ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಷದ ಹರುಷ, ಬೇಸರಗಳ ನಡುವೆ

Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಇಟ್ಟು ಬಂದ ಹೆಜ್ಜೆಗಳನ್ನು ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆಂಬ ಹಂಬಲ ಸಹಜ. ಅದು ಎದ್ದ ಖುಷಿಯ ಕ್ಷಣವಿರಬಹುದು, ಎಡವಿಬಿದ್ದ ನೋವಿನ ಕ್ಷಣವಿರಬಹುದು. ಈ ಸಂವತ್ಸರ ಕ್ರಿಕೆಟ್ ಕ್ಷೇತ್ರದಲ್ಲಿ ಹಲವು ನೆನಪುಗಳ ಬುತ್ತಿ ಕಟ್ಟಿಕೊಟ್ಟಿದೆ.

ವಿದಾಯಗಳ ವರ್ಷವಿದು...
ವಿಶ್ವ ಶ್ರೇಷ್ಠ ಆಟಗಾರರು ಎನಿಸಿದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ವಿ.ವಿ.ಎಸ್.ಲಕ್ಷ್ಮಣ್, ಆ್ಯಂಡ್ರ್ಯೂ ಸ್ಟ್ರಾಸ್, ಬ್ರೆಟ್ ಲೀ ವಿದಾಯ ಹೇಳಿದ ವರ್ಷವಿದು. ಸಚಿನ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರೆ, ಉಳಿದವರು ಟೆಸ್ಟ್‌ನಿಂದ ದೂರ ಸರಿದರು.

ಈ ವರ್ಷದ ಕಳಪೆ ಫಾರ್ಮ್ ಸಚಿನ್ ಅವರ ವಿದಾಯದ ಒತ್ತಡ ಹೆಚ್ಚಿಸಿದ್ದು ನಿಜ. ಆದರೆ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿಬಿಟ್ಟರು. ಮತ್ತೊಂದು ಸರಣಿಯಲ್ಲಿ ಆಡಿ ವಿದಾಯ ಹೇಳಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ದಿಢೀರನೇ ಬಿಸಿಸಿಐಗೆ ಬರೆದ ಪತ್ರದಲ್ಲಿ ತಮ್ಮ ವಿದಾಯ ವಿಷಯ ಪ್ರಕಟಿಸಿದರು. ವಿಶ್ವದಾಖಲೆಗಳನ್ನೇ ಪೋಣಿಸಿಟ್ಟಿರುವ ಸಚಿನ್ ಏಕದಿನ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದವರು. ಆದರೆ ಟೆಸ್ಟ್‌ನಲ್ಲಿ ಆಟ ಮುಂದುವರಿಸಲಿದ್ದಾರೆ ಎಂಬುದು ಅಭಿಮಾನಿಗಳ ಪಾಲಿನ ಸಮಾಧಾನ.

ಸಚಿನ್ ಅವರಷ್ಟೇ ಶ್ರೇಷ್ಠತೆ ಹೊಂದಿದ್ದ ಮತ್ತೊಬ್ಬ ಬ್ಯಾಟ್ಸ್‌ಮನ್ ಪಾಂಟಿಂಗ್. ಅವರು ಕೂಡ ತಮ್ಮ ಕ್ರಿಕೆಟ್ ಜೀವನದ ಕೊನೆಯ ಘಟ್ಟದಲ್ಲಿ ವಿಫಲವಾದ ಕಾರಣ ಟೀಕೆಗೆ ಒಳಗಾದರು. ಹಾಗಾಗಿ ಅವರು ಟೆಸ್ಟ್‌ಗೆ ವಿದಾಯ ಹೇಳಿದರು. ಅದಕ್ಕೂ ಮುನ್ನ ದ್ರಾವಿಡ್ ಹಾಗೂ ಲಕ್ಷ್ಮಣ್ ಕೂಡ ಕ್ರಿಕೆಟ್‌ನಿಂದ ದೂರವಾಗಲು ನಿರ್ಧರಿಸಿದ್ದರು. ಮಧ್ಯಮ ಕ್ರಮಾಂಕದ ಶಕ್ತಿಗಳು ಎನಿಸಿದ್ದ ಇವರ ವಿದಾಯದಿಂದ ಭಾರತ ತಂಡ ಬಲ ಕಳೆದುಕೊಂಡಿರುವುದು ನಿಜ.

34 ವರ್ಷಗಳ ಬಳಿಕ ಟ್ರೋಫಿ
ವೆಸ್ಟ್‌ಇಂಡೀಸ್ ತಂಡದ ಪಾಲಿಗೆ 2012 ಸ್ಮರಣೀಯ ವರ್ಷ. ಏಕೆಂದರೆ ಈ ತಂಡದ ಪ್ರಶಸ್ತಿ ಬರ ನೀಗಿದ ವರ್ಷವಿದು. 1979ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಈ ತಂಡ ಆಮೇಲೆ ಅಧಃಪತನದ ದಾರಿ ಹಿಡಿದಿತ್ತು. ಆದರೆ ಈ ವರ್ಷ ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೆರಿಬಿಯನ್ ಬಳಗ ಚಾಂಪಿಯನ್ ಆಯಿತು.      ಕ್ರಿಸ್ ಗೇಲ್ ಆಟ ಕ್ರಿಕೆಟ್ ಅಭಿಮಾನಿಗಳನ್ನು ಸಂಭ್ರಮದ ಅಲೆಯಲ್ಲಿ ತೇಲಿಸಿತು.

ಟೆಸ್ಟ್‌ನಲ್ಲಿ ಅಗ್ರಪಟ್ಟ
ಇಂಗ್ಲೆಂಡ್ ತಂಡವನ್ನು ಸೋಲಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಅಗ್ರಪಟ್ಟಕ್ಕೇರಿತು. ಸ್ವದೇಶದಲ್ಲಿಯೇ ಸರಣಿ ಸೋತ ಇಂಗ್ಲೆಂಡ್ ತನ್ನ ಅಗ್ರಸ್ಥಾನ ಕಳೆದುಕೊಂಡಿತು. ವರ್ಷದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿದ ದಕ್ಷಿಣ ಆಫ್ರಿಕಾ ತನ್ನ ಪಟ್ಟವನ್ನು ಗಟ್ಟಿಪಡಿಸಿಕೊಂಡಿತು.

ಸ್ವದೇಶದಲ್ಲಿ ಮುಗ್ಗರಿಸಿದ ಭಾರತ
`ಸ್ವದೇಶದ ಹುಲಿ' ಎನಿಸಿಕೊಂಡಿದ್ದ ಭಾರತ ತಂಡಕ್ಕೆ ತನ್ನ ನೆಲದಲ್ಲಿಯೇ ಗರ್ವಭಂಗವಾಯಿತು. ಏಕೆಂದರೆ ತಮ್ಮ ಇಷ್ಟದ ಪಿಚ್‌ನಲ್ಲಿಯೇ ಮುಗ್ಗರಿಸಿಬಿದ್ದರು. ಎಂಟು ವರ್ಷಗಳ ಬಳಿಕ ಸ್ವದೇಶದಲ್ಲಿ ಟೆಸ್ಟ್ ಸರಣಿ ಸೋಲುಕಂಡರು. 2-1ರಲ್ಲಿ ದೋನಿ ಬಳಗವನ್ನು ಸೋಲಿಸಿದ ಇಂಗ್ಲೆಂಡ್ 28 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿತು. ಪ್ರಮುಖವಾಗಿ ದೋನಿ ನಾಯತ್ವದ ಶೈಲಿ ಬಗ್ಗೆ ಟೀಕಾ ಪ್ರಹಾರ ಹರಿಯಿತು.

ಸಚಿನ್ ನೂರನೇ ಶತಕ
ವಿಶ್ವ ಕ್ರಿಕೆಟ್‌ನಲ್ಲಿ ಮರೆಯಲಾಗದ ಕ್ರಿಕೆಟ್ ಕ್ಷಣಕ್ಕೆ ಸಾಕ್ಷಿಯಾಗಿದ್ದು ಸಚಿನ್. ಅವರು ನಿರ್ಮಿಸಿದ ಶತಕಗಳ ಶತಕದ ಸಾಧನೆ ಅದ್ಭುತ. ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಈ ಸಾಧನೆ ಮೂಡಿಬಂತು.  ಟೆಸ್ಟ್‌ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ. ಈ ವರ್ಷ ಸಚಿನ್ ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡರು. `ದಿ ಆರ್ಡರ್ ಆಫ್ ಆಸ್ಟ್ರೇಲಿಯಾ' ಗೌರವಕ್ಕೆ ಪಾತ್ರರಾದರು. 

ಬೌಷರ್ ಕಣ್ಣಿಗೆ ಏಟು
ಈ ವರ್ಷದ ದುರದೃಷ್ಟವೆಂದರೆ ಯಶಸ್ವಿ ವಿಕೆಟ್ ಕೀಪರ್ ಎನಿಸಿರುವ ಮಾರ್ಕ್ ಬೌಷರ್ ಅವರ ಕ್ರಿಕೆಟ್ ಜೀವನ ದುರಂತಮಯ ಅಂತ್ಯಕಂಡಿತು. ಇಂಗ್ಲೆಂಡ್ ಪ್ರವಾಸದ ವೇಳೆ ಅಭ್ಯಾಸ ಪಂದ್ಯದಲ್ಲಿ ಬೇಲ್ಸ್ ಕಣ್ಣಿಗೆ ಚುಚ್ಚಿ ಆಸ್ಪತ್ರೆ ಸೇರಿದರು. ದಕ್ಷಿಣ ಆಫ್ರಿಕಾದ ಈ ವಿಕೆಟ್ ಕೀಪರ್ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು.

ಯುವರಾಜನ `ಎರಡನೇ ಇನಿಂಗ್ಸ್'
ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಅಂಗಳಕ್ಕಿಳಿದು ಮತ್ತೆ ಯಶಸ್ಸು ಕಂಡಿದ್ದು ವಿಶೇಷ. ಕ್ರಿಕೆಟ್ ಮೇಲಿನ ಪ್ರೀತಿ, ಬದ್ಧತೆ ಹಾಗೂ ತುಡಿತಕ್ಕೆ ಇದೊಂದು ನಿದರ್ಶನವಷ್ಟೇ.

ಆದರೆ ಯುವರಾಜ್ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ ಕರಗಿಸಲು ಅಮೆರಿಕದ ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ಜನವರಿಯಿಂದ ಮಾರ್ಚ್‌ವರೆಗೆ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಅದಾಗಿ ಆರು ತಿಂಗಳಲ್ಲಿ ಆಡಲು ಕಣಕ್ಕಿಳಿದರು. ಲಂಕಾದಲ್ಲಿ ನಡೆದ ಚುಟುಕು ವಿಶ್ವಕಪ್‌ನಲ್ಲಿ ಆಡಿ ಮಿಂಚಿದರು. ಈಗ ಟ್ವೆಂಟಿ-20 ಕ್ರಿಕೆಟ್‌ನ ಯಶಸ್ವಿ ಆಟಗಾರ ಎನಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT