ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಕ್ಕೆ 500ಕಿ.ಮೀ ರೈಲು ಮಾರ್ಗ ಗುರಿ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 2,200 ಕಿ.ಮೀ. ರೈಲು ಮಾರ್ಗದ ನಿರ್ಮಾಣ ಕೆಲಸ ಬಾಕಿ ಇದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಕನಿಷ್ಠ 500 ಕಿ.ಮೀ. ಮಾರ್ಗ ನಿರ್ಮಿಸಲು ನಿರ್ಧರಿಸಲಾಗಿದೆ. ಮುಂದಿನ ವರ್ಷದಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಹಣ ಒದಗಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಶನಿವಾರ ಇಲ್ಲಿ ತಿಳಿಸಿದರು.

 ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯದಲ್ಲಿನ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.  ಪ್ರತಿವರ್ಷ 500 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕನಿಷ್ಠ 3,000 ಕೋಟಿ ರೂಪಾಯಿ ಬೇಕಾಗುತ್ತದೆ. ಇದರಲ್ಲಿ ಶೇ 50ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿದ್ದು, 2012-13ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕೆ ಅವಕಾಶ ಮಾಡಿಕೊಳ್ಳಬೇಕು. ರೈಲ್ವೆ ಕೂಡ ಇದಕ್ಕೆ ಪೂರಕವಾಗಿ ಹಣ ಒದಗಿಸಲು ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ವಿವರಿಸಿದರು.

 ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳ ಮಾರ್ಗದ ಒಟ್ಟು ಉದ್ದ 3,000 ಕಿ.ಮೀ. ಅದರಲ್ಲಿ 800 ಕಿ.ಮೀ. ಪೂರ್ಣಗೊಂಡಿದೆ. ಬಾಕಿ ಕಾಮಗಾರಿಗಳನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸುವ ಹಾಗೆ ಯೋಜನೆ ರೂಪಿಸಲಾಗಿದೆ. ಸದ್ಯಕ್ಕೆ ವರ್ಷಕ್ಕೆ ಸರಾಸರಿ 150 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ನಡೆದಿದೆ ಎಂದು ಹೇಳಿದರು.
 

ನಗರ ರೈಲ್ವೆ ನಿಲ್ದಾಣ:  ಮೆಟ್ರೊ ಸುರಂಗ ಮಾರ್ಗ ನಿರ್ಮಾಣಕ್ಕೆ ಶೀಘ್ರ ಅನುಮತಿ
ಬೆಂಗಳೂರು:  ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಕೆಳಗೆ ಮೆಟ್ರೊ ರೈಲು ಹಾದು ಹೋಗಲಿದ್ದು, ಸುರಂಗ ಮಾರ್ಗ ನಿರ್ಮಾಣಕ್ಕೆ ತಕ್ಷಣವೇ ಅನುಮತಿ ಕೊಡಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ಮಾತನಾಡಿ, ಮೆಟ್ರೊ ಯೋಜನೆಗೆ ಕೇಂದ್ರ ಸರ್ಕಾರವೇ ಒಪ್ಪಿಗೆ ಕೊಟ್ಟಿದೆ. ಇದಕ್ಕೆ ಪ್ರಧಾನ ಮಂತ್ರಿ ಕಚೇರಿ ಮತ್ತು ಸಂಪುಟ ಕಾರ್ಯದರ್ಶಿ ಕೂಡ ಅನುಮತಿ ನೀಡಿದ್ದಾರೆ. ಇಷ್ಟಾದರೂ ರೈಲ್ವೆ ಮಂಡಳಿ ಒಪ್ಪಿಗೆ ಕೊಟ್ಟಿಲ್ಲ. ಪತ್ರ ಬರೆದು ನಾಲ್ಕೈದು ತಿಂಗಳು ಕಳೆದರೂ ಉತ್ತರ ಸಿಕ್ಕಿಲ್ಲ ಎಂದು ಸಚಿವರ ಗಮನ ಸೆಳೆದರು.

ವೆುಟ್ರೊ ಯೋಜನೆ ವಿಳಂಬವಾದರೆ, ಅದಕ್ಕೆ ಯಾರು ಕಾರಣರೊ ಅವರು ದಂಡ ಕಟ್ಟಬೇಕಾಗುತ್ತದೆ. ವಿಳಂಬದ ಕಾರಣ ರಾಜ್ಯ ಸರ್ಕಾರ ಈಗಾಗಲೇ ರೂ 700 ಕೋಟಿ ದಂಡ ಕಟ್ಟಿದೆ. ಹೀಗಾಗಿ ಇದಕ್ಕೆ ಅವಕಾಶ ನೀಡದಂತೆ ತಕ್ಷಣವೇ ಅನುಮತಿ ಪತ್ರ ಕೊಡಿಸಬೇಕು ಎಂದು ಶಿವಶೈಲಂ ಮನವಿ ಮಾಡಿದರು.

ಇದಕ್ಕೆ ಸಚಿವ ಮುನಿಯಪ್ಪ ರೈಲ್ವೆ ಅಧಿಕಾರಿಗಳಿಂದ ವಿವರಣೆ ಕೇಳಿದರು. ವಿಳಂಬಕ್ಕೆ ಶಿವಶೈಲಂ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಮಿತ್ತಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. `ನಿಮ್ಮ ಸಮಸ್ಯೆ ಏನಿದೆ ಎನ್ನವುದನ್ನು ಬರಹ ರೂಪದಲ್ಲಿ ಕೊಡಿ. ಕೇವಲ ಬಾಯಿ ಮಾತಲ್ಲಿ ಹೇಳಿದರೆ ಯಾವುದೂ ಆಗುವುದಿಲ್ಲ~ ಎಂದು ತಿರುಗೇಟು ನೀಡಿದರು.

ಇದಕ್ಕೆ ಶಿವಶೈಲಂ ಪತ್ರ ರೂಪದಲ್ಲಿ ಎಲ್ಲವನ್ನೂ ನೀಡಲಾಗಿದೆ ಎಂದರು. ತಕ್ಷಣ ಮುನಿಯಪ್ಪ ಅವರು ಮಧ್ಯಪ್ರವೇಶ ಮಾಡಿ `ಈ ಯೋಜನೆಗೆ ಅನುಮತಿ ಕೊಡಿಸುವ ಜವಾಬ್ದಾರಿಯನ್ನು ನನಗೆ ಬಿಡಿ. ರೈಲ್ವೆ ಮಂಡಳಿಯ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು~ ಎಂದರು.


 ವೆಚ್ಚ ಹಂಚಿಕೆ ಯೋಜನೆಗಳಿಗೆ ಕರ್ನಾಟಕದ ಹಾಗೆ ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಹರಿಯಾಣ ರಾಜ್ಯಗಳು ಕೂಡ ಸಹಕರಿಸುತ್ತಿದ್ದು, ಆ ರಾಜ್ಯಗಳಿಗೆ ಹೆಚ್ಚಿನ ಹಣ ನೀಡಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಈ ಸಂಬಂಧ ಯೋಜನಾ ಆಯೋಗಕ್ಕೂ ವರದಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.

ಬಜೆಟ್‌ಗೆ ಪಟ್ಟಿ: ಈ ಸಲದ ರೈಲ್ವೆ ಬಜೆಟ್‌ನಲ್ಲಿ ಯಾವ ಯೋಜನೆಗಳನ್ನು ತುರ್ತಾಗಿ ಸೇರಿಸಬೇಕೆನ್ನುವ ಬಗ್ಗೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಅವರು ಮುಖ್ಯಮಂತ್ರಿ ಜತೆ ಚರ್ಚಿಸಿ, ಒಂದು ವಾರದಲ್ಲಿ ವರದಿ ನೀಡುವ ವಿಶ್ವಾಸ ಇದೆ. ಅದರ ನಂತರ ರೈಲ್ವೆ ಮಂಡಳಿ ಅದನ್ನು ಪರಿಶೀಲಿಸಿ, ಬಜೆಟ್‌ನಲ್ಲಿ ಸೇರಿಸುವ ಬಗ್ಗೆ ಚಿಂತನೆ ನಡೆಸಲಿದೆ ಎಂದು ಹೇಳಿದರು.

ಹೊಸ ಯೋಜನೆಗಳಾದ ಬಾಗಲಕೋಟೆ- ಕುಡಚಿ; ಕೆಂಗೇರಿ- ಚಾಮರಾಜನಗರ; ದಾವಣಗೆರೆ- ತುಮಕೂರು; ಗದಗ- ವಾಡಿ; ವೈಟ್‌ಫೀಲ್ಡ್- ಕೋಲಾರ; ಶಿವಮೊಗ್ಗ- ಹರಿಹರ... ಹೀಗೆ ಸುಮಾರು 1,000 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ, ಆದ್ಯತೆ ಮೇಲೆ ಈ ಯೋಜನೆಗಳನ್ನೂ ಕೈಗೆತ್ತಿಕೊಳ್ಳಬಹುದು ಎಂದರು.

ಹೈಸ್ಪೀಡ್ ರೈಲು: ಚೆನ್ನೈ- ಬೆಂಗಳೂರು ನಡುವಿನ ಉದ್ದೇಶಿತ ಹೈಸ್ಪೀಡ್ ರೈಲ್ವೆ ಯೋಜನೆ ಕುರಿತ ಸಮೀಕ್ಷೆ ನಡೆದಿದ್ದು, ಅದು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಯನ್ನು ಮೈಸೂರುವರೆಗೂ ವಿಸ್ತರಿಸ ಬೇಕೆಂಬ ಬೇಡಿಕೆ ಇದೆ. ಅದು ಇನ್ನೂ ಪರಿಶೀಲನೆ ಹಂತದಲ್ಲಿಯೇ ಇದೆ ಎಂದು ವಿವರಿಸಿದರು.

ಜೋಡಿ ಮಾರ್ಗ: ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗದ ನಿರ್ಮಾಣ ಕಾಮಗಾರಿ 2014ರ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸ ಇದೆ. ಬೆಂಗಳೂರು- ನೆಲಮಂಗಲದ ಜೋಡಿ ಮಾರ್ಗವೂ ಪೂರ್ಣಗೊಂಡಿದ್ದು, ಮಾರ್ಚ್‌ನಿಂದ ರೈಲುಗಳ ಸಂಚಾರ ಆರಂಭಿಸಲಾಗುವುದು ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT