ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತುಲ ರಸ್ತೆ ನಿರ್ಮಾಣ: ರೂ 5.54 ಕೋಟಿ ಮಂಜೂರು

Last Updated 2 ಜನವರಿ 2012, 11:10 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರ ದಲ್ಲಿಯೇ ರಾಷ್ಟ್ರೀಯ ಹೆದ್ದಾರಿ- 209 ಹಾದುಹೋಗಿದೆ. ತಮಿಳುನಾಡಿನ ಸತ್ಯಮಂಗಲ, ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಸಾವಿರಾರು ವಾಹನ ಸಂಚರಿಸುತ್ತವೆ. ಇದರ ಪರಿಣಾಮ ಡೀವಿಯೇಷನ್ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚು. ಈಗ ದಟ್ಟಣೆ ಕಡಿಮೆ ಮಾಡಿ ಕಿರಿಕಿರಿ ತಪ್ಪಿಸಲು ವರ್ತುಲ ರಸ್ತೆ ನಿರ್ಮಾಣಕ್ಕೆ ಕಂಕಣ ಕೂಡಿಬಂದಿದೆ.

ನಗರದ ಹೊರಭಾಗದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪಕ್ಕದಿಂದ ವರ್ತುಲ ರಸ್ತೆ ನಿರ್ಮಿಸಿ ಡೀವಿಯೇಷನ್ ರಸ್ತೆಯಲ್ಲಿ ಎದುರಾಗುವ ವಾಹನಗಳ ದಟ್ಟಣೆ ಕಡಿಮೆಗೊಳಿಸಲು ಐದಾರು ವರ್ಷದ ಹಿಂದೆಯೇ ಉದ್ದೇಶಿಸಲಾಗಿತ್ತು. ಆದರೆ, ಜಮೀನು ವಿವಾದದ ಪರಿಣಾಮ ಹಲವು ವರ್ಷದಿಂದ ವರ್ತುಲ ರಸ್ತೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಈ ರಸ್ತೆ ಅಭಿವೃದ್ಧಿಗೆ ಮರುಜೀವ ಸಿಕ್ಕಿದೆ.

ಪೌರಾಡಳಿತ ನಿರ್ದೇಶನಾಲಯಕ್ಕೆ ವರ್ತುಲ ರಸ್ತೆ ನಿರ್ಮಾಣ ಸಂಬಂಧ 5.54 ಕೋಟಿ ರೂ ಮೊತ್ತದ ಕ್ರಿಯಾಯೋಜನೆ  ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಕೂಡ ಈಚೆಗೆ ಹೇಳಿಕೆ ನೀಡಿದ್ದರು. ಇದು ಕೊಂಚಮಟ್ಟಿಗೆ  ನಾಗರಿಕರಿಗೆ ನೆಮ್ಮದಿ ತಂದಿದೆ.

ನಂಜನಗೂಡು ಮತ್ತು ಕೊಳ್ಳೇಗಾಲದಿಂದ ತಮಿಳುನಾಡು ಮಾರ್ಗಕ್ಕೆ ತೆರಳುವ ವಾಹನಗಳು ಡೀವಿಯೇಷನ್ ರಸ್ತೆಯಲ್ಲಿ ಸಂಚರಿಸುವುದು ಸಾಮಾನ್ಯ. ಈ ರಸ್ತೆ ಕಿರಿದಾಗಿದ್ದು, ಕೆಲವೆಡೆ ಫುಟ್‌ಪಾತ್ ಕೂಡ ಇಲ್ಲ.

ರಾಮಸಮುದ್ರದಿಂದ ಬರುವ ಕೆಲವು ವಾಹನಗಳು ಕೂಡ ಜೈಭುವನೇಶ್ವರಿ ವೃತ್ತದಿಂದ ಸತ್ಯಮಂಗಲದ ಕಡೆಗೆ ತೆರಳುತ್ತವೆ. ಹೀಗಾಗಿ, ಅರಣ್ಯ ಇಲಾಖೆಯ ವೃತ್ತದವರೆಗೆ ವಾಹನಗಳು ತೆರಳಲು ಸರ್ಕಸ್ ಮಾಡಬೇಕಿದೆ.

ಈ ಮಾರ್ಗದ ಮೂಲಕವೇ ವಿದ್ಯಾರ್ಥಿಗಳು ನಗರದ ವಿವಿಧ ಭಾಗದಲ್ಲಿರುವ ಶಾಲಾ- ಕಾಲೇಜುಗಳಿಗೆ ತೆರಳಬೇಕಿದೆ. ಬೆಳಿಗ್ಗೆ ವೇಳೆ ಸಂಚಾರ ದಟ್ಟಣೆಯಿಂದ ನಾಗರಿಕರು ಕೂಡ ಕಿರಿಕಿರಿ ಅನುಭವಿಸುತ್ತಿದ್ದರು. ಪ್ರಸ್ತುತ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಂದ ಗುಂಡ್ಲುಪೇಟೆ ವೃತ್ತದವರೆಗೆ ವರ್ತುಲ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ, ನಂಜನಗೂಡು ಮಾರ್ಗದಿಂದ ಬರುವ ವಾಹನಗಳು ವರ್ತುಲ ರಸ್ತೆ ಮೂಲಕ ತೆರಳಿದರೆ ಡೀವಿಯೇಷನ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.

`ವರ್ತುಲ ರಸ್ತೆ ನಿರ್ಮಾಣ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಶೀಘ್ರವೇ, ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕಿದೆ. ವರ್ತುಲ ರಸ್ತೆಗೆ ಅಗತ್ಯವಿರುವೆಡೆ ಸಂಪರ್ಕ ರಸ್ತೆ ಕೂಡ ನಿರ್ಮಿಸಬೇಕಿದೆ. ಆಗ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಜತೆಗೆ, ನಗರಸಭೆ ವ್ಯಾಪ್ತಿ ಹದಗೆಟ್ಟಿರುವ ರಸ್ತೆ ಅಭಿವೃದ್ಧಿಗೂ ಒತ್ತು ನೀಡಬೇಕಿದೆ~ ಎಂಬುದು ಚಾಲಕ ವೆಂಕಟೇಶ್ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT