ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಅವಕೃಪೆ: ರೈತರ ಪರಿತಾಪ

Last Updated 6 ಜುಲೈ 2012, 9:00 IST
ಅಕ್ಷರ ಗಾತ್ರ

ಗುತ್ತಲ : ಇಷ್ಟೊತ್ತಿಗೆ  ಮುಂಗಾರು ಆರಂಭವಾಗಿ  ತಮ್ಮ ಬಿತ್ತನೆ  ಪೂರ್ಣಗೊಳಿಸಿ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಹಗಲು ರಾತ್ರಿ ಎನ್ನದೇ ನಡೆಸಬೇಕಾಗಿತ್ತು, ಆದರೆ ಸಂಪೂರ್ಣವಾಗಿ ವರುಣನ ಕೃಪೆಯಾಗದೇ ಇರುವು ದರಿಂದ ಗುತ್ತಲ ಹೋಬಳಿಗೆ ಒಳಪಡುವ ಅನೇಕ ಗ್ರಾಮಗಳ ರೈತರು ಮಳೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಮತ್ತೊಂದು ಭೀಕರ ಬರಗಾಲ ಎರಗಬಹುದೇನೋ ಎಂಬ ಆತಂಕದಲ್ಲಿ ಕಾಲ ನೂಕುತ್ತಿದ್ದಾರೆ.

ಜೂನ್ ತಿಂಗಳೂ ಕಳೆದರೂ ಸಹ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗ ದಿರುವುದು ರೈತರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಸಂಪೂರ್ಣ ಮೇ ತಿಂಗಳಿ ನಲ್ಲಿಯೇ ತಮ್ಮ ಜಮೀನುಗಳನ್ನು ಹಸನಗೊಳಿಸಿಕೊಂಡಿದ್ದ ಈ ಭಾಗದ ರೈತರು, ಜೂನ್  ತಿಂಗಳಿನಲ್ಲಿಯೇ  ಬಿತ್ತನೆಗೆ ಬೀಜ ಗೊಬ್ಬರಗಳೆಲ್ಲವನ್ನು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟು ಕೊಂಡು ಮಳೆಗಾಗಿ  ದಿನವಿಡಿ ಕಾಯುವಂತಾಗಿದೆ.

ಗುತ್ತಲ ಹೋಬಳಿ 31 ಹಳ್ಳಿಗಳನ್ನು ಒಳಪಡುತ್ತದೆ. ಆದರೆ ಗುತ್ತಲ ಸೇರಿದಂತೆ  ಕೆಲವೇ ಕೆಲವು  ಗ್ರಾಮಗಳಿಗೆ ಬಿತ್ತನೆಗಾಗುವಷ್ಟು ಮಳೆಯಾಗಿದೆ. ಇನ್ನುಳಿದ ಬಹುತೇಕ ಗ್ರಾಮಗಳು ಅಂದರೆ ಹಾಲಗಿ ಮರೋಳ, ನೆಗಳೂರ, ಮರಡೂರ. ಕಿತ್ತೂರ, ಹೊಸರಿತ್ತಿ, ಹಂದಿಗನೂರ ಕೊರಡೂರ, ಬೈಲ ಮಾದಾಪೂರ, ಬೆಳವಗಿ, ನೀರಲಗಿ  ಗ್ರಾಮಗಳಲ್ಲಿ ಬಿತ್ತನೆಗಾಗುವಷ್ಟು ಸಹ ಮಳೆಯಾಗಿಲ್ಲ. 

ಈಗಾಗಲೇ ಹತ್ತಿ ಬಿತ್ತನೆಯ ಅವಧಿ ಮುಗಿದು ಹೋಗಿದೆ. ಏನಾದರೂ ಆಗಲಿ ಎಂದು ಜೂನ್ ತಿಂಗಳಿನ ಮೊದಲಿನ ವಾರದಲ್ಲಿಯೇ ಹತ್ತಿ ಬೀಜ ಬಿತ್ತನೆ ಮಾಡಿದ್ದಾರೆ.ನೀರಾವರಿಗೆ ಒಳಪಡುವ ಜಮೀನುಗಳಲ್ಲಿ ಮಾತ್ರ ಹತ್ತಿ ಉತ್ತಮವಾಗಿ ಬೆಳೆಯನ್ನು ಕಾಣಬಹುದಾದರೂ ಮೇಲ್ಜಮೀನು ಗಳಲ್ಲಿ ಬಿತ್ತನೆ ಮಾಡಿದ ಹತ್ತಿ ಮಳೇ ಕಾಣದೇ ಸೊರಗುತ್ತಿದೆ. ಇದರಿಂದ ಹತ್ತಿ ಬೆಳಗಾರರೂ ಸಹ ಆತಂಕದಲ್ಲಿದ್ದಾರೆ.

ಪ್ರತಿದಿನ ಈ  ಭಾಗಗಳಲ್ಲಿ  ಮೋಡ ಮುಸುಕಿದ ವಾತಾವರಣ ಸೃಷ್ಟಿ ಯಾಗುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ  ಗುಂಜುರು ಮಳೆಯಾಗುತ್ತಿ ದೆಯಾದರೂ  ಹವಾಮಾನದ ವೈಪರೀತ್ಯದಿಂದಾಗಿ ವಿಪರಿತ ಗಾಳಿಯಿಂದ ಮೋಡ ಮುಸುಕಿದ ವಾತಾವರಣ ಕೊಚ್ಚಿಕೊಂಡು ಹೊಗುತ್ತಿದೆ. ಇಂಥಹ ವಾತಾವರಣ ಸೃಷ್ಟಿಯಾದರೆ ಮಳೆಯಾಗುವುದು ಬಹಳ ಕಷ್ಟ ಎಂಬುದು ಪ್ರಗತಿ ಪರ ರೈತರ ಚಿಂತನೆಯಾಗಿದೆ.
 
ಮಳೆಯನ್ನೇ ನಂಬಿ ಹತ್ತಿ ಬೆಳೆ  ಅಧಿಕ ಲಾಭ ತರುತ್ತದೆ ಎಂದು ಬಲವಾಗಿ ನಂಬಿ  ಹೆಚ್ಚಿನ ಕ್ಷೇತ್ರದಲ್ಲಿ ಬಹುತೇಕ ರೈತರು ಹತ್ತಿ ಬಿತ್ತನೆ ಮಾಡಿದ್ದರೇ ದೇವರೇ ಅವರನ್ನು ಕಾಪಾಡಬೇಕಿತ್ತು. ಇದನ್ನರಿತ ಮೇಲ್ಜಮೀನಿನ ರೈತರು ಸ್ವಲ್ಪೇ ಪ್ರಮಾಣದಲ್ಲಿ ಹತ್ತಿಯನ್ನು ಬಿತ್ತನೆ ಮಾಡಿ ಹೆಚ್ಚಾಗಿ ಗೋವಿನ ಜೋಳ ಬಿತ್ತಿದರಾಯಿತು ಎಂದು ಮಳೆಯ ನೀರಿಕ್ಷೆಯಲ್ಲಿ ನಿಂತಿದ್ದಾರೆ.

ಕಳೆದ ವರ್ಷವೂ ಗೋವಿನ ಜೋಳ ಬೆಳೆಗೆ ನಿಗದಿತ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಉತ್ತಮ ಇಳುವರಿಯನ್ನೇ ಕಾಣದೇ ಈ ಭಾಗದ ರೈತರು ಕೈ ಸುಟ್ಟುಕೊಂಡಿದ್ದನ್ನು ಇನ್ನೂ ಹಸಿಯಾಗಿಯೇ ಉಳಿದಿದೆ.
ಕಳೆದ ವರ್ಷ 7 ರಿಂದ 8 ಸಾವಿರ ಹೆಕ್ಷೇರ್ ಪ್ರದೇಶದಲ್ಲಿ ಗೋವಿನ ಜೋಳವನ್ನು ಬಿತ್ತನೆ ಮಾಡುವ  ಗುರಿ ಹೊಂದಲಾಗಿತ್ತು.ಆದರೆ ಪ್ರಸಕ್ತ ಸಾಲಿನಲ್ಲಿ 8ರಿಂದ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಲಾಗಿದೆ. 

ಭವಿಷ್ಯದಲ್ಲಿ ಮಳೆ ಕೈಕೊಡದು ಎಂಬ ನಂಬಿಕೆಯನ್ನೇ ಇಟ್ಟುಕೊಂಡು ಬಿತ್ತನೆಗೆ ಬೀಜ ಗೊಬ್ಬರ ಗಳನ್ನು ಖರೀದಿಸಿದ್ದೇವೆ  ಜುಲೈ ತಿಂಗಳ ಮೊದಲ ವಾರದಲ್ಲಿಯೂ ಮಳೆಯಾಗದಿರುವುದರಿಂದ ಗೋವಿನ ಜೋಳ ಬಿತ್ತನೆಯ ಅವಧಿಯೂ ಸಹ ಮುಗಿಯುತ್ತಾ ಬಂದಿದೆ ಇನ್ನೂ ಮೇಲೆ ಬಿತ್ತನೆ ಮಾಡಿದರೂ ಏನೂ ಪ್ರಯೋಜನೆ ಇಲ್ಲದಂತಾಗುತ್ತದೆ ನಮ್ಮ  ಗತಿ ದೇವರೇ ಬಲ್ಲ ಎಂಬ  ನೋವಿನ ಮಾತುಗಳನ್ನು ಆಡುತ್ತಾರೆ ಮರಡೂರ ಗ್ರಾಮದ ಪ್ರಗತಿ ಪರ ರೈತರಾದ ಹನುಮಂತಗೌಡ ಭಿಮನಗೌಡ ಪಾಟೀಲ.

ವರವಾದ ವರದೆ: ಈ ಭಾಗದಲ್ಲಿ  ಮಳೆಯಾಗಲಿಲ್ಲದಿದ್ದರೂ ಪರವಾಗಿಲ್ಲ ನೀರಾವರಿ ಮಾಡಿಕೊಂಡ ರೈತರ ಜಮೀನುಗಳಿಗೆ ನೀರುಣಿಸಲು ವರದೆ ಬುಧವಾರ ಹರಿದು ಬಂದಿದ್ದಾಳೆ. ಜಿಲ್ಲೆಯಲ್ಲಿ ಹರಿದಿರುವ ಪ್ರಮುಖ  ನದಿಗಳಲ್ಲಿ ಒಂದಾದ  ವರದಾ ನದಿ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸನಗರದಿಂದ 12 ಕೀಮಿ ದೂರದಲ್ಲಿರುವ ವರದಾ ಮೂಲದಿಂದ.

ಈ ಮಲೆನಾಡು ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಈ ವರದೆ ಹರಿದು ಬಂದು ನೀರಾವರಿ ಮಾಡಿಕೊಂಡ ಹೊಸರಿತ್ತಿ ಹಾಲಗಿ, ಮರಡೂರ, ನೀರಲಗಿ ಮುಂತಾದ ಗ್ರಾಮಗಳ ರೈತರುಗಳಿಗೆ ಸಂತಸವನ್ನು ಮಾಡಿದ್ದಾಳೆ.  ಆದರೆ ನೀರಾವರಿ ಸೌಲಭ್ಯವನ್ನೇ ಕಾಣದ ರೈತರಿಗೆ ಮುನಿಸು.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT