ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆಗಾಗಿ ನಿಂತ ಮದುವೆ, ಅದೇ ಘಳಿಗೆಯಲ್ಲೇ ಹೊಸಬಾಳು

Last Updated 9 ಜೂನ್ 2011, 8:35 IST
ಅಕ್ಷರ ಗಾತ್ರ

ದಾವಣಗೆರೆ: ವರದಕ್ಷಿಣೆ ವಿಚಾರವಾಗಿ ಮದುವೆ ನಿಂತುಹೋದ ಇಬ್ಬರು ವಧುಗಳಿಗೆ ಬೇರೆ ಯುವಕರು ತಾಳಿಕಟ್ಟಿದ ಸಿನಿಮೀಯ ಘಟನೆ ನಗರದಲ್ಲಿ ಬುಧವಾರ ನಡೆದಿದೆ.

ಇಲ್ಲಿನ ಎಲ್ಲಮ್ಮನಗರದ ಶಂಕರ್ ಅವರಿಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಕವಿತಾ ಅವರೊಂದಿಗೆ, ಶಂಕರ್ ಸಹೋದರ ಚಂದ್ರು ಎಂಬುವರಿಗೆ ಆಂಧ್ರ ಪ್ರದೇಶದ  ಅನಂತಪುರ ಜಿಲ್ಲೆ ಕಲ್ಯಾಣ ದುರ್ಗ ತಾಲ್ಲೂಕಿನ ಮರಮಾಕಲ ಹಳ್ಳಿಯ ಲಕ್ಷ್ಮೀ ಅವರೊಂದಿಗೆ ಇಲ್ಲಿನ ನರಹರಿ ಶೇಟ್ ಸಭಾಭವನದ ಮಿನಿ ಹಾಲ್‌ನಲ್ಲಿ ವಿವಾಹ ನಡೆಯುವುದಿತ್ತು.

ಉಭಯ ವರರಿಗೆ ತಲಾ ರೂ 50 ಸಾವಿರ ವರದಕ್ಷಿಣೆ ನೀಡಲು ವಧುವಿನ ಕಡೆಯವರು ಒಪ್ಪಿದ್ದರು. ರೂ 40 ಸಾವಿರ ಪಾವತಿಸಲಾಗಿತ್ತು. ಆದರೆ, ಮಂಗಳವಾರ ರಾತ್ರಿ ಆರತಕ್ಷತೆ ಸಂದರ್ಭದಲ್ಲಿ ಬಾಕಿ ರೂ 10 ಸಾವಿರ ಕೊಡುವಂತೆ ಶಂಕರ್ ಹಾಗೂ ಚಂದ್ರು ತಕರಾರು ತೆಗೆದರು. ಎಷ್ಟೇ ವಿನಂತಿಸಿ ಮಾತುಕತೆ ನಡೆಸಿದರೂ ಮದುವೆಗೆ ಅವರು ಒಪ್ಪಲಿಲ್ಲ. ಮಾತಿನ ಚಕಮಕಿ ತಾರಕಕ್ಕೇರಿ ಮದುವೆ ಮುರಿದುಬಿತ್ತು.

ಘಟನೆ ನೋಡಿದ ಲಕ್ಷ್ಮೀ ಕಡೆಯವರು ಇಂಥ ವರ ನಮಗೆ ಬೇಡ ಎಂದು ಚಂದ್ರುವನ್ನೂ ನಿರಾಕರಿಸಿದರು. ಅಲ್ಲಿಗೆ ಎರಡೂ ಮದುವೆಗಳು ನಿಂತುಹೋದವು.

ಇದೇ ಸಂದರ್ಭ ಕವಿತಾ ಕಡೆಯವರೊಂದಿಗೆ ಮದುವೆಗೆ ಬಂದಿದ್ದ ಚಳ್ಳಕೆರೆ ತಾಲ್ಲೂಕು ಚಿನ್ನಮ್ಮ ನಾಗ್ತಿಹಳ್ಳಿಯ ಹುಡುಗ ನಾಗರಾಜ್ ಅವರು ಕವಿತಾರನ್ನು ಮದುವೆ ಆಗುವುದಾಗಿ ತಿಳಿಸಿದರು. ಅದೇ ಮುಹೂರ್ತದ ಒಳಗೆ ನಗರದ ಆವರಗೆರೆ ರೈಲ್ವೇ ಮೇಲು ಸೇತುವೆ ಸಮೀಪದ ಚೌಡಮ್ಮನಗುಡಿಯಲ್ಲಿ ನಾಗರಾಜ್-ಕವಿತಾ ಸತಿಪತಿಗಳಾದರು.

ಲಕ್ಷ್ಮೀ ಅವರನ್ನು ಹಗರಿ ಬೊಮ್ಮನಹಳ್ಳಿಯ ಮಂಜುನಾಥ ಎಂಬುವರು ಸಂಜೆ ವೇಳೆಗೆ ಚಳ್ಳಕೆರೆಯ ಅಜ್ಜಯ್ಯನ ಗುಡಿಯಲ್ಲಿ ಸರಳ ವಿವಾಹ ಸಮಾರಂಭದಲ್ಲಿ ಕೈಹಿಡಿದರು.

ದಿಢೀರ್ ಮದುವೆಯಾದರೂ ಖುಷಿ ತಂದಿದೆ. ಕವಿತಾ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT