ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆಯಲ್ಲಿ ಗೀತಗಾನ ಸುಧೆ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗಾಯಕ ಹಾಗೂ ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಅವರು ಕನ್ನಡ ಭಾವಗೀತೆಗಳಿಗೆ ಸಂಗೀತ ಸಂಯೋಜನೆ ನೀಡುವ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದಾರೆ.

ನಮ್ಮ ನಾಡಿನ ಎಲ್ಲ ಕವಿಗಳ ಬೇರೆ ಬೇರೆ ಗೀತೆಗಳನ್ನು ಹೆಕ್ಕಿ, ಅವುಗಳಿಗೆ ಸ್ವರ ಹಾಕಿ, ನಾದದ ಸ್ಪರ್ಷ ನೀಡಿ, ಕನ್ನಡಿಗರಿಗೆ ತಲುಪಿಸುವ ಕೈಂಕರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ.

ವಿಶೇಷವಾಗಿ ಮಕ್ಕಳಿಗಾಗಿ ಮಾಡಿರುವ ಹಲವಾರು ಧ್ವನಿ ಸುರುಳಿಗಳು ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿವೆ. ಹಾಡು ಹಕ್ಕಿಗಳನ್ನು ತಮ್ಮ ಉಪಾಸನಾ ತಂಡಕ್ಕೆ ಸೇರಿಸಿಕೊಂಡು ಉತ್ತಮ ತರಬೇತಿ ನೀಡುತ್ತಿದ್ದಾರೆ. ಅದರ ಫಲವಾಗಿ ಇವರ ಗರಡಿಯಿಂದ, ಹಲವಾರು ಉತ್ತಮ ಗಾಯಕ- ಗಾಯಕಿಯರು ಹೊರಹೊಮ್ಮುತ್ತಿದ್ದಾರೆ.

ಅದೇ ಸಾಲಿಗೆ `ವರ್ಷ ಧಾರೆ~ ಎನ್ನುವ ಭಾವಗೀತೆಗಳ ಧ್ವನಿ ಸುರುಳಿಯೊಂದು ಈಚೆಗಷ್ಟೆ ಸೇರ್ಪಡೆಯಾಗಿದೆ. ವರ್ಷಧಾರೆಯಲ್ಲಿ ಉಪಾಸನಾ ವೇದಿಕೆಯಿಂದ ವರ್ಷಾ ಬಿ. ಸುರೇಶ್ ಎಂಬ ಯುವ ಉದಯೋನ್ಮುಖ ಗಾಯಕಿಯನ್ನು ಕನ್ನಡ ಸುಗಮ ಸಂಗೀತಲೋಕಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಹಲವಾರು ಸಂಗೀತದ ಆಲ್ಬಂಗಳಿಗೆ ತಮ್ಮ ಕಂಠಸಿರಿಯನ್ನು ನೀಡಿರುವ ವರ್ಷಾ ಅವರಿಗಿದು ಮೊದಲನೆಯ ಸೋಲೊ ಆಲ್ಬಂ.

`ವರ್ಷ ಧಾರೆ~ಯಲ್ಲಿ ನಾಡಿನ ಹೆಸರಾಂತ ಏಳು ಕವಿಗಳ ಒಟ್ಟು ಹನ್ನೊಂದು ಹಾಡುಗಳಿವೆ. ಇಲ್ಲಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ `ಎಂಥ ಕಂದ~ ಹಾಗೂ `ಎಲ ಎಲ ಯುಗಾದಿ~ ಎಂಬ ಗೀತೆಗಳನ್ನು ಸ್ವರ ಸಂಯೋಜನೆಗೆ ಆರಿಸಿಕೊಳ್ಳಲಾಗಿದೆ.

`ಎಂಥ ಕಂದ~ ಗೀತೆಯಲ್ಲಿ ಸ್ವರ ಸಂಯೋಜನೆ ಹಾಗೂ ಗಾಯನ ಉತ್ತಮವಾಗಿದ್ದು, ಗಾಯಕಿಯ ದನಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ನಂತರದಲ್ಲಿ ಸುಬ್ರಾಯ ಚೊಕ್ಕಾಡಿ ಅವರ `ಏಕೋ ಬೇಸರ~ ಹಾಗೂ `ಬೆಳಕಿನ ಕಣ್ಣನು~, ಆನಂದಕಂದರ `ಹಿಂಗ್ಯಾಕ ನೋಡತಾನ~, ಎಂ.ಎನ್. ವ್ಯಾಸರಾವ್ ಬರೆದಿರುವ `ಏಕೆ ಹೀಗೆ ಮನವೆ~ ಎಂಬ ಗೀತೆಯನ್ನು ಎರಡು ಬಾರಿ ಹಾಡಿಸಲಾಗಿದ್ದು ಒಮ್ಮೆ ವರ್ಷಾ ಅವರ ಕಂಠದಲ್ಲಿ ಕೇಳಿಬಂದರೆ, ಇನ್ನೊಮ್ಮೆ ಸ್ವತಃ ಗಾಯಕರೂ ಆದ ಮೋಹನ್ ಹಾಡಿದ್ದಾರೆ. ಎರಡೂ ಹಾಡುಗಳನ್ನು ಕೇಳಿದರೂ ಭಾವಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ಅಂಥ ವ್ಯತ್ಯಾಸ ಕಂಡುಬರುವುದಿಲ್ಲ.

ಜಿ. ಎಸ್. ಶಿವರುದ್ರಪ್ಪ ಅವರ `ಕಡಲಿನ ಕತ್ತಲು~,  ರಂಜನಿ ಪ್ರಭು ಅವರ `ನಿನ್ನ ಕನಸು ನಾನಮ್ಮ~ ಮತ್ತು `ಎದೆ ಕೊರೆವ~ ಎಂಬ ಗೀತೆಗಳು ಮೋಹನ್ ಅವರ ಸ್ವರ ಸಂಯೋಜನೆಯಲ್ಲಿ ಮಿಂದೆದ್ದಿವೆ.

ಆಲ್ಬಂನಲ್ಲಿರುವ ಬಹುತೇಕ ಗೀತೆಗಳು ಚೆನ್ನಾಗಿ ಮೂಡಿಬಂದಿವೆ. ಅವುಗಳಲ್ಲಿ `ಎಂಥ ಕಂದ~, `ಬೆಳಕಿನ ಕಣ್ಣನು~, `ಚೈತ್ರ ಕಳೆದ~, `ಕಡಲಿನ ಕತ್ತಲು~ ಹಾಗೂ `ನಿನ್ನ ಕನಸಿನ~ ಗೀತೆಗಳು ಮೆಲುಕು ಹಾಕುವಂತಿವೆ. ವರ್ಷಾ ಹಾಡುಗಾರಿಕೆ ಕೆಲವೆಡೆ ಹಿನ್ನೆಲೆ ಸಂಗೀತ ಮರೆತು ಗಾಯನವನ್ನು ಕೇಳುವಂತೆ ಮಾಡುತ್ತದೆ.

ಪದಗಳ ಸ್ಪಷ್ಟ ಉಚ್ಚಾರ, ಸಂಗೀತಾಭ್ಯಾಸದ ಹಿನ್ನೆಲೆ ಅವರ ಕಂಠಕ್ಕೆ ಆವರಿಸಿಕೊಳ್ಳುವ ಗುಣವನ್ನು ನೀಡಿವೆ. ಕೆಲ ಗೀತೆಗಳ ಒಳಾರ್ಥವನ್ನು ಇನ್ನೂ ಚೆನ್ನಾಗಿ ಅರಿತುಕೊಂಡು ಹಾಡಿದ್ದರೆ ಗಾಯನದ ಮೌಲ್ಯ ಮತ್ತಷ್ಟು ಹೆಚ್ಚುತ್ತಿತ್ತು.

ಎರಡನೇ ಭಾಗದಲ್ಲಿ ಮೋಹನ್ ಅವರ ಸಂಗೀತ ಸಂಯೋಜನೆಯ ಇನ್ನಿತರೆ ಸೀಡಿಗಳಲ್ಲಿ ವರ್ಷಾ ಹಾಡಿರುವ ಮೂರು ಹಾಡುಗಳಿವೆ. ಕವಿ ಎಂ. ವಿ. ಸೀತಾರಾಮಯ್ಯ ಅವರ ರಚನೆಯ ಒಂಬತ್ತು ಹಾಡುಗಳ ಹೂರಣವಾದ `ಹೂದನಿ~ ಕೂಡ ಸೀಡಿಯಲ್ಲಿ ಅಡಕವಾಗಿದೆ.
 
`ಕೊಳಲನೂದುವ~, `ಓ ಕಿರು ತಾರೆಯೆ~, `ಸುಧೆ ಸರಿಯುವ~, `ಎಂದಿಗಹುದೋ~, `ಹಬ್ಬ ಬಂತು ಹಬ್ಬ~, `ಆರಿಸದಿರು ದೀಪವ~, `ತಾರೆಗಳ ಹೂ ಮುಡಿದ~, `ಯಾಕೋ ಹದ ಗೆಟ್ಟಿದೆ~, `ಕೆಡದಿರೋ ಗೆಳೆಯ~ ಹಾಡುಗಳನ್ನು ಬೇರೆ ಬೇರೆ ಗಾಯಕರ ಧ್ವನಿಯಲ್ಲಿ ಆಲಿಸಬಹುದಾಗಿದೆ.

ಈಗಾಗಲೇ `ವರ್ಷಧಾರೆ~ಯ ಎಲ್ಲ ಹಾಡುಗಳನ್ನು ಕೇಳಿ ಆನಂದಿಸಿರುವ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಹಾಗೂ `ಲಹರಿ~ ವೇಲು ಅವರು ಉಪಾಸನಾ ಮೋಹನ್ ಹಾಗೂ ವರ್ಷಾ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT