ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆ

Last Updated 19 ಜೂನ್ 2011, 9:05 IST
ಅಕ್ಷರ ಗಾತ್ರ

ಮುಂಗಾರು ಸಿಂಚನ ತಂದೊಡ್ಡುವ ಹರ್ಷ ಅಷ್ಟಿಷ್ಟಲ್ಲ... ಧರೆಯ ಮೇಲಿನ ಕಲ್ಲು ಮಣ್ಣಿಗೂ ಜೀವಕಳೆ. ವರುಣ ಸಿಂಚನವನ್ನು ಹೀರಿ ಕಂಪು ಸೂಸುವ ಭೂರಮೆಯ ಸೊಬಗು ಅನನ್ಯ...

ಪ್ರತಿ ಮುಂಗಾರು ಕಾಲಿಟ್ಟಾಗಲೂ ಎಲ್ಲರಿಗೂ ಹೊಸತು. ಅದನ್ನು ಎಷ್ಟು ಅನುಭವಿಸಿದರೂ ಅದು ಹೊಸತು ಎಂಬ ಅನುಭವದ ರಸಸ್ವಾದ ಹೇಳಲಾಗದು. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಆಸ್ವಾದಿಸುತ್ತಾರೆ. ಮಳೆಯ ಹನಿ ಮೈಗೆ ಸೋಕಿದರೆ ಏನೋ ಒಂಥರಾ ಪುಳಕ, ಅನುಭವ.

ಮುಂಗಾರಿನ ಜತೆ ರೈತರ ಕೃಷಿ ಚಟುವಟಿಕೆ, ಮಕ್ಕಳ ಶೈಕ್ಷಣಿಕ ಚಟುವಟಿಕೆ ಗರಿಗೆದರುತ್ತದೆ. ಎಲ್ಲರಲ್ಲೂ ಹೊಸ ಉತ್ಸಾಹ, ಲವಲವಿಕೆ. ನೂರಾರು ಕನಸುಗಳು ಮನದಲ್ಲಿ ಕಾಮನಬಿಲ್ಲುಗಳಾಗಿ ಮೂಡುವ ಸಮಯ. ಅಲ್ಲದೆ, ನಿಸರ್ಗಕ್ಕೆ ಬದ್ಧವಾಗಿ ಜೀವಿಸುತ್ತಿರುವ ಪ್ರಾಣಿ, ಪಕ್ಷಿಗಳು ಹರುಷದ ಹೊಳೆಯಲ್ಲಿ ಮಿಂದೇಳುತ್ತವೆ. ಮಳೆ ಬರುವ ಮುನ್ಸೂಚನೆ ಸಿಕ್ಕುತ್ತಿದ್ದಂತೆಯೇ ಕೋಗಿಲೆ ಹಾಡಿ, ನವಿಲು ಗರಿಬಿಚ್ಚಿ ಕುಣಿದು, ಗಿಡ ಮರಗಳು ಮಂದ ಮಾರುತದೊಂದಿಗೆ ಸರಸವಾಡಿ ಸಂಭ್ರಮಿಸುತ್ತಿವೆ.

ತುಂತುರು ಮಳೆ, ಜಿಟಿಜಿಟಿ ಮಳೆ, ಬಿಸಿಲ ಮಳೆ, ಧೋ.. ಎಂದು ಸುರಿಯುವ ಮಳೆ ಹೀಗೆ, ಒಂದೊಂದೂ ವಿಭಿನ್ನ ಭಾವ ಸ್ಪುರಿಸಿ ಜೀವನ ಪ್ರೀತಿಯನ್ನು ಹೆಚ್ಚಿಸುತ್ತವೆ. ಮಳೆಗೂ ಮೊದಲು ಕವಿಯುವ ಮೋಡ, ಬೀಸುವ ತಂಗಾಳಿ, ಕಾದ ಭೂಮಿಗೆ ಬೀಳುವ ಮೊದಲ ಹನಿಗಳ ಸ್ಪರ್ಶದಿಂದ ಹರಡುವ ವಿಶಿಷ್ಟ ಸುಗಂಧ ಅನುಭವಿಸಿಯೇ ತೀರಬೇಕು.

ಗೊತ್ತೂ ಗೊತ್ತಿಲ್ಲದಂತೆ ನಮ್ಮ ದೇಹ, ಮನಸ್ಸು ಉಲ್ಲಾಸಭರಿತ. ಸ್ಪರ್ಶ ಜ್ಞಾನವೊಂದಿದ್ದರೆ ಸಾಕು ನಿಸರ್ಗದ ಏರಿಳಿತಗಳು ಅರಿವಿಗೆ ಬರುತ್ತವೆ. ಇಳಿ ಸಂಜೆ ರವಿ ಕೆಂಪೇರುವಾಗ, ಕಣ್ಣಿದ್ದವರಿಗೆ ಮುದ ನೀಡದಿರಲು ಸಾಧ್ಯವೇ? ಈ ಋತುವಿನಲ್ಲಿ ಪ್ರಕೃತಿಯ ಒಂದೊಂದು ನಡೆಯೂ ಅಪೂರ್ವ ಕ್ಷಣಗಳಿಗೆ ಸಾಕ್ಷಿ.

ಮಳೆಗಾಲದ ಮನೋಕಾಮನೆಗಳು ಅಷ್ಟೇ ವಿಭಿನ್ನ. ಮನೆಗಳಲ್ಲಿ ಮಳೆಗಾಲಕ್ಕೆಂದೇ ಸಂಗ್ರಹಿಸಿಟ್ಟ ಕರಿಯುವ ತಿಂಡಿಗಳು ನಾಲಿಗೆ ಚಪಲವನ್ನು ಬಡಿದೆಬ್ಬಿಸಿದೆ. ಸಂಜೆ ವೇಳೆ ತಳ್ಳುವ ಗಾಡಿಗಳ ಮುಂದೆ ಕುರುಕು ತಿಂಡಿ, ಆತುರದ ತಿನಿಸುಗಳಿಗೆ ಜನರು ಸಾಲುಗಟ್ಟಿರುವ ದೃಶ್ಯ ಸಾಮಾನ್ಯ. ಮಳೆಯೊಂದಿಗೆ ಚಳಿಯೂ ಸೇರಿದರೆ ಬೆಚ್ಚಗೆ ಮನೆ ಸೇರಿಕೊಳ್ಳಬೇಕೆನಿಸುತ್ತಿದೆ.

ನಗರದಲ್ಲಿ ಶಾಲೆ ಬಿಡವ ವೇಳೆಗೆ ಬೆನ್ನಿಗೆ ಪುಸ್ತಕಗಳ ಮೂಟೆ ಹಾಕಿಕೊಂಡು ಚುರುಕಾದ ಹೆಜ್ಜೆ ಹಾಕುವ ಮಕ್ಕಳ ಸಾಲು, ಮಳೆಯಲ್ಲಿ ತೋಯ್ದುಬಿಡುತ್ತೇವೆ ಎಂಬ ಧಾವಂತದಲ್ಲಿ ಮನೆ ಸೇರಲು ಓಡುವ ಜನರ ಚಿತ್ರಣಗಳು ಕಣ್ಣಿಗೆ ಕಾಣುತ್ತವೆ. ಇನ್ನು ಕೊಡೆಗಳಿಗೆ, ಮಳೆ ಕೋಟು ವ್ಯಾಪಾರಿಗಳಿಗೆ ಸುಗ್ಗಿ. ಮಳೆಗಾಲದ ವ್ಯಾಪಾರಕ್ಕೂ ಬಿರುಸು, ಲವಲವಿಕೆ ಪಡೆದುಕೊಳ್ಳುತ್ತದೆ.

ಈಚಿನ ದಿನಗಳಲ್ಲಿ ನಗರಗಳು ಕಾಂಕ್ರೀಟ್ ಕಾಡುಗಳಾಗಿ ಮಾರ್ಪಟ್ಟಿವೆ. ಮರ ಗಿಡಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಪ್ರಕೃತಿಕ ಸವಿಯೂಟಕ್ಕೆ ದೂರದ ಪ್ರದೇಶಗಳಿಗೆ ಹೋಗಬೇಕು. ಅಲ್ಲದೇ, ಯಾಂತ್ರಿಕ ಜೀವನದಲ್ಲಿ ದಿನ ಧಾವಂತದೊಂದಿಗೆ ಕಳೆದುಹೋಗುತ್ತಿದೆ. ಈ ನಡುವೆಯೂ ನಿಸರ್ಗಕ್ಕೆ ಮನಸ್ಸು ತೆರೆದುಕೊಂಡರೆ ಪ್ರಶಾಂತತೆ ಆವರಿಸುತ್ತದೆ. ಇದು ಪರಿಸರ ಪ್ರಿಯರ ಅಭಿಮತ.

ಹಲವು ಹಿತಾನುಭವ ನೀಡುವ ಮಳೆ ಕೆಲವೊಮ್ಮೆ ಕಿರಿಕಿರಿ ಜೊತೆಗೆ ದೊಡ್ಡ ಹಾನಿ ಉಂಟು ಮಾಡುತ್ತದೆ. ಆದರೆ, ನಿಸರ್ಗ ಸಹಜತೆಗೆ ಸವಾಲೊಡ್ಡಲು ಸಾಧ್ಯವಿಲ್ಲ. ರಕ್ಷಣಾ ತಂತ್ರಗಳಷ್ಟೇ ನಮಗಿರುವ ದಾರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT