ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ತಿರಸ್ಕಾರಕ್ಕಾಗಿ ಕ್ರೈಸ್ತರ ಧರಣಿ

Last Updated 18 ಫೆಬ್ರುವರಿ 2011, 18:00 IST
ಅಕ್ಷರ ಗಾತ್ರ

ಬೆಂಗಳೂರು: ಚರ್ಚ್‌ಗಳ ಮೇಲೆ ನಡೆದ ದಾಳಿ ಸಂಬಂಧ ನ್ಯಾಯಮೂರ್ತಿ ಸೋಮಶೇಖರ ಆಯೋಗವು ಸಲ್ಲಿಸಿರುವ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ಕ್ರಿಶ್ಚಿಯನ್ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಆರ್ಚ್ ಬಿಷಪ್‌ಗಳು ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು. ನಗರದ ಎಂ.ಜಿ.ರಸ್ತೆಯ ಸೇಂಟ್ ಮಾರ್ಕ್ಸ್ ಕೆಥೆಡ್ರಲ್ ಚರ್ಚ್ ಆವರಣದಲ್ಲಿ ಮಾನವ ಸರಪಳಿ ರಚಿಸಿ ಧರಣಿ ನಡೆಸಿದ ಅವರು ‘ಸೋಮಶೇಖರ ಆಯೋಗದ ವರದಿಯು ಸತ್ಯವನ್ನು ಮರೆ ಮಾಚಿದೆ. ಇದರಿಂದ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ಆಯೋಗ ಸಲ್ಲಿಸಿರುವ ವರದಿ ನ್ಯಾಯಯುತವಾಗಿಲ್ಲ. ಚರ್ಚ್‌ಗಳ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರೈಸ್ತ ಸಮುದಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಬರ್ನಾಡ್ ಮೊರಾಸ್ ಒತ್ತಾಯಿಸಿದರು.

‘ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳ ಮತ್ತು ಶ್ರೀರಾಮ ಸೇನೆ ಸಂಘಟನೆಗಳ ಕೈವಾಡವಿರುವ ಬಗ್ಗೆ ಮಧ್ಯಂತರ ವರದಿಯಲ್ಲಿ ಸಂಶಯ ವ್ಯಕ್ತಪಡಿಸಿದ್ದ ಆಯೋಗವು ಅಂತಿಮ ವರದಿಯಲ್ಲಿ ಆ ಸಂಘಟನೆಗಳ ಹೆಸರನ್ನೇ ಪ್ರಸ್ತಾಪಿಸದಿರುವುದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದರು.

‘ಚರ್ಚ್ ದಾಳಿ ಸಂಬಂಧ ಕ್ರೈಸ್ತ ಯುವಕರು ಮತ್ತು ಮಹಿಳೆಯರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ದಾಳಿ ಸಂದರ್ಭದಲ್ಲಿ ಹಾನಿಗೊಳಗಾದ ಚರ್ಚ್‌ಗಳಿಗೆ ಮತ್ತು ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.ಆರ್ಚ್ ಬಿಷಪ್‌ಗಳಾದ ಡಾ.ಜೆ.ಪ್ರಭಾಕರ ರಾವ್, ಡಾ.ವಸಂತ ಕುಮಾರ್, ತಾರಾನಾಥ್ ಎಸ್.ಸಾಗರ್ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT