ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಆರ್ಭಟಕೆ ಜಲ ನರ್ತನ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಎರಡು ತಿಂಗಳ ಹಿಂದೆ ನೀರಿಲ್ಲದೆ ಬಿಸಿಲಲ್ಲಿ ಒಣಗಿ ಬಡವಾಗಿದ್ದ ಕೊಡಗಿನ ಜಲಪಾತಗಳು ವರುಣನ ಆರ್ಭಟಕ್ಕೆ ಮೈದುಂಬಿಕೊಂಡಿವೆ. ಗಿರಿಶಿಖರಗಳ ಕಡೆ ನೋಡಿದರೆ ಜಲಪಾತ­ಗಳದ್ದೇ ವೈಭವ. ದಕ್ಷಿಣ ಕೊಡಗಿನ ಬಹ್ಮಗಿರಿ ತಪ್ಪಲಲ್ಲಿ ಜನಿಸುವ ಇರ್ಪು ಜಲಪಾತ ಕೊಡಗಿನ ಜಲಪಾತಗಳಲ್ಲೆಲ್ಲಾ ಸುಂದರವಾದುದು. ವಿಶಾಲ­ವಾದ ಬ್ರಹ್ಮಗಿರಿ ಪರ್ವತದ ಒಡಲಲ್ಲಿ ಹುಟ್ಟುವ ನೂರಾರು ಜಲಧಾರೆಗಳ ಸಂಗಮವೇ ಈ ಇರ್ಪು.

ಕಡಿದಾದ ಹೆಬ್ಬಂಡೆಗಳ ಮೇಲಿಂದ ಸುಮಾರು 100 ಅಡಿಗೂ ಹೆಚ್ಚು ಆಳಕ್ಕೆ ಧುಮ್ಮಿಕ್ಕುವ ಜಲಪಾತ ದೃಶ್ಯ ನಯನ ಮನೋಹರ. ಜಲಪಾತ ಉಗಮ­ವಾಗುವ ಬೆಟ್ಟ ಸಾಲು ಅನೇಕ ಪ್ರಾಣಿ, ಸಸ್ಯ ಸಂಕುಲಗಳಿಗೆ ಆಶ್ರಯ ತಾಣ. ಬೆಟ್ಟದ ಮೇಲೆ ಲೆಕ್ಕವಿಲ್ಲದಷ್ಟು ಆನೆಗಳು, ಕಡವೆ, ಜಿಂಕೆ, ಕಾಡೆಮ್ಮೆ ಮೊದಲಾದ ವನ್ಯ ಜೀವಿಗಳಿವ. ಹಲವು ಬಗೆಯ ಸಸ್ಯಕುಲಗಳಿವೆ. ಪರ್ವತದ ಮೇಲೆ ನರಿಕಲ್ಲು, ಮುನಿಕಲ್ಲು ಮೊದಲಾದ ಹೆಸರಿನ ಜನನಿಬಿಡ ಬೆಟ್ಟ ಗುಡ್ಡಗಳಿವೆ. ಇವು ಚಾರಣ ಪ್ರಿಯರಿಗೆ ತುಂಬಾ ಇಷ್ಟ.

ಜಲಪಾತದಿಂದ 7ಕಿ.ಮೀ ದೂರ ಏದುಸಿರು ಬಿಡುತ್ತಾ, ರಕ್ತಹೀರುವ ಜಿಗಣೆ ಕಾಟ ತಪ್ಪಿಸಿಕೊಂಡು ಬೆಟ್ಟ ಹತ್ತಿದರೆ ಭೂರಮೆಯ ಅಚ್ಚಹಸುರಿನ ಸುಂದರ ಒಡಲು ಕಣ್ಣಿಗೆ ಹಬ್ಬ ಉಂಟುಮಾಡುತ್ತದೆ. ಪರ್ವತದ ಮತ್ತೊಂದು ಮಗ್ಗಲಿನಿಂದ ಹರಿಯುವ ಜಲಪಾತ ಕೇರಳ ರಾಜ್ಯದ ಕಡೆಗೆ ಚಲಿಸುತ್ತದೆ. ಇದೇ ಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣ ತಿರುನೆಲ್ಲಿ.

ಇಕ್ಕಟ್ಟಾದ ಬಂಡೆಗಳ ನಡುವೆ ನೀರು  ಭೋರ್ಗರೆಯುತ್ತಾ ಧುಮ್ಮಿಕ್ಕುವುದರಿಂದ ಇದಕ್ಕೆ ‘ಇರ್ಪು ಜಲಪಾತ’ ಎಂಬ ಹೆಸರು ಬಂದಿದೆ ಎಂದು ಹಿರಿಯರು ಹೇಳುತ್ತಾರೆ. ದಟ್ಟ ಕಾನನದೊಳಗೆ ಸುಮಾರು ಒಂದು ಕಿ.ಮೀ ಕಲ್ಲು ಬಂಡೆಗಳ ನಡುವೆ ರಭಸವಾಗಿ ಹಾಲ್ನೊರೆ ಚೆಲ್ಲುತ್ತಾ ಮುನ್ನುಗ್ಗುವ ಜಲಪಾತ ಮುಂದೆ ಗದ್ದೆ ಬಯಲಿನಲ್ಲಿ ತೊರೆ ತೋಡುಗಳನ್ನು ಕೂಡಿ ನದಿ ರೂಪ ತಾಳುತ್ತದೆ. ಇದಕ್ಕೆ ಲಕ್ಷ್ಮಣತೀರ್ಥ ನದಿ ಎಂದು ಕರೆಯಲಾಗುತ್ತದೆ.

ಹಲವು ಕಡೆ ಸಂಗಮ
ಈ ನದಿ ಸುಮಾರು 5ಕಿ.ಮೀ ದೂರಸಾಗಿದಂತೆ ಮುಂದೆ ರಾಮತೀರ್ಥ ಸೇರಿಸಿಕೊಳ್ಳುತ್ತದೆ.  ಮಳೆಗಾಲದಲ್ಲಿ ಮೈದುಂಬಿ ಶ್ರೀಮಂಗಲ, ಹರಿಹರ, ಕಾನೂರು, ಕೊಟ್ಟಗೇರಿ, ಬಾಳೆಲೆ, ನಿಟ್ಟೂರು ಮಾರ್ಗವಾಗಿ ಹರಿದು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸೇರುತ್ತದೆ. ಅಲ್ಲಿಂದ ಕಾಡೊಳಗೆ ಅಜ್ಞಾತವಾಗಿ ಸಾಗಿ ಹನಗೋಡು ಬಳಿ ನಿರ್ಮಿಸಿರುವ   ಚೆಕ್‌ಡ್ಯಾಮ್‌ನಲ್ಲಿ ತುಂಬಿ ಹುಣಸೂರು ತಾಲ್ಲೂಕಿನ ಸಾವಿರಾರು ಕೃಷಿ ಭೂಮಿಗೆ ನೀರುಣಿಸುತ್ತದೆ.

ಡ್ಯಾಮ್ ತುಂಬಿ ಧುಮ್ಮಿಕ್ಕುವ ನೀರು ಹುಣಸೂರು ಪಟ್ಟಣದ ಮಧ್ಯಭಾಗದಲ್ಲಿ ಹರಿಯುವ ನದಿ ಸೇರಿ ಕೆ.ಆರ್ ನಗರ ಬಳಿ ಕಾವೇರಿ ನದಿಯೊಂದಿಗೆ  ಮಿಲನಗೊಂಡು ಅಂತಿಮವಾಗಿ ಕನ್ನಂಬಾಡಿ ಕಟ್ಟೆಯಲ್ಲಿ ಲೀನವಾಗುತ್ತದೆ.

  ಲಕ್ಷ್ಮಣತೀರ್ಥ ನದಿ ದಕ್ಷಿಣ ಕೊಡಗಿನಲ್ಲಿ ಮಳೆಗಾಲದಲ್ಲಿ ಹಲವು ಬಾರಿ ಪ್ರವಾಹ ತರುತ್ತದೆ. ಬ್ರಹ್ಮಗಿರಿ ಪರ್ವತದ ತಪ್ಪಲಲ್ಲಿರುವ ಬಿರುನಾಣಿ, ಶ್ರೀಮಂಗಲ, ಕುರ್ಚಿ ಮೊದಲಾದ ಭಾಗಕ್ಕೆ ಧಾರಾಕಾರ ಮಳೆ ಬಿದ್ದರೆ ಸಾಕು. ನದಿಪಾತ್ರದ ಗದ್ದೆಗಳಾದ ಹರಿಹರ,ಕಾನೂರು, ಕೊಟ್ಟಗೇರಿ ಬಾಳೆಲೆ ನಿಟ್ಟೂರು ಜಾಗಲೆ ಮೊದಲಾದ ಗ್ರಾಮಗಳ ಭತ್ತದ ಬಯಲು ನೀರಿನಲ್ಲಿ ಮುಳುಗುತ್ತವೆ. ಜತೆಗೆ ರಸ್ತೆ ಸಂಪರ್ಕವನ್ನು ಕಡಿದು ಹಾಕುತ್ತದೆ.

ಜಲಪಾತಕ್ಕೆ ಗೋಣಿಕೊಪ್ಪಲು ಹಾಗೂ ಹುಣಸೂರು, ನಾಗರಹೊಳೆ, ಕುಟ್ಟ ಮಾರ್ಗವಾಗಿ ಚಲಿಸಬಹುದು. ಗೋಣಿಕೊಪ್ಪಲಿನಿಂದ 35ಕಿ.ಮೀ, ಹುಣಸೂರಿನಿಂದ ನಾಗರಹೊಳೆ ಮಾರ್ಗವಾಗಿ 50ಕಿ.ಮೀ ಅಂತರದಲ್ಲಿದೆ. ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ವೀಕ್ಷಣಾ ಕಟ್ಟೆ ನಿರ್ಮಿಸಿದೆ. ಇದರ ಮೇಲೆ ನಿಂತು ಜಲಪಾತ ವೀಕ್ಷಿಸಬಹುದು. ಜಲಪಾತದ ಬಳಿ ಯಾವುದೇ ಅಪಾಯವಿಲ್ಲ. ಆದರೆ ಮಳೆಗಾಲದಲ್ಲಿ ಕಲ್ಲಿನ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಏಕೆಂದರೆ  ಪಾಚಿ ಬೆಳೆದು  ಜಾರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT