ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿಗೃಹದ ಬಾಗಿಲು, ಕಿಟಕಿ ನಾಪತ್ತೆ

Last Updated 4 ಜುಲೈ 2012, 5:15 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 4 ವಸತಿ ಗೃಹಗಳ ಬಾಗಿಲು ಮತ್ತು ಕಿಟಕಿಗಳನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೇ ಅಕ್ರಮವಾಗಿ  ಕಿತ್ತು ಹಾಕಿದ್ದಾರೆ ಎಂದು ದೂರಲಾಗಿದೆ.

ಸರ್ಕಾರಿ ನೌಕರರ ಅನುಕೂಲಕ್ಕೆಂದು 30 ವರ್ಷಗಳ ಹಿಂದೆ ನಾಲ್ಕು ವಿಶಾಲವಾದ ವಸತಿಗೃಹಗಳನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿತ್ತು. ಕೆಲ ವರ್ಷಗಳ ಕಾಲ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಕೆಲವರು ವಾಸವಿದ್ದರು.

ನಂತರ ಯಾರೂ ಬಾರದ್ದರಿಂದ ಪಾಳು ಬಿದ್ದಿದ್ದವು. ತನ್ನ ಕಚೇರಿ ಮುಂದೆಯೇ ಇರುವ ಈ ವಸತಿಗೃಹ ಮತ್ತು ಜಾಗದ ಬಗ್ಗೆ ಗ್ರಾಮ ಪಂಚಾಯಿತಿಗೂ ಸ್ಪಷ್ಟತೆ ಇರಲಿಲ್ಲ. ಈಚೆಗೆ ಎನ್‌ಆರ್‌ಇಜಿ ಅನುದಾನ ಬಳಸಿ ಸಮುದಾಯ ಭವನ ನಿರ್ಮಿಸಬೇಕು ಎಂದು ಗ್ರಾ.ಪಂ. ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಪಾಳು ಬಿದ್ದಿದ್ದ ವಸತಿಗೃಹ ಸ್ಥಳದ ಬಗ್ಗೆ ಮಾಹಿತಿ ಪಡೆಯಲು ಗ್ರಾ.ಪಂ.ನಿಂದ 10 ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆ ಇಲಾಖೆಯಿಂದ ಯಾವುದೇ ಪ್ರತ್ಯುತ್ತರ ಬಂದಿರಲಿಲ್ಲ.

ವಸ್ತುಸ್ಥಿತಿ ಹೀಗಿರುವಾಗಲೆ ಗ್ರಾ.ಪಂ. ಉಪಾಧ್ಯಕ್ಷ ದೇವರಾಜು ಈಚೆಗೆ ಜೆಸಿಬಿ ಬಳಸಿ ಅಕ್ರಮವಾಗಿ ವಸತಿಗೃಹಗಳ ಬಾಗಿಲು, ಕಿಟಕಿ ಕಿತ್ತುಕೊಂಡು, ಗೋಡೆ ಕೆಡವಿದ್ದಾರೆ ಎಂದು ದೂರಿ ಕೆಲ ಗ್ರಾಮಸ್ಥರು ಗ್ರಾಮಾಂತರ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಸ್ಥಳ ಪರಿಶೀಲಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಹ ತಮ್ಮ ಇಲಾಖೆಗೆ ಸೇರಿದ ವಸತಿ ಗೃಹಗಳ ಕಿಟಕಿ, ಬಾಗಿಲುಗಳನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಠಾಣೆಗೆ ಮಾಹಿತಿ ನೀಡಿದ್ದಾರೆ.
ಗುರುತಿನ ಚೀಟಿ ವಿತರಣೆ

ಕೊರಟಗೆರೆ: ರಾಜ್ಯ ಒಕ್ಕಲಿಗ ಸಂಘದ ಸದಸ್ಯತ್ವ ನೊಂದಾವಣಿ ಅಭಿಯಾನ 3 ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಸದಸ್ಯತ್ವ ಪಡೆಯದಿರುವವರು ನಿಗದಿತ ವೇಳೆಯಲ್ಲಿ ಸದಸ್ಯತ್ವ ಪಡೆಯುವಂತೆ ರಾಜ್ಯ ಒಕ್ಕಲಿಗ ಸಂಘದ ಸಂಘಟನಾ ಕಾರ್ಯದರ್ಶಿ ಆಡಿಟರ್ ನಾಗರಾಜು ಮನವಿ ಮಾಡಿದರು.

ಪಟ್ಟಣದಲ್ಲಿ ಶನಿವಾರ ಒಕ್ಕಲಿಗ ಸಂಘದ ಸದಸ್ಯತ್ವ ಗುರುತಿನ ಚೀಟಿ ವಿತರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, 2ನೇ ಬಾರಿಗೆ ಸದಸ್ಯತ್ವ ನೊಂದಣಿ ಹಾಗೂ ಗುರುತಿನ ಚೀಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗವನ್ನು ಜನಾಂಗದವರು ಪಡೆದುಕೊಳ್ಳಬೇಕು ಎಂದರು.

ಸಮಾಜದಲ್ಲಿ ಇದ್ದ ಗೊಂದಲ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ನಿವಾರಣೆಯಾಗಿದ್ದು, 114 ಒಳ ಪಂಗಡಗಳ ಒಕ್ಕಲಿಗ ಸಮುದಾಯ ಒಂದೇ. ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಂತೆ ಜಿಲ್ಲಾವಾರು ಸಮಾವೇಶ ನಡೆಸುವ ಉದ್ದೇಶವಿದ್ದು, ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ತುಮಕೂರಿನಲ್ಲಿ ಸಮಾವೇಶ ನಡೆಸಲಾಗುವುದು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಸಂಘದ ಎರಡು ಎಕರೆ ಜಮೀನು ಹಸ್ತಾಂತರಗೊಂಡ ನಂತರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾ ಸಂಸ್ಥೆ, ಉಚಿತ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

ವಿತರಣೆ ಸಂದರ್ಭದಲ್ಲಿ ತಹಶೀಲ್ದಾರ್ ವಿ.ಪಾತರಾಜು, ಇನ್ಸ್‌ಪೆಕ್ಟರ್ ಕೆ.ಆರ್.ಚಂದ್ರಶೇಖರ್, ನೌಕರರ ಸಂಘದ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ, ಕರಕಲಘಟ್ಟ ಹನುಮಂತರಾಯಪ್ಪ, ಜಗದೀಶ್, ನಟರಾಜು ಇತರರು ಇದ್ದರು.

ಎಲ್ಲರಿಗೆ ಹಾಸ್ಟೆಲ್ ಪ್ರವೇಶಕ್ಕೆ ಆಗ್ರಹ
ತುಮಕೂರು: ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ದೊರಕುತ್ತಿಲ್ಲ. ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಭಾರತ್ ವಿದ್ಯಾರ್ಥಿ ಫೆಡರೇಶನ್ ಆಗ್ರಹಿಸಿದೆ.

ಕೆಲವರು ರಾಜಕಾರಣಿಗಳ ಪ್ರಭಾವ ಬಳಸಿಕೊಂಡು ಪ್ರವೇಶಾತಿ ಪಡೆಯುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಕಲಿಯಲು ಬರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ದೊರೆಯುತ್ತಿಲ್ಲ. ತ್ವರಿತವಾಗಿ ವಸತಿ ನಿಲಯಗಳನ್ನು ಆರಂಭವಾಗುವುದಕ್ಕೆ ಅಧಿಕಾರಿಗಳು ಸೂಕ್ತ ಕ್ರಮ ಅನುಸರಿಸಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಸ್‌ಎಫ್‌ಐ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT