ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತೆಯರ ಮುಂದೆ ಕಲ್ಲು ಮುಳ್ಳಿನ ಹಾದಿ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಲಂಡನ್ ಅಂಗಳದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ನಡೆಯುವ ಆಸೆಯಲ್ಲಿರುವ ಅಸುಂತಾ ಲಕ್ರಾ ಪಡೆ ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯಲ್ಲಿ `ಮಾಡು ಇಲ್ಲವೇ ಮಡಿ~ ಪರಿಸ್ಥಿತಿಯಲ್ಲಿದೆ.

ಮೊದಲ ಸುತ್ತಿನ ಲೀಗ್ ಎರಡು ಪಂದ್ಯಗಳಲ್ಲಿ ಉಕ್ರೇನ್ ವಿರುದ್ಧ ಡ್ರಾ ಮತ್ತು ಕೆನಡಾ ವಿರುದ್ಧ ಗೆಲುವು ಸಾಧಿಸಿರುವ ಭಾರತದ ವನಿತೆಯರು 4 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಗೋಲು ಗಳಿಕೆಯ ಆಧಾರದಲ್ಲಿ ಅಲ್ಲ ಮುನ್ನಡೆಯಲ್ಲಿರುವ ಇಟಲಿ ದ್ವಿತೀಯ ಸ್ಥಾನದಲ್ಲಿದ್ದು, ಮಹಿಳೆಯರ ವಿಭಾಗದ ಬಲಾಢ್ಯ ತಂಡ ದಕ್ಷಿಣ ಆಫ್ರಿಕಾ 6 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಫೆಬ್ರುವರಿ 25ರಂದು ಫೈನಲ್‌ನಲ್ಲಿ ಪ್ರಥಮ ಸ್ಥಾನಕ್ಕಾಗಿ ಸೆಣಸಬೇಕಾದರೆ, ಲೀಗ್ ಹಂತದಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಆಕ್ರಮಿಸಿಕೊಳ್ಳಲೇಬೇಕು. ಅದಕ್ಕಾಗಿ ಭಾರತ ತಂಡ ಮಂಗಳವಾರ ಪೋಲೆಂಡ್, ಬುಧವಾರ ದಕ್ಷಿಣ ಆಫ್ರಿಕಾ ಮತ್ತು ಶುಕ್ರವಾರ ಇಟಲಿ ತಂಡಗಳ ವಿರುದ್ಧ ಗೆಲ್ಲಲೇಬೇಕು. ಇಲ್ಲದಿದ್ದರೆ ಮತ್ತೊವ್ಮೆು ಕನಸು ನುಚ್ಚುನೂರಾಗುವುದು ಖಚಿತ.

ಉಕ್ರೇನ್ ಮತ್ತು ಕೆನಡಾಗೆ ಹೋಲಿಸಿದರೆ ಪೋಲೆಂಡ್ ತಂಡ ಅಂತಹ ಬಲಾಢ್ಯವಲ್ಲ. ಅದು ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಇಟಲಿ ವಿರುದ್ಧದ ಪಂದ್ಯಗಳಲ್ಲಿ ಸೋತಿದೆ. ಆದ್ದರಿಂದ ಇಲ್ಲಿ ಸುಲಭವಾಗಿ ಗೆದ್ದರೂ ಮುಂದೆ ದಕ್ಷಿಣ ಆಫ್ರಿಕಾ ಕಬ್ಬಿಣದ ಕಡಲೆಯಾಗುವುದು ಖಚಿತ.

ಉಕ್ರೇನ್ ವಿರುದ್ಧದ ಪಂದ್ಯದಲ್ಲಿ ಭಾರತ ಗಳಿಸಿದ ಒಂದು ಗೋಲನ್ನು ರದ್ದುಪಡಿಸಿದ ವಿವಾದದಿಂದಾಗಿ ಪಂದ್ಯ ಡ್ರಾ ಆಯಿತು. ಇಲ್ಲದಿದ್ದರೆ ಈ ಒತ್ತಡ ಆತಿಥೇಯ ವನಿತೆಯರಿಗೆ ಇರುತ್ತಿರಲಿಲ್ಲ. ಆದರೆ ಆ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಎರಡನೇ ಪಂದ್ಯದಲ್ಲಿ ಸುಧಾರಿಸಿಕೊಂಡು ಉತ್ತಮ ಪ್ರದರ್ಶನ ನೀಡಿರುವ ಲಕ್ರಾ ಬಳಗಕ್ಕೆ ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಆದರೆ ಪೆನಾಲ್ಟಿ ಕಾರ್ನರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳದ ದೌರ್ಬಲ್ಯವು ತಂಡವನ್ನು ಕಾಡುತ್ತಿದೆ.

ಸೋಮವಾರ ಬೆಳಿಗ್ಗೆ ಎರಡು ತಾಸು ಕಠಿಣ ಅಭ್ಯಾಸ ನಡೆಸಿದ ತಂಡ ಹೆಚ್ಚು ಹೊತ್ತು ಪೆನಾಲ್ಟಿ ಕಾರ್ನರ್ ಅಭ್ಯಾಸದಲ್ಲಿಯೇ ತೊಡಗಿತ್ತು.

ಈ ಸಂದರ್ಭದಲ್ಲಿ ಪ್ರಜಾವಾಣಿ ಯೊಂದಿಗೆ ಮಾತನಾಡಿದ ತಂಡದ ತರಬೇತುದಾರ ಸಿ.ಆರ್. ಕುಮಾರ್, `ಮುಂದಿನ ಹಂತವೂ ದುರ್ಗಮವಾಗಿದೆ. ಆದರೆ ಅದನ್ನೆಲ್ಲ ಮೆಟ್ಟಿ ನಿಲ್ಲುವ ಸಾಮರ್ಥ್ಯ ತಂಡಕ್ಕೆ ಇದೆ. ಅನುರಾಧಾದೇವಿ ನಿನ್ನೆ ಪಂದ್ಯದ ವೇಳೆ ಹ್ಯಾಮ್‌ಸ್ಟ್ರಿಂಗ್‌ನಿಂದ ಬಳಲಿದ್ದರು. ಆದರೆ ಮಂಗಳವಾರಕ್ಕೆ ಚೇತರಿಸಿಕೊಳ್ಳುವ ಭರವಸೆ ಇದೆ. ಉಳಿದಂತೆ ತಂಡವು ಸಂಪೂರ್ಣ ಸಮರ್ಥವಾಗಿದೆ~ ಎಂದು ಹೇಳಿದರು.
32 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಛಲದಲ್ಲಿರುವ ಭಾರತದ ವನಿತೆಯರ ಮುಂದೆ ದೊಡ್ಡ ಸವಾಲಿನ ಹಾದಿಯಿದೆ.

ಪಂದ್ಯ ಆರಂಭ: ಸಂಜೆ 6 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT