ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಾದರೂ ರೈತರಿಗೆ ಮೇವು ದೊರೆಯುತ್ತಿಲ್ಲ!

ಕಂದಾಯ ಇಲಾಖೆ ನಿರ್ಲಕ್ಷ್ಯ
Last Updated 3 ಡಿಸೆಂಬರ್ 2012, 7:16 IST
ಅಕ್ಷರ ಗಾತ್ರ

ದೇವದುರ್ಗ: ಬರಗಾಲದ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಮುಂಜಾಗ್ರತ ಕ್ರಮವಾಗಿ ಸರ್ಕಾರ ತಾಲ್ಲೂಕಿಗೆ ಮೇವು ಖರೀದಿಗಾಗಿ ನಾಲ್ಕು ಲಕ್ಷ ರೂಪಾಯಿ ಅನುದಾನ ನೀಡಿದ ನಂತರ ಕಳೆದ ಹತ್ತು ತಿಂಗಳ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ನಾಲ್ಕು ಲಕ್ಷ ರೂಪಾಯಿಯ ಮೇವು ಖರೀದಿ ಮಾಡಿದರೂ ವಿತರಣೆಗೆ ನಿರ್ಲಕ್ಷ್ಯಿಸಿರುವುದರಿಂದ ಮೇವು ಇಟ್ಟ ಸ್ಥಳದಲ್ಲಿಯೇ ಕೊಳೆತು ಹೋಗಿರುವುದು ಕಂಡು ಬಂದಿದೆ.

ಜೋಳದ ದಂಟು ಸೇರಿದಂತೆ ಭತ್ತದ ಮೇವುನ್ನು ತಾಲ್ಲೂಕಿನಲ್ಲಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳು ತಾಲ್ಲೂಕಿಗೆ ಮೇವು ಖರೀದಿಗಾಗಿಯೇ ನಾಲ್ಕು ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ. ಮೂರು ಸಾವಿರ ರೂಪಾಯಿಗೆ ಒಂದು ಟನ್‌ನಂತೆ 110 ಟನ್ ಜೋಳದ ದಂಟು ಮತ್ತು 2500 ರೂಪಾಯಿಗೆ ಒಂದು ಟನ್‌ನಂತೆ 40 ಟನ್ ಭತ್ತದ ಮೇವುನ್ನು ಖರೀದಿಸಲಾಗಿದೆ. ಒಟ್ಟು 150 ಟನ್ ಖರೀದಿಸಿ ಈಗಾಗಲೇ ವರ್ಷ ಸಮೀಪಿಸುತ್ತಿದ್ದರೂ ತಾಲ್ಲೂಕಿನ ಯಾರೊಬ್ಬರೂ ರೈತರಿಗೆ ಮೇವು ದೊರಕಿಲ್ಲ.

ತಾಲ್ಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರ ಜಾನುವಾರುಗಳಿಗೆ ಬೇಸಿಗೆಯಲ್ಲಿ ಮೇವಿನ ಕೊರತೆಯನ್ನು ದೂರ ಮಾಡಲು ಸರ್ಕಾರ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಖರೀದಿಸಲಾದ ಮೇವನ್ನು ದೇವದುರ್ಗ ಹೋಬಳಿ ಸೇರಿದಂತೆ ತಾಲ್ಲೂಕಿನ ಗಬ್ಬೂರು, ಜಾಲಹಳ್ಳಿ ಮತ್ತು ಅರಕೇರಾ ಒಟ್ಟು ನಾಲ್ಕು ಹೋಬಳಿಗಳ ಕಂದಾಯ ನಿರೀಕ್ಷಕರ ಮೇಲುಸ್ತುವಾರಿಯಲ್ಲಿ ಮೇವು ಸಂಗ್ರಹ (ಮೇವು ಬ್ಯಾಂಕ್) ಕೇಂದ್ರವನ್ನು ಸ್ಥಾಪಿಸಲಾಗಿದೆ. ಈಗಾಗಲೇ ನಾಲ್ಕು ಹೋಬಳಿಗಳ ಮೇವು ಸಂಗ್ರಹ ಕೇಂದ್ರಗಳಿಗೆ ಭತ್ತದ ಮೇವವನ್ನು ತಲಾ 10ಟನ್ ನೀಡಲಾಗಿದೆ. ದೇವದುರ್ಗ ಮತ್ತು ಗಬ್ಬೂರು ಹೋಬಳಿಗೆ ಮಾತ್ರ ಜೋಳದ ದಂಟಿನ ಮೇವನ್ನು ನೀಡಿರುವುದು ಇಲಾಖೆ ದಾಖಲಾತಿಗಳಿಂದ ತಿಳಿದು ಬಂದಿದೆ.

ಸಂಗ್ರಹಿಸಿ ಹತ್ತು ತಿಂಗಳು ಕಳೆಯುತ್ತಿದ್ದರೂ ಬಡ ರೈತರಿಗೆ ವಿತರಣೆ ಮಾಡಬೇಕೆಂಬ ಕನಿಷ್ಟ ಸೌಜನ್ಯ ಅಧಿಕಾರಿಗಳಲ್ಲಿ ಬರದೆ ಇರುವುದರಿಂದ ಈಗ ಮೇವು ಕೊಳೆತು ಹೋಗಿರುವುದು ತಾಲ್ಲೂಕು ಆಡಳಿತದ ಬೇಜವಬ್ದಾರಿ ಎದ್ದುಕಾಣುತ್ತಿದೆ.

ದೇವದುರ್ಗ ಪಟ್ಟಣ ಸೇರಿದಂತೆ ಇತರ ಮೂರು ಹೋಬಳಿಗಳ ಮೇವು ಸಂಗ್ರಹ ಕೇಂದ್ರಗಳಿಗೆ ಸಂಗ್ರಹಿಸಿ ಇಡಲಾಗಿರುವ ಮೇವಿನ ಬಗ್ಗೆ ರೈತರಿಗೆ ಮಾಹಿತಿ ನೀಡಲು ಆಯಾ ಹೋಬಳಿಗಳ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಕಂದಾಯ ನಿರೀಕ್ಷಕರಿಗೆ ಪ್ರಚಾರ ಪಡಿಸಲು ಸೂಚಿಸಲಾಗಿದರೂ ಸಂಬಂಧಿಸಿದ ಅಧಿಕಾರಿಗಳು ಪ್ರಚಾರಕ್ಕೆ ಹಿಂದೇಟು ಹಾಕಿದ ಕಾರಣಕ್ಕೆ ಯಾರೊಬ್ಬರೂ ರೈತರು ಮೇವು ಪಡೆಯಲು ಮುಂದೆ ಬರದೆ ಇರುವುದು ಪ್ರಮುಖ ಕಾರಣವಾಗಿದೆ.

ಖರೀದಿಸಿ ಇಡಲಾಗಿರುವ ಮೇವನ್ನು ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮಗೆ ಮೇವು ಬೇಕು ಎಂದು ಅರ್ಜಿ ಸಲ್ಲಿಸಬೇಕು ಬಳಿಕ ಸಂಬಂಧಿಸಿದ ಅಧಿಕಾರಿಗಳು ಅರ್ಜಿಯನ್ನು ಪರೀಶಿಲಿಸಿ ಸಬ್ಸಿಡಿ ದರದಲ್ಲಿ 225 ರೂಪಾಯಿಗೆ ಒಂದು ಕ್ವಿಂಟಲ್ ನೀಡಲು ಸಹ ನಿರ್ಧರಿಸಲಾಗಿದ್ದರೂ ಅದು ಬಡ ರೈತರ ಪಾಲಿಗೆ ದುಬಾರಿಯಾದ ಕಾರಣ ಖರೀದಿಗೆ ಯಾರೊಬ್ಬರೂ ಮುಂದೆ ಬರದೆ ಇರುವುದು ಪ್ರಮುಖ ಕಾರಣ ಎನ್ನಲಾಗಿದೆ.

ಆರೋಪ: ಸರ್ಕಾರದ ವತಿಯಿಂದ ನೀಡಲಾಗುವ ಮೇವಿನ ದರ ರೈತರಿಗೆ ಯಾವುದೇ ಲಾಭ ಇಲ್ಲ. ಹೊರಗಡೆ ಸರ್ಕಾರದ ದರಕ್ಕಿಂತ ಕಡಿಮೆ ದರಕ್ಕೆ ಮೇವು ಸಿಗುವ ಸಂದರ್ಭದಲ್ಲಿ 225ರೂಪಾಯಿಗೆ ಒಂದು ಕ್ವಿಂಟಲ್ ಮೇವು ಖರೀದಿಸುವುದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇನ್ನಿಲ್ಲದ ತೊಂದರೆ ಎದುರಾಗುತ್ತಿದ್ದು, ಇಂದೊಂದು ಕಣ್ಣೀರು ಹೊರೆಸುವ ತಂತ್ರ ಎಂದು ರೈತ ಮುಖಂಡ ಭೀಮಪ್ಪ ತಳವಾರ ಆರೋಪಿಸಿದ್ದಾರೆ.

ಶಿಸ್ತುಕ್ರಮ: ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಿ ಮೇವಿನ ಕೊರತೆ ಇರುವ ಬಡ ರೈತರ ಜಾನುವಾರಗಳನ್ನು ಗೋಶಾಲೆಗೆ ಕೆರೆತಂದು ಖರೀದಿಸಲಾದ ಮೇವನ್ನು ಬಳಕೆ ಮಾಡುವ ಜೊತೆಗೆ ಹೆಚ್ಚುವರಿ ಅನುದಾನ ನೀಡಲು ಸಹ ತಹಸೀಲ್ದಾರರಿಗೆ ಸೂಚಿಸಲಾಗಿದ್ದರೂ ಈ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಸಹಾಯಕ ಆಯುಕ್ತರನ್ನು ದೇವದುರ್ಗಕ್ಕೆ ಕಳುಹಿಸಿ ತಹಸೀಲ್ದಾರರ ನಿರ್ಲಕ್ಷ್ಯದ ಬಗ್ಗೆ ವರದಿ ಪಡೆದು ನಿರ್ಲಕ್ಷ್ಯದ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಭಾನುವಾರ `ಪ್ರಜಾವಾಣಿ'ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT