ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಿಡೀ `ಅಕ್ಷರ' ಗೌರವ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಸಾಹಿತಿ ಯು.ಆರ್. ಅನಂತಮೂರ್ತಿ ಅವರಿಗೆ ಎಂಬತ್ತು ವರ್ಷ ತುಂಬುತ್ತಿದೆ. ಇದೇ ಇಪ್ಪತ್ತೊಂದರಂದು ಅವರ ಹುಟ್ಟುಹಬ್ಬ. ಈ ಹೊತ್ತಿನಲ್ಲಿ ಅವರ ಬೌದ್ಧಿಕ ಧೀಮಂತಿಕೆಯನ್ನು ಗೌರವಿಸುವ ಉದ್ದೇಶದೊಂದಿಗೆ ಅಭಿನವ ಪ್ರಕಾಶನ ಹೆಜ್ಜೆಯಿರಿಸಿದೆ. ಅದರ ಫಲವಾಗಿ ಅನಂತಮೂರ್ತಿ ಗೌರವ ಮಾಲಿಕೆ ಸಿದ್ಧವಾಗುತ್ತಿದೆ.

ಮಾಲಿಕೆಯಲ್ಲಿ ತಿಂಗಳಿಗೊಂದರಂತೆ ಹನ್ನೆರಡು ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ನಾಡಿನ ಪ್ರಸಿದ್ಧ ಬರಹಗಾರರು, ಸಂಸ್ಕೃತಿ ಚಿಂತಕರು ಈ ಮಾಲೆ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಾಲಿಕೆಯ ಮೊದಲ ಪುಸ್ತಕ ಸಾಹಿತಿ ದೇವನೂರ ಮಹದೇವ ಅವರ `ಎದೆಗೆ ಬಿದ್ದ ಅಕ್ಷರ'. ದೇವನೂರರು ಕಳೆದ ನಲವತ್ತು ವರ್ಷಗಳಲ್ಲಿ ಬರೆದಿರುವ ಲೇಖನಗಳ ಸಂಗ್ರಹ ಇದು.
ಮಾಲಿಕೆಯ ಪ್ರಧಾನ ಸಂಪಾದಕರು ಹಿರಿಯ ಇತಿಹಾಸ ತಜ್ಞ ಷ. ಶೆಟ್ಟರ್. ಪ್ರಕಾಶಕ ನ. ರವಿಕುಮಾರ್ ಹಾಗೂ ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

`ಕಳೆದ ಅರವತ್ತು ವರ್ಷಗಳಲ್ಲಿ ಅನಂತಮೂರ್ತಿ ಅವರಿಲ್ಲದೆ ಕನ್ನಡದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ನಡೆದ ಪ್ರಮುಖ ವಾಗ್ವಾದಗಳನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಬಹುಮುಖ್ಯವಾದ ಕೆಲವು ವಾಗ್ವಾದಗಳನ್ನು ಅವರೇ ಆರಂಭಿಸಿದ್ದರೆ, ಇನ್ನು ಕೆಲವು ವಾಗ್ವಾದಗಳಿಗೆ ಹೊಸ ತಿರುವು ನೀಡಿದ್ದಾರೆ.

ಅನಂತಮೂರ್ತಿ ಅವರ ಸ್ಪಂದನ ಕೇವಲ ಸಾಹಿತ್ಯಕ್ಕೆ ಸೀಮಿತವಾಗಿಲ್ಲ. ರಾಜಕಾರಣವನ್ನೂ ಅವರು ಚಿಕಿತ್ಸಕ ಮನೋಭಾವದೊಂದಿಗೆ ಎದುರಾಗಿದ್ದಾರೆ. ಚಳವಳಿಗಳು ಕನ್ನಡದ ಮೂಲಗುಣವಾದ ಸಹಿಷ್ಣುತೆಯನ್ನು ಮರೆತು ಮುಂದುವರಿದಾಗ ಬಹಳ ಧೈರ್ಯದಿಂದ ಪ್ರತಿಭಟಿಸಿ ಹೊಸ ಚಿಂತನೆಯ ಹುಟ್ಟಿಗೆ ಕಾರಣವಾಗಿದ್ದಾರೆ.

ಆಧುನಿಕತೆಯನ್ನು ಅದರ ಇತ್ಯಾತ್ಮಕತೆಯಲ್ಲಿ ಒಪ್ಪಿಕೊಳ್ಳುತ್ತಲೇ ಅದರ ನೇತ್ಯಾತ್ಮಕತೆಯ ಗುಣಗಳನ್ನು ಕಠಿಣ ವಿಮರ್ಶೆಗೆ ಒಳಪಡಿಸಿದವರು' ಎನ್ನುವುದು  ಅಭಿನವ ಬಳಗದ ಪ್ರೀತಿಯ ಮಾತುಗಳು. ಅನುಭಾವದ ನೆಲೆಯಲ್ಲಿ ಚಿಂತಿಸುವ ಲಕ್ಷ್ಮೀಶ ತೋಳ್ಪಾಡಿ ಅವರು ಮಾಲಿಕೆಯಡಿ ಪುತ್ತೂರಜ್ಜ ಎಂಬ ಸಂತರ ಕುರಿತು ಬರೆಯುತ್ತಿದ್ದಾರೆ. ಅನಂತಮೂರ್ತಿ ಅವರಿಗೆ ಇಂಥ ತಾತ್ವಿಕ ಸಂವಾದಗಳು ಇಷ್ಟ ಎಂಬ ಕಾರಣಕ್ಕೇ ಇಂಥದ್ದೊಂದು ಪುಸ್ತಕ ಹೊರಬರುತ್ತಿದೆ.

ನಿಷ್ಠುರ ಹಾಗೂ ಪ್ರಾಮಾಣಿಕ ನುಡಿಗಳಿಗೆ ಹೆಸರಾದ ಹಿರಿಯ ಚಿಂತಕ ಜಿ. ರಾಜಶೇಖರ ಅವರ ಲೇಖನಗಳ ಸಂಗ್ರಹ ಕೂಡ ಪ್ರಕಟವಾಗುತ್ತಿದೆ. ಹಿರಿಯ ಸಂಗೀತಗಾರ, ಅಪರೂಪದ ಚಿಂತಕ  ರಾಜೀವ ತಾರಾನಾಥರ ಇತ್ತೀಚಿನ ಬರಹಗಳನ್ನು ಒಳಗೊಂಡಂತೆ `ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆ' ಕೃತಿಯನ್ನು ಪ್ರಕಟಿಸಲಾಗುತ್ತಿದೆ.

ಭಾರತದ ಅತ್ಯುತ್ತಮ ತೀರ್ಪುಗಳು ಹಾಗೂ ಅದರಿಂದ ಸಮಾಜದ ಮೇಲಾದ ಬದಲಾವಣೆಗಳನ್ನು ಕುರಿತ ಪುಸ್ತಕ ಮಾಲಿಕೆಯ ವೈಶಿಷ್ಟ್ಯಗಳಲ್ಲಿ ಒಂದು. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಇದರ ಲೇಖಕರು. ಹಾಗೆಯೇ ಗಿರೀಶ್ ಕಾಸರವಳ್ಳಿ ಅವರ ಅಪರೂಪದ ಸಂದರ್ಶನಗಳು ಹಾಗೂ ಸಂಸ್ಕೃತಿ ಚಿಂತನೆಗಳ ಕುರಿತ ಪುಸ್ತಕವೂ ಪ್ರಕಟವಾಗುತ್ತಿದೆ. ಅಂತರರಾಷ್ಟ್ರೀಯ ಖ್ಯಾತಿಯ ಸ್ತ್ರೀವಾದಿ ಚಿಂತಕಿ ತೇಜಸ್ವಿನಿ ನಿರಂಜನ ಅವರ ಇಂಗ್ಲಿಷ್ ಬರಹಗಳ ಅನುವಾದ ಹಾಗೂ ಚಿರಂಜೀವಿ ಸಿಂಗ್ ಅವರ `ಆಡಳಿತದ ನೆನಪುಗಳು' ಕೃತಿಯನ್ನು ಹೊರತರಲಾಗುತ್ತಿದೆ.

ಕನ್ನಡ ಸಂದರ್ಭದಲ್ಲಿ ನಡೆದ ಚಳವಳಿಗಳ ಕುರಿತು ಹಿರಿಯ ಸಂಶೋಧಕ ರಹಮತ್ ತರೀಕೆರೆ, ಶಿಲ್ಪಿಗಳು ಹಾಗೂ ಲಿಪಿಗಳ ಅಂತರ್ ಸಂಬಂಧ ಕುರಿತು ಷ. ಶೆಟ್ಟರ್, ಸಾಮಾನ್ಯನಿಗೆ ಭಾಷಾ ವಿಜ್ಞಾನ ಕುರಿತು ಕವಿ ಕೆ.ವಿ. ತಿರುಮಲೇಶ್ ಪುಸ್ತಕ ಬರೆಯುತ್ತಿದ್ದಾರೆ ನೈಜೀರಿಯಾದ ಆದಿವಾಸಿಯೊಬ್ಬನ ಆತ್ಮಕತೆಯನ್ನು ಎನ್.ಎ.ಎಂ ಇಸ್ಮಾಯಿಲ್ ಕನ್ನಡಕ್ಕೆ ತರುತ್ತಿದ್ದಾರೆ. 

`ಅಭಿನಂದನಾ ಗ್ರಂಥಗಳು ವ್ಯಕ್ತಿಯೊಬ್ಬರ ಹೊಗಳಿಕೆಗೆ ಮಾತ್ರ ಸೀಮಿತವಾಗಿದ್ದವು. ಅದರಿಂದ ಉತ್ತಮವಾದದ್ದನ್ನು ನೀಡಿದ ತೃಪ್ತಿ ಇರುತ್ತಿರಲಿಲ್ಲ. ಅನಂತಮೂರ್ತಿ ಅವರಂಥ ಬಹುದೊಡ್ಡ ಲೇಖಕರಿಗೆ ಬೇರೆಯದೇ ರೀತಿಯ ನುಡಿನಮನ ಅಗತ್ಯವಿತ್ತು. ಹಾಗಾಗಿ ಈ ಯತ್ನ' ಎನ್ನುತ್ತಾರೆ ನ. ರವಿಕುಮಾರ್. ಬರುವ ವರ್ಷದ ಡಿಸೆಂಬರ್‌ವರೆಗೆ ನಿರಂತರವಾಗಿ ಪುಸ್ತಕಗಳನ್ನು ಪ್ರಕಟಿಸಬೇಕು ಎಂಬ ಆಶಯದೊಂದಿಗೆ ಬಳಗ ಮುನ್ನಡೆಯುತ್ತಿದೆ. 

ಇಂದು ಮೊದಲ ಪುಸ್ತಕ ಬಿಡುಗಡೆ...
ಯು.ಆರ್. ಅನಂತಮೂರ್ತಿ ಗೌರವ ಮಾಲಿಕೆಯ ಮೊದಲ ಪುಸ್ತಕ `ಎದೆಗೆ ಬಿದ್ದ ಅಕ್ಷರ'. ಸಾಹಿತಿ ದೇವನೂರ ಮಹದೇವ ಬರೆದಿರುವ ಪುಸ್ತಕ ಅವರ ಆಶಯದಂತೆಯೇ ವಿಶಿಷ್ಟ ರೀತಿಯಲ್ಲಿ ಬಿಡುಗಡೆಯಾಗುತ್ತಿದೆ. ಇಂದಿನಿಂದ (ಡಿಸೆಂಬರ್ 14)ಆರಂಭವಾಗುವ `2012ರ ಬೆಂಗಳೂರು ಪುಸ್ತಕೋತ್ಸವ'ದಲ್ಲಿ ಅಭಿನವ ಮಳಿಗೆಗೆ ಭೇಟಿ ನೀಡುವ ಪುಸ್ತಕ ಪ್ರಿಯರೆಲ್ಲರಿಗೂ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಸಂಜೆ 5ಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪುಸ್ತಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT