ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣ ಕೃಪೆ: ತಮಿಳುನಾಡಿಗೆ ಹೆಚ್ಚು ನೀರು

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಒಂದು ವಾರದಲ್ಲಿ ಮಳೆಯಾಗಿರುವುದರಿಂದ ಕಾವೇರಿ ನದಿ ಪ್ರಾಧಿಕಾರ ಸೂಚಿಸಿದ್ದಕ್ಕಿಂತಲೂ ಹೆಚ್ಚು ನೀರು ತಮಿಳುನಾಡಿಗೆ ಹರಿದಿರುವುದನ್ನು ಬಿಳಿಗುಂಡ್ಲು ಮಾಪನ ಕೇಂದ್ರದ ಅಂಕಿ-ಅಂಶಗಳು ಸಾಬೀತುಪಡಿಸುತ್ತವೆ.

ಕಾವೇರಿ ನೀರು ತಮಿಳುನಾಡಿಗೆ ಬಿಡುವ ಕುರಿತಂತೆ ಅ. 30 ರಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಕಾವೇರಿ ವಿವಾದ ಬಗೆಹರಿಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ರಾಜ್ಯದ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದಂತೆ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವುದನ್ನು ಅ. 8 ರಿಂದಲೇ ನಿಲ್ಲಿಸಲಾಗಿದೆ. ನಂತರ ಬಂದ ವರುಣನ ಕೃಪೆಯಿಂದ ಅ. 8 ರಿಂದ ಅ. 17ರ ವರೆಗೆ ಒಟ್ಟು 1,05,917 ಕ್ಯೂಸೆಕ್ ನೀರು ಸದ್ದಿಲ್ಲದೇ ಹರಿದು ಹೋಗಿದೆ.

ಕೆಆರ್‌ಎಸ್ ಜಲಾಶಯದಿಂದ ನೀರು ಹೊರ ಹರಿಸುವುದನ್ನು ನಿಲ್ಲಿಸಿದ ದಿನದಂದೇ ಕೆಆರ್‌ಎಸ್ ಜಲಾಶಯದ ಸುತ್ತ-ಮುತ್ತ ದಾಖಲೆಯ ಪ್ರಮಾಣದ 16 ಸೆ.ಮೀ. ಮಳೆಯಾಗಿತ್ತು. ಅಲ್ಲಿ ಮಾತ್ರವಲ್ಲದೇ, ಪಾಂಡವಪುರ, ಮಂಡ್ಯ ಮುಂತಾದೆಡೆಯೂ ಮಳೆಯಾಗಿತ್ತು. ಪರಿಣಾಮ ಎರಡು ದಿನ ಬಿಟ್ಟು, ಅಂದರೆ ಅ.10 ರಂದು ಒಂದೇ ದಿನ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 19,995 ಕ್ಯೂಸೆಕ್ ನೀರು ಹರಿದು ಹೋಗಿರುವುದು ದಾಖಲಾಗಿದೆ.

ಅ.11 ರಂದು ನವದೆಹಲಿಯಲ್ಲಿ ನಡೆದ ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅ.15 ರಿಂದ 30ರ ಒಳಗೆ 8.85 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಆ ನೀರನ್ನು ಜಲಾಶಯದಿಂದಲೇ ಬಿಡಬೇಕು ಎಂದೇನಿಲ್ಲ. ಮಳೆ ನೀರನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿತ್ತು.

ವರುಣ ಕೃಪ ತೋರಿದ್ದರಿಂದ ಅ. 12 ರಿಂದ 14ರ ವರೆಗೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿತ್ತು. ಕೆಲವೆಡೆ 6 ರಿಂದ 10 ಸೆ.ಮೀ. ವರೆಗೂ ಮಳೆ ಸುರಿದಿತ್ತು. ಅದರ ಪರಿಣಾಮ ಅ. 15 ರಂದು 6,569, ಅ.16 ರಂದು 16,757 ಹಾಗೂ ಅ. 17 ರಂದು 12,530 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದು ಹೋಗಿರುವುದು ಬಿಳಿಗುಂಡ್ಲುವಿನಲ್ಲಿ ದಾಖಲಾಗಿದೆ.

ಮೊದಲ ಮೂರೂ ದಿನಗಳಲ್ಲಿಯೇ 35,856 ಕ್ಯೂಸೆಕ್ (3 ಟಿಎಂಸಿ ಅಡಿಗೂ ಹೆಚ್ಚು) ನೀರು ಹರಿದು ಹೋಗಿದೆ. ಶಿಫಾರಸು ಒಪ್ಪಿಕೊಂಡರೆ, ಅ.30ರ ವರೆಗೆ ಇನ್ನೂ 5 ಟಿಎಂಸಿ ಅಡಿಯಷ್ಟು ನೀರು ಬಿಡಬೇಕಾಗುತ್ತದೆ. ನಿತ್ಯ 3,500 ಕ್ಯೂಸೆಕ್‌ನಷ್ಟು ನೀರು ಜಲಾಶಯಗಳ ಸೋರಿಕೆ, ಕುಡಿಯಲು ಬಳಸಲೆಂದು ಬಿಡುವ ನೀರಿನಿಂದ ಹೋಗುತ್ತಿದೆ.

ಸುಪ್ರೀಂ ಕೋರ್ಟ್‌ನ ಸೂಚನೆ ಹಾಗೂ ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ನೀರು ಬಿಟ್ಟಿರುವುದು ಹಾಗೂ ಇನ್ನು ಮುಂದೆ ನೀರು ಹರಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಮೂಲಕ ನಮ್ಮ ಬೆಳೆ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸುತ್ತದೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ.

ಕಾವೇರಿ ವಿವಾದ: ವಿಚಾರಣೆ ಮುಂದಕ್ಕೆ
ಪ್ರಜಾವಾಣಿ ವಾರ್ತೆ
ನವದೆಹಲಿ
: ಕಾವೇರಿ ನದಿಯಿಂದ ತಮಿಳುನಾಡಿಗೆ ದಿನಕ್ಕೆ 2ಟಿಎಂಸಿ ಅಡಿಯಂತೆ 24 ದಿನ ನೀರು ಹರಿಸಬೇಕೆಂದು ಮನವಿ ಮಾಡಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಅ.30ರಂದು ನಡೆಯಲಿದೆ. ಶುಕ್ರವಾರ ಅ.19ರಂದು ತಮಿಳುನಾಡಿನ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ, ನ್ಯಾ. ಡಿ.ಕೆ. ಜೈನ್ ಅವರ ಜತೆ ಕಾವೇರಿ ನೀರಿನ ವಿವಾದದ ವಿಚಾರಣೆ ನಡೆಸುತ್ತಿರುವ ನ್ಯಾ. ಮದನ್ ಬಿ. ಲೋಕೂರ್ ಲಭ್ಯವಿಲ್ಲದ ಕಾರಣ ವಿಚಾರಣೆಯನ್ನು ಅ. 30ಕ್ಕೆ ಮುಂದೂಡಲಾಗಿದೆ.

ತಮಿಳುನಾಡಿನ ವಿವಿಧೆಡೆ ಭಾರಿ ಮಳೆ

ಪ್ರಜಾವಾಣಿ ವಾರ್ತೆ
ಚೆನ್ನೈ:
ಈಶಾನ್ಯ ಮಳೆಯನ್ನು ಕಾಯುತ್ತಿರುವ ತಮಿಳುನಾಡಿನ ಜನತೆಗೆ ಬುಧವಾರ ರಾತ್ರಿ ಸುರಿದ ಮಳೆ ಹೊಸ ನಿರೀಕ್ಷೆ ಮೂಡಿಸಿದೆ.


ರಾಜ್ಯದ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ಚೆನ್ನೈನಲ್ಲಿ ಮಳೆ ಸಂಬಂಧಿ ಅವಘಡಗಳಿಗೆ ಇಬ್ಬರು ಮೃತಪಟ್ಟಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಕೇರಳ, ಪುದುಚೆರಿಯಲ್ಲಿ ಭಾರಿ ಮಳೆ ಆಗುವ ಸಂಭವವಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭರವಸೆ ಮೂಡಿಸಿದ್ದು. ಈ ಮಳೆಯಿಂದ ಬೆಳೆಗಳಿಗೆ ನೆರವಾಗಲಿದೆ. 

ತಿರುವರಾರು ಜಿಲ್ಲೆ ಸೇರಿದಂತೆ ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ 8 ಸೆ.ಮೀ, ಚೆನ್ನೈ ನಗರದಲ್ಲಿ ಏಳು ಸೆ.ಮೀ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT