ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತುಲ ಕಥಾನಕಗಳ ಗಮನಾರ್ಹ ತಂತ್ರಗಾರಿಕೆ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಮಹಾಕವಿ ಕಾಳಿದಾಸನ `ಅಭಿಜ್ಞಾನ ಶಾಕುಂತಲ~ ತನ್ನ ಸಂಕೀರ್ಣ ವಸ್ತುವಿನ ಕಾರಣದಿಂದಾಗಿ ನಿರಂತರವಾಗಿ ಚರ್ಚೆಗೆ, ಮರುವ್ಯಾಖ್ಯಾನಕ್ಕೆ ಒಳಗಾಗುತ್ತಲೇ ಬಂದಿದೆ. ಕಾಳಿದಾಸ ಸಂಸ್ಕೃತ ನಾಟಕದ ಚೌಕಟ್ಟಿನಲ್ಲಿ ಶಾಕುಂತಲವನ್ನು ಸುಖಾಂತ್ಯಗೊಳಿಸಿದರೂ ಅಭಿಜ್ಞಾನ-ಉಂಗುರದ ಪ್ರತಿಮೆಯ ಮೂಲಕ ವಿಷಾದವನ್ನು ಹುಟ್ಟುಹಾಕುತ್ತಲೇ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಕನ್ನಡದಲ್ಲಿ ಬಸಪ್ಪ ಶಾಸ್ತ್ರಿಗಳು ಕಾಳಿದಾಸನ ನಾಟಕವನ್ನು ಕನ್ನಡದ್ದೇ ಎನ್ನುವಷ್ಟರ ಮಟ್ಟಿಗೆ ಭಾಷಾಂತರ ಮಾಡಿದ್ದಾರೆ. ವೈದೇಹಿ ಅವರ ಕಥೆಯನ್ನು ಆಧರಿಸಿದ ಶಾಕುಂತಲೆಯೊಂದಿಗೆ ಒಂದು ಸಂಜೆ ನಾಟಕವಾಗಿದೆ. ಹಿಂದಿಯಲ್ಲಿ ಮೋಹನ್‌ರಾಕೇಶ್ ಅವರ `ಆಷಾಢ್ ಕ ಏಕ್ ದಿನ್~, ಕನ್ನಡದಲ್ಲಿ `ಆಷಾಢದ ಒಂದು ದಿನ~ವಾಗಿ ಪ್ರಯೋಗಗೊಂಡಿದೆ. ಇದರ ಸಾಲಿನಲ್ಲಿ ಏಪ್ರಿಲ್ 27ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗವಾದ ಕೆ.ವೈ.ನಾರಾಯಣಸ್ವಾಮಿ ಅವರ `ಅನಭಿಜ್ಞ ಶಾಕುಂತಲ~ ಹೊಸ ಸೇರ್ಪಡೆಯಾಗಿದೆ.
ಹೊಸ ನಾಟಕಗಳು ರಚನೆಯಾಗುತ್ತಿಲ್ಲ, ಹೊಸ ತಂಡ, ಪ್ರಯೋಗಗಳು ಆಗುತ್ತಿಲ್ಲ ಎನ್ನುವ ಹಳಹಳಿಕೆಯ ಮಾತುಗಳು ಕೇಳಿಬರುತ್ತಿರುತ್ತವೆ. ಇದಕ್ಕೆ ಅಪವಾದವೆನ್ನುವಂತೆ ಹೊಸ ಅಲೋಚನೆಗಳನ್ನು ಹೊತ್ತು `ಪ್ರಸಂಗ~ ರಂಗ ಸಂಘಟನೆ ಜನ್ಮ ತಾಳಿದೆ. ತಂಡವೇ ಹೇಳಿಕೊಂಡಿರುವಂತೆ ನಾಟಕ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಜಗತ್ತಿನ ವೈವಿಧ್ಯಮಯ ಪ್ರಸಂಗಗಳಿಂದ ಜನತೆಯ ಮುಂದೆ ಅನಾವರಣಗೊಳ್ಳುವುದು ಇದರ ಮೂಲ ಉದ್ದೇಶವಾಗಿದೆ. `ಹೊಸ ಚಿಗುರು ಹಳೇ ಬೇರು ಕೂಡಿದರೆ ಮರ ಸೊಗಸು~ ಎಂಬಂತೆ ರಂಗಭೂಮಿಗೆ ಸಂಬಂಧಿಸಿದ ಎಲ್ಲಾ ಹಿರಿಯರೊಂದಿಗೆ ಹೊಸ ತಲೆಮಾರಿನ ಕಲಾವಿದರನ್ನು ಒಟ್ಟುಗೂಡಿಸಿ ಪ್ರಸಂಗ ತಂಡವು ಜನ್ಮ ತಾಳಿದೆ. ತನ್ನ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದೆ. ರಂಗಭೂಮಿ ನಿಂತ ನೀರಾಗದೆ ಚಲನಶೀಲತೆಯನ್ನು ಉಳಿಸಿಕೊಂಡಿದೆ ಎಂಬುದಕ್ಕೆ `ಪ್ರಸಂಗ~ದ `ಅನಭಿಜ್ಞ ಶಾಕುಂತಲಾ~ ನಾಟಕ ಸಾಕ್ಷಿಯಂತೆ ಕಾಣುತ್ತದೆ.

ಕಾಶ್ಮೀರ ದರ್ಶನದಲ್ಲಿ ಅಭಿಜ್ಞಾನ, ಪ್ರತ್ಯಭಿಜ್ಞಾನ ಹಾಗೂ ಅನಭಿಜ್ಞಾನಗಳು ಭಾರತೀಯ ದರ್ಶನಕ್ಕೆ ಮಹತ್ವದ ಕಾಣಿಕೆಯನ್ನು ಕೊಟ್ಟಿವೆ. ಈ ನೆಲೆಯಲ್ಲಿ ಶಾಕುಂತಲ ನಾಟಕವು ಅಭಿಜ್ಞಾನವಾಗಿ ಅರಿವು, ಮರೆವು ಹಾಗೂ ಕುರುಹಿನ ಮೂರು ತತ್ವದ ಜಾಡಿನಲ್ಲಿರುವಂತದ್ದು. ಇದನ್ನು ದೇಶಿಜ್ಞಾನಗಳ ಪರಂಪರೆಯ ನೆನಪಿನಲ್ಲಿ ಕೆ.ವೈ. ನಾರಾಯಣಸ್ವಾಮಿ ಅವರು ಅನಭಿಜ್ಞ ಶಾಕುಂತಲವಾಗಿ ರಚಿಸಿದ್ದಾರೆ.

ಬಾಲ್ಯದಲ್ಲಿ ತಮ್ಮ ಊರಿನ ಬೀರಪ್ಪ ಎಂಬ ದೇಶಿ ಕಲಾವಿದ ಹುಣ್ಣಿಮೆಯಲ್ಲಿ ಊರಿನ ಹುಡುಗರಿಗೆಲ್ಲಾ ಕೋಲಾಟವನ್ನು ಕಲಿಸುತ್ತಾ ಹಾಡಿದ ಒಂದು ತೆಲುಗು ಕೋಲಾಟದ ಹಾಡು ಈ ನಾಟಕಕ್ಕೆ ಪ್ರೇರಣೆಯಾಗಿದೆ. ಇದರ ಒಂದು ಸಣ್ಣ ಎಳೆಯನ್ನು ಹಿಡಿದುಕೊಂಡು ಕಾಳಿದಾಸನ ಬದುಕು ಮತ್ತು ನಾಟಕಗಳನ್ನು ನಾಟಕಕಾರರು ಸಮಕಾಲೀನ ಕಾಣಿಕೆಯ ಮೂಲಕ ಮರುವ್ಯಾಖ್ಯಾನಕ್ಕೆ ಒಳಪಡಿಸಿದ್ದಾರೆ.

ರಾಜಪ್ರತಿನಿಧಿಗಳು ತೆರಿಗೆ ಸಂಗ್ರಹಕ್ಕೆ ಬಂದಾಗ ಅವರ ಮನ ತಣಿಸಲು ಕಾಳಿದಾಸ ಕಟ್ಟಿದ ಹೊಸ ಕಾವ್ಯ `ಋತು ಸಂಹಾರ~ವಾಗಿದೆ. ಕಾಳಿದಾಸ ಮಲ್ಲಿಕಾಳ ನಡುವಿನ ಪ್ರೇಮ `ರಘುವಂಶ~ವಾಗಿ; ಗಂಧರ್ವಳು ಮತ್ತು ಕಾಳಿದಾಸನ ನಡುವಿನ ಸಂಬಂಧ `ಕುಮಾರ ಸಂಭವ~ವಾಗಿ; ಕಾಳಿದಾಸ ಮತ್ತು ಗಂಧರ್ವಳ ನಡುವಿನ ವಿಪ್ರಲಂಬವೇ `ಮೇಘದೂತ~ವಾಗಿ; ಕಾಳಿದಾಸನನ್ನು ಅಗಲಿದ ಮಲ್ಲಿಕಾಳು `ಶಾಕುಂತಲ~ವಾಗಿ; ಗಂಧರ್ವಳ ಮೂಲಕ ವಿಕ್ರಮೋರ್ವಶಿಯವಾಗಿ ಒಟ್ಟು ನಾಟಕದ ಬಂಧವು ಕವಿ ಕಾಳಿದಾಸನ ಜೀವನದೊಂದಿಗೆ ಅವನ ನಾಟಕಗಳನ್ನು ವರ್ತುಲವಾಗಿ ಬೆಸೆಯುವ ತಂತ್ರಗಾರಿಕೆಯಂತೆ ಇದು ಕಾಣುತ್ತದೆ. ನಾಟಕಕಾರರು ನಾಟಕೀಯತೆಗಿಂತ ಕಥನಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಟ್ಟಂತಿದೆ. ಹೀಗಾಗಿ ನಾಟಕವು ತುಸು ದೀರ್ಘವಾಗಿದೆ.

ಕಾಳಿದಾಸನಾಗಿ ಪವನ್ ಡಿ.ಪೈ. ಕವಿಯಲ್ಲಿ ಕಾಣುವ ಜೀವನ ಪ್ರೀತಿ, ಹರ್ಷೋಲ್ಲಾಸಗಳು ಕ್ಷೀಣವಾಗಿ ವಿಷಾದ ದಾಟಿಸುವಂತೆ ನಟಿಸಿದ್ದಾರೆ. ಕಾಳಿದಾಸ ಮತ್ತು ಗಂಧರ್ವಳ ನಡುವಿನ ಶೃಂಗಾರದ ಸಂದರ್ಭದಲ್ಲಿ ಸಹಜ ಲವಲವಿಕೆಯಿಂದ ನಟಿಸಬಹುದಾಗಿತ್ತು. ಮಲ್ಲಿಕಾ ಪಾತ್ರದಲ್ಲಿ ಪ್ರಿಯ ಕೆರ್ವಾಶೆ ಹಾಗೂ ನೇಮಿಚಂದ್ರ ಎಂ.ಡಿ. ಅತ್ಯಂತ ಲವಲವಿಕೆಯಿಂದ ನಟಿಸಿದ್ದಾರೆ. ಗಂಧರ್ವ ಕನ್ಯೆಯಾಗಿ ಗೀತಾ ಸುರತ್ಕಲ್ ಅವರ ಅಭಿನಯ ಮೋಹಕ. ಸೂತ್ರಧಾರನಾಗಿ ಬಿ.ಜಿ.ರಾಮಕೃಷ್ಣ, ನಟಿಯಾಗಿ ಬೃಂದಾ ಅವರ ಅಭಿನಯ ಸ್ತುತ್ಯಾರ್ಹ. ಗಣೇಶ ಮತ್ತು ಹಾಡಿನ ನಾಯಕನಾಗಿ ರಾಜಕುಮಾರ್ ಅವರ ಅಭಿನಯ ಪಾತ್ರಕ್ಕೆ ಮೆರಗು ತಂದಿದೆ. ಭೋಜರಾಜನಾಗಿ ರಾಘವೇಂದ್ರ ಪ್ರಸಾದ್, ಮುದುಕಿಯಾಗಿ ಜಯಶ್ರೀ ಶ್ರೀನಿವಾಸ, ರಾಜ ಪಂಡಿತನಾಗಿ ಚಂದ್ರು, ಭಟನಾಗಿ ವಾಸುದೇವ ಮೂರ್ತಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.


ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಕಾಶ್ ಪಿ. ಶೆಟ್ಟಿ ಗೆಳೆಯರೊಡಗೂಡಿ `ರಂಗಮಂಟಪ~ದ ಮೂಲಕ `ಗಾಂಧೀ ಬಂದ~ ನಾಟಕವನ್ನು ನಿರ್ದೇಶಿಸಿದ್ದರು. ಈಗ ಇವರು `ಅನಭಿಜ್ಞ ಶಾಕುಂತಲ~ವನ್ನು ಎಲ್ಲರೂ ಮೆಚ್ಚುವಂತೆ ನಿರ್ದೇಶಿಸಿದ್ದಾರೆ. ನಾಟಕದಲ್ಲಿ ಅಭಿನಯಿಸಿದ ಹೆಚ್ಚಿನ ಕಲಾವಿದರು ಇದೇ ಮೊದಲು ಬಣ್ಣ ಹಚ್ಚಿದ್ದರೂ ಅನನುಭವವೇನೂ ಕಾಣುವುದಿಲ್ಲ. ನಾಟಕದ ಒಟ್ಟು ಆಕೃತಿಯನ್ನು ಜತನದಿಂದ ನಿರ್ದೇಶಿಸಿರುವ ಪ್ರಕಾಶ್ ಪಿ. ಶೆಟ್ಟಿ ಪ್ರತಿ ದೃಶ್ಯವನ್ನು ದೃಶ್ಯಕಾವ್ಯವಾಗಿ ನಿರ್ದೇಶಿಸಿದ್ದಾರೆ. ಮಲ್ಲಿಕಾ, ಗಂಧರ್ವ ಕನ್ಯೆ, ಭೋಜರಾಜನ ಮಗಳ ಪಾತ್ರಗಳಿಗೆ ಇಬ್ಬಿಬ್ಬರು ಕಲಾವಿದರನ್ನು ಬಳಸಿಕೊಂಡಿರುವುದು ಪ್ರಶಂಸನೀಯ. ಚಂಪಾಶೆಟ್ಟಿ ಮತ್ತು ವೇಣು ನೆಪೋಲಿಯನ್ ನಿರ್ದೇಶನದಲ್ಲಿ ಸಾಥ್ ನೀಡಿದ್ದಾರೆ. ನಾರಾಯಣ ರಾಯಚೂರು ಅವರು ನಾಟಕಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮೇಳದಲ್ಲಿ ರಾಮಚಂದ್ರ ಹಡಪದ ಮತ್ತು ಸಂಗಡಿಗರ ಹಾಡುಗಳು ನಾಟಕವನ್ನು ಗೀತ ನಾಟಕವನ್ನಾಗಿಸಿದೆ. `ಎದೆಯಲ್ಲಿ ಚಂದನ~, `ಕನ್ನಡಿಯೇ ರನ್ನಗನ್ನಡಿಯೆ~, `ಕಾಡಿನ ಬಿದಿರೊಂದು ಕೊಳಲಾಯಿತು~, `ಆಕಾಶ ಎಂಬುದು ಮಾಯಮಂಟಪ~, `ತಾನು ಬಂದ ಎದೆಯೇನು?~ ಮೊದಲಾದ ಹಾಡುಗಳು ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತೆ ಮಾಡಿವೆ. ನಾಟಕಕ್ಕೆ ಹಿಂದೂಸ್ತಾನಿ, ರಂಗಭೂಮಿ ಹಾಗೂ ಜಾನಪದ ಮಟ್ಟುಗಳನ್ನು ಸಂಗೀತ ನಿರ್ದೇಶಕರು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಖ್ಯಾತ ನೃತ್ಯ ಕಲಾವಿದರಾದ ಪ್ರವೀಣ್‌ಕುಮಾರ್ ಮತ್ತು ರಾಧಾಕೃಷ್ಣ ಉರಾಳ ಹಾಡುಗಳಿಗೆ ಉತ್ತಮವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ.

ದರ್ಪಣ, ಹಾಡಿ, ಶಿಖರ, ಹುಣ್ಣಿಮೆ, ಸೆರೆಮನೆ ಮೊದಲಾದ ದೃಶ್ಯಗಳಿಗೆ ಬಿ. ವಿಠಲ್ ಅವರು ರಂಗಸಜ್ಜಿಕೆಯ ಮೂಲಕ ಮೆರುಗನ್ನು ತಂದಿದ್ದಾರೆ. ಎನ್.ಮಂಗಳ ಹಾಗೂ ಕೀರ್ತಿ ಅಚ್ಚುಕಟ್ಟಾಗಿ ವಸ್ತ್ರವಿನ್ಯಾಸ ಮಾಡಿದ್ದಾರೆ. ನಂದಕಿಶೋರ್ ಅವರ ಬೆಳಕು ಕೂಡ ನಾಟಕದಲ್ಲಿ ಅದ್ಭುತ ಪಾತ್ರ ನಿರ್ವಹಿಸಿದೆ. ಎಂಬತ್ತಕ್ಕೂ ಹೆಚ್ಚು ಕಲಾವಿದರನ್ನು ನಿಭಾಯಿಸಿದ ಕೃಷ್ಣ ರಾಯಚೂರು ಮತ್ತು ಬಿ.ಜಿ. ರಾಮಕೃಷ್ಣ ಅವರು ನಿಜಕ್ಕೂ ಅಭಿನಂದನಾರ್ಹರು.

`ಪ್ರಸಂಗ~ ತಂಡದ ಉದ್ಘಾಟನೆ ಮತ್ತು ಅನಭಿಜ್ಞ ಶಾಕುಂತಲಾ ನಾಟಕದ ಮೊದಲನೇ ಪ್ರಯೋಗಕ್ಕೆ ರಂಗಭೂಮಿಗೆ ಸಂಬಂಧಿಸಿದ ಎಲ್ಲರೂ ರವೀಂದ್ರ ಕಲಾಕ್ಷೇತ್ರದಲ್ಲಿ ಬಂದು ಸೇರಿದ್ದು, ರಂಗಭೂಮಿಯ ಮಟ್ಟಿಗಂತೂ ಒಂದು ಒಳ್ಳೆಯ ಬೆಳವಣಿಗೆ. ದೂರದ ಕೋಲಾರ, ಮೈಸೂರು, ತುಮಕೂರು, ಚಿತ್ರದುರ್ಗ ಮೊದಲಾದ ಊರುಗಳಿಂದಲೂ ರಂಗಾಸಕ್ತರು ಬಂದಿದ್ದು 80ರ ದಶಕವನ್ನು ನೆನಪಿಸುತ್ತಿತ್ತು.

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT