ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ತಳ್ಳಿಹಾಕಿದ ಸಂದೀಪ್‌ ಪಾಟೀಲ್

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್ನೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಹೊಸ್ತಿಲಲ್ಲಿ ನಿಂತಿರುವ ಸಚಿನ್‌ ತೆಂಡೂಲ್ಕರ್‌ ಅವರ ನಿವೃತ್ತಿಯ ವಿಚಾರ ಮತ್ತೆ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

200ನೇ ಟೆಸ್ಟ್‌ ಪಂದ್ಯದ ಬಳಿಕ ನಿವೃತ್ತಿಯಾಗುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌ ಅವರು ಸಚಿನ್‌ಗೆ ತಿಳಿಸಿದ್ದಾಗಿ ವರದಿಯಾಗಿದೆ.

ಆದರೆ ಈ ವರದಿಯನ್ನು ಸಂದೀಪ್‌ ಪಾಟೀಲ್‌ ತಳ್ಳಿಹಾಕಿದ್ದಾರೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೂಡಾ ‘ಇದು ಸುಳ್ಳು ವರದಿ’ ಎಂದಿದೆ.

198 ಟೆಸ್ಟ್‌ಗಳನ್ನು ಆಡಿರುವ ಸಚಿನ್‌  ವೆಸ್ಟ್‌ ಇಂಡೀಸ್‌ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಯ ವೇಳೆ 200 ಟೆಸ್ಟ್‌ಗಳನ್ನು ಪೂರೈಸಲಿದ್ದಾರೆ. ಸಚಿನ್‌ ಅವರ 200ನೇ ಟೆಸ್ಟ್‌ ತವರಿನಲ್ಲೇ ನಡೆಯಬೇಕು ಎಂಬ ಉದ್ದೇಶದಿಂದ ಬಿಸಿಸಿಐ  ವೆಸ್ಟ್‌ ಇಂಡೀಸ್‌ ತಂಡವನ್ನು ಭಾರತಕ್ಕೆ ಆಹ್ವಾನಿಸಿದೆ.

‘ಸಚಿನ್‌ ಜೊತೆ ಮಾತನಾಡುವುದೆಂದರೆ ಸಂತಸದ ಸಂಗತಿ. ಆದರೆ ನಾನು ಕಳೆದ 10 ತಿಂಗಳುಗಳಿಂದ ಅವರನ್ನು ಭೇಟಿಯಾಗಿಯೇ ಇಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ. ಅವರು ನನಗೂ ಕರೆ ಮಾಡಿಲ್ಲ. ಯಾವುದೇ ವಿಷಯದ ಬಗ್ಗೆ ನಾವು ಚರ್ಚೆ ನಡೆಸಿಲ್ಲ. ಇದು ಬೇಜವಾಬ್ದಾರಿಯಿಂದ ಕೂಡಿದ ವರದಿ’ ಎಂದು ಪಾಟೀಲ್‌ ತಿಳಿಸಿದ್ದಾರೆ.

ನವೆಂಬರ್‌ ತಿಂಗಳಲ್ಲಿ ವಿಂಡೀಸ್‌ ತಂಡ ಭಾರತಕ್ಕೆ ಬರಲಿದ್ದು, ಎರಡು ಟೆಸ್ಟ್‌ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ಈ ಸರಣಿ ನಡೆಸಲು ನಿರ್ಧರಿಸಿದ ಬೆನ್ನಲ್ಲೇ ಪಾಟೀಲ್‌ ಅವರು ಬ್ಯಾಟಿಂಗ್‌ ಚಾಂಪಿಯನ್‌ಅನ್ನು ಭೇಟಿಯಾಗಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. 200ನೇ ಟೆಸ್ಟ್‌ ಪಂದ್ಯದ ಬಳಿಕ ಆಯ್ಕೆ ಸಮಿತಿಯು ನಿಮ್ಮ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಪಾಟೀಲ್‌ ಇದೇ ವೇಳೆ ಸಚಿನ್‌ಗೆ ತಿಳಿಸಿದ್ದಾಗಿಯೂ ವರದಿ ಹೇಳಿದೆ.

‘ಸಚಿನ್‌ ಜೊತೆ ಪಾಟೀಲ್‌ ಮಾತನಾಡಿದ್ದು, ಪರಿಸ್ಥಿತಿಯ ಪೂರ್ಣ ಚಿತ್ರಣವನ್ನು ಅವರ ಮುಂದಿಟ್ಟಿದ್ದಾರೆ. ಆಯ್ಕೆ ಸಮಿತಿಯ ಮುಂದಿನ ಒಂದು ವರ್ಷದ ಯೋಜನೆಯ ಬಗ್ಗೆ ಸಚಿನ್‌ಗೆ ವಿವರಿಸಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡಲು ಬಯಸುವುದಾಗಿಯೂ ಅವರಿಗೆ ಹೇಳಿದ್ದಾರೆ’ ಎಂಬ ವಿವರವೂ ವರದಿಯಲ್ಲಿದೆ.

‘ನಮ್ಮಲ್ಲಿ ಸಾಕಷ್ಟು ಯುವ ಆಟಗಾರರು ಇದ್ದಾರೆ. ಮಾತ್ರವಲ್ಲ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಚಿನ್‌ ಅವರನ್ನು ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ನಾವು ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಅಗತ್ಯ. ತಮ್ಮ ಸಾಮರ್ಥ್ಯ ತೋರಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿರುವ ಸಾಕಷ್ಟು ಯುವ ಪ್ರತಿಭೆಗಳು ಇದ್ದಾರೆ’ ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ನುಡಿದಿರುವುದಾಗಿಯೂ ವರದಿ ತಿಳಿಸಿದೆ.

ಸಚಿನ್‌ ಹಾಗೂ ಸಂದೀಪ್‌ ಪಾಟೀಲ್‌ ನಡುವೆ ಮಾತುಕತೆ ನಡೆದಿದೆ ಎಂಬ ವರದಿಯನ್ನು ಬಿಸಿಸಿಐ ನಿರಾಕರಿಸಿದೆ. ‘ವರದಿಯಲ್ಲಿ ಯಾವುದೇ ಹುರುಳಿಲ್ಲ’ ಎಂದು ಮಂಡಳಿಯ  ಅಧಿಕಾರಿ ರಾಜೀವ್‌ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT