದಲ್ಲಿದ್ದ ರಾಜಶೇಖರ ಯರನಾಳ 2,131, ಜೆಡಿಎಸ್‌ನ ಸೋಮನಗೌಡ ಬಿ. ಪಾಟೀಲ (ಮನಗೂಳಿ) 15,317, ನಜೀರ್‌ಅಹ್ಮದ ದುಂಡಸಿ 3615 ಮತ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT