ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನದ ವ್ಯಾಖ್ಯಾನ

ಕಾವ್ಯಕಾರಣ
Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಲ್ಲ ಮತ್ತು ಕಲ್ಲು

ಅದೊಂದು ದಿನ ಗೆಳತಿ ಅಂದಳು
ಕಲ್ಲಾದ ಅಹಲ್ಯೆಯ ಮೈಯ ನೇವರಿಸಿ
ಜೀವಸೆಲೆಯೊಡೆಸಿ ಬದುಕನುದ್ಧರಿಸಿದನು
ಶ್ರಿರಾಮ, ಕರುಣಾಸಾಗರ, ಸದ್ಗುಣದಾಗರ
ಉಘೇ ಉಘೇ ಎಂದಿತು ಜನಸಾಗರ
ಜಗಕೆಲ್ಲಾ ಹೆಮ್ಮೆಯೋ ಹೆಮ್ಮೆ

ಆದರಿನ್ನೊಮ್ಮೆ
ಇದೇ ಮಹಾತುಮ ಉಕ್ಕುವ ಜೀವಗಳನು ಹೊತ್ತ
ಗರ್ಭಸ್ಥೆ ಮಂದಸ್ಮಿತೆ
ಜೀವನೋತ್ಸಾಹದಲ್ಲಿ ವಿಜೃಂಭಿಸುವ ಸತಿ ಸೀತೆ
ಯನ್ನು ಕಾಡುಪಾಲಾಗಿಸಿ ಕೈ ತೊಳೆದನೀ ಸೀತಾರಾಮ
ಕರುಣಾಳು ರಾಘವನಲಿ ತಪ್ಪಿಲ್ಲ 
ಎಂದತ್ತಳು ಮಾತೆ ಸೀತೆ ಅಲ್ಲವೇನೆ?

ಈ ರಾಮಣ್ಣರೇ ಹೀಗೆ ಕಣೇ
ನಿಜಸತಿಗೆ ಕಲ್ಲಾಗುವ ಇವರು
ಪರಸತಿಗೆ ಮಾತ್ರ ಬೆಲ್ಲವಾಗುತ್ತಾರೆ ಹೌದಲ್ಲವೇನೆ?
ಎಂದಳೂ ಗೆಳತಿ ಮತ್ತೆ

ಏನ ಹೇಳಲಿ ನಾನು? ಹೇಗೆ ಹೇಳಲಿ ಹೇಳಿ!
ಎದುರಿಗೇ ಕುಳಿತಿದ್ದ ಗಂಡ!!
ನನಗೊಂದು ಮುಖ, ತನ್ನ ಕಛೇರಿ ಕನ್ಯೆಗೊಂದು
ಮುಖ ಹೊತ್ತ ಗಂಡ-ಭೇರುಂಡ!!!
ನಾನೇನು ಹೇಳುವೆನೋ ಎಂದು
ನನ್ನೆಡೆಗೇ ನೋಡುತ್ತ ಪುಸಲಾವಣೆಯ
ನಗೆ ನಕ್ಕಾ, ಮಹಾ ಪಕ್ಕಾ!!
ನನಗೋ ಎದೆ ಒಳಗೇ ಪುಕಪುಕಾ!

ಒಂದು ಗಳಿಗೆ ತಡೆದೆ,
ಸೀಮೆ ಎಣ್ಣೆಗೋ ಎಟುಕದ ದರ
ನಮ್ಮೂರ ಕೆರೆಬಾವಿಗಳಿಗೆ ಎಂದೆಂದೂ
ನೀರಿನ ಬರ, ಹಸಿರೆಲೆಯೂ ಇಲ್ಲದ
ಬಯಲು ಸೀಮೆಯ ನನಗೆ
ಇವ ಕಾಡಿಗಟ್ಟುವ ಭಯವೂ ಇಲ್ಲ ನೋಡಿ
ಹೀಗಾಗಿ  ನೂರಕ್ಕೆ ನೂರು ನಿಜ ಕಣೇ 
ಎಂದೆ
ಅವನೆಡೆಗೆ ನೋಡದೇ ಧೀರಳಾಗಿ!!

-ಶಶಿಕಕಲಾ ವೀರಯ್ಯಸ್ವಾಮಿ

ಪುರಾಣಪ್ರತೀಕಗಳ ಮೂಲಕ ಮಾತನಾಡುವುದು ನಮ್ಮ ಕಾವ್ಯದ ಅಭಿವ್ಯಕ್ತಿ ಕ್ರಮಗಳಲ್ಲಿ ಒಂದು ಮುಖ್ಯವಾದ ಕ್ರಮ. ಕವಿಗಳು ಪುರಾಣಪ್ರತೀಕಗಳನ್ನು ಯಾಕೆ ಎತ್ತಿಕೊಳ್ಳುತ್ತಾರೆ? ನಮ್ಮ ಪರಂಪರೆ ಮತ್ತದರ ಮೌಲ್ಯಕೋಶ, ಚರಿತ್ರೆ ಮತ್ತದರ ಚಾರಿತ್ರ್ಯ ಈ ಎಲ್ಲವನ್ನು ಮರುಪರಿಶೀಲಿಸುವ ಉದ್ದೇಶದಿಂದ ಎತ್ತಿಕೊಳ್ಳುತ್ತಾರೆ. ಇದು ಪುರಾಣದ (ಪುರಾತನ, ಪುರಾ-ನವದ) ಮರುಪರಿಶೀಲನೆ ಮಾತ್ರ ಅಲ್ಲ; ವರ್ತಮಾನದ ವ್ಯಾಖ್ಯಾನವೂ ಹೌದು. ಪುರಾಣದ ಪಾತ್ರ ಪ್ರಸಂಗಗಳು ಕೇವಲ ಪಾತ್ರ-ಪ್ರಸಂಗಗಳು ಮಾತ್ರ ಅಲ್ಲ.

ಅವು ಪ್ರತೀಕಗಳು, ಸಂಕೇತಗಳು. ಹೀಗಾಗಿ ಪುರಾಣ ಸಂಕೇತಗಳ ಮೂಲಕ ಮಾತಾಡುವುದೆಂದರೆ ಪುರಾಣ-ಚರಿತ್ರೆ-ವರ್ತಮಾನ ಈ ಮೂರನ್ನೂ ಒಟ್ಟಿಗೆ ಮುಖಾಮುಖಿ ಆಗುವುದೂ ಹೌದು. ಹೀಗೆ ಪುರಾಣ, ಚರಿತ್ರೆ, ವರ್ತಮಾನ ಈ ಮೂರನ್ನೂ ಜಾಲಾಡಿಸುವ ಕವಿತೆ ಶಶಿಕಲಾ ವೀರಯ್ಯಸ್ವಾಮಿ ಅವರ `ಬೆಲ್ಲ ಮತ್ತು ಕಲ್ಲು'.

ನಮ್ಮ ಪುರಾಣ, ಚರಿತ್ರೆಗಳಲ್ಲಿ ಶ್ರಿರಾಮತ್ವ ಎಂದರೆ ಇದು ಎಂದು ಏನನ್ನು ಬಿಂಬಿಸಲಾಗಿದೆಯೊ ಅದಕ್ಕಿಂತ ಭಿನ್ನವಾದ ಶ್ರಿರಾಮತ್ವವನ್ನು ಈ ಕವಿತೆ ಮಂಡಿಸುತ್ತದೆ. ಯಾರನ್ನು ನಮ್ಮ ಪರಂಪರೆ ಮರ‌್ಯಾದಾ ಪುರುಷೋತ್ತಮ, ಸೀತಾರಾಮ, ಕರುಣಾ ಸಾಗರ, ಸದ್ಗುಣದಾಗರ, ಶ್ರಿರಾಮಚಂದ್ರ ಇತ್ಯಾದಿಯಾಗಿ ಹೊಗಳುತ್ತ ಬಂದಿದೆಯೊ ಆತನ ಜನ್ಮವನ್ನೆ ಈ ಕವಿತೆಯು ಜಾಲಾಡಿಸುತ್ತದೆ. ಹಾಗೆಯೆ ಇಂದಿನ ರಾಮಣ್ಣರ ಜನ್ಮವನ್ನೂ ಇದು ಜಾಲಾಡಿಸುತ್ತದೆ. ಹಾಗೆಯೆ ರಾಮತ್ವ, ರಾವಣತ್ವ ಎಂಬಂತೆ ಕಪ್ಪು ಬಿಳುಪಾಗಿ ಎರಡು ತೆರನ ವ್ಯಕ್ತಿತ್ವಗಳು ಸಮಾಜದಲ್ಲಿ ಇರುವುದಿಲ್ಲ; ರಾಮತ್ವ, ರಾವಣತ್ವಗಳು ಬೇರೆ ಬೇರೆ ವ್ಯಕ್ತಿಗಳಲ್ಲಿ ಇರುವ ಎರಡು ಪ್ರತ್ಯೇಕ ವ್ಯಕ್ತಿತ್ವಗಳಲ್ಲ; ಅವು ಒಬ್ಬನಲ್ಲೆ ಇರಬಹುದಾದ ಗುಣಗಳು. ಸಂಪೂರ್ಣ ಒಳ್ಳೆಯವರೂ - ಸಂಪೂರ್ಣ ಕೆಟ್ಟವರೂ ಆಗಿ ವ್ಯಕ್ತಿಗಳು ಇರುವುದಿಲ್ಲ; ಒಳಿತು ಕೆಡುಕು ಸ್ವಭಾವಗಳೆರಡೂ ಒಬ್ಬರಲ್ಲೆ ಇರಬಹುದು ಎಂಬ ಸಂಗತಿಯನ್ನು ಈ ಕವಿತೆ ಮಂಡಿಸುತ್ತದೆ.

ಕಲ್ಲಾದ ಅಹಲ್ಯೆಗೆ ವಿಮೋಚನೆ ನೀಡುವವನೂ ರಾಮನೆ, ಬಿಮ್ಮನಸಿಯಾದ ಸೀತೆಯನ್ನು ಕಾಡಿಗಟ್ಟಿದವನೂ ರಾಮನೆ! ನಿಜಸತಿಗೆ ಕಲ್ಲಾಗುವ ಇವರು ಪರಸತಿಗೆ ಮಾತ್ರ ಬೆಲ್ಲವಾಗುತ್ತಾರೆ! ಯಾಕೆ? ಇಂಥ ಪ್ರಶ್ನೆಯನ್ನು ಎತ್ತುವ ಮೂಲಕ ಕವಿತೆ ಈ ರಾಮಣ್ಣರೇ ಹೀಗೆ ಕಣೆ ಎಂದು ವರ್ತಮಾನದ ಗಂಡಸರ ಇಬ್ಬಂದಿ ವ್ಯಕ್ತಿತ್ವವನ್ನೂ ವಿಡಂಬಿಸುತ್ತದೆ. ಇಂತಹ ರಚನೆಗಳಲ್ಲಿ ವರ್ತಮಾನ, ಪುರಾಣ, ಚರಿತ್ರೆಗಳೆಲ್ಲ ಕಲಸಿಹೋಗುತ್ತವೆ. ಅಂದರೆ ಹೆಣ್ಣಿಗೆ ಪುರಾಣವೆಂದರೆ ಎಂದೋ ಆಗಿಹೋದ ಸಂಗತಿ ಅಲ್ಲ. ಅದು ಇಂದಿಗೂ ಆಗುತ್ತಿರುವ ಸಂಗತಿ. ಹೀಗೆ ಹೆಣ್ಣಿನ ಪಾಲಿಗೆ ಒಲೆಗಳು ಬದಲಾಗುತ್ತಿದ್ದರೂ ಉರಿ ಬದಲಾಗಿಲ್ಲದ ಸ್ಥಿತಿಯನ್ನು ಈ ಕವಿತೆ ಸಮರ್ಥವಾಗಿ ಮಂಡಿಸುತ್ತದೆ.

ಇಬ್ಬರು ಗೆಳತಿಯರ ನಡುವೆ ಗಂಡನ ಉಪಸ್ಥಿತಿಯಲ್ಲೆ ನಡೆಯುವ ಸಂವಾದದ ಧಾಟಿಯಲ್ಲಿ ಈ ಕವಿತೆ ರಚನೆಯಾಗಿದೆ. ಎದುರಿಗೇ ಕುಳಿತಿರುವ ಗಂಡನಿಗೆ (ಕಛೇರಿ ಕನ್ಯೆಗೊಂದು ಮುಖ ಮತ್ತು ತನ್ನ ಹೆಂಡತಿಗೆ ಇನ್ನೊಂದು ಮುಖ ತೋರಿಸುವ ಗಂಡನಿಗೆ) ಭಯಪಡದೆ, ಅವನೆಡೆಗೆ ನೋಡದೆ  `ಧೀರಳಾಗಿ'  ಮಾತಾಡುವ ಹೆಣ್ಣನ್ನು ಈ ಕವಿತೆ ಚಿತ್ರಿಸುತ್ತದೆ. ಹೆಣ್ಣಿಗೆ ದನಿ ಮೂಡಿರುವ ಸ್ಥಿತಿಯ ಚಿತ್ರಣವಿದು.

ಗಂಡು ಮತ್ತು ಹೆಣ್ಣು ಇಬ್ಬರಲ್ಲು ದಾಂಪತ್ಯದಲ್ಲಿ ಲೈಂಗಿಕ ನಿಷ್ಠೆ ಇರಬೇಕು; ಒಡಕಿಲ್ಲದ ವ್ಯಕ್ತಿತ್ವ ಇರಬೇಕು ಎಂಬುದು  `ಕಲ್ಚರಿಗರ' ಒಂದು ಅನಾದಿ ಅಪೇಕ್ಷೆ. ಇದನ್ನು ನಿರಂತರ ಹೆಣ್ಣು ಮತ್ತು ಗಂಡು ಇಬ್ಬರೂ ಉಲ್ಲಂಘಿಸುತ್ತ ಬಂದಿದ್ದಾರೆ ಎಂಬುದು ಪುರಾಣವೂ ಹೌದು, ಚರಿತ್ರೆಯೂ ಹೌದು, ವರ್ತಮಾನವೂ ಹೌದು. ಗಂಡನಿಗೆ ಹೆಂಡತಿ ವಂಚಿಸಬಾರದು, ಶೀಲ-ಪಾತಿವ್ರತ್ಯ ಕಾಪಾಡಿಕೊಳ್ಳಬೇಕು ಎಂದು ನೀತಿ ಹೇಳುವ ಕಾವ್ಯವೇ ನಮ್ಮ ಸಾಹಿತ್ಯ ಚರಿತ್ರೆಯ ತುಂಬ ತುಂಬಿರುವಾಗ; ಆಧುನಿಕ ಮಹಿಳಾ ಕಾವ್ಯ ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT