ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವರ್ಷಾಂತ್ಯಕ್ಕೆ ಯುಟಿಪಿ ಪೂರ್ಣ'

Last Updated 18 ಜನವರಿ 2013, 6:35 IST
ಅಕ್ಷರ ಗಾತ್ರ

ರಾಣೆಬೆನ್ನೂರು: `ಮೂರು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ತುಂಗಾ ಮೇಲ್ದಂಡೆ ಯೋಜನೆಯನ್ನು ರೂಪಿಸಿದೆ' ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯ 196 ಕಿ.ಮೀ. ವರೆಗೆ ನೀರು ಹರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಸುಮಾರು ಎರಡು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ತುಂಗಾ ಮೇಲ್ದಂಡೆ ಯೋಜನೆಯ ಕಾಮಗಾರಿ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ತುಂಗಾ ಮೇಲ್ದಂಡೆ ಯೋಜನೆಯಿಂದ ರಾಣೆಬೆನ್ನೂರು ತಾಲ್ಲೂಕಿನ 50 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಮುಂದಿನ ಮುಂಗಾರಿನ ಹೊತ್ತಿಗೆ 83,285 ಎಕರೆ ಪ್ರದೇಶಕ್ಕೆ ನೀರನ್ನು ಹರಿಸುಗ ಗುರಿ ಇದೆ. 243 ಕಿ.ಮೀ. ಇಂದ 270 ಕಿ.ಮೀ. ವರೆಗಿನ ಕಾಲುವೆ ನಿರ್ಮಾಣಕ್ಕೆ ಸಮೀಕ್ಷೆ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸುವ ಗುರಿ ತಲುಪಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ ಎಂದು ನುಡಿದರು.

ತುಂಗಾ ಮೇಲ್ದಂಡೆ ಯೋಜನೆಯನ್ನು ಬಿಜೆಪಿ ಸರ್ಕಾರ ಪೂರ್ಣ ಗೊಳಿಸುವುದಿಲ್ಲ. ರೈತರಿಗೆ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದವು. ಆದರೆ ಟೀಕೆಯನ್ನು ಸವಾಲಾಗಿ ಸ್ವೀಕರಿಸಿ ಈ ಹಂತ ತಲುಪಲಾಗಿದೆ.

ಈ ಯೋಜನೆಗೆ 1999 ವರೆಗೆ ರೂ 300 ಕೋಟಿ ವೆಚ್ಚ ಮಾಡಲಾಗಿತ್ತು. ನಂತರ ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ 2008ರ ವರೆಗೆ ಅನುಷ್ಠಾನಕ್ಕಾಗಿ ರೂ 522 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ತಾವು ಅಧಿಕಾರ ಸ್ವೀಕರಿಸಿದ ಮೇಲೆ 2012ರ ವರೆಗೆ ಒಟ್ಟು ರೂ 673 ಕೋಟಿ  ಅನುದಾನ ಮಂಜೂರು ಮಾಡಲಾಗಿದೆ. ಇದುವರೆಗೆ ತುಂಗಾ ಮೇಲ್ದಂಡೆ ಯೋಜನೆಗೆ ಒಟ್ಟು ರೂ 1495 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವ ಬೊಮ್ಮಾಯಿ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪರಪ ಅವರ ಅವರ ಸಹಕಾರದಿಂದ ಸಚಿವ ಬಸವರಾಜ ಬೊಮ್ಮಾಯಿ ಅವರ ಈ ಭಾಗದ ಜನರಿಗೆ ನೀರುಣಿಸುವ ಭಗೀರಥ ಪ್ರಯತ್ನ ಯಶಸ್ವಿಯಾಗಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. ಶಾಸಕ ಎಸ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜಿ. ಶಿವಣ್ಣ, ಶಿವರಾಜ ಸಜ್ಜನ, ಜಿ.ಪಂ. ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ತಾ.ಪಂ. ಅಧ್ಯಕ್ಷೆ ಶಾರದಾ ಲಮಾಣಿ, ರೇಣುಕಾ ಮಲಕನಹಳ್ಳಿ, ಜಿ.ಪಂ. ಸದಸ್ಯೆ ಲಲಿತಾ ಜಾಧವ, ಹೂವಕ್ಕ ನಾಗೋರ, ಗ್ರಾ.ಪಂ. ಅಧ್ಯಕ್ಷ ಚಿಕ್ಕಪ್ಪ ಚೂರಿ, ಉಪಾಧ್ಯಕ್ಷೆ ಚಿಕ್ಕವ್ವ ನಾಯರ್, ಎಂ.ಎಂ. ಗುಡಗೂರ, ಎಸ್.ಎಸ್. ರಾಮಲಿಂಗಣ್ಣನವರ, ವಿಶ್ವನಾಥ ಪಾಟೀಲ, ಮುರುಗೆಪ್ಪ ಶೆಟ್ಟರ್, ಡಾ.ಗಣೇಶ ದೇವಗಿರಿಮಠ, ಆರ್. ರುದ್ರಯ್ಯ, ಯತೀಶ್ ಚಂದ್ರನ್, ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ.ವಿ. ಜಗದೀಶ, ವೆಂಕಟೇಶ, ಆನಂದ ಕುಲಕರ್ಣಿ, ಸುರೇಶ ಮೇಟಿ, ಡಿ.ಸುರೇಶ, ಕೆ. ಜಯಣ್ಣ ಉಪಸ್ಥಿತದ್ದರು.

3 ಜಿಲ್ಲೆಗಳಿಗೆ ನೀರಾವರಿ: ಬೊಮ್ಮಾಯಿ
ಹಾವೇರಿ:
ತುಂಗಾ ಮೇಲ್ದಂಡೆ ಯೋಜನೆಯ ಕಾಮಗಾರಿ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು ಹಾವೇರಿ, ಶಿವಮೊಗ್ಗ, ದಾವಣಗೆರೆ ಈ ಮೂರು ಜಿಲ್ಲೆಯ 90 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ತಾಲ್ಲೂಕಿನ ಕೂರಗಂದ ಗ್ರಾಮದ ಸಮೀಪದ ತುಂಗಾ ಮೇಲ್ದಂಡೆ ಯೋಜನೆಯ 196 ಕಿ.ಮೀ. ವರೆಗಿನ ಕಾಲುವೆಗೆ ಹರಿದು ಬಂದಿರುವ ನೀರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಈಗಾಗಲೇ 197 ಕಿ.ಮೀ. ಕಾಲುವೆಯಿಂದ 202 ಕಿ.ಮೀ. ವರೆಗಿನ ಕಾಮಗಾರಿ ಪೂರ್ಣಗೊಂಡಿದೆ. 202ರಿಂದ 242 ಕಿ.ಮೀ. ವರೆಗಿನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಯು ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.  242 ಕಿ.ಮೀ.ನಿಂದ 270 ಕಿ.ಮೀ. ವರೆಗಿನ ಕಾಮಗಾರಿ ಸಮೀಕ್ಷೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ಇಡೀ ಯೋಜನೆ 2013ರ ಅಂತ್ಯದೊಳಗೆ ಮುಗಿಯುವ ವಿಶ್ವಾಸವಿದೆ ಎಂದರು.

ತುಂಗಾ ಮೇಲ್ದಂಡೆ ಯೋಜನೆ ಜಿಲ್ಲೆಯ ಜನರಿಗೆ ವರದಾನವಾಗಿದ್ದು, ಯೋಜನೆ ಪೂರ್ಣಗೊಂಡ ನಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಜನರ ಬಹು ವರ್ಷಗಳ ಕನಸು ನನಸಾಗಲಿದೆ. ಜಿಲ್ಲೆಯ 1.60 ಲಕ್ಷ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT