ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆಯೆಂಬ ಚೋಪ್‌ದಾರ್ ವ್ಯವಸ್ಥೆ!

Last Updated 11 ಫೆಬ್ರುವರಿ 2016, 10:43 IST
ಅಕ್ಷರ ಗಾತ್ರ

ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ವಿವಾದದಿಂದ ಯಾರಿಗೂ ದಿಗ್ಭ್ರಮೆಯಾಗಿಲ್ಲ! ಯಾಕೆಂದರೆ ತಹಶೀಲ್ದಾರ್ ಮುಂತಾದ ಆಯಕಟ್ಟಿನ ಹುದ್ದೆಗಳ ಸ್ಥಳ ನಿಯುಕ್ತಿ ಮತ್ತು ವರ್ಗಾವಣೆ ಹಿಂದೆ ಶಾಸಕರು ಮತ್ತು ಮಂತ್ರಿಗಳ ಕೃಪೆ ಇಲ್ಲವೇ ಅವಕೃಪೆ ಇರಲೇಬೇಕೆಂಬುದು ಬಹಿರಂಗ ಸತ್ಯ. ವಿಶೇಷವಾಗಿ 1980ರ ದಶಕದಲ್ಲಿ ಪ್ರಾರಂಭವಾದ ಈ ಸಂಪ್ರದಾಯ ಇಂದಿನವರೆಗೂ ಮುಂದುವರೆದಿದೆ ಎಂಬುದಕ್ಕೆ ಈ ವರ್ಗಾವಣೆ ಪ್ರಹಸನವೇ ಸಾಕ್ಷಿ.

ಈ ಘಟನೆಯಿಂದಾಗಿ ಪಾಳೇಗಾರರ ಆಡಳಿತದಲ್ಲಿದ್ದ ಚೋಪದಾರರೆಂಬ ಸಿಬ್ಬಂದಿ ವ್ಯವಸ್ಥೆ ಜ್ಞಾಪಕಕ್ಕೆ ಬರುತ್ತದೆ. ಆಗ ದೇಸಾಯಿ ಮುಂತಾದ ಲೋಕಲ್‌ ದೊರೆಗಳು ಸಾರ್ವಜನಿಕವಾಗಿ ತೆರಳುತ್ತಿದ್ದರೆ ಎಲ್ಲರೂ ಮುಜುರೆ ಸಲ್ಲಿಸಬೇಕಾಗುತ್ತಿತ್ತು. ಯಾರಾದರೂ ತಪ್ಪಿದರೆ ಈ ಚೋಪದಾರ್‌ಗಳು ತಮ್ಮ ಕೈಕೋಲಿನಿಂದ ತಿವಿದು ಎಚ್ಚರಿಸುತ್ತಿದ್ದರು. ಅಂದಿನ ಪಾಳೇಗಾರರ ಸ್ಥಾನ ತುಂಬಿರುವ ಶಾಸಕ ಮತ್ತು ಮಂತ್ರಿಗಳು ಈಗ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ವರ್ಗಾವಣೆಯೆಂಬ ನವೀನ ಚೋಪದಾರ್ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರಷ್ಟೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ದಿ. ಚನ್ನಬಸಪ್ಪನವರ ಬಗ್ಗೆ ಉದಾಹರಿಸುವುದು ಔಚಿತ್ಯಪೂರ್ಣವಾಗಿದೆ. ಅಧಿಕಾರಿಯೊಬ್ಬರಿಗೆ ನಿರ್ದಿಷ್ಟ ಸ್ಥಳವೊಂದಕ್ಕೆ ವರ್ಗಾವಣೆಗಾಗಿ ಚನ್ನಬಸಪ್ಪನವರಿಂದ ಶಿಫಾರಸು ಬೇಕಾಗಿತ್ತು. ಈ ಕುರಿತು ಮಠಾಧಿಪತಿಯೊಬ್ಬರು ವಶೀಲಿ ಮಾಡಲು ಚನ್ನಬಸಪ್ಪನವರ ಮನೆಗೇ ಹೋದರು.  ಆದರೆ ಸ್ವಾಮೀಜಿಯವರ ಶಿಫಾರಸನ್ನು ನಯವಾಗಿ ತಳ್ಳಿಹಾಕಿದ ಸಚಿವರು,  ತಮ್ಮ ಶ್ರೀಮತಿಯವರಿಗೆ ಗುರುಗಳನ್ನು ಸತ್ಕರಿಸಲು ಹೇಳಿ ಹೊರಟೇಬಿಟ್ಟರಂತೆ! ಆದರೆ ಅಧಿಕಾರಿ ಬಹಳ ಚಾಲಾಕಿ. ತನ್ನ ವರ್ಗಾವಣೆಗೆ ಶಿಫಾರಸು ಮಾಡುವಂತೆ ಚನ್ನಬಸಪ್ಪನವರ ಮಗಳು ನವವಿವಾಹಿತೆ ರಾಣಿ ಸತೀಶರಿಗೆ(ಈಗ ಅವರು ಮಾಜಿ ಸಚಿವೆ) ದುಂಬಾಲು ಬಿದ್ದರು. ಅಪ್ಪನ ಮುದ್ದಿನ ಮಗಳಾಗಿದ್ದ ರಾಣಿ, ರಾತ್ರಿ ಮನೆಗೆ ಬಂದ ಅಪ್ಪನಿಗೆ ಮುಗ್ದತೆಯಿಂದಲೇ ಸಾಹೇಬರ ಪರವಾಗಿ ಶಿಫಾರಸ್ಸು ಮಾಡಹೋದರೆ, ಅವರೋ ‘ನಾಳೆಯೇ ಅಳಿಯನಿಗೆ ಬರಹೇಳುತ್ತೇನೆ. ನೀನು ಗಂಡನ ಮನೆಗೆ ಹೊರಡಲು ಸಿದ್ಧತೆ ಮಾಡಿಕೋ’ ಎನ್ನಬೇಕೇ!

ಈ ಮೇಲಿನ ಎರಡೂ ಘಟನೆಗಳು ಶ್ರೇಷ್ಠತೆಯಿಂದ, ಕನಿಷ್ಠತೆಯೆಡೆಗೆ ಕ್ರಮಿಸಿದ ಸಾರ್ವಜನಿಕ ನೈತಿಕತೆಯ ಸ್ಥಿತ್ಯಂತರಗಳಿಗೆ ಸಂಕೇತಗಳಾಗಿವೆ.
ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಪ್ರಮುಖವಾದುದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿ ಮಾಡುವ ಜವಾಬ್ದಾರಿ ಪ್ರಾದೇಶಿಕ ಸರ್ಕಾರಗಳಿಗಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯೂ ರಾಜ್ಯ ಸರ್ಕಾರಗಳದ್ದು. ಪಂಚಾಯತ್‌ರಾಜ್ ವ್ಯವಸ್ಥೆ ಮತ್ತು ಅಭಿವೃದ್ಧಿಪರ ಆಡಳಿತದ ಕಲ್ಪನೆ ಬಂದ ನಂತರವಂತೂ ಪ್ರಾದೇಶಿಕ ಆಡಳಿತದ ಮಹತ್ವ ಹೆಚ್ಚಿದೆ. ಒಟ್ಟಾರೆ ಕೇಂದ್ರ ಸರ್ಕಾರದ ಆಡಳಿತದ ಸಾಫಲ್ಯತೆ ರಾಜ್ಯ ಸರ್ಕಾರಗಳನ್ನು ಅವಲಂಬಿಸಿದೆ. ಇದೇ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲೂ ತಮ್ಮದೇ ಪಕ್ಷದ ಸರ್ಕಾರಗಳಿರಲಿ ಎಂದು ಬಯಸುವುದು.

ರಾಜ್ಯ ಸರ್ಕಾರಗಳು ಯಶಸ್ವಿ ಆಡಳಿತ ನೀಡಬೇಕಾದರೆ ಕಾರ್ಯಾಂಗದ ವಿವಿಧ ಮಜಲುಗಳ ಮಧ್ಯೆ ಸೌಹಾರ್ದ ಸಂಬಂಧ, ಪರಸ್ಪರ ಅರಿವು ಮತ್ತು ಸಂಯೋಜನೆ ಮುಖ್ಯ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ತದ್ರೂಪಗಳಾಗಿವೆ. ಕೇಂದ್ರದಲ್ಲಿದ್ದಂತೆ ರಾಜ್ಯಗಳಲ್ಲೂ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಮಂತ್ರಿಮಂಡಳ, ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು ಇರುತ್ತಾರೆ. ರಾಜ್ಯ ಆಡಳಿತ ಸೇವೆ ಮತ್ತು ಇತರೇ ಸೇವೆಗಳು ಇರುತ್ತವೆ. ಕೇಂದ್ರ ಲೋಕಸೇವಾ ಆಯೋಗದಂತೆ ಪ್ರತಿ ರಾಜ್ಯದಲ್ಲೂ ರಾಜ್ಯ ಲೋಕಸೇವಾ ಆಯೋಗವಿದೆ. ಕೇಂದ್ರದಲ್ಲಿರುವಂತೆ ವಿವಿಧ ಸಾಂವಿಧಾನಿಕ ಸಂಸ್ಥೆಗಳೂ ರಾಜ್ಯದಲ್ಲಿವೆ. ಸರ್ಕಾರ ಯಶಸ್ವಿಯಾಗಬೇಕಾದರೆ ಇವರೆಲ್ಲರೂ ನಿಷ್ಪಕ್ಷಪಾತವಾಗಿ ಮತ್ತು ನ್ಯಾಯೋಚಿತವಾಗಿ ಕೆಲಸ ಮಾಡುವಂತಹ ವಾತಾವರಣ ಇರಬೇಕು. ಅಂತಹ ವಾತಾವರಣ ನಿರ್ಮಿಸುವ ಜವಾಬ್ದಾರಿ ರಾಜಕೀಯ ಕಾರ್ಯಾಂಗಕ್ಕೆ (Political Executive) ಇದೆ. ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ಕೆಲ ಸಚಿವರು ಸ್ಥಿರ ಕಾರ್ಯಾಂಗದ(Permanent Executive) ಕಾರ್ಯಾಚರಣೆಯಲ್ಲಿ ಅನವಶ್ಯಕ ಹಸ್ತಕ್ಷೇಪವೆಸಗುತ್ತಿರುವುದು ಆಡಳಿತದ ವೈಫಲ್ಯಕ್ಕೆ ಎಡೆ ಮಾಡಿಕೊಡುತ್ತಿದೆ.

ರಾಜ್ಯಪಾಲರು ಕಾರ್ಯಾಂಗದ ನಾಮಮಾತ್ರ ಮುಖ್ಯಸ್ಥರಾಗಿದ್ದಾರೆ(Titular Head). ವಾಸ್ತವದಲ್ಲಿ ಅಧಿಕಾರ ಮಂತ್ರಿ ಮಂಡಳದಲ್ಲಿ ಕೇಂದ್ರೀಕೃತವಾಗಿರುತ್ತದೆ. ನೀತಿ ನಿರೂಪಣೆ, ಯೋಜನೆ, ಮಸೂದೆಗಳ ರಚನೆ, ಸಾಂವಿಧಾನಿಕ ಸಂಸ್ಥೆಗಳಿಗೆ ನೇಮಕಾತಿ, ಬಜೆಟ್ ಮಂಡನೆ ಮುಂತಾದ ಜವಾಬ್ದಾರಿ ಮಂತ್ರಿಮಂಡಳಕ್ಕಿದ್ದರೂ ಅದರ ಅಧಿಕಾರ ಕಾಲನಿರ್ಬಂಧಿತವಾಗಿದೆ. ಅದು ಚುನಾಯಿತ ಸರ್ಕಾರವಾಗಿರುವುದರಿಂದ ಅದರ ಸ್ವರೂಪ ತಾತ್ಕಾಲಿಕವಾಗಿದೆ(Transient). ರಾಜಕೀಯ ಕಾರ್ಯಾಂಗ ರೂಪಿಸುವ ನೀತಿ, ಕಾರ್ಯಕ್ರಮ ಮತ್ತು ಕಾನೂನು ಜಾರಿಗೆ ತರುವ ಜವಾಬ್ದಾರಿ ಸ್ಥಿರ ಕಾರ್ಯಾಂಗಕ್ಕಿದೆ. ಸರ್ಕಾರಗಳು ಬದಲಾಗಬಹುದು, ಆಡಳಿತ ಯಂತ್ರ ಬದಲಾಗದು ಮತ್ತು ಅದು ನಿರಂತರ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಅಧಿಕಾರಿಗಳು ಸರ್ಕಾರ ನಿರ್ವಹಣೆಯಲ್ಲಿ ಮಂತ್ರಿಗಳಿಗೆ ಸೂಕ್ತ ಸಲಹೆ ಮತ್ತು ಮಾಹಿತಿ ನೀಡಬೇಕು. ಅಧಿಕಾರಿಗಳೇನಿದ್ದರೂ ಕಾನೂನು ಮಿತಿಯಲ್ಲಿಯೇ ಕೆಲಸ ಮಾಡುವರು.  ಆದರೆ, ರಾಜಕೀಯ ಒತ್ತಡದಿಂದಾಗಿ ಮಂತ್ರಿಗಳಿಗೆ ಅಧಿಕಾರಿಗಳು ತೋರುವ ಕಾನೂನು ಸಮ್ಮತ ಮಾರ್ಗ ಹಿಡಿಸದೇ ಇರಬಹುದು. ಆಗ ಇಬ್ಬರ ಮಧ್ಯೆಯೂ ಸಂಘರ್ಷಕ್ಕೆಡೆಯಾಗುವುದು.

ಇಂತಹ ಪರಿಸ್ಥಿತಿಗಳನ್ನು ಮನಗಂಡೇ ರಾಜ್ಯಶಾಸ್ತ್ರಜ್ಞ ಹರ್ಬರ್ಟ ಮಾರಿಸನ್ ಹೀಗೆ ಹೇಳಿದ್ದಾನೆ - “The relationship between the minister and the civil servant should be usually that of colleagues working together in a team of cooperative partners seeking to advance the public interest and the efficiency of the department. The minister shouldn’t be an isolated autocrat, giving orders without hearing argument of alternative courses, nor should the civil servants be able to treat him as a mere cipher. The partnership should be alive and virile, rival ideas and opinions should be fairly considered, and the relationship should be one of mutual respect on the understanding that the minister’s decision is final and must be loyally and helpfully carried out, and that he requires efficient and energetic services”.

ನಾಡಿನ ದೌರ್ಭಾಗ್ಯವೆಂದರೆ ಆಡಳಿತ ರಥದ ಎರಡೂ ಚಕ್ರಗಳು ಲಯತಪ್ಪಿವೆ. ಸರ್ಕಾರದ ಹಿಂದಿನ  ವರ್ಗಾವಣೆ ನೀತಿಯನ್ನು ಪರಿಶೀಲಿಸಿದರೆ, ನಡೆ ಮತ್ತು ನುಡಿಯ ಮಧ್ಯೆ ಸಾಮ್ಯತೆ ಇಲ್ಲದಿರುವುದು ಗೊತ್ತಾಗುತ್ತದೆ. ಜನಪ್ರತಿನಿಧಿಗಳು ಅಧಿಕಾರಿಗಳನ್ನು ಸಹೋದ್ಯೋಗಿಗಳ ತರಹ ಗೌರವದಿಂದ ಕಾಣದೇ ತಮ್ಮ ಮರ್ಜಿಯಲ್ಲಿರಬೇಕಾದ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳ ಇಂತಹ ಮನೋಧರ್ಮಕ್ಕೆ ವಿಶೇಷವಾಗಿ ಬಲಿಯಾಗುತ್ತಿರುವವರು ಕರ್ನಾಟಕದ ಆಡಳಿತಸೇವೆ, ಪೋಲಿಸ್‌ ಸೇವೆ ಮತ್ತು ಇತರ ಸೇವೆಯ ಅಧಿಕಾರಿಗಳು.  ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲ ಸರ್ಕಾರಿ ನೌಕರರ ವರ್ಗಾವಣೆಗೆ ಜನಪ್ರತಿನಿಧಿಗಳ ಶಿಫಾರಸು ಅನಿವಾರ್ಯವಾಗಿದೆ. ಮಾಜಿ ಸಚಿವ ದಿ.ಗೋವಿಂದೇಗೌಡರ ದೂರದೃಷ್ಟಿಯಿಂದಾಗಿ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ (CET) ಮೂಲಕ ಶಿಕ್ಷಕರ ನೇಮಕಾತಿ ಮತ್ತು ಸಮಾಲೋಚನೆ (Counseling)  ಮೇರೆಗೆ ವರ್ಗಾವಣೆ ಮಾಡುವ ನೀತಿ ಇಂದು ಬೇರುಬಿಟ್ಟಿದೆ.

ಸ್ವಾನುಭವದಿಂದ ಹೇಳಬೇಕೆಂದರೆ, ಶಾಸಕರು ತಾಲ್ಲೂಕಿನಲ್ಲಿ ಆಯಕಟ್ಟಿನ ಸ್ಥಾನಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಈ ಆಯ್ಕೆಯಲ್ಲಿ ಜಾತಿ ಹಾಗೂ ಕೈಬೆಚ್ಚಗೆ ಮಾಡುವದು ನಿರ್ಣಾಯಕ ಪಾತ್ರ ವಹಿಸುತ್ತದೆ.  ಹೀಗೆ ನಿಯುಕ್ತಿಗೊಂಡ ಅಧಿಕಾರಿಗಳು ನಿರಂತರವಾಗಿ ಶಾಸಕರನ್ನು ತೃಪ್ತಿಪಡಿಸುತ್ತಲೇ ಇರಬೇಕಾಗುತ್ತದೆ. ಅವರನ್ನು ತೃಪ್ತಿಪಡಿಸುವುದೆಂದರೆ ಅಧಿಕಾರಿಗಳು ಕಾನೂನು ಉಲ್ಲಂಘಿಸಲೂ ಸಿದ್ಧರಿರಬೇಕು. ಕಾನೂನನ್ನು ಉಲ್ಲಂಘಿಸುವುದೆಂದರೆ ನ್ಯಾಯಬಾಹಿರ ಮತ್ತು ಜನವಿರೋಧಿ ಕೆಲಸ ಮಾಡುವುದೆಂದೇ ಅರ್ಥ.

ಇಂದು ತಾಲ್ಲೂಕು ಮಟ್ಟದಲ್ಲಿ ಬಹುತೇಕ ಅಧಿಕಾರಿಗಳು ಸೀಮೋಲ್ಲಂಘನ ಮಾಡುವ ಮೂಲಕ ತಮ್ಮ ನೆಲೆ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಯಾರಾದರೂ ಸ್ವಾಭಿಮಾನ ಮತ್ತು ಕಾನೂನು ಪ್ರಜ್ಞೆ ಪ್ರದರ್ಶಿಸಿದರೆ ಅನುಪಮಾಗೆ ಆದ ಶಿಕ್ಷೆ ಅವರಿಗೂ ಕಾದಿರುತ್ತದೆ! ಶಾಸಕರು ಮತ್ತು ಅಧಿಕಾರಿಗಳ ಮಧ್ಯೆ ಏರ್ಪಡುವ ಈ ಅಲಿಖಿತ ಒಪ್ಪಂದದಿಂದಾಗಿ ಸರ್ಕಾರಿ ಸೇವೆಗಳಲ್ಲಿ  ಸಾಮಾಜಿಕ- ರಾಜಕೀಯ ಅಸಮತೋಲನ ಉದ್ಭವವಾಗುತ್ತಿದೆ.

ಜಾತಿ ಮತ್ತು ಹಣ ಕೇವಲ ಅಧಿಕಾರಿಗಳ ವರ್ಗಾವಣೆಯಲ್ಲಷ್ಟೇ ಅಲ್ಲ, ಅವರ ಆಯ್ಕೆ ಮತ್ತು ನೇಮಕಾತಿಯಲ್ಲೂ ನಿರ್ಣಾಯಕ ಪಾತ್ರವಹಿಸುತ್ತಿವೆ. ಪ್ರತಿಭೆಯಿದ್ದರೆ ಬಡ ರೈತನ ಮಗನೂ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಬಹುದು. ಆದರೆ ಜಾತಿ ಮತ್ತು ದುಡ್ಡಿಲ್ಲದೇ ಎಂತಹ ಪ್ರತಿಭಾವಂತನೂ ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಲಾರ ಎಂಬುದಕ್ಕೆ ಕೆಪಿಎಸ್‌ಸಿ ಹಗರಣಗಳೇ ಸಾಕ್ಷಿ. ಕೆಪಿಎಸ್‌ಸಿಗೂ, ಭ್ರಷ್ಟಾಚಾರಕ್ಕೂ ಜನ್ಮತಃ ಅವಿನಾಭಾವ ಸಂಬಂಧವಿದೆ. ಆ ಭ್ರಷ್ಟಾಚಾರದ ಕೂಸು ಇಂದು ಅದೆಷ್ಟು ದೈತ್ಯಾಕಾರವಾಗಿ ಬೆಳೆದಿದೆಯೆಂದರೆ, ಎ.ಸಿ. ಹುದ್ದೆಗೆ ₹ 1 ಕೋಟಿ ಮತ್ತು ಡಿಎಸ್ಪಿ ಹುದ್ದೆಗೆ ₹ 75 ಲಕ್ಷ  ಮೌಲ್ಯ ಕಟ್ಟಲಾಗಿದೆ. ಇವರನ್ನು ಆಯ್ಕೆ ಮಾಡುವವರೂ ಸರ್ಕಾರಿ ದೊರೆಗಳಿಗೆ ಹರಕೆ ಸಲ್ಲಿಸಿಯೇ ಬರುವುದು ಗುಟ್ಟೇನಲ್ಲ. ಇಂತಹ ಸದಸ್ಯರಿಂದ ಆಯ್ಕೆಯಾದಂತಹ ಅಧಿಕಾರಿಗಳಿಂದ ಎಂತಹ ಆಡಳಿತ ನಿರೀಕ್ಷಿಸಲು ಸಾಧ್ಯ! ತಾಯಿ ಭುವನೇಶ್ವರಿಯೇ ಕರ್ನಾಟಕವನ್ನು ಕಾಪಾಡಲಿ.

ಇನ್ನು ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ನಿಗಾ ವಹಿಸಬೇಕಾದ ಕಾವಲು ಸಂಸ್ಥೆ ಲೋಕಾಯುಕ್ತವೇ ಕುಲಗೆಟ್ಟು ಹೋಗಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಹ ಪರಿಸ್ಥಿತಿ. ಲೋಕಾಯುಕ್ತರ ಕಚೇರಿಯಲ್ಲಿಯೇ ಕುಳಿತು ಅವರ ಮಗನೇ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಕಚೇರಿಯ ಅಧಿಕಾರಿಗಳೂ ಅವನೊಂದಿಗೆ ಶಾಮೀಲಾಗಿದ್ದಾರೆ. ಸರ್ಕಾರವೂ ಇಂತಹ ಲೋಕಾಯುಕ್ತರನ್ನು ರಕ್ಷಿಸುವ ಪ್ರಯತ್ನ ನಡೆಸಿದಂತೆ ಭಾಸವಾಗುತ್ತಿತ್ತು. ವಿರೋಧ ಪಕ್ಷಗಳು ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಲು ನಿರ್ಧರಿಸಿರುವಂತೆ ತೋರುತ್ತಿದೆ.

ಈ ಆತ್ಮಘಾತುಕ ಪೈಪೋಟಿಯಲ್ಲಿ ವಿಶ್ವವಿದ್ಯಾಲಯಗಳೂ ಹಿಂದೆಬಿದ್ದಿಲ್ಲ. ಶಾಸಕರು, ಅಧಿಕಾರಿಗಳು ಮತ್ತು ನ್ಯಾಯಾಧೀಶರನ್ನು ರೂಪಿಸಬೇಕಾದ ವಿಶ್ವವಿದ್ಯಾಲಯಗಳು ಹಗರಣಗಳ ಕೂಪಗಳಾಗಿವೆ. ಬುದ್ಧಿಜೀವಿ ಅಧ್ಯಾಪಕರ ಆಯ್ಕೆಯಲ್ಲೂ ಕುಲಪತಿಗಳ ಕಚೇರಿಯತ್ತ ಹಣದ ಹೊಳೆಯೇ ಹರಿಯುತ್ತಿದೆ. ಅವರಾದರೂ ಏನು ಮಾಡಿಯಾರು? ಅವರೂ ಘನತೆವೆತ್ತವರಿಗೆ ಶುಲ್ಕಪಾವತಿಸಿಯೇ ಪೀಠಾಧಿಪತಿಗಳಾಗಿರುವಾಗ ಹಲವು ಪಟ್ಟು ಮರಳಿ ಪಡೆಯಲೇಬೇಕಲ್ಲವೇ? ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಗುತ್ತಿಗೆ, ಕೃಷಿ ಇಲಾಖೆಯಿಂದ ಸಬ್ಸಿಡಿ ಮತ್ತು ಗ್ರಾಮ ಪಂಚಾಯಿತಿಯಿಂದ ಜನತಾ ಮನೆ ದೊರಕಿಸಿಕೊಳ್ಳಬೇಕಾದರೂ ಇಂದು ಶಾಸಕರ ಶಿಫಾರಸು ಬೇಕೇಬೇಕು!

ಆಡಳಿತದಲ್ಲಿ ಶಾಸಕರ ಹಸ್ತಕ್ಷೇಪ ಮತ್ತು ಅಧಿಕಾರಿಗಳ ಆಯ್ಕೆಯಲ್ಲಿ ಬಾಹ್ಯಕಾರಣಗಳಿಂದಾಗಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಆಡಳಿತ ನ್ಯಾಯಸಮ್ಮತವಾಗಿರಬೇಕಾದರೆ ಜನಪ್ರತಿನಿಧಿಗಳು ಸೀಮೋಲ್ಲಂಘನ ಮಾಡದಂತೆ ಆಡಳಿತದಲ್ಲಿ ನಿಯಮಾವಳಿಗಳನ್ನು ರಚಿಸಬೇಕು, ಅಧಿಕಾರಿಗಳನ್ನು ಆಯ್ಕೆ ಮಾಡುವ ವಿಧಾನ ಮತ್ತು ಕೆಪಿಎಸ್‌ಸಿಗೆ ಕಾಯಕಲ್ಪವಾಗಬೇಕು.  ವರ್ಗಾವಣೆ ನೀತಿ ಪಾರದರ್ಶಕವಾಗಿರಬೇಕು. ಕೆಪಿಎಸ್‌ಸಿಯಲ್ಲಿ ಬದಲಾವಣೆ ತರಲು ಸಿದ್ಧರಾಮಯ್ಯನವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ ಅದು ಸಾಲದು. ಅವರು ಕೆಪಿಎಸ್‌ಸಿ ಸದಸ್ಯರ ನೇಮಕಕ್ಕೆ, ಈಗ ರೂಢಿಯಲ್ಲಿರುವ ಜಾತಿ ಮಾನದಂಡವನ್ನು ತಿರಸ್ಕರಿಸಿ ಅರ್ಹತೆಯನ್ನು ಪುರಸ್ಕರಿಸುವ ದಿಟ್ಟತನ ತೋರಲಿ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಹಿರಿಯ ಅಧಿಕಾರಿಗಳ ಮಂಡಳಿ ರಚಿಸುವ ಮೂಲಕ ವರ್ಗಾವಣೆ ವಿಧಾನದಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡಲಾಯಿತು. ಈಗ ಗೃಹ ಇಲಾಖೆಯಲ್ಲಿ ಅಸ್ತಿತ್ವದಲ್ಲಿರುವ ಪೋಲಿಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಕೂಡ ಅಂತಹದೇ ಒಂದು ಪ್ರಯತ್ನ. ಆದರೆ, ಈ ಎರಡೂ ಪ್ರಯತ್ನಗಳು ಮಂತ್ರಿಗಳ ದೂರನಿಯಂತ್ರಣಕ್ಕೆ ಒಳಪಟ್ಟಿದ್ದೇ ಅವುಗಳ ವೈಫಲ್ಯಕ್ಕೆ ಕಾರಣ. ಮಂತ್ರಿಗಳ ಇಶಾರೆಗೆ ತಕ್ಕಂತೆ ಇಲಾಖೆಯ ಮುಖ್ಯಸ್ಥರು ವರ್ಗಾವಣೆ ಮಾಡುವ ಬದಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವಾಯತ್ತ ಮಂಡಳಿಯನ್ನು ರಚಿಸಬೇಕು. ಆ ಮಂಡಳಿಯು ಮಾಡುವ ಶಿಫಾರಸುಗಳನ್ನು ಮಂತ್ರಿಗಳು ಪರಿಶೀಲಿಸಿ, ಜಾರಿಗೆ ತರಲಿ. ವಿಶೇಷ ಪ್ರಸಂಗಗಳಲ್ಲಿ ಮಾತ್ರ ಆಯ್ದ ಶಿಫಾರಸ್ಸುಗಳನ್ನು ಮರುಪರಿಶೀಲನೆಗೆ ಕಳುಹಿಸಬಹುದು. ತಾಲ್ಲೂಕು ಮಟ್ಟದಲ್ಲಿ ಸೇವೆ ಮತ್ತು ಸರಕುಗಳ ವಿತರಣೆ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿರುವ ಸಂಪ್ರದಾಯ ನಿಲ್ಲಲಿ. ಆದರೆ, ಈ ಆಶಯಗಳು ಜಾರಿಗೆ ಬರುವುದೂ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದೂ ಒಂದೇ! ನಿಷ್ಠುರತೆಗೆ ಹೆಸರಾದ ಸಿದ್ದರಾಮಯ್ಯನವರು ಬೆಕ್ಕಿಗೆ ಗಂಟೆ ಕಟ್ಟುವ ಧೈರ್ಯ ತೋರುವರೇ?!
(ಲೇಖಕರು: ಮಾಜಿ ಕೆ.ಎ.ಎಸ್. ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT