ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಜೋಪಡಿಯಲ್ಲಿ ಮತಯ(ತ)ಂತ್ರಗಳು!

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚುನಾವಣೆಯಲ್ಲಿ ಮತ ಹಾಕಲು ಉತ್ತರ ಕನ್ನಡದ ಯಲ್ಲಾಪುರದ ಕ್ವಾಣಮಡ್ಡಿ, ಕಾರಕುಂಡಿ ವಾಡಾದ ಗೌಳಿಗರು ದೂರದ ಗೋವಾದಿಂದ ಬರಬೇಕು. ಹೈನುಗಾರಿಕೆ, ಕೃಷಿ ಬದುಕಿನಲ್ಲಿ ಸೋತವರು ಕೆಲಸ ಹುಡುಕಿ ಹೊರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಉತ್ತರ ಕರ್ನಾಟಕದ ಬರಗಾಲ ಪೀಡಿತ ಪ್ರದೇಶಗಳಿಂದ ಮಹಾರಾಷ್ಟ್ರಕ್ಕೆ ಕಬ್ಬು ಕಡಿಯಲು ಹೋದವರು, ಮಂಗಳೂರಿನ ರಸ್ತೆ ಕೆಲಸದಲ್ಲಿ ನಿರತರಾದವರು, ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ದುಡಿಯುವವರೆಲ್ಲ ಊರಿಗೆ ಬಂದು ವೋಟು ಹಾಕಬೇಕು. ಅವರೆಲ್ಲ ಬರುತ್ತಾರೆ, ವಲಸೆ ಹೋದವರನ್ನು ಕರೆತರುವ ಮಧ್ಯವರ್ತಿಗಳು, ವಾಹನದಲ್ಲಿ ಹೊತ್ತು ತರುವ ಗುತ್ತಿಗೆದಾರರು, ವೋಟಿಗೆ ನೋಟು ಕೊಡುತ್ತೇವೆಂದು ವ್ಯವಹಾರ ನಡೆಸುವ ರಾಜಕೀಯ ಮುಖಂಡರು ಇವರ ಮತದಾನಕ್ಕೆ ದುಡಿಯಲು ಶುರುಮಾಡಿದ್ದಾರೆ. ಮತ ಕೈತಪ್ಪದಂತೆ ಸಕಲ ವ್ಯವಸ್ಥೆ ಕಲ್ಪಿಸಲು ತೆರೆಮರೆಯ ಸಿದ್ಧತೆಗಳು ನಡೆದಿವೆ.

ಆಡಳಿತ, ವಿರೋಧಿ ಪಕ್ಷದವರಿಗೆ ಇಷ್ಟು ಕಾಲ ಈ ಹಳ್ಳಿಗರು ಎಲ್ಲಿಗೆ ಹೋಗಿದ್ದಾರೆಂದು ಗೊತ್ತಿರಲಿಲ್ಲ, ಯೋಚಿಸಲು ಸಮಯವಿರಲಿಲ್ಲ! ಶಾಸಕರ ಖರೀದಿ,ರೆಸಾರ್ಟ್ ಓಡಾಟ, ಅದಿರು ಕಳ್ಳ ಸಾಗಣೆ, ದೇಣಿಗೆ ವಸೂಲಿ, ಭೂಮಿ ಖರೀದಿ, ಜೈಲುಯಾತ್ರೆಗಳಲ್ಲಿ ಮುಳುಗಿದ್ದರು. ಈಗ ಮತದಾರರ ಯಾದಿ ಹಿಡಿದು ಪ್ರತಿ ಮನೆಗೆ ಹೋಗಿ ಒಂದೊಂದು ಮತ ಮುಖ್ಯವೆಂದು ಹುಡುಕುತ್ತಿದ್ದಾರೆ. ವಲಸೆ ಹೋದವರನ್ನು ಮರಳಿ ಕರೆಸುವ ಕಾಳಜಿ ಕಾಣುತ್ತಿದೆ. ಊರಲ್ಲಿ ಕೆಲಸ ನೀಡುವುದಕ್ಕಾಗಿ ಆರಂಭವಾದ ಉದ್ಯೋಗ ಖಾತ್ರಿ ಯೋಜನೆಯನ್ನು ಜನಪರವಾಗಿ ಕಾರ್ಯರೂಪಕ್ಕಿಳಿಸಲು ಇವರು ಇಷ್ಟೇ ಪ್ರಯತ್ನ ನಡೆಸಬಹುದಿತ್ತು. ಗುತ್ತಿಗೆದಾರರು, ಮೇಟಿಗಳು, ಪಂಚಾಯತ ಸದಸ್ಯರು ಸೇರಿಕೊಂಡು ಹಣ ತಿಂದು ತೇಗುವಾಗ ಪಕ್ಷದ  ಮುಖಂಡರು ವಲಸೆ ತಡೆಯುವುದು ಮರೆತು ವಸೂಲಿ ವೀರರಾಗಿ ನಿಂತಿದ್ದರು. ಎಳೆಮಕ್ಕಳನ್ನು ಕಟ್ಟಿಕೊಂಡು, ಸಂಸಾರ ಸಾಮಗ್ರಿಗಳನ್ನು ಬಸ್ಸೇರಿಸಿಕೊಂಡು ಊರಿಗೆ ಊರೇ ಗುಳೆ ಹೋಗುವ ವಾರ್ತೆಗಳನ್ನು ಪತ್ರಿಕೆಗಳು ನಿರಂತರ ಪ್ರಕಟಿಸಿವೆ. ಬರದ ಪ್ರಹಾರಕ್ಕೆ ಹಳ್ಳಿ ತೊರೆದು ಪೇಟೆಗೆ ಬಂದವರು ತಮ್ಮನ್ನು ಕೂಲಿಗೆ ಮಾರಿಕೊಳ್ಳುವ ಕರುಣ ದೃಶ್ಯ ಕಣ್ಣೆದುರು ಹಿಡಿದಿವೆ. ಹೋಗುವವರನ್ನು ತಡೆದು ನಿಲ್ಲಿಸಿ ಹಳ್ಳಿಗಳಲ್ಲಿ ಬದುಕು ಕಲ್ಪಿಸುವ ಪ್ರಯತ್ನ ಮಾಡಿದ್ದರೆ ವಲಸೆ ವ್ಯಾಪಕವಾಗುತ್ತಿರಲಿಲ್ಲ. ರಾಜಕಾರಣಿಗಳಿಗೆ ಸಾಮಾಜಿಕ ಕಳಕಳಿಯಿದೆ, ಹೃದಯವಿದೆ ಎಂದು ಆಗ ಮೆಚ್ಚಬಹುದಿತ್ತು.

ಉಡುಪಿ - ಮಣಿಪಾಲ - ಮಂಗಳೂರು ಅಂಚಿನಲ್ಲಿ ಗುಡಿಸಲಲ್ಲಿ ಕಂದಮ್ಮಗಳು ಹೇಗೆ ಕಾಲ ಕಳೆಯುತ್ತಿವೆಯೆಂದು ನೋಡಬೇಕು. ಹಳ್ಳಿಯ ಕೃಷಿ ಕೆಲಸಕ್ಕಿಂತ ಹೆಚ್ಚು ಹಣ ರಸ್ತೆ, ಕಟ್ಟಡ ಕಾಮಗಾರಿಯಲ್ಲಿ ಸಿಗುತ್ತದೆಂದು ಸಂಸಾರ ಸಹಿತ ಬಯಲುನಾಡಿನ ಜನ ಇಲ್ಲಿಗೆ ಬಂದಿದ್ದಾರೆ. ಅಸಂಖ್ಯ ಎಳೆ ಮಕ್ಕಳು ಶಾಲೆಯ ಮೆಟ್ಟಿಲೇರುವದಿಲ್ಲ. ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ ಸಮಸ್ಯೆಯಿಂದ ಬಳಲುತ್ತಿವೆ. ಸರ್ಕಾರದ ಆರೋಗ್ಯ ಸೌಲಭ್ಯ ದೊರಕುವುದಿಲ್ಲ. ರಾಯಚೂರು, ಬೈಲಹೊಂಗಲ, ಬಾದಾಮಿಗಳಿಂದ ರಾತ್ರಿ ಹೊರಡುವ ಬಸ್ಸಿನಲ್ಲಿ ತಿಂಗಳ ಪಡಿತರ ಖರೀದಿಗೆ ಇಲ್ಲಿಂದ ಊರಿಗೆ ಬರುವವರು ಸಿಗುತ್ತಾರೆ. ಸರ್ಕಾರ ನೀಡುವ ಪಡಿತರ ಅಕ್ಕಿ ಖರೀದಿಗೆ 400ಕಿಲೋ ಮೀಟರ್ ಪ್ರಯಾಣಿಸುವವರನ್ನು ಮಾತಾಡಿಸಬೇಕು. ದುಡಿದ ಹಣ ಹೇಗೆ ಖರ್ಚಾಗುತ್ತದೆಂದು ಹೇಳುತ್ತಾರೆ. ಬರದ ನೆಲೆಯಿಂದ ಮಂಗಳೂರಿಗೆ ಕೆಲಸಕ್ಕೆ ಹೋದ 14 ವರ್ಷದ ಹುಡುಗರು ಮುಂದೆ ಕೇರಳಕ್ಕೆ ಕೂಲಿಗೆ ಹೋಗುವ ಕನಸು ಬಿಚ್ಚಿಡುತ್ತಾರೆ. ಹಳ್ಳಿಗಳಲ್ಲಿ ಬೇರೂರುವ ಯಾವ ಸಾಧ್ಯತೆಯೂ ಇವರ ಮನಸ್ಸಿನಲ್ಲಿಲ್ಲ.

ಒಂದು ವೋಟಿಗೆ ಎಷ್ಟು ಹಣ ನೀಡಬೇಕು? ನೇರ ವ್ಯವಹಾರದ ಮಾತು. ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮದ ಮಧ್ಯೆ ಹಣದ ಪ್ರಶ್ನೆ, ಮತ ಖರೀದಿಯ ವಿಚಾರ ಎದುರಿಡುತ್ತಿದ್ದೇನೆಂದು ಅಚ್ಚರಿಯಾಗಬಹುದು. ದಿನದ ಕೂಲಿ 350ರೂಪಾಯಿ ದೊರೆಯುತ್ತದೆ, ಮತ ಹಾಕಲು ಊರಿಗೆ ಬಂದರೆ ಎರಡು ದಿನ ಕೆಲಸಕ್ಕೆ ರಜೆಯಾಗುತ್ತದೆ. ಅನವಶ್ಯಕ ಪ್ರಯಾಣದ ವೆಚ್ಚ ತಗಲುತ್ತದೆ. ಮಂಗಳೂರಿನಲ್ಲಿ ದುಡಿಯುವ ಕೂಲಿಕಾರರಿಗೆ ರಾಯಚೂರಿಗೆ ಬಂದು ಮತ ಹಾಕಲು ಒಬ್ಬರಿಗೆ ಸಾವಿರ ರೂಪಾಯಿ ಖರ್ಚಾಗಬಹುದು. ವಲಸೆ ಹೋದವರು ಹೇಗೆ ಊರಿಗೆ ಬರುತ್ತಾರೆಂದು ಚುನಾವಣಾ ಆಯೋಗ ಯೋಚಿಸುವುದಿಲ್ಲ. ಶೇಕಡಾ ಇಂತಿಷ್ಟು ಮತದಾನವಾಯಿತು ಎಂದಷ್ಟೇ ಪ್ರಕಟಿಸುತ್ತದೆ. ಒಂದು ಮತಕ್ಕೆ ಎರಡು ಸಾವಿರ ನೀಡಿದರೆ ಊರಿಗೆ ಬಂದು ಮತ ಹಾಕಲು ಇವರು ಮುಂದಾಗುತ್ತಾರೆ.

ರಾಜಕೀಯ ಪುಡಾರಿಗಳಿಗೆ ಇವರು ಹಣಕ್ಕೆ ಖರೀದಿಸುವ ಮತಯಂತ್ರಗಳು! ದಿನದ ದುಡಿಮೆ ಇವರ ಹೊತ್ತಿನ ಅನ್ನ ನೀಡಬೇಕು. ಚುನಾವಣೆಗೆಂದು ಉಪವಾಸ ಬೀಳಲಾಗುವುದಿಲ್ಲ, ರಾಜಕೀಯ ಪಕ್ಷಗಳ ಸೌಲಭ್ಯ ಬಳಸಿಕೊಂಡು ಊರಿಗೆ ಬಂದು ಮತ ಒತ್ತಿ ಹೋಗುತ್ತಾರೆ. ಯಾರು ಗೆದ್ದು ಏನು ಉದ್ಧಾರ ಮಾಡುತ್ತಾರೆಂಬುದಕ್ಕಿಂತ ಈಗೆಷ್ಟು ಹಣ ನೀಡುತ್ತಾರೆಂಬುದು ಮುಖ್ಯವಾಗುತ್ತದೆ. ಬಡವರ ವಲಸೆಯನ್ನು ಪೋಷಿಸುವ ರಾಜನೀತಿ ಚುನಾವಣೆಯನ್ನು ಅಣಕಿಸುತ್ತಿದೆ.

ಒಂದೊಂದು ಕುಟುಂಬವೂ ವೈಯಕ್ತಿಕ ಆರ್ಥಿಕ ಕಾರಣಗಳಿಗೆ ಗುಳೆ ನಿರ್ಧಾರ ಮಾಡುತ್ತದೆ. ಸರ್ಕಾರಕ್ಕೆ ಪ್ರತಿ ಕುಟುಂಬದ ಮೇಲೆ ಕಣ್ಣಿಟ್ಟು ಕೆಲಸ ಮಾಡಲಾಗುವುದಿಲ್ಲ. ಸಮೂಹಸನ್ನಿಯಂತೆ ಕೂಲಿಕಾರರು ಬಸ್ ನಿಲ್ದಾಣಗಳಲ್ಲಿ ಜಮಾಯಿಸಿದಾಗ ಸಮಸ್ಯೆಯ ಭೀಕರ ಮುಖ ಸುಲಭದಲ್ಲಿ ಅರಿಯಬಹುದು. ವಲಸೆ ಪರಿಣಾಮಗಳ ಬಗೆಗೆ ಜಾಗೃತಿ ಮೂಡಿಸುವ, ಮಕ್ಕಳ ಶಿಕ್ಷಣದ ಬಗೆಗೆ ಅರಿವು ಹೆಚ್ಚಿಸುವ ಕೆಲಸ ಆಗ ನಡೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹಳ್ಳಿ, ಪಕ್ಕದ ಹಳ್ಳಿ, ಪೇಟೆಗಳ ಸುರಕ್ಷಿತ ಪರಿಸರದಲ್ಲಿ ಇವರಿಗೆ ಕೆಲಸದ ಸಾಧ್ಯತೆ ಹುಡುಕಬೇಕು. ಇಂದು ಕರಾವಳಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಂತೆ ಬಯಲುಸೀಮೆಯ ನೀರಾವರಿ ಪ್ರದೇಶಗಳಲ್ಲಿಯೂ ಸಾಕಷ್ಟು ಚಟುವಟಿಕೆಗಳಿವೆ. ಕೃಷಿ ಕೆಲಸದ ಬಳಿಕ ದೂರದ ಊರಿಗೆ ವಲಸೆ ಹೋಗುವುದು ಹಿಂದಿನ ಕಾಲದಲ್ಲಿ ಅನಿವಾರ್ಯವಿರಬಹುದು, ಈಗ ಸ್ಥಿತಿ ಬದಲಾಗಿದೆ. ದುಡಿಮೆಯ ಅವಕಾಶಗಳನ್ನು ಸ್ಥಳೀಯವಾಗಿ ಪರಿಚಯಿಸುವ ಪರಿಣಾಮಕಾರಿ ಪ್ರಯತ್ನ ಬೇಕು. ಚುನಾವಣೆಯಲ್ಲಿ ಮಾತ್ರ ಎಚ್ಚರಾಗುವ ರಾಜಕೀಯ ಕಾರ್ಯಕರ್ತರು ವರ್ಷದ ಉಳಿದ ದಿನಗಳಲ್ಲಿ ವಲಸೆ ತಡೆಯುವ ಕೆಲಸ ಮಾಡಬಹುದು. ಮಕ್ಕಳು ಮೊಮ್ಮಕ್ಕಳಿಗೆ ಚುನಾವಣೆಗೆ ಟಿಕೆಟ್ ಬೇಕು ಎಂದು ದೆಹಲಿಗೆ ಹೋಗಿ ಹೋರಾಟ ನಡೆಸುವ ರಾಜಕಾರಣಿಗಳಿಗೆ ಮತ ನೀಡಿದ ಬಡವರ ಬಗೆಗೆ ಕಳಕಳಿ ಇಲ್ಲ. ಅವರು ಹೇಗೆ ಬದುಕುತ್ತಾರೆಂದು ಕಣ್ಣೆತ್ತಿ ನೋಡುವುದಿಲ್ಲ.

ಇಂದು ಯಾರು ಕೆಜೆಪಿ ಸೇರಿದರು, ಯಾರು ಬಿಜೆಪಿ ಬಿಟ್ಟರು, ಕಾಂಗ್ರೆಸ್ಸಿಗೆ ಕೈ ಕೊಟ್ಟವರು, ಜೆಡಿಎಸ್ ಮರೆತವರು ಎಂದು ದಿನಕ್ಕೊಂದು ಕಥೆ ಕೇಳುತ್ತಿದ್ದೇವೆ. ರಾಜಕಾರಣಿಗಳ ವಲಸೆ ಬಹುತೇಕವಾಗಿ ಅಧಿಕಾರ, ಸೇಡು, ವ್ಯವಹಾರಕ್ಕೆ ಸೀಮಿತವಾಗಿವೆ. ತತ್ವವೆನ್ನುವುದು ನಾಟಕದ ಮಾತಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕದವರು ಜೈಲಿಗೆ ಹೋಗುವುದನ್ನು ತಪ್ಪಿಸಲು ಹೊಸ ಪಕ್ಷ ಕಟ್ಟುವ ಪರಿಸ್ಥಿತಿ  ನೋಡುತ್ತಿದ್ದೇವೆ. ಕೂಲಿಗಾಗಿ ವಲಸೆ ಹೋಗುವ ಬಡವರ ಮೇಲೆ ಇಂಥವರದು ಮತ ಖರೀದಿಯ ಬಂಡವಾಳ! ಜನಜೀವನದ ಬದುಕನ್ನು ದುಃಸ್ಥಿತಿಗೆ ನೂಕುತ್ತ ಪ್ರಜೆಗಳನ್ನು  ತಮ್ಮ ಮತ ಯಂತ್ರಗಳಾಗಿ ಪಳಗಿಸುತ್ತಾರೆ. ಹೀಗಾಗಿ ಕಟ್ಟುನಿಟ್ಟಿನ ಕಾನೂನಿನ ಮಧ್ಯೆಯೂ ಮತ ಮಾರುಕಟ್ಟೆ ಬೆಳೆಯುತ್ತಿದೆ. ಚುನಾವಣೆಯಿಂದ ಚುನಾವಣೆಗೆ ವೋಟಿನ ರೇಟು ಏರುತ್ತಿದೆ! ಹೆದ್ದಾರಿಯ ಜೋಪಡಿಯಲ್ಲಿ ಮುದುಡಿದ ಕಂದಮ್ಮಗಳ ಬದುಕು, ವಲಸೆ ಸಂಸಾರಗಳ ಯಾತನೆಗಳನ್ನು ಯಾರೂ  ಕೇಳುವುದಿಲ್ಲ. ಅವರೆಲ್ಲ ಬರುತ್ತಾರೆ. ಮತ ಹಾಕಿ ವಲಸೆ ಹೊರಡುತ್ತಾರೆ. ವ್ಯವಸ್ಥೆಯ ವ್ಶೆರುಧ್ಯವಾಗಿ ವಲಸೆ ಜೋಪಡಿಗಳಲ್ಲಿ ಮನುಷ್ಯ ಮತಯಂತ್ರವಾಗುತ್ತಾನೆ. ಹರಾಜು ಕಟ್ಟೆಗಳು ಭರ್ತಿಯಾಗುತ್ತಿವೆ, ಖರೀದಿಗೆ ಕ್ಷಣಗಣನೆ ಶುರುವಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT