ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣರಂಜಿತ ಭರತನಾಟ್ಯ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಚೌಡಯ್ಯ ಸಭಾಂಗಣ. ಶುಕ್ರವಾರದ ಸಂಜೆ. ಕುತೂಹಲದಿಂದ ಕಾದು ಕುಳಿತ ಪ್ರೇಕ್ಷಕರು. ಬಹುವಾಗಿ ನೃತ್ಯ ಕಲಾವಿದರು, ವಿದ್ಯಾರ್ಥಿನಿಯರೇ ತುಂಬಿದ್ದ ಸಭೆ. ತೆರೆ ಮೇಲೇರುತ್ತಿದ್ದಂತೆ ಸಭಾಂಗಣದಲ್ಲಿ ಕುತೂಹಲದ ಮೌನ. ಗೆಜ್ಜೆಯ ನಿನಾದದ ಜೊತೆ ರಮಾ ವೈದ್ಯನಾಥನ್ ಅವರ ನೃತ್ಯ ಪ್ರಾರಂಭ. ಪ್ರಖ್ಯಾತ ಕೃಷ್ಣಲೀಲಾ ತರಂಗಿಣಿಯ ಒಂದು ಝಲಕು.

`ದಿವ್ಯ ಗೋಪಾಲಕ~ದಲ್ಲಿನ ಚುರುಕು ನಡೆ ಪ್ರೇಕ್ಷಕರನ್ನು ಸೆರೆಹಿಡಿಯಿತು. ರಾಗಮಾಲಿಕೆಯ ರಚನೆ ಮೇಳೈಸಿ, ವರ್ಣಕ್ಕೆ ಭದ್ರ ಪೀಠಿಕೆ ಹಾಕಿತು. ವರ್ಣವೆಂದರೆ ತಂಜಾವೂರು ಚತುಷ್ಟರದೇ. ಅದರ ಸಂಗೀತ ಮೌಲ್ಯ, ನೃತ್ಯಮೌಲ್ಯಗಳೆರಡೂ ಅನುಪಮ, ಅಸಾಧಾರಣವಾದದ್ದೇ. ಭೈರವಿ ರಾಗದ ವರ್ಣ ನೃತ್ತ-ನೃತ್ಯಗಳೆರಡಕ್ಕೂ ವ್ಯಾಪಕ ಅವಕಾಶ ಒದಗಿಸುವಂಥದ್ದು. `ಮೋಹಮಾನವು~ ಒಂದು ಘನವಾದ ವರ್ಣ. ಹಿಂದಿನಿಂದಲೂ ಪ್ರಸಿದ್ಧವಾದುದೇ. ಗಣ್ಯ ಕಲಾವಿದರೆಲ್ಲರ ಆಯ್ಕೆಯೇ ಅದು. ಒಂದೊಂದು ಆವರ್ತವಾದ ಮೇಲೂ ಜತಿಗಳು ಮೇಳೈಸುತ್ತಿದ್ದ ರೀತಿಯಲ್ಲೇ ಒಂದು ಘನತೆಯಿತ್ತು.

ಗುರು ಕಾರೈಕುಡಿ ಶಿವಕುಮಾರ್ ಅವರಿಂದ ಹೆಣೆಯಲಾದ ಸುಂದರ ಜತಿಪುಂಜಗಳು. ಬಿಗಿ ಹಂದರದ ಜತಿಗಳಿಗೆ ಖಚಿತ ಹೆಜ್ಜೆ. ಒಂದೊಂದೇ ಆವರ್ತಗಳಿಂದ ಪಸರಿಸುತ್ತಿದ್ದ ವರ್ಣದಿಂದ ಮನತುಂಬಿ ಬರುತ್ತಿದ್ದ ಪ್ರೇಕ್ಷಕರಿಂದ ಕರತಾಡನ. ಉತ್ತರಾರ್ಧದ ಚರಣದಿಂದ ಕಾವು ಹೆಚ್ಚಿ ಮೈತುಂಬಿ ಬಂದ ವರ್ಣ. ವರ್ಣ ಮುಗಿಯುತ್ತಿದ್ದಂತೆ ಭೂರಿ ಭೋಜನ ಮಾಡಿದ ಅನುಭವ.

ಸುರುಟಿ ರಾಗದ ಜಾವಡಿ ರಂಗದ ಮೇಲೆ ಆಹ್ಲಾದಕರ ವಾತಾವರಣ ತಂದಿತು. ಮತ್ತೆ ತಂಜಾವೂರು ಚತುಷ್ಟರದೇ ಆದ `ನನುಬೋಧನ~ ಮನಮುಟ್ಟಿತು. ಅಭಿನಯದಲ್ಲಿ ಸಂಯಮ. ಆದರೆ ಪರಿಣಾಮಕಾರಿ. ಅತಿರೇಕಗಳಿಲ್ಲದ ಸುಂದರ ಅಭಿನಯ. ದೇಶಭಕ್ತ ಸುಬ್ರಹ್ಮಣ್ಯ ಭಾರತಿ ಅವರ ಒಂದು ರಚನೆ. ಅಷ್ಟಕದಲ್ಲಿ ಮುಂದುವರಿಕೆ.

`ಅರ್ಧನಾರೀಶ್ವರಂ~ದೊಂದಿಗೆ ಮಂಗಳ. ಪ್ರತಿ ನಡೆಯಲ್ಲಿ ರಮಾ ಅವರ ಮುದ್ರೆಯ ಛಾಪು, ಬಿಗಿ, ಘನತೆಗಳಿದ್ದ ನೃತ್ಯ. ಸುಂದರವೂ, ಮೌಲಿಕವೂ ಆದ ಭರತನಾಟ್ಯವನ್ನು ನೋಡಿದ ಸಂತೃಪ್ತಿಯೊಂದಿಗೆ ಪ್ರೇಕ್ಷಕರು ತೆರಳಿದರು.

ಕಾರ್ಯಕ್ರಮದ ಉದ್ದಕ್ಕೂ ಉತ್ತಮ ಗಾಯನ (ವಿದ್ಯಾ ಶ್ರೀನಿವಾಸನ್) ಹಾಗೂ ದಕ್ಷ ನಟುವಾಂಗ (ಕಾರೈಕುಡಿ ಶಿವಕುಮಾರ್) ಒತ್ತಾಸೆ ನೀಡಿದವು. ಅರುಣಕುಮಾರ್ ಮೃದಂಗದಲ್ಲಿ ಮತ್ತು ಶಿವಾನಂದ ಪಿಟೀಲಿನಲ್ಲಿ ನೆರವಾದರು.

ಪೇಲವವಾದ ನೃತ್ಯ
ಎರಡನೆಯ ಕಾರ್ಯಕ್ರಮದಲ್ಲಿ ನೃತ್ಯಕ್ಷೇತ್ರದ ಇನ್ನೊಬ್ಬ ಹಿರಿಯ ಕಲಾವಿದೆ ಪಾಲ್ಗೊಂಡಿದ್ದರು. ಸಿನಿಮಾ-ನೃತ್ಯರಂಗಗಳೆರಡರಲ್ಲೂ ಪ್ರಸಿದ್ಧ ಹೆಸರೇ ಮಂಜು ಭಾರ್ಗವಿ.

ನಟಿ, ನರ್ತಕಿ, ಬೋಧಕಿ, ಹಾಗೂ ನೃತ್ಯಸಂಯೋಜಕಿಯಾಗಿ ಮಂಜು ಭಾರ್ಗವಿ ಮಾನಿತರು. ಅವರ ನಿರ್ದೇಶನದಲ್ಲಿ `ಲಲಿತಾ ನೃತ್ಯಾರ್ಚನಂ~  ನಡೆಯಿತು. ದೇವಿ ಪುರಾಣವನ್ನು ಆಧರಿಸಿ ಹಲವು ನೃತ್ಯರೂಪಕಗಳು ಬಂದಿವೆ. ನಾಟಕೀಯ ಅಂಶಗಳನ್ನುಳ್ಳ ಕಥೆ ಹಾಗೂ ದೇವಿಯ ಮಹಾತ್ಮೆಯೇ ಆಕರ್ಷಣೆ. ಇದೀಗ ಕೂಚುಪುಡಿ ಶೈಲಿಯಲ್ಲಿ ನಡೆದ ಲಲಿತಾ ನೃತ್ಯಾರ್ಚನವು ಬ್ರಹ್ಮಾಂಡ ಪುರಾಣದಿಂದ ಆಯ್ದ ಕಥೆ.

ಅಗಸ್ತ್ಯ ಮುನಿಗಳು ಬರೆದಂತೆ ಪ್ರತೀತಿ. ಸಂಸ್ಕೃತದಿಂದ ತೆಲುಗಿಗೆ ಡಾ. ರಾಳಬಂಡಿ ಕವಿತಾ ಪ್ರಸಾದ್ ಅನುವಾದ ಮಾಡಿದ್ದಾರೆ. 108 ಚರಣಗಳಲ್ಲಿ ವಿವಿಧ ಅಂಕಗಳಲ್ಲಿ ಬೆಳೆಯುತ್ತದೆ.

ಮಂಜು ಭಾರ್ಗವಿ ಅವರು ಎಂದಿನಂತೆ ಸುಲಲಿತವಾಗಿ ನರ್ತಿಸಿದರಲ್ಲದೆ ಅವರ ಶಿಷ್ಯ ಮಂಡಳಿಯೂ ಪಾಲ್ಗೊಂಡಿತು. ಒಂದಾದ ಮೇಲೊಂದರಂತೆ ದೃಶ್ಯಗಳು ಚುರುಕಾಗಿ ನಡೆದದ್ದಲ್ಲದೆ ಮಧುರ ಸಂಗೀತವೂ ಕಾರ್ಯಕ್ರಮ ಆಕರ್ಷಕವಾಗುವಲ್ಲಿ ಮುಖ್ಯ ಪಾತ್ರವಹಿಸಿತು.

ಆದರೆ ಕಾರ್ಯಕ್ರಮದುದ್ದಕ್ಕೂ ಒಂದೇ ತಂತ್ರವನ್ನು ಬಳಸಿದ್ದರಿಂದ ಏಕತಾನತೆ ಕಾಣಿಸುತ್ತಿತ್ತು. ಪುನರಾವರ್ತನೆಯಂತೆ ಕಂಡು ದೃಶ್ಯದಿಂದ ದೃಶ್ಯಕ್ಕೆ ಮಹತ್ತರ ಅನ್ನುವಂತಹ ವ್ಯತ್ಯಾಸ ಗೋಚರಿಸಲಿಲ್ಲ! ಪುರಾಣವು ಒಂದು ಕಲಾತ್ಮಕ ನೃತ್ಯವಾಗಿ ಪರಿವರ್ತಿತವಾಗಿದ್ದರೆ ನೃತ್ಯನಾಟಕ ಯಶಸ್ಸು ಕಾಣುತ್ತಿತ್ತು.

ಕರ್ಮ ಕ್ರಿಯೇಟರ್ಸ್‌ನ ನಾಟ್ಯವೇದಂ ಭಾಗವಾಗಿ ಮೇಲಿನ ಎರಡು ನೃತ್ಯಕಾರ್ಯಕ್ರಮಗಳು ನಡೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT