ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಕರಿಗೆ ಹೈಕೋರ್ಟ್ ಅಂತಿಮ ಗಡುವು

ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರ
Last Updated 9 ಏಪ್ರಿಲ್ 2013, 7:02 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿಯ ಅಕ್ಕಿಹೊಂಡ ಮಾರುಕಟ್ಟೆ ಯನ್ನು ಎಪಿಎಂಸಿ ಯಾರ್ಡಗೆ 6 ತಿಂಗಳಲ್ಲಿ ಸ್ಥಳಾಂತರಿ ಸಬೇಕು ಎಂದು ಹೈಕೋರ್ಟ್‌ನ ಸಂಚಾರಿಪೀಠ ಸೋಮವಾರ ಆದೇಶಿಸಿದೆ.

ಅಕ್ಕಿಹೊಂಡ ಮಾರುಕಟ್ಟೆಯನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸುವ ಕುರಿತು ಸರಕಾರ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಲ್ಲಿನ ವರ್ತಕರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್‌ನ ಏಕಸದಸ್ಯಪೀಠ ಸರಕಾರದ ಅಧಿಸೂಚನೆಯನ್ನು ಎತ್ತಿಹಿಡಿದು, ವರ್ತಕರ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವರ್ತಕರು ವಿಭಾಗೀಯ ಪೀಠದ ಮುಂದೆ ರಿಟ್ ಮೇಲ್ಮನವಿ ಸಲ್ಲಿಸಿದ್ದರು.

ಕಳೆದ ವಿಚಾರಣೆ ಸಂದರ್ಭದಲ್ಲಿ ನಾಲ್ಕು ವಾರಗಳಲ್ಲಿ ಮಾರುಕಟ್ಟೆ ಸ್ಥಳಾಂತರಿಸುವಂತೆ ಸೂಚಿಸಿತ್ತು. ಸೋಮ ವಾರ ಮುಂದುವರಿದ ವಿಚಾರಣೆ ಸಂದರ್ಭದಲ್ಲಿ ವರ್ತಕರ ಪರವಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ ವಕೀಲರು, ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು. ಅಲ್ಲದೇ ಈಗಾಗಲೇ ಶೇ 50 ರಷ್ಟು ವರ್ತಕರು ಸ್ಥಳಾಂತರಗೊಂಡಿದ್ದಾರೆ. ಇನ್ನು ಉಳಿದವರು ಸ್ಥಳಾಂತರ ಗೊಳ್ಳಬೇಕು. ಅಲ್ಲದೇ, ಸರಕಾರದ ಅಧಿಸೂಚನೆ ಸಗಟು ವ್ಯಾಪಾರಸ್ಥರ ಸ್ಥಳಾಂತರ ಕುರಿತಂತೆ ಮಾತ್ರವಿದೆ ಎಂದು ಗಮನ ಸೆಳೆದರು.

`ಅಂಥ ಯಾವುದೇ ವಿಭಾಗ ಮಾಡಿಲ್ಲ. ವ್ಯಾಪಾರ ಎಂದರೆ ಅದು ಸಗಟು ಮತ್ತು ಕಿರುಕುಳ ಎರಡನ್ನೂ ಒಳಗೊಂಡಿರುತ್ತದೆ. ನಿಮ್ಮ ತಪ್ಪುಗಳನ್ನು ಸರಿಪಡಿಸಿ ಕೊಳ್ಳುವ ಪ್ರಯತ್ನ ಮಾಡಬೇಡಿ. ನೀವು ಅಲ್ಲಿಂದ ಸ್ಥಳಾಂತರಗೊಳ್ಳಲೇಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕಾ ಗುತ್ತದೆ' ಎಂದು ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ ಈ ಆದೇಶದ ದಿನಾಂಕದಿಂದ 6 ತಿಂಗಳೊಳಗಾಗಿ ಸ್ಥಳಾಂತರಗೊಳ್ಳದ ವರ್ತಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರಕಾರಕ್ಕೆ ಸೂಚಿಸಿತು.
ಅಲ್ಲದೇ, ಎಲ್ಲ ಅರ್ಜಿದಾರರು 6 ತಿಂಗಳಲ್ಲಿ ಸ್ಥಳಾಂತರಗೊಳ್ಳುವ ಕುರಿತು ಮುಚ್ಚಳಿಕೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ದಿಲೀಪ ಭೋಸ್ಲೆ ಮತ್ತು ಕೇಶವನಾರಾಯಣ ಅವರಿದ್ದ ವಿಭಾಗೀಯ ಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT