ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳ ಆವಾಸದಲ್ಲಿ ಗಡಿಬಿಡಿ

Last Updated 3 ಮಾರ್ಚ್ 2016, 11:47 IST
ಅಕ್ಷರ ಗಾತ್ರ

ಯಳಂದೂರು: ಜನವರಿ ತಿಂಗಳ ಮುಂಜಾನೆ ಯಳಂದೂರು ಪಟ್ಟಣದ ಸಮೀಪ ಆನೆಗಳ ಹಿಂಡು ಲಗ್ಗೆ ಇಟ್ಟು ಅಚ್ಚರಿ ಮೂಡಿಸಿತು. ಬಿಳಿಗಿರಿರಂಗನ ಬೆಟ್ಟದ ಹಾದಿಯಲ್ಲಿ ಆನೆ ಪಥದಲ್ಲಿ ಹತ್ತಾರು ಆನೆಗಳ ಮೆರವಣಿಗೆಯ ಸಾಲು ಹಾದು ಹೋಯಿತು.  ಸಮೀಪವೇ ಚಿರತೆಗಳ ಚೆಲ್ಲಾಟ ಹಾಗೂ ಕರಡಿಗಳ ಕಲರವ ಸಾಮಾನ್ಯ. ಆದರೆ, ಇವುಗಳ ನೆಲೆಯ ಬಳಿ ನಿಂತು ಮನುಕುಲ ಫೋಟೋ ಕ್ಲಿಕ್ಕಿಸುವ ಹಾಗೂ ಹೆಚ್ಚಿನ ಶಬ್ದ ಹೊಮ್ಮಿಸಿ ಹಿಂಸಿಸುವ ದೃಶ್ಯಗಳು ಮಾತ್ರ ಸಹನೀಯವಾಗಿ ಇರಲಿಲ್ಲ.

ಹೌದು. ತಾಲ್ಲೂಕಿನ ಸುತ್ತಮುತ್ತ ಆಗಾಗ ವನ್ಯ ಪ್ರಾಣಿಗಳ ದರ್ಶನ ಆಗುತ್ತದೆ. ಹೊಲಗದ್ದೆಗಳ ಬಳಿ ಸುಳಿದಾಡುವ ನವಿಲು, ಅಪರೂಪದ ಶ್ವೇತ ಮಿಂಚುಳ್ಳಿ ಹಾಗೂ ಪ್ಲಾಸ್ಟಿಕ್‌ ಕಟ್ಟಿ ಪಕ್ಷಿಗಳನ್ನು ಬೆದರಿಸುವ ಹತ್ತಾರು ರೀತಿಯ ವಿಕೃತ ಮನಸ್ಥಿತಿ ಜೀವಿಗಳ ಆವಾಸದಲ್ಲಿ ತಲ್ಲಣ ತಂದಿತ್ತಿದೆ. ಇವುಗಳ ಸಂರಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್‌ 3ರಂದು ‘ವಿಶ್ವ ವನ್ಯಜೀವಿ ದಿನ’ವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆಕೊಟ್ಟಿದೆ.

ಬಾಧಿತ ಪ್ರಾಣಿಗಳು: ಉಪ್ಪಿನಮೋಳೆ, ಗಣಿಗನೂರು ಗ್ರಾಮಗಳ ಬಳಿ ಕಾಡಾನೆಗಳು ವರ್ಷದ ಆರಂಭದಲ್ಲಿ ಕಾಣಿಸಿಕೊಂಡವು. ಕಾಡಂಚಿನಿಂದ ದೂರಹೋದ ಹಾಗೆ, ಹಂದಿಗಳ ಕಾಟ ಹೆಚ್ಚು. ಅಪರೂಪದ ಸಸ್ಯವರ್ಗ ಅಳಿಯುತ್ತಿರುವುದರಿಂದ ಮರಕುಟಿಗ ಹಾಗೂ ಬಿಳಿ ಮಿಂಚುಳ್ಳಿ ಅಳಿವಿನಂಚಿನಲ್ಲಿದೆ. ಕೆಲವರು ಪ್ರಾಣಿ ಪಕ್ಷಿ ಓಡಿಸಲು ಜಮೀನುಗಳ ಬಳಿ ಪ್ಲಾಸ್ಟಿಕ್ ಚೀಲ ಕಟ್ಟಿ ಬೆಳೆ ರಕ್ಷಣೆಗೆ ಮುಂದಾಗುತ್ತಿದ್ದಾರೆ. ಇದರಿಂದ ಅವುಗಳ ನೆಲೆಯ ಬದುಕು ಬದಲಾಗುತ್ತದೆ ಎನ್ನುತ್ತಾರೆ ಪರಿಸರ ಪ್ರಿಯರು.

ಜನಜಂಗುಳಿ ತಪ್ಪಲಿ: ಕಾಡಾನೆಗಳು ಬಂದಾಗ ಸಾವಿರಾರು ಜನರು ಸೇರುತ್ತಾರೆ. ಇದರಿಂದ ವಿಚಲಿತವಾಗುವ ಪ್ರಾಣಿಗಳು ಜನರ ನಡುವೆ ನುಗ್ಗುವ ಸಂಭವ ಇಲ್ಲದಿಲ್ಲ. ಯುವಕರು ಮರವೇರಿ ಅರಚುತ್ತಾರೆ. ಕೆಲವರು ರಸ್ತೆಯ ಬದಿ ಸಾಗುವ ಜೀವಿಗಳ ಛಾಯಚಿತ್ರ ತೆಗೆಯುವ ಹುಚ್ಚಿಗೆ ಹತ್ತಿರ ತೆರಳುವುದು ಇದೆ. ಇದರಿಂದ  ಅರಣ್ಯ ಇಲಾಖೆಯ ಸಿಬ್ಬಂಧಿಗೆ ದಿಕ್ಕು ತೋಚದಾಗುತ್ತದೆ ಎನ್ನುತ್ತಾರೆ ಏಟ್ರೀ ವಿಜ್ಞಾನಿ ಸಿದ್ದಪ್ಪಶೆಟ್ಟಿ ಅವರು.

ಸಂವಿಧಾನದ ರಕ್ಷಣೆ: ‘ಪ್ರಪಂಚದಲ್ಲಿ ಶೇ 5ಭಾಗ ಮಾತ್ರ ವನ್ಯಜೀವಿಗಳ ನೆಲೆ ಇದೆ. ಉಳಿದ ಶೇ 95ಕಡೆಗಳಲ್ಲಿ ಮನುಕುಲದ ಪ್ರಾಬಲ್ಯ ಇದೆ. ಮಾನವನ ನಾಗರಿಕ ಜೀವನ ಅರಳಿದ್ದೇ ಅರಣ್ಯದ ಸಹವಾಸದಲ್ಲಿ. ಹಾಗಾಗಿ, ಇವುಗಳ ಸಂರಕ್ಷಣೆಗೆ ಸಂವಿಧಾನದ ಮೂಲಭೂತ ಕರ್ತವ್ಯ ಅವಕಾಶ ಕಲ್ಪಿಸಿದೆ. ನಮ್ಮ ಉಳಿವು ಕಾಡಿನ ಇಂತಹ ಜೀವಜಾಲವನ್ನು ಅವಲಂಬಿಸಿದೆ. ಇದರ ನಡುವೆಯೂ ಕೃಷಿಕರ ನೆರವಿಗೆ ಅರಣ್ಯ ಇಲಾಖೆ ಆಸ್ಥೆ ವಹಿಸುತ್ತದೆ’ ಎಂದು ಚಾಮರಾಜನಗರ ಬಿಆರ್‌ಟಿ ಹುಲಿ ಸಂರಕ್ಷಣಾ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌. ಲಿಂಗರಾಜ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT