ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆ ಶಿಕ್ಷಕರ ಕಾಯಂ: ಸರ್ಕಾರ ಮೌನ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ವಿವಿಧ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಕಾಯಂಗೊಳಿಸುವ ಬಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ್ದ ವಿಶೇಷ ವರದಿಯತ್ತ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ.

ಇದರಿಂದ ಮೊರಾರ್ಜಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅತಂತ್ರ ಸ್ಥಿತಿ ಉಂಟಾಗಿದೆ. ಮಾರ್ಚ್ 2010ರಲ್ಲಿ ಆಯೋಗ, ಸರ್ಕಾರಕ್ಕೆ ಈ ಕುರಿತು ವಿಶೇಷ ವರದಿ ಸಲ್ಲಿಸಿದೆ. ಆದರೆ, ಆಯೋಗದ ವರದಿಯತ್ತ ತಿರುಗಿಯೂ ನೋಡದ ಸರ್ಕಾರ ಇದೀಗ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಮೊರಾರ್ಜಿ ಶಾಲೆಯ ಹೊರಗುತ್ತಿಗೆ ಶಿಕ್ಷಕರ ಬದುಕಿಗೆ ಮುಳ್ಳಾಗಿದೆ.

`ರಾಜ್ಯದಲ್ಲಿ 385 ಮೊರಾರ್ಜಿ ದೇಸಾಯಿ ಶಾಲೆಗಳಿದ್ದು, ಇದರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಶಿಕ್ಷಕರನ್ನು ತಕ್ಷಣವೇ ಕಾಯಂಗೊಳಿಸಬೇಕು. ಇತರ ಮೂಲಗಳಿಂದ ನೇಮಕಗೊಂಡವರನ್ನು ಇಲಾಖೆ ಎರಡು ವರ್ಷದ ತನಕ ಗುತ್ತಿಗೆ ಆಧಾರದಲ್ಲಿ ನೇಮಿಸಿ, ನಂತರ ಕಾಯಂಗೊಳಿಸಬೇಕು~ ಎಂಬುದು ಸೇರಿದಂತೆ ನಾಲ್ಕು ಮುಖ್ಯ ಅಂಶಗಳನ್ನು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಇದರಿಂದ ಹೊರಗುತ್ತಿಗೆ ಶಿಕ್ಷಕರು ಪ್ರಸಕ್ತ ವರ್ಷ ಈ  ಶಾಲೆಗಳಲ್ಲಿ ಪಾಠ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ರಾಜ್ಯದ ಮೊರಾರ್ಜಿ ಶಾಲೆಗಳ ವಿದ್ಯಾರ್ಥಿಗಳು ಬೇರೆ ಶಾಲೆಗಳತ್ತ ಗುಳೇ ಹೊರಟಿದ್ದಾರೆ.

ಹರಾಜಿನಲ್ಲಿ ಮಾನವ ಸಂಪನ್ಮೂಲ!:“ಶೈಕ್ಷಣಿಕ ಕಾರ್ಯದ ನಿರ್ವಾಹಕರಾದ ಶಿಕ್ಷಕರನ್ನು ಹರಾಜಿನಲ್ಲಿ ಕೊಂಡುಕೊಳ್ಳುವುದು ಅತ್ಯಂತ ಅವಮಾನಕಾರಿ. ಮಾನವ ಸಂಪನ್ಮೂಲವನ್ನು ಹರಾಜಿನಲ್ಲಿ ಕರೆದು ಪೂರೈಸುವ ಪರಿಕಲ್ಪನೆ ಸಂವಿಧಾನವು ಖಾತ್ರಿ ಪಡಿಸಿರುವ `ವ್ಯಕ್ತಿಘನತೆ~ ಕಲ್ಪನೆಗೆ ವಿರುದ್ಧವಾಗಿದೆ” ಎಂದೂ ಆಯೋಗ ಸರ್ಕಾರಕ್ಕೆ ಎಚ್ಚರಿಸಿದೆ.

`ಟೆಂಡರ್ ಪದ್ಧತಿ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವವರು ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಸರ್ಕಾರ ನಿಗದಿಪಡಿಸಿರುವ ಗೌರವ ಸಂಭಾವನೆ ಕೊಡದೇ ಶೋಷಿಸುತ್ತಿರುವ ಆರೋಪಗಳಿವೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆ)ದಿಂದ ನೇಮಕಗೊಂಡವರನ್ನು ಮಾತ್ರ ಸರ್ಕಾರ ಕಾಯಂಗೊಳಿಸಲು ಭರವಸೆ ನೀಡಿದೆ. ಆದರೆ, ಅವರಿಗೂ ಇನ್ನೂ ಆದೇಶ ಪತ್ರ ತಲುಪಿಲ್ಲ.

ಆದರೆ, ಹೊರಗುತ್ತಿಗೆ ಮೂಲಕ ನೇಮಕಗೊಂಡವರ ಶ್ರಮಕ್ಕೆ ಬೆಲೆ ಕಟ್ಟದ ಸರ್ಕಾರ, ರಾಜ್ಯದ ಸುಮಾರು 5 ಸಾವಿರಕ್ಕೂ ಹೆಚ್ಚು ಶಿಕ್ಷಕರ ಬದುಕನ್ನು ಅತಂತ್ರಕ್ಕೆ ದೂಡಿದೆ~ ಎಂದು ಆರೋಪಿಸುತ್ತಾರೆ ರಾಜ್ಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಗಳ ಹೊರ ಸಂಪನ್ಮೂಲ ಶಿಕ್ಷಕರ ಮತ್ತು ಪ್ರಾಂಶುಪಾಲರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಪ್ರವೀಣ್‌ಕುಮಾರ್.

`ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊರಾರ್ಜಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹಿಂದುಳಿದವರ ವಿಚಾರ ಬಂದಾಗ, ಹಿಂದುಳಿದ ವರ್ಗಗಳ ಮಕ್ಕಳ ಫಲಿತಾಂಶವನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಸರ್ಕಾರ, ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ನಿರ್ಲಕ್ಷಿಸಿದೆ. ಗುತ್ತಿಗೆ ಆಧಾರದಲ್ಲಿ ನೇಮಕ ನಡೆದಿದೆ ಎನ್ನುವುದನ್ನೇ ನೆಪವಾಗಿಟ್ಟುಕೊಂಡು, ನಮ್ಮನ್ನು ಸರ್ಕಾರ `ಯೂಸ್ ಅಂಡ್ ಥ್ರೋ~ ಎಂಬಂತೆ ಬಳಸಿಕೊಳ್ಳುತ್ತಿದೆ. ನ್ಯಾಯ ನೀಡುವ ಸರ್ಕಾರವೇ ಹೀಗೆ ಮಾಡಿದರೆ ನಾವು ಯಾರಿಗೆ ದೂರು ಸಲ್ಲಿಸೋಣ? ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದಾಗ ಇಲಾಖೆಯ ಸಚಿವರು ಕನಿಷ್ಠ ನಮ್ಮ ಸಮಸ್ಯೆಯನ್ನು ಕೇಳುವ ಸೌಜನ್ಯವನ್ನೂ ತೋರಲಿಲ್ಲ~ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT