ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನದ ತೆಳು ಚಿತ್ರಣ (ಚಿತ್ರ: ಗಲಿ ಗಲಿ ಚೋರ್ ಹೈ (ಹಿಂದಿ)

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರದಂತಹ ತೀವ್ರ ಚರ್ಚೆಯಲ್ಲಿರುವ ಸಂಗತಿಯನ್ನು ವಿಷಯದ ಗಂಭೀರತೆಯ ಆಳಕ್ಕಿಳಿಯದೆ ಹಾಸ್ಯ ಮತ್ತು ವಿಡಂಬನೆಯ ಲೇಪದೊಂದಿಗೆ ತೇಲಿಸಿರುವ ಚಿತ್ರ `ಗಲಿ ಗಲಿ ಚೋರ್ ಹೈ~.

ಸಾಮಾನ್ಯ ಮನುಷ್ಯನೊಬ್ಬ ಭ್ರಷ್ಟ ವ್ಯವಸ್ಥೆಯ ನಡುವೆ ಅನುಭವಿಸುವ ಸಂಕಟಗಳನ್ನು ಹಾಸ್ಯದ ಧಾಟಿಯೊಂದಿಗೆ ನಿರೂಪಿಸುವ ಚಿತ್ರ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ವಿಡಂಬನಾತ್ಮಕವಾಗಿ ತೆರೆದಿಟ್ಟರೂ ಅದರ ವಿರುದ್ಧದ ಹೋರಾಟವನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ವಿಫಲವಾಗುತ್ತದೆ.

ಚಿತ್ರಕಥೆ ಅಣ್ಣಾ ಹಜಾರೆ ಅವರ ಚಳವಳಿಯ ಕಾವಿನಲ್ಲಿ ಹುಟ್ಟಿಕೊಂಡಿದ್ದರೂ ಅದನ್ನು ಎಲ್ಲೂ ಪ್ರತಿಪಾದಿಸುವುದಿಲ್ಲ. ಬದಲಾಗಿ ನಂತರ ಹುಟ್ಟಿಕೊಂಡ ಕಪಾಳಮೋಕ್ಷದ ವಿವಾದವನ್ನು ಸಮರ್ಥಿಸುವಂತೆ ಅಂತ್ಯದಲ್ಲಿ ಬಿಂಬಿಸಲಾಗಿದೆ.
 
ಮನರಂಜನೆ ಚಿತ್ರದ ಮೂಲ ಉದ್ದೇಶವಾಗಿರುವುದರಿಂದ ಹೋರಾಟದ ಅಂಶಗಳನ್ನು ಬದಿಗೊತ್ತಿ ಲಘುವಾಗಿ ಸಾಗುವ ಚಿತ್ರಕಥೆ ಅಂತ್ಯದಲ್ಲಿ ನೀಡುವ ಸಂದೇಶ ನಕಾರಾತ್ಮಕ ಮತ್ತು ಸಕಾರಾತ್ಮಕವಾದ ಎರಡೂ ಮುಖಗಳನ್ನು ಧ್ವನಿಸುತ್ತದೆ (ಕಥೆ: ಮೋಮುಕ್ಷು ಮುದ್ಗಲ್).

ಇಡೀ ಚಿತ್ರ ಸಾಗುವುದು ಒಂದು ಮುರುಕು ಟೇಬಲ್ ಫ್ಯಾನ್ ಸುತ್ತ. ಕಳುವಾದ ಟೇಬಲ್‌ಫ್ಯಾನ್ ಒಂದನ್ನು ಮರಳಿ ಪಡೆಯಲು ಪೊಲೀಸ್ ಠಾಣೆ, ಕೋರ್ಟ್ ಕಚೇರಿ ಹೀಗೆ ಸುತ್ತಾಡುವ ನಾಯಕನ (ಅಕ್ಷಯ್ ಖನ್ನಾ) ಚಿತ್ರಣ ವಾಸ್ತವ ಸಮಾಜದಲ್ಲಿನ ವ್ಯವಸ್ಥೆಯ ವ್ಯಂಗ್ಯ. ಕೊನೆಗೆ ತನ್ನದಲ್ಲದ ಫ್ಯಾನ್‌ನಿಂದ ಮುಕ್ತಿಪಡೆಯಲು ಆತ ಪಡುವ ಸಾಹಸಗಳು ಪೇಲವ ಎನಿಸುವ ಚಿತ್ರಕಥೆಗೆ ಲವಲವಿಕೆ ನೀಡುತ್ತದೆ.

ನಾಯಕ ವೃತ್ತಿಯಲ್ಲಿ ಬ್ಯಾಂಕ್ ಕ್ಯಾಶಿಯರ್. ಸಮಾಜದ ಭ್ರಷ್ಟತೆಯನ್ನು ಅರಿಯದ ಅಮಾಯಕ. ಜೊತೆಗೆ ರಾಮಲೀಲಾ ನಾಟಕದಲ್ಲಿ ಹನುಮಂತನ ಪಾತ್ರಧಾರಿ. ಆತನ ಮನೆಯಲ್ಲಿ ತನ್ನ ಪಕ್ಷದ ಕಚೇರಿ ತೆರೆಯಬೇಕು ಎಂದುಕೊಳ್ಳುವ ಅಲ್ಲಿನ ಶಾಸಕನ (ಮುರಳಿ ಶರ್ಮಾ) ಬಯಕೆಗೆ ಆತ ಒಪ್ಪಿಕೊಳ್ಳುವುದಿಲ್ಲ.
 
ಆಗ ಹುಟ್ಟಿಕೊಳ್ಳುವುದೇ ಫ್ಯಾನ್ ಕಳ್ಳತನದ ಕಥೆ. ಶಾಸಕನ ತಮ್ಮನಿಗೂ ನಾಯಕ ವೈರಿ. ನಾಟಕದಲ್ಲಿ ರಾಮನ ಪಾತ್ರ ಮಾಡುವ ಆತನಿಗಿಂತ ಹನುಮಂತನ ಪಾತ್ರಧಾರಿ ನಾಯಕನಿಗೇ ಹೆಚ್ಚಿನ ಚಪ್ಪಾಳೆ. ಹೀಗಾಗಿ ತನ್ನದಲ್ಲದ ತಪ್ಪಿಗೆ ನಾಯಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾನೆ. ಬಾಂಬ್ ಸ್ಫೋಟದ ಆರೋಪದಲ್ಲೂ ಜೈಲುಪಾಲಾಗುವ ನಾಯಕನನ್ನು ರಕ್ಷಿಸಲು ಆತನ ತಂದೆ ತನ್ನ ಮನೆಯನ್ನೇ ಶಾಸಕನಿಗೆ ಮಾರುವಂತಾಗುತ್ತದೆ.

ಎಲ್ಲಾ ಸಂಕಟಗಳ ಮಧ್ಯೆ ಒದ್ದಾಡುವ ನಾಯಕನ ಸಂಸಾರದ ತೆಳುವಾದ ಚಿತ್ರಣವೂ ಇಲ್ಲಿದೆ. ಭಾವನಾತ್ಮಕವಾಗಿ ತಟ್ಟದ ಈ ಸನ್ನಿವೇಶಗಳಲ್ಲಿ ಪತ್ನಿ ಪಾತ್ರಧಾರಿ ಶ್ರೀಯಾ ಶರಣ್ ಅಭಿನಯಕ್ಕೆ ಹೆಚ್ಚಿನ ಅವಕಾಶವಿಲ್ಲ. ಇಬ್ಬರ ನಡುವೆ ಬಿರುಕು ಮೂಡಲು ಕಾರಣವಾಗುವ ಪೇಯಿಂಗ್ ಗೆಸ್ಟ್ ಮುಗ್ಧಾ ಗೋಡ್ಸೆ ಚಿತ್ರದ ಮತ್ತೊಂದು ಸ್ತ್ರೀ ಪಾತ್ರವಷ್ಟೆ. ಚಿತ್ರಕ್ಕೊಂದು ಐಟಂ ಸಾಂಗ್ ಇರಬೇಕೆನ್ನುವ ಅಲಿಖಿತ ನಿಯಮದಂತೆ ಅನಗತ್ಯವಾಗಿ ತುರುಕಿರುವ ಹಾಡಿಗೆ ವೀಣಾ ಮಲಿಕ್ ಹೆಜ್ಜೆ ಹಾಕಿದ್ದಾರೆ.

ಸಾಮಾನ್ಯ ಮನುಷ್ಯ ಭ್ರಷ್ಟವ್ಯವಸ್ಥೆಯಲ್ಲಿ ಸಮಸ್ಯೆಯ ತುತ್ತತುದಿಗೆ ತಲುಪಿದಾಗ ಸಿಡಿದೇಳುತ್ತಾನೆಂಬ ಸಂದೇಶ ನೀಡಿದ್ದಾರೆ ನಿರ್ದೇಶಕ ರೂಮಿ ಜಾಫ್ರಿ. ಇದು ಹೋರಾಟಗಳ ಬಿಸಿ ತಣ್ಣಗಾದ ಬಳಿಕ ನಡೆದ ಕಪಾಳಮೋಕ್ಷ ಪ್ರಕರಣದ ಪ್ರಭಾವವಷ್ಟೆ.

ಅನ್ನುಕಪೂರ್, ಸತೀಶ್ ಕೌಶಿಕ್, ಅಖಿಲೇಂದ್ರ ಮಿಶ್ರಾ, ವಿಜಯ್ ರಾಜ್ ಪಾತ್ರಗಳು ಗಟ್ಟಿತನವಿಲ್ಲದ ಚಿತ್ರಕಥೆಗೆ ಜೀವ ನೀಡುತ್ತವೆ. ಅಕ್ಷಯ್ ಖನ್ನಾ ಅಭಿನಯ ಚಿತ್ರದಲ್ಲಿನ ಹಲವು ವೈಫಲ್ಯಗಳನ್ನು ಸ್ವಲ್ಪಮಟ್ಟಿಗೆ ಮರೆಮಾಚಿಸುತ್ತದೆ. ಅನುಮಲಿಕ್ ಹಿನ್ನೆಲೆ ಸಂಗೀತ ಆಪ್ತವೆನಿಸುತ್ತದೆ. ಭೋಪಾಲ್‌ನ ಬದುಕನ್ನು ಗುರುರಾಜ್ ಜೋಯಿಸ್ ಕ್ಯಾಮೆರಾ ಸಹಜವಾಗಿ ತೆರೆದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT