ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತೆಯರಲ್ಲಿ ಗರಿಕೆದರಿದ ಆತ್ಮವಿಶ್ವಾಸ

ಹಾಕಿ
Last Updated 6 ಮಾರ್ಚ್ 2016, 19:49 IST
ಅಕ್ಷರ ಗಾತ್ರ

ಫೆಬ್ರುವರಿ ಕೊನೆಯ ವಾರ  ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಭಾರತ ಮಹಿಳಾ  ಹಾಕಿ ತಂಡ ಬಲಿಷ್ಠ ಜರ್ಮನಿ ಎದುರು ಸೋಲು ಕಂಡಿದೆ. ರಿಯೊ ಒಲಿಂಪಿಕ್ಸ್‌ಗೆ ಪೂರ್ವ ಸಿದ್ಧತೆ ಎಂದೇ ಬಿಂಬಿತವಾಗಿದ್ದ ಈ ಪ್ರವಾಸದ ಸೋಲು ಭಾರತಕ್ಕೆ ಹಲವು ಪಾಠಗಳನ್ನು ಕಲಿಸಿದೆ. ಈ ಬಗ್ಗೆ ಜಿ. ಶಿವಕುಮಾರ ಬರೆದಿದ್ದಾರೆ.

ಒಲಿಂಪಿಕ್ಸ್‌ ಕ್ರೀಡಾಕೂಟದ ಆರಂಭಕ್ಕೆ ಇನ್ನು ಐದು ತಿಂಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಮಹತ್ವದ ಕೂಟದಲ್ಲಿ ಪದಕ ಜಯಿಸುವ ಹೆಗ್ಗುರಿ ಹೊಂದಿರುವ ಕ್ರೀಡಾಪಟುಗಳ ತಾಲೀಮು ಜೋರಾಗಿದೆ.

ಈ ವಿಷಯದಲ್ಲಿ ಭಾರತ ಮಹಿಳಾ ಹಾಕಿ ತಂಡವೂ ಹಿಂದೆ ಬಿದ್ದಿಲ್ಲ. ಬರೋಬ್ಬರಿ 36 ವರ್ಷಗಳ ಬಳಿಕ ಈ ಕೂಟಕ್ಕೆ ಅರ್ಹತೆ ಗಳಿಸಿರುವ ಭಾರತದ ವನಿತೆಯರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಪದಕ ಗೆದ್ದು ಈ ಅವಕಾಶವನ್ನು ಸ್ಮರಣೀಯವಾಗಿಸಿಕೊಳ್ಳುವ ಹಂಬಲ ಹೊಂದಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕದ ಹಾದಿ ನಿರೀಕ್ಷಿಸಿದಷ್ಟು ಸುಲಭವಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ವಿಶ್ವದ ಬಲಿಷ್ಠ ತಂಡಗಳ ಸವಾಲು ಬಂದೆರಗುತ್ತದೆ. ಈ ತಂಡಗಳ ಸವಾಲಿಗೆ ಎದೆಯೊಡ್ಡಿ ನಿಲ್ಲುವ ಮೊದಲು ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಬಹಳ ಅಗತ್ಯ. ಈ ಉದ್ದೇಶದಿಂದಲೇ ಹಾಕಿ ಇಂಡಿಯಾ ಕಳೆದ ಒಂದು ವರ್ಷದಿಂದ ಹಲವು ಟೂರ್ನಿಗಳನ್ನು ಆಯೋಜಿಸಿ ಆ ಮೂಲಕ ಬಲಿಷ್ಠ ತಂಡ ಕಟ್ಟಲು ಮುಂದಾಗಿದೆ.

ಇತ್ತೀಚೆಗೆ ಮುಗಿದ  ದಕ್ಷಿಣ ಆಫ್ರಿಕಾ ಪ್ರವಾಸದ ಹಿಂದೆಯೂ ಇಂತಹದ್ದೊಂದು ಮಹತ್ವದ ಉದ್ದೇಶ ಅಡಕವಾಗಿತ್ತು. ಈ ಪ್ರವಾಸದಲ್ಲಿ  ಭಾರತದ ವನಿತೆಯರು ಹಾಕಿ ಕ್ರೀಡೆಯ ಶಕ್ತಿ ಕೇಂದ್ರಗಳಲ್ಲಿ ಒಂದೆನಿಸಿರುವ ಜರ್ಮನಿ  ಎದುರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಜರ್ಮನಿ ಎದುರು ಆಡಿದ ಎರಡೂ ಪಂದ್ಯಗಳಲ್ಲಿಯೂ ಭಾರತ ತಂಡ ಕ್ರಮವಾಗಿ 0–3 ಮತ್ತು 2–3 ಗೋಲುಗಳ ಅಂತರದಿಂದ ಸೋಲು ಕಂಡಿತ್ತು.

ಆದರೆ ಪ್ರವಾಸದ ಕೊನೆಯ ಪಂದ್ಯದಲ್ಲಿ 3–0 ಗೋಲುಗಳಿಂದ ಸ್ಕಾಟ್ಲೆಂಡ್‌ ತಂಡವನ್ನು ಮಣಿಸಿ ಕಳೆದು ಹೋಗಿದ್ದ ವಿಶ್ವಾಸವನ್ನು ಪುನಃ ಪಡೆದುಕೊಂಡಿತ್ತು. ಅಷ್ಟಕ್ಕೂ ಜರ್ಮನಿ ಎದುರು ತಂಡದ ಸಾಧನೆ ಹೇಳಿಕೊಳ್ಳುವಂತೇನೂ ಇಲ್ಲ. ಹಿಂದೆ ಆಡಿದ ಹಲವು ಪಂದ್ಯಗಳಲ್ಲಿ ಭಾರತದ ವನಿತೆಯರು ಈ ತಂಡಕ್ಕೆ ಶರಣಾಗಿದ್ದರು. ಮುಂಬರುವ ಒಲಿಂಪಿಕ್ಸ್‌ನಲ್ಲೂ  ರಿತು ರಾಣಿ ಬಳಗ ಜರ್ಮನಿ ಎದುರು ಆಡಲಿದೆ.

ಹೀಗಾಗಿಯೇ ಹರಿಣಗಳ ನಾಡಿಗೆ ಪ್ರವಾಸ ಕೈಗೊಳ್ಳ ಲಾಗಿತ್ತು. ಇಲ್ಲಿ ಭಾರತದ ವನಿತೆಯರಿಗೆ ಜರ್ಮನಿ ಎದುರು ಗೆಲುವು ಮರೀಚಿಕೆಯಾಯಿತಾದರೂ. ಸೋಲು ಹಲವು ಪಾಠಗಳನ್ನು ಕಲಿಸಿದ್ದಂತೂ ಸುಳ್ಳಲ್ಲ. ಅಷ್ಟಕ್ಕೂ ಪ್ರವಾಸದ ವೇಳೆ ಭಾರತದ ಮೇಲೆ  ಯಾವುದೇ ನಿರೀಕ್ಷೆಗಳೂ ಇರಲಿಲ್ಲ.  ಪ್ರವಾಸಕ್ಕೂ ಮುನ್ನ ಭಾರತ ತಂಡದ ಮುಖ್ಯ ಕೋಚ್‌ ನೀಲ್‌ ಹಾಗುಡ್‌ ಅವರೇ ಈ ಮಾತನ್ನು ಒಪ್ಪಿಕೊಂಡಿದ್ದರು.

‘ಒಲಿಂಪಿಕ್ಸ್‌ನಲ್ಲಿ ನಾವು ಜರ್ಮನಿ ತಂಡದ ಸವಾಲು ಎದುರಿಸಲಿದ್ದೇವೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ನಮಗೆ ಅಗ್ನಿ ಪರೀಕ್ಷೆ ಇದ್ದ ಹಾಗೆ. ಒಂದು ವೇಳೆ ನಾವು  ಸೋತರೆ ಅದರಿಂದ ನಷ್ಟವೇನಿಲ್ಲ.  ನಮ್ಮ ಲೋಪ ದೋಷಗಳನ್ನು ಅರಿತು ಅವುಗಳನ್ನು ತಿದ್ದಿಕೊಳ್ಳಲು ಈ ಪ್ರವಾಸ  ನೆರವಾಗಲಿದೆ’ ಎಂದು ಹಾಗುಡ್‌ ಹೇಳಿದ್ದರು.

ಸ್ಫೂರ್ತಿಯ ಸೆಲೆ...
ಜರ್ಮನಿ ಎದುರು ಭಾರತ ತಂಡ ಸೋತರೂ  ಎಂತಹ ಸಂದಿಗ್ಧ ಸಮಯದಲ್ಲೂ ಹೋರಾಟ ಮನೋ ಭಾವ ಕಳೆದುಕೊಂಡಿರಲಿಲ್ಲ. ಮೊದಲ ಪಂದ್ಯದಲ್ಲಿ ತಂಡ ಗೋಲಿನ ಖಾತೆ ತೆರೆಯಲಿಲ್ಲ ನಿಜ. ಆದರೆ  ಎದು ರಾಳಿಗಳಿಗೆ ಹೆಚ್ಚು ಗೋಲು ಬಿಟ್ಟುಕೊಟ್ಟಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಎದುರಾಳಿ ತಂಡ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸುವಂತೆ ಮಾಡಿದ್ದು  ಆಟಗಾರ್ತಿಯರಲ್ಲಿ ಹೊಸ ಸ್ಫೂರ್ತಿ ತುಂಬಿರುವುದಂತೂ ದಿಟ.

ಹೆಚ್ಚಿದ ನಿರೀಕ್ಷೆ...
ಆಸ್ಟ್ರೇಲಿಯಾ, ನೆದರ್ಲೆಂಡ್ಸ್‌, ಅರ್ಜೆಂ ಟೀನಾ,  ಮತ್ತು ನ್ಯೂಜಿ ಲೆಂಡ್‌,   ಈ ಬಾರಿಯ ಒಲಿಂ ಪಿಕ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ತಂಡಗಳೆಂಬ ಹಣೆಪಟ್ಟಿ ಹೊಂದಿವೆ. ಹಾಗಂತ ಭಾರತವನ್ನು ಕಡೆಗಣಿಸುವಂತಿಲ್ಲ. ಹಿಂದಿನ ಒಂದು ವರ್ಷದಲ್ಲಿ ನಡೆದ ಟೂರ್ನಿಗಳಲ್ಲಿ ರಿತು  ಪಡೆಯಿಂದ ಮೂಡಿ ಬಂದಿರುವ ಸಾಮರ್ಥ್ಯ ತಂಡದ ಮೇಲೆ ನಿರೀಕ್ಷೆ ಇಡುವಂತೆ ಮಾಡಿದೆ. ಕಳೆದ ವರ್ಷದ ಆರಂಭದಲ್ಲಿ ನಡೆದ ಸ್ಪೇನ್‌ ಪ್ರವಾಸ, ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ರೌಂಡ್‌–2 ಟೂರ್ನಿಗಳಲ್ಲಿ ಭಾರತ ತಂಡ ಜರ್ಮನಿ, ಆಸ್ಟ್ರೇಲಿಯಾದಂತಹ ಶಕ್ತಿಯುತ ತಂಡಗಳ ಎದುರು ಗೆದ್ದಿತ್ತು. ಜತೆಗೆ  ಅರ್ಜೆಂಟೀನಾ ಪ್ರವಾಸದಲ್ಲಿಯೂ  ಗಮನಾರ್ಹ ಸಾಮರ್ಥ್ಯ ತೋರಿತ್ತು.

ಹಾಗುಡ್‌ ಎಂಬ ಮಾಂತ್ರಿಕ..
ಆಸ್ಟ್ರೇಲಿಯಾ ತಂಡದ ಹಾಕಿ ಮಾಂತ್ರಿಕ ನೀಲ್‌ ಹಾಗುಡ್‌  ಹೋದ ವರ್ಷ ಎರಡನೇ ಅವಧಿಗೆ ಮುಖ್ಯಕೋಚ್‌ ಆಗಿ ನೇಮಕಗೊಂಡ ಬಳಿಕ ತಂಡದ ಪ್ರದರ್ಶನ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. 2013ರಲ್ಲಿ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದ ಹಾಗುಡ್‌ ತಂಡದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದರು. ಅವರ ಮಾರ್ಗ ದರ್ಶನದಲ್ಲಿ ತಂಡ ಆ ವರ್ಷ ಹಾಕಿ ವಿಶ್ವ ಲೀಗ್‌ ರೌಂಡ್‌–2ರಲ್ಲಿ ಪ್ರಶಸ್ತಿ ಗೆದ್ದಿತ್ತು. ಜತೆಗೆ ಏಷ್ಯನ್‌ ಚಾಂಪಿ ಯನ್‌ಷಿಪ್‌ನಲ್ಲಿ ಕಂಚಿನ ಸಾಧನೆಯನ್ನು ಮಾಡಿತ್ತು.

2014ರಲ್ಲಿ ಕೆಲ ಕಾರಣಗಳಿಂದ ಹಾಗುಡ್‌ ತಮ್ಮ ಸ್ಥಾನ ತೊರೆದಿದ್ದರು. ಭಾರತ ತಂಡ ಒಲಿಂ ಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ ತನ್ನ ಪ್ರತಿಷ್ಠೆ ಯನ್ನು ಬದಿಗೊತ್ತಿದ ಹಾಕಿ ಇಂಡಿಯಾ ಆಸ್ಟ್ರೇಲಿ ಯಾದ ಮಾಜಿ ಆಟಗಾರನ ಮನವೊಲಿಸಿ ಮತ್ತೊಮ್ಮೆ ಅವರನ್ನು ಕೋಚ್‌ ಹುದ್ದೆಗೆ ತಂದು ಕೂರಿಸಿದೆ. ಅವರು ಬಂದ ಬಳಿಕ  ತಂಡದ ಸಾಮರ್ಥ್ಯ ಏರುಗ ತಿಯಲ್ಲಿ ಸಾಗಿದೆ. 

ಇತ್ತೀಚೆಗೆ ನಡೆದ 12ನೇ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿರುವುದು ತಂಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಭಾರತ ತಂಡ ಮುಂಚೂಣಿ ಮತ್ತು ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ಪೆನಾಲ್ಟಿ ಶೂಟೌಟ್‌ ನಲ್ಲಿ ಮುಗ್ಗರಿಸುತ್ತಿದೆ. ಹಿಂದಿನ ಕೆಲ ಪಂದ್ಯಗಳ ಫಲಿತಾಂಶ ಇದಕ್ಕೆ ನಿದರ್ಶನ. ಒಲಿಂಪಿಕ್ಸ್‌ನಲ್ಲಿ ಪದಕಕ್ಕೆ ಮುತ್ತಿಡಬೇಕಾದರೆ ಈ ತಪ್ಪುಗಳನ್ನು ತಿದ್ದಿಕೊಂಡು ಸಾಗಬೇಕಾದ ಸವಾಲು ಈಗ ಭಾರತದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT