ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ, ನಿವೇಶನ ಒದಗಿಸಲು ಗ್ರಾಮಸ್ಥರ ಆಗ್ರಹ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಸತಿರಹಿತರಿಗೆ ಮತ್ತು ನಿವೇಶನರಹಿತರಿಗೆ ವಸತಿ ಮತ್ತು ನಿವೇಶನ ಸೌಲಭ್ಯ ಕಲ್ಪಿಸುವಂತೆ ಅಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಸೋಮವಾರ ಅರ್ಜಿಗಳನ್ನು ಸಲ್ಲಿಸಿದರು.

ಕಮ್ಮಗುಟ್ಟಹಳ್ಳಿ ಗ್ರಾಮದ ಪ್ರವೇಶದ್ವಾರದಿಂದ ಗ್ರಾಮ ಪಂಚಾಯಿತಿಯ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಗ್ರಾಮಸ್ಥರು, `ಅರ್ಹರಿಗೆ ವಸತಿ ಮತ್ತು ನಿವೇಶನಗಳನ್ನು ಒದಗಿಸುವುದರ ಮೂಲಕ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳಬೇಕು~ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, `ವಸತಿ ಮತ್ತು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಸರ್ಕಾರ ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು~ ಎಂದರು.

ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನರಸಿಂಹಾಚಾರಿ, `ಮುಂದಿನ ಎರಡು ದಿನಗಳ ಅವಧಿಯಲ್ಲಿ ಎಲ್ಲ ಅರ್ಜಿಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದು. ಜಿಲ್ಲಾಡಳಿತದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದರು.

ಕಮ್ಮಗುಟ್ಟಹಳ್ಳಿ, ಹಿರೇನಾಗವಲ್ಲಿ, ಪಿ.ಚೊಕ್ಕನಹಳ್ಳಿ, ಮುದ್ದಲಹಳ್ಳಿ, ದಿನಹಳ್ಳಿ, ಬೋಡಿನಾರೇನಹಳ್ಳಿ, ರೊಪಾರ‌್ಲಹಳ್ಳಿ, ಮಾರನಾಯಕನಹಳ್ಳಿ, ರೇಣುಮಾಕಲಹಳ್ಳಿ, ಬೊಮ್ಮಗಾನಹಳ್ಳಿ, ಉಪ್ಪಗುಟ್ಟಹಳ್ಳಿ, ಕರಕಮಾಕಲಹಳ್ಳಿ, ಕೊಮ್ಮಲಮರಿ, ಚಿಕ್ಕನಾರಪ್ಪನಹಳ್ಳಿ, ಆರ್.ಚೊಕ್ಕನಹಳ್ಳಿ, ಜೀಗಾನಹಳ್ಳಿ, ನಮಿಲಗುರ್ಕಿ, ವಕ್ರಹಳ್ಳಿ, ರಾಮಪಟ್ಟಣ, ಆರ್.ಕಂಬಾಲಹಳ್ಳಿ, ಉಪಗಿರಿನಲ್ಲಪ್ಪನಹಳ್ಳಿ, ನಾಗಸಾನಹಳ್ಳಿ, ವಂಟೂರು, ಸಿದ್ದಗಾನಹಳ್ಳಿ ಮುಂತಾದ ಗ್ರಾಮಗಳ ನಿವಾಸಿಗಳು ಅರ್ಜಿಗಳನ್ನು ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಜನವಾದಿ ಮಹಿಳಾ ಸಂಘಟನೆ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT