ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರಿಗೆ ಜಾತಿ ಪ್ರಮಾಣ ಪತ್ರ ಇಲ್ಲ: ಜಿಲ್ಲಾಧಿಕಾರಿ

Last Updated 17 ಸೆಪ್ಟೆಂಬರ್ 2011, 6:10 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊರ ರಾಜ್ಯದಿಂದ ವಲಸೆ ಬಂದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುಂದುವರಿದ ಸಾಮಾನ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಮಾತನಾಡಿದರು.

ಜಾತಿ ಗೆಜೆಟ್ ಅಧಿಸೂಚನೆಯಲ್ಲಿ ವಲಸಿಗರ ಜಾತಿ ಇಲ್ಲದಿದ್ದರೆ ಅವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ. ಆದರೆ, ಇಲ್ಲಿಯ ಮೂಲನಿವಾಸಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಯಾವುದೇ ತೊಂದರೆ ಇಲ್ಲ.

ಜಾತಿ ಪ್ರಮಾಣ ಪತ್ರ ಕೇಳುವ ವ್ಯಕ್ತಿಯ ಜಾತಿ ಗೆಜೆಟ್ ಅಧಿಸೂಚನೆಯಲ್ಲಿ ಇದ್ದರೆ ತಹಶೀಲ್ದಾರ್ ಯಾವುದೇ ದಾಖಲೆ ಕೇಳದೆ ಜಾತಿ ಪ್ರಮಾಣ ಪತ್ರ ನೀಡಬೇಕು. ಈ ಕುರಿತಂತೆ ಎಲ್ಲಾ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದರು.

ಅದರಲ್ಲೂ ಭೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಬಹಳಷ್ಟು ಗೊಂದಲಗಳಿವೆ. ತಮಿಳುನಾಡಿನಿಂದ ಬಂದವರು ಭೋವಿ ಜನಾಂಗದ ಪ್ರಮಾಣ ಪತ್ರ ಪಡೆಯಲು ಯತ್ನಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಅವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಬರುವುದಿಲ್ಲ. ತಮಿಳುನಾಡಿನಲ್ಲಿ ಭೋವಿ ಜನಾಂಗವೇ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಹಿಂದೆ ಕೊಟ್ಟಿದ್ದಾರೆ; ಬಹಳ ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾರೆ ಎಂದಾಕ್ಷಣ ಈಗ ಅದೇ ತಪ್ಪನ್ನು ಮುಂದುವರಿಸಲು ಬರುವುದಿಲ್ಲ. ಸುಪ್ರೀಂಕೋರ್ಟ್ ಕೂಡ ಇದನ್ನೇ ಹೇಳಿದೆ ಎಂದರು.

ಜಾತಿ ಪ್ರಮಾಣ ಪತ್ರವನ್ನು ಜಮೀನಿನ ಆರ್‌ಟಿಸಿ ನೀಡಿದಂತೆ ತಕ್ಷಣವೇ ನೀಡುವಂತಹ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಮಾಡಲಾಗಿದೆ. ಈ ಸಂಬಂಧ ಸರ್ಕಾರದಿಂದ ಒಂದು ಆದೇಶ ಬರುವುದಿದೆ. ಅದು ಬಂದ ತಕ್ಷಣ ಈ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಗೊಳಿಸಲಾಗುವುದು. ಅಲ್ಲದೇ, ಜಾತಿ ಪ್ರಮಾಣ ಪತ್ರದ ಕಾಲಮಿತಿ ಬಗ್ಗೆಯೂ ಸ್ಪಷ್ಟವಾಗಲಿದೆ ಎಂದರು.

ಈ ಕುರಿತ ಚರ್ಚೆಯಲ್ಲಿ ಸದಸ್ಯರಾದ ಎಸ್. ಕುಮಾರ್. ಸುಮಂಗಲಾ, ಪದ್ಮಾವತಿ ಚಂದ್ರಕುಮಾರ್ ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT