ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಬಂದ ನಂತರ ಡಿಕೆಶಿ ವಿರುದ್ಧ ಕ್ರಮ

Last Updated 16 ಫೆಬ್ರುವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರು ಕನಕಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದು, ವರದಿ ಬಂದ ನಂತರ ತನಿಖೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಗುರುವಾರ ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿ ಮಾಡಿ ನಿರ್ಗಮಿಸುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, `ಶಿವಕುಮಾರ್ ಮತ್ತು ಅವರ ಕುಟುಂಬದ ಸದಸ್ಯರು ಒಂಬತ್ತು ಗಣಿಗಳನ್ನು ಹೊಂದಿದ್ದು, ಮೂರು ಗ್ರಾನೈಟ್ ಕಾರ್ಖಾನೆಗಳನ್ನೂ ಹೊಂದಿದ್ದಾರೆ. ಅವರು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಪರಿಶೀಲನೆ ನಡೆಸಿ 15 ದಿನಗಳೊಳಗೆ ವರದಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದರು.

`ಶಿವಕುಮಾರ್ ಅವರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಮುಖ್ಯಮಂತ್ರಿಯವರಿಗೆ ವಿವರಿಸಿದ್ದೇನೆ. ಈ ಬಗ್ಗೆ ಯಾವ ತನಿಖೆ ನಡೆಸಬೇಕು ಎಂಬುದನ್ನು ತಿಳಿಸುವಂತೆ ಮುಖ್ಯಮಂತ್ರಿಯವರು ನನಗೆ ಸೂಚಿಸಿದ್ದಾರೆ. ಅರಣ್ಯ ಸಂಪತ್ತಿನ ರಕ್ಷಣೆಯ ಜವಾಬ್ದಾರಿ ಹೊಂದಿರುವ ನಾನು, ಇನ್ನು ಮುಂದೆ ಕನಕಪುರದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ~ ಎಂದು ಹೇಳಿದರು.

ಕನಕಪುರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಹಿಂದೆಯೇ ವರದಿ ಸಲ್ಲಿಸಿದ್ದರು. ಆದರೆ, ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲು ಶಿವಕುಮಾರ್ ಬಿಡಲಿಲ್ಲ. ಸಿಐಡಿ ತನಿಖೆಯ ಮೇಲೂ ಪ್ರಭಾವ ಬೀರಿದ್ದಾರೆ. 2007ರವರೆಗೂ ಶಿವಕುಮಾರ್ ಮತ್ತು ಅವರ ಸಹೋದರ ನಡೆಸಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ತಮ್ಮ ಬಳಿ ಇದೆ. ನಂತರದ ಅವಧಿಯಲ್ಲಿ ನಡೆದಿರುವ ಅಕ್ರಮ ಕುರಿತು ವರದಿ ಪಡೆಯಲಾಗುವುದು ಎಂದರು.

`ಏನಾಗಿದ್ದರು ಎಂಬುದು ಗೊತ್ತಿದೆ~:
`ಬಹಳ ಹಿಂದೆ ಶಿವಕುಮಾರ್ ಏನಾಗಿದ್ದರು, ಈಗ ಏನಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. ಹಿಂದೆ ರೌಡಿಯೊಬ್ಬನ ಜೊತೆ ಅವರು ಇದ್ದರು. ಈಗ ಅಕ್ರಮ ಗಣಿಗಾರಿಕೆಯಿಂದ ಲೂಟಿ ಮಾಡಿರುವ ಸಂಪತ್ತಿನ ಅಹಂಕಾರ ಪ್ರದರ್ಶಿಸುತ್ತಿದ್ದಾರೆ. ದೇಶದ ಕಾನೂನು ತನಗೆ ಅನ್ವಯ ಆಗುವುದಿಲ್ಲ ಎಂಬ ಭಾವನೆಯಲ್ಲಿ ಅವರಿದ್ದಾರೆ. ಆದ್ದರಿಂದ ಕನಕಪುರ `ಶಿವಕುಮಾರ್ ಗಣರಾಜ್ಯ~ ಆಗಿದೆ. 20 ವರ್ಷದಿಂದ ಶಾಸಕ ರಾಗಿರುವ ಅವರು, ತಮ್ಮ ವಿರುದ್ಧ ಮಾತನಾಡುವವರ ದನಿ ಅಡಗಿಸುತ್ತಾರೆ~ ಎಂದು ದೂರಿದರು.

ಮುಖ್ಯಮಂತ್ರಿಗೆ ಪತ್ರ
ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಶಾಸಕ ಡಿ.ಕೆ.ಶಿವಕುಮಾರ್, `ನಮ್ಮ ಕುಟುಂಬದ ವಿರುದ್ಧ ಅರಣ್ಯ ಸಚಿವರು ಮಾಡುತ್ತಿರುವ ಆರೋಪಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯಿರಿ. ಆರೋಪಗಳು ಸತ್ಯವೆಂದು ಕಂಡುಬಂದಲ್ಲಿ ಸೂಕ್ತ ತನಿಖೆ ನಡೆಸಿ~ ಎಂದು ಮನವಿ ಮಾಡಿದ್ದಾರೆ.

`ಕನಕಪುರದಲ್ಲಿ ನಾವು ಯಾವುದೇ ರೀತಿಯ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಹಿಂದೆಯೇ ಈ ಬಗ್ಗೆ ತನಿಖೆ ನಡೆಸಲಾಗಿತ್ತು. ನಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. ಆದರೆ, ಅರಣ್ಯ ಸಚಿವ ಯೋಗೇಶ್ವರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ತಕ್ಷಣವೇ ನೀವು ಮಧ್ಯ ಪ್ರವೇಶಿಸಿ, ರಾಜ್ಯದ ಜನತೆಗೆ ಸತ್ಯಾಂಶ ತಿಳಿಸಬೇಕು~ ಎಂದು ಅವರು ಗುರುವಾರ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

ಪ್ರಚಾರ ಗಿಟ್ಟಿಸಿಕೊಳ್ಳಲು ಮತ್ತು ರಾಜಕೀಯ ಲಾಭ ಪಡೆಯಲು ಸಚಿವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಬೆಳವಣಿಗೆಗೆ ತಕ್ಷಣವೇ ಕಡಿವಾಣ ಹಾಕಬೇಕು. ತಮ್ಮ ವಿರುದ್ಧ ವೈಯಕ್ತಿಕ ನಿಂದನೆ, ಆರೋಪ ಮಾಡುತ್ತಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT