ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಿಷ್ಠರಿಗೆ ತಲೆನೋವಾದ ರಾಜ್ಯ ಬಿಜೆಪಿ ವಿದ್ಯಮಾನ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಬಿಜೆಪಿ ಪಾಳೆಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪಕ್ಷದ ವರಿಷ್ಠರಿಗೆ ತಲೆನೋವಾಗಿವೆ. ಗುರುವಾರ ತಡರಾತ್ರಿ ಬೆಂಗಳೂರಿಗೆ ಬಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ ಈ ವಿಷಯವನ್ನು ಹೇಳಿದ್ದಾರೆ.

`ಈ ತಲೆನೋವನ್ನು ಹೆಚ್ಚು ದಿನ ಮುಂದುವರಿಸಲು ಬಿಡಲಾಗದು. ಇದರ ಬಗ್ಗೆ ಶೀಘ್ರ ದೃಢ ನಿರ್ಧಾರ ತೆಗೆದುಕೊಳ್ಳಬೇಕು~ ಎಂದು ಪಕ್ಷದ ರಾಜ್ಯ ಘಟಕದ ಮುಖಂಡರ ಬಳಿ ಹೇಳಿರುವ ಗಡ್ಕರಿ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ನಿರ್ಧಾರವನ್ನು ಸೂಚ್ಯವಾಗಿ ತಿಳಿಸುವ ಸಾಧ್ಯತೆ ಇದೆ.

ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪ್ರಕರಣವನ್ನು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಥವಾ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಜೊತೆ ಹೋಲಿಸಿಕೊಳ್ಳುವುದು ಸರಿಯಲ್ಲ ಎಂದೂ ಗಡ್ಕರಿ ಅವರು ಮುಖಂಡರಿಗೆ ಹೇಳಿರುವುದಾಗಿ ಗೊತ್ತಾಗಿದೆ. ಯಡಿಯೂರಪ್ಪ ಅವರು ಗುರುವಾರ ನಡೆಸಿದ ಶಾಸಕರ ಸಭೆಯ ಕುರಿತೂ ಗಡ್ಕರಿ ಅವರು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಅವರು ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುವ ಸಂಭವ ಇದೆ.
ರಾತ್ರಿ 10.50ಕ್ಕೆ ಬೆಂಗಳೂರಿಗೆ ಬಂದ ಗಡ್ಕರಿ ಅವರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಚಿವರಾದ ಜಗದೀಶ ಶೆಟ್ಟರ್, ಆರ್. ಅಶೋಕ, ಎಸ್.ಎ. ರಾಮದಾಸ್, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ ಬರಮಾಡಿಕೊಂಡರು. ನಂತರ ಗಡ್ಕರಿ ಅವರು ನೇರವಾಗಿ ಲಲಿತ್ ಅಶೋಕ ಹೋಟೆಲ್‌ಗೆ ತೆರಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರೂ ಗಡ್ಕರಿ ಅವರನ್ನು ತಡರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT