ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣರಂಜಿತ ವ್ಯಕ್ತಿತ್ವಕ್ಕೆ ವೇದಿಕೆ...

Last Updated 9 ಏಪ್ರಿಲ್ 2013, 5:53 IST
ಅಕ್ಷರ ಗಾತ್ರ

ಸೊರಬ: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಭೂಪಟದಲ್ಲಿ ಚಿರಸ್ಥಾನ ಪಡೆದುಕೊಂಡಿರುವ ಸೊರಬ ವಿಧನಸಭಾ ಕ್ಷೇತ್ರ ಮತ್ತೊಂದು ಚುನಾವಣೆಯನ್ನು ಎದುರು ನೋಡುತ್ತಿದೆ.

ಮುಖ್ಯಮಂತ್ರಿಯನ್ನು ಕೊಟ್ಟ ಸೊರಬ ಕ್ಷೇತ್ರ ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ಸುದ್ದಿಗೆ ಗ್ರಾಸವಾಗಿದೆ.
ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಭದ್ರ ಕೋಟೆಯಾಗಿದ್ದ ಸೊರಬ, ಅವರ ವರ್ಣರಂಜಿತ ವ್ಯಕ್ತಿತ್ವಕ್ಕೆ ವೇದಿಕೆಯಾಗಿತ್ತು. ಕಾರಣ, ಅವರು ಸ್ಪರ್ಧಿಸಿದಾಗೆಲ್ಲಾ ಜಯಶಾಲಿಯಾಗಿದ್ದಾರೆ.

1952ರ ಮೊದಲ ಚುನಾವಣೆಯಲ್ಲಿ ಶಿಕಾರಿಪುರ ಮತ್ತು ಸೊರಬ ವಿಧಾನಸಭಾ ಕ್ಷೇತ್ರವಾಗಿದ್ದವು. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಎಚ್. ಸಿದ್ದಯ್ಯ. 20,737 ಮತ ಪಡೆಯುವ ಮೂಲಕ ಕಾಂಗ್ರೆಸ್ ಖಾತೆ ತೆರೆದರು. ಆಗ ಸ್ಪರ್ಧಾ ಕಣದಲ್ಲಿದ್ದ ಪ್ರತಿಪಕ್ಷಗಳು ಸಮಜವಾದಿ, ಭಾರತೀಯ ಜನಸಂಘ ಪಕ್ಷಗಳು. ಅಂದು ಸೊರಬ ಮತ್ತು ಶಿಕಾರಿಪುರ ಮತದಾರರ ಸಂಖ್ಯೆ 1,48,628.

1967ರ ಸಾರ್ವತ್ರಿಕ ಚುನಾವಣೆಯಲ್ಲಿ ಸೊರಬ ಸ್ವತಂತ್ರ ಕ್ಷೇತ್ರವಾಗಿ ಸ್ಪರ್ಧಾ ಕಣವಾಯಿತು. ಈ ಚುನಾವಣೆಯಲ್ಲಿ ಬಂಗಾರಪ್ಪ ಸೋಷಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಎಂ.ಪಿ. ಈಶ್ವರಪ್ಪ ವಿರುದ್ಧ 25,724 ಮತಗಳನ್ನು ಪಡೆಯುವುದರ ಮೂಲಕ ತಮ್ಮ ಮೊದಲ ಗೆಲುವು ದಾಖಲಿಸಿಕೊಂಡರು. ಈ ಚುನಾವಣೆಯಲ್ಲಿ ಅಖಾಡದಲ್ಲಿದ್ದ ಅಭ್ಯರ್ಥಿಗಳು ಇಬ್ಬರು ಮಾತ್ರ.

1967ರಿಂದ 1989ರವರೆಗೂ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೂ, ವಿಜಯಮಾಲೆ ಅವರ ಕೊರಳಿಗೆ ಬಿದ್ದಿದೆ.

1994ರ ವಿಧಾನಸಭಾ ಚುನಾವಣೆಯಲ್ಲಿ ನೂತನ ಪಕ್ಷ ಕರ್ನಾಟಕ ಕಾಂಗ್ರೆಸ್ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದ ಬಂಗಾರಪ್ಪ ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಭಾನು ಚಂದ್ರಪ್ಪ ಅವರನ್ನು 45,641 ಮತಗಳನ್ನು ಪಡೆದು ಪರಾಭವಗೊಳಿಸಿದರು.

ಎಸ್. ಬಂಗಾರಪ್ಪ ಸೊರಬ ಕ್ಷೇತ್ರಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ಕುಮಾರ್ ಬಂಗಾರಪ್ಪ ಅವರನ್ನು 1999ರ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಸಿದರು.  ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪ ಮೊದಲ ಪ್ರಯತ್ನದಲ್ಲೇ ತಮ್ಮ ಸಮೀಪ ಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಕೆ.ಬಿ. ಪ್ರಕಾಶ್ ಅರನ್ನು ಪರಾಭವಗೊಳಿಸಿ ಶಾಸಕರಾದರು.

2004ರ ಚುನಾವಣೆಯ ಸಂದರ್ಭದಲ್ಲಿ ಬಂಗಾರಪ್ಪ ಬಿಜೆಪಿ ಸೇರ್ಪಡೆಗೊಂಡರು. ಆಗ ಕುಮಾರ್‌ಬಂಗಾರಪ್ಪ ಪಿತೃಪರಿಪಾಲನಾ ನಡೆಯನ್ನು ಅನುಸರಿಸದೇ ಕಾಂಗ್ರೆಸ್‌ನಲ್ಲೇ ಉಳಿದುಕೊಂಡರು.

ನಂತರ ಬಂಗಾರಪ್ಪ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ಎರಡನೇಯ ಮಗ ಮಧು ಬಂಗಾರಪ್ಪ ಅವರನ್ನು ಬಿಜೆಪಿಯಿಂದ ಟಿಕೆಟ್ ನೀಡಿ ಕುಮಾರ್ ಬಂಗಾರಪ್ಪ ಅವರ ಎದುರಾಳಿ ಮಾಡಿದರು. ಈ ಚುನಾವಣೆಯಲ್ಲಿ 44,677 ಮತಗಳನ್ನು ಪಡೆಯುವುದರ ಮೂಲಕ ಎರಡನೇ ಬಾರಿಗೆ ಕುಮಾರ್ ಬಂಗಾರಪ್ಪ ಶಾಸಕರಾಗಿ ಆಯ್ಕೆಯಾದರು.

2008ರಲ್ಲಿ ನಡೆದ 13ನೇ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪ್ಪ ಅವರ ಕುಟುಂಬದಲ್ಲಿ 40 ವರ್ಷಗಳ ಕಾಲ ವಶದಲ್ಲಿದ್ದ ಸೊರಬಕ್ಕೆ ತೆರೆಬಿದ್ದಿತು. ಭದ್ರಕೋಟೆ ಮೊದಲ ಬಾರಿಗೆ ಬಿಜೆಪಿಯ ವಶವಾಯಿತು. ಸೊರಬದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಎಚ್. ಹಾಲಪ್ಪ 21,053 ಮತಗಳ ಅಂತರದಿಂದ ಗೆಲುವು ಪಡೆದು, ನಂತರ ಮಂತ್ರಿಯಾದರು.
 

ಕ್ಷೇತ್ರದ ಮತದಾರರ ಸಂಖ್ಯೆ
(16 ಜನವರಿ 2013ರಂತೆ)
ಪುರುಷರು         ಮಹಿಳೆಯರು       ಒಟ್ಟು

87,299         82,676         1,69,985
 

2008ರ ಚುನಾವಣೆಯಲ್ಲಿ ಪಡೆದ ಮತ
ಕ್ರ.ಸಂ.  ಅಭ್ಯರ್ಥಿ                              ಪಕ್ಷ       ಪಡೆದ ಮತಗಳು            

1. ಎಚ್. ಹಾಲಪ್ಪ                            ಬಿಜೆಪಿ       53,552
2. ಎಸ್. ಕುಮಾರ್ ಬಂಗಾರಪ್ಪ          ಕಾಂಗ್ರೆಸ್    32,499
3. ಎಸ್. ಮಧು ಬಂಗಾರಪ್ಪ             ಸಮಾಜವಾದಿ 31,135
4. ಎ.ಅರ್. ಶಿವಲಿಂಗ ಸ್ವಾಮಿ            ಪಕ್ಷೇತರ      2,588
5. ವಿ.ಜಿ. ಪರುಶುರಾಮ                   ಪಕ್ಷೇತರ     1,041
6. ಸುರೇಶ್ ಒಡೆಯರ್                    ಜೆಡಿಎಸ್      981
7. ಕೊಟ್ರೇಶ್ ಎಂ.ಪಿ.                     ಬಿಎಸ್‌ಪಿ       959
8. ಕೆ.ಎಸ್. ಸತ್ಯನಾರಾಯಣ           ಜೆಡಿಯು       753
ಚಲಾವಣೆ ಆದ ಒಟ್ಟು ಮತಗಳು 1,23,219
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT