ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಹಾಲಕ್ಷ್ಮಿ ಅಲಂಕಾರದ ನೆನಪಿನಲ್ಲಿ...

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ಒಂದು ಹತ್ತು ವರ್ಷದ ಹಿಂದೆ ಇತ್ತು ನೋಡಿ.. ಹಬ್ಬದ ಭರಾಟೆ...! ಒಂದೇ ದಿನ ಐದಾರು ಮನೆಯ ಅಲಂಕಾರ ಮಾಡಿ ಬಂದರೂ ದಣಿಯುತ್ತಿರಲಿಲ್ಲ. ಈಗ ಯಾವ ಮನೆಗೂ ಹೋಗಲಾಗುತ್ತಿಲ್ಲ. ಗಾಂಧಿಬಜಾರ್‌ನಲ್ಲಿ ವಾಸವಾಗಿರುವ ಅಂಬುಜಮ್ಮ ಹೇಳುತ್ತಿದ್ದರು.

ವರಮಹಾಲಕ್ಷ್ಮಿ ಹಬ್ಬಕ್ಕೆ 2002ರಿಂದ 9ರವರೆಗೂ ಮನೆಮನೆಗೆ ಹೋಗಿ ಅಲಂಕಾರ ಮಾಡಿಕೊಡುತ್ತಿದ್ದರು ಆಕೆ. ಅವರೊಂದಿಗೆ ಇನ್ನಷ್ಟು ಜನ ಸಹಾಯಕರೂ ಇದ್ದರು. ಅವರು 500ರಿಂದ 5ಸಾವಿರ ರೂಪಾಯಿಗಳವರೆಗೂ ಅಲಂಕಾರದಿಂದ ಹಣ ಗಳಿಸುತ್ತಿದ್ದರಂತೆ. ಈಗ ಕೆಲಸ ಬೇಡವೆಂದು ಸುಮ್ಮನಾಗಿದ್ದಾರೆ. ಕಾರಣ ಬಲು ಸ್ಪಷ್ಟ. ಈಗ ಎಷ್ಟು ಸಾವಿರದ ಪ್ಯಾಕೇಜ್ ಮಾಡಿದರೂ ಚಿಕ್ಕಾಸು ಗಿಟ್ಟುವುದೂ ಕಷ್ಟವಾಗಿದೆ.

ಆಗ ವರಮಹಾಲಕ್ಷ್ಮಿ ವ್ರತಕ್ಕೆ ಐಟಿ ಜನರು ತಮ್ಮ ಕಚೇರಿಯ ವಿವಿಧ ರಾಜ್ಯದ ಉದ್ಯೋಗಿಗಳನ್ನು ಆಹ್ವಾನಿಸುತ್ತಿದ್ದರು. ಒಂದು ಒಬ್ಬಟ್ಟಿನ ಊಟಕ್ಕೆ ವೀಳ್ಯ ನೀಡುತ್ತಿದ್ದರು. ಪ್ರತಿಯೊಬ್ಬ ಐಟಿ ಉದ್ಯೋಗಿಯೂ ಇದನ್ನೊಂದು ಸಂಪರ್ಕ ಬೆಳೆಯುವ ಕೂಟದಂತೆಯೂ ಬಳಸಿಕೊಳ್ಳುತ್ತಿದ್ದರು.

ನೊವೆಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀದೇವಿ ಎಂಬ
ಪ್ರಾಜೆಕ್ಟ್ ಲೀಡರ್‌ಗೆ ಈ ಹಬ್ಬ ಒಂದು `ಗೆಟ್‌ಟುಗೆದರ್~ಗೆ ಸೂಕ್ತ ಎನಿಸಿತ್ತು. ಮಕ್ಕಳ ಹುಟ್ಟುಹಬ್ಬ, ವಾರ್ಷಿಕೋತ್ಸವ ಇವೆಲ್ಲವೂ ಉಡುಗೊರೆಗಳನ್ನು ಬಯಸುವ ಮನೋವೃತ್ತಿ ಎಂದು  ತಮ್ಮ ಸಹೋದ್ಯೋಗಿಗಳು ಭಾವಿಸುತ್ತಾರೆ. ಆದರೆ ಪೂಜೆಗೆಂದರೆ ಅವರೂ ಪಾಲ್ಗೊಳ್ಳುತ್ತಾರೆ. ನಿರಾಕರಿಸಲಾರರು ಎಂಬುದನ್ನು ಅರಿತೇ ಪ್ರತಿವರ್ಷವೂ ಊಟಕ್ಕೆ ಹೇಳುತ್ತಿದ್ದರಂತೆ. ಇನ್ನು ಹೊರ ರಾಜ್ಯದ ಸಹೋದ್ಯೋಗಿಗಳು ಮನೆಗೆ ಬರುವರೆಂದರೆ ವರಮಹಾಲಕ್ಷ್ಮಿಯ ಅಲಂಕಾರ ಜೋರಾಗಿರಬೇಡವೇ? ಅದಕ್ಕೆಂದೇ ಇಂಥ ಅಲಂಕಾರವನ್ನು ಅವಲಂಬಿಸಿರುತ್ತಿದ್ದರು.

ಬಿಟಿಎಂ ಲೇಔಟ್‌ನ ನಿವಾಸಿಗರಿಗೆ ಮಡಿವಾಳ ಸಂತೆಯಿಂದ ಎಲ್ಲವನ್ನೂ ಖರೀದಿಸುವುದು ಸರಳವಾಗಿತ್ತು. ಜಯನಗರ 9ನೇ ಬ್ಲಾಕ್‌ನಿಂದ ಪೂಜಾ ಸಾಮಗ್ರಿಗಳೂ ಸುಲಭ ಬೆಲೆಯಲ್ಲಿ ದೊರೆಯುತ್ತಿದ್ದವು. 
ಆದರೆ ಈಗ...?

ಮೊದಲು 50ರಿಂದ ನೂರು ರೂಪಾಯಿ ಖರ್ಚು ಮಾಡಿದರೆ ಬಾಳೆ ದಿಂಡು, ಮಾವಿನ ತೋರಣ, ವೀಳ್ಯದೆಲೆ ಎಲ್ಲವನ್ನೂ ಖರೀದಿಸುತ್ತಿದ್ದೆವು. ನಾಲ್ಕೈದು ಮನೆಗಳಿಗಾದರೆ ಒಟ್ಟಿಗೇ ಖರೀದಿಸುವುದರಿಂದ ಸ್ವಲ್ಪ ರಿಯಾಯಿತಿಯೂ ದೊರೆಯುತ್ತಿತ್ತು. ಇದೀಗ ಒಂದು ದಿಂಡು ಖರೀದಿಸಲು 20 ರೂಪಾಯಿ ನೀಡಬೇಕು.

ಅಲಂಕಾರಕ್ಕೆ ಬೇಕಾಗುವ ಮೂಲ ಬಂಡವಾಳವೇ ಹೆಚ್ಚಾಗಿದೆ. ಹೂವು ಸಹ ಅಷ್ಟೇ... ಕಡಿಮೆಯೆಂದರೂ 30ರಿಂದ ನಲ್ವತ್ತು ರೂಪಾಯಿ ಮಾರು ಮಾರಾಟ ಮಾಡುತ್ತಾರೆ. ಹೂವಿನಲಂಕಾರವಿಲ್ಲದೇ ವರಮಹಾಲಕ್ಷ್ಮಿ ಪೂಜೆ ಸಂಪನ್ನವಾಗುವುದಾದರೂ ಎಂತು?

ಇದೀಗ ಕೇಳಿದಷ್ಟು ಹಣ ನೀಡುತ್ತಾರೆ. ಆದರೆ ಮನಃತೃಪ್ತಿಯಾಗುವಷ್ಟು ಹೂ ಹಣ್ಣು ಕೊಳ್ಳುವುದೇ ಕಷ್ಟವಾಗಿದೆ. ಇನ್ನು ಆಲಂಕಾರಿಕ ಆಭರಣಗಳು, ಮೊರದ ಬಾಗಿನಕ್ಕೆ ಮೊದಲೆಲ್ಲ 8ರಿಂದ 10 ರೂಪಾಯಿಗಳಿಗೆಲ್ಲ ಕನ್ನಡಿ, ಕಣ್ಕಪ್ಪು, ಬಳೆ, ಬಾಚಣಿಕೆ, ಕುಂಕುಮದ ಪೊಟ್ಟಣ ದೊರೆಯುತ್ತಿದ್ದವು. ಇದೀಗ ಅದಕ್ಕೂ 25 ರೂಪಾಯಿ ನೀಡಬೇಕಿದೆ.

ಆಲಂಕಾರಿಕ ದೀಪಗಳ ಕೆಳಗಿಡಲು ತಟ್ಟೆಗಳನ್ನು ನೀಡುತ್ತಿದ್ದೆವು. ಅವು ಕೇವಲ 10-12 ರೂಪಾಯಿಗೆ ದೊರೆಯುತ್ತಿದ್ದವು. ಹಿತ್ತಾಳೆಯದ್ದಾದರೂ ಹೊಂಬಣ್ಣದ ಈ ತಟ್ಟೆಗಳು, ದೀಪದ ಬೆಳಕಿನೊಂದಿಗೆ ಅವು ಹೊಳೆಯುವುದರಲ್ಲಿ ಸ್ಪರ್ಧೆ ನೀಡುತ್ತಿದ್ದವು. ಇದೀಗ ಆ ಸಣ್ಣ ತಟ್ಟೆಗಳ ಬೆಲೆಯೇ 30ರೂಪಾಯಿ! ಹಬ್ಬದ ದಿನಗಳಲ್ಲಂತೂ ಇದು ಇನ್ನೂ ಹೆಚ್ಚುತ್ತದೆ. ಮೊದಲು ಐನೂರು ರೂಪಾಯಿಗೆ ಮಾಡುತ್ತಿದ್ದ ಅಲಂಕಾರಕ್ಕೆ ಇದೀಗ 5 ಸಾವಿರ ರೂಪಾಯಿಗಳಷ್ಟು ಬೇಕಾಗುತ್ತಿದೆ. ಆದರೂ ತೃಪ್ತಿ ಸಿಗುತ್ತಿಲ್ಲ. ಹೀಗಾದಾಗ ಓಹೋ... ಅಂಬುಜಮ್ಮ ವ್ಯಾಪಾರ ಆರಂಭಿಸಿದ್ದಾರೆ. ಲಾಭಕೋರತನ ಹೆಚ್ಚಾಗಿದೆ ಎಂಬ ಮಾತುಗಳು ಆರಂಭವಾದವು. ಅದಕ್ಕೇ ಈಗ ಇಂಥ ಆದೇಶಗಳನ್ನು ಕೈ ಬಿಡುತ್ತ ಬಂದೆ.

ತೀರ ಆತ್ಮೀಯರು ಕರೆದರೆ, ಎಲ್ಲ ಸರಕು, ಸಾಮಗ್ರಿಗಳನ್ನೂ ಅವರಿಗೇ ಒದಗಿಸಲು ಕೇಳಿಕೊಳ್ಳುತ್ತೇನೆ. ಒಮ್ಮೆ ಒದಗಿಸಿದವರು, ಮುಂದಿನ ಅಲಂಕಾರವನ್ನೂ ತಾವೇ ಮಾಡಿಕೊಳ್ಳಲು ಆರಂಭಿಸಿದರು. ಹೀಗಾಗಿ ನಮ್ಮ ಮನೆಯ ಪೂಜಾ ಅಲಂಕಾರ ಮಾತ್ರ ನಾನು ಮಾಡುತ್ತಿದ್ದೇನೆ.

ಇದೀಗ ಐಟಿ ಕ್ಷೇತ್ರದಲ್ಲೂ ಹಬ್ಬದಲಂಕಾರದ ಹುಚ್ಚು ಕಡಿಮೆಯಾಗುತ್ತ ಬಂದಿತು. ಅವರಿಗೂ ಬೇರೆ ಬೇರೆ ಅವಕಾಶಗಳು ದೊರೆಯತೊಡಗಿದವು. ಹೀಗಾಗಿ ಹಬ್ಬದಲಂಕಾರ ಮಸುಕಾಯಿತು ಎನ್ನುವುದು ಅವರ ಅನುಭವದ ಮಾತು.

ಅದೇ ಬೆಳ್ಳಿ ಪ್ರತಿಮೆ, ರಂಗೋಲಿ ಎಳೆ, ಲಕ್ಷ್ಮಿ ಮುಖವಾಡ, ವೀಳ್ಯ, ಮಾವು, ಬಾಳೆ ದಿಂಡಿನ ಅಲಂಕಾರ, ಸುಗಂಧ ದ್ರವ್ಯ, ಹಲವಾರು ದೀಪಗಳನ್ನು ಇಡುವುದೇ ಪೂಜೆಯಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT