ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಾಹತುಶಾಹಿ ಭಾಷೆ ಬೇಡ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು  ಶಿಷ್ಟಾಚಾರದ ಹೊಸ ನಿಯಮಗಳಿಗೆ ನಾಂದಿ ಹಾಡಿದ್ದಾರೆ. ಈ ಪ್ರಕಾರ, ರಾಷ್ಟ್ರಪತಿಗಳನ್ನು ಸಂಬೋಧಿಸುವಾಗ ಲಾಗಾಯ್ತಿನಿಂದಲೂ  ಬಳಸಿಕೊಂಡು ಬರುತ್ತಿರುವ `ಹಿಸ್ ಎಕ್ಸೆಲೆನ್ಸಿ~ ಪದಬಳಕೆ ಮಾಡಬಾರದೆಂದು ಸೂಚಿಸಲಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ, ರಾಷ್ಟ್ರಪತಿಗಳನ್ನು `ಮಿಸ್ಟರ್ ಪ್ರೆಸಿಡೆಂಟ್~ ಎಂದು ಸಂಬೋಧಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾಯಿತ ನಾಯಕರಾಗಿ ರಾಷ್ಟ್ರಪತಿಯವರದು ಅತ್ಯುನ್ನತ ಗೌರವದ ಸ್ಥಾನ.

ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಈ ಪ್ರಬುದ್ಧ ರಾಜಕಾರಣಿ, ಭಾಷಾ ಬಳಕೆಯಲ್ಲಿನ ಸೂಕ್ಷ್ಮತೆಯನ್ನು ಗ್ರಹಿಸುವ ಸಂವೇದನಾಶೀಲತೆ ತೋರಿರುವುದು ಪ್ರಶಂಸನೀಯ.

ಭಾರತದ ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು. ಹೀಗಾಗಿ ಶಿಷ್ಟಾಚಾರಗಳು ಬಿಂಬಿಸುವ ಆಡಂಬರಗಳಲ್ಲಿನ ಅಸಮಾನತೆಗಳ ಸಾಂಕೇತಿಕತೆಗಳ ಸುಧಾರಣೆಗೆ ರಾಷ್ಟ್ರಪತಿಗಳು ಒಲವು ತೋರಿರುವುದು ಹೊಸ ಹೆಜ್ಜೆ.

`ಗೌರವಾನ್ವಿತ~, `ಘನತೆವೆತ್ತ~ ಪದಪುಂಜಗಳ ಬಳಕೆಗೆ ಬದಲು, ಭಾರತೀಯ ಪರಂಪರೆಗೆ ಅನುಗುಣವಾಗಿ ಹೆಸರಿನ ಹಿಂದೆ  `ಶ್ರೀ~  ಸೇರಿಸಲು ಸೂಚಿಸಲಾಗಿದೆ. ಇದೊಂದು ದೊಡ್ಡ ಬದಲಾವಣೆ ಎಂದೇ ಹೇಳಬೇಕು.

ಆದರೆ ಅಂತರರಾಷ್ಟ್ರೀಯ ವಲಯದಲ್ಲಿ ಈಗಲೂ ಹಳೆಯ ಶಿಷ್ಟಾಚಾರಗಳೇ ಚಾಲ್ತಿಯಲ್ಲಿರುವುದರಿಂದ, ವಿದೇಶಿ ನಾಯಕರುಗಳ ಜೊತೆ ರಾಷ್ಟ್ರಪತಿಗಳು ವ್ಯವಹರಿಸುವಾಗ ಹಳೆಯ ಶಿಷ್ಟಾಚಾರಗಳನ್ನೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ವಸಾಹತುಶಾಹಿಯ ಕುರುಹುಗಳಾಗಿ ಉಳಿದುಕೊಂಡಿರುವ ಶಿಷ್ಟಾಚಾರಗಳ ಆಡಂಬರಗಳು ಸಮಾಜದೊಳಗೆ ಹಾಸುಹೊಕ್ಕಾಗಿ ಹೋಗಿವೆ. ಇವನ್ನು ಏಕಾಏಕಿ ಬದಲಿಸುವುದು ಅಷ್ಟೇನೂ ಸುಲಭದ ಮಾತಲ್ಲ.

ಆದರೆ ಸ್ವತಂತ್ರ ಭಾರತದ ಆಶಯಗಳನ್ನು ಸಂಕೇತಿಸುವ ರೀತಿಯಲ್ಲಿ ಭಾಷಾ ಬಳಕೆ ಕುರಿತಂತೆ ರಾಷ್ಟ್ರಪತಿಗಳು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಮೇಲ್ಪಂಕ್ತಿಯನ್ನು ಅನುಸರಿಸಲು ರಾಜ್ಯಗಳ ರಾಜ್ಯಪಾಲರುಗಳಿಗೂ ರಾಷ್ಟ್ರಪತಿಗಳ ಕ್ರಮ ಪ್ರೇರಣೆಯಾಗಲಿ ಎಂಬುದು ಆಶಯ.

ನ್ಯಾಯಾಲಯಗಳಲ್ಲಿ ನ್ಯಾಯಾಧೀಶರನ್ನು ಸಂಬೋಧಿಸುವಾಗ `ಮೈ ಲಾರ್ಡ್~ ಅಥವಾ `ಯುವರ್ ಲಾರ್ಡ್‌ಷಿಪ್~ ಎಂಬಂತಹ ಪದ ಪ್ರಯೋಗಗಳ ಬಗೆಗೂ ಈ ಹಿಂದೆ ಇದೇ ರೀತಿಯ ವ್ಯಾಖ್ಯಾನಗಳನ್ನು ನೀಡಲಾಗಿತ್ತು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ  ನ್ಯಾಯಾಧೀಶರುಗಳನ್ನು ಸಂಬೋಧಿಸುವಾಗ  `ಮೈ ಲಾರ್ಡ್~

ಅಥವಾ `ಯುವರ್ ಲಾರ್ಡ್‌ಷಿಪ್~ ಎಂಬ ಪದಗಳಿಗೆ ಬದಲಾಗಿ `ಯುವರ್ ಆನರ್~ ಅಥವಾ `ಆನರಬಲ್ ಕೋರ್ಟ್~ ಎಂಬ ನುಡಿಗಟ್ಟುಗಳನ್ನು ಬಳಸಬೇಕು ಎಂದು 2006ರಲ್ಲಿಯೇ ಭಾರತದ ಬಾರ್ ಕೌನ್ಸಿಲ್ ನಿರ್ಣಯಿಸಿತ್ತು. ಜೊತೆಗೆ ಅಧೀನ ನ್ಯಾಯಾಲಯಗಳಲ್ಲಿ `ಸರ್~ ಅಥವಾ ಪ್ರಾದೇಶಿಕ ಭಾಷೆಯಲ್ಲಿರಬಹುದಾದ ತತ್ಸಮಾನವಾದ ಪದಪುಂಜ ಬಳಕೆಯನ್ನು ರೂಢಿಗೆ ತರಲೂ ಸೂಚಿಸಲಾಗಿತ್ತು.

ಆದರೆ ಈ ಬಗೆಗಳಲ್ಲಿ ವಸಾಹತುಶಾಹಿ ಸ್ಮೃತಿಗಳನ್ನು ಅಳಿಸುವ ಪ್ರಕ್ರಿಯೆ ಅಷ್ಟು ಸುಲಭದ್ದಲ್ಲ. ಶತಮಾನಗಳಿಂದ ಜಡ್ಡುಗಟ್ಟಿದ ಆಚರಣೆಗಳಿಗೆ ಸ್ವತಂತ್ರ ಭಾರತದ ದೇಸಿ ಸಂಸ್ಕೃತಿಗಳ ಸ್ಪರ್ಶ ಒದಗಿಸುವ ಪ್ರಕ್ರಿಯೆಗಳು ನಿಧಾನವಾಗಿ ಬೇರೂರಬೇಕಿವೆ.

ಎಪ್ಪತ್ತರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಜಧನ ವ್ಯವಸ್ಥೆ ರದ್ದು ಪಡಿಸಿದ ನಂತರ ರಾಜರುಗಳ ಬಿರುದುಬಾವಲಿಗಳನ್ನು ಕಿತ್ತುಹಾಕಲಾಗಿತ್ತು. ಹೀಗಿದ್ದೂ ಸ್ವತಂತ್ರ ಭಾರತದಲ್ಲಿ ಪಂಜಾಬ್‌ನ ಕಾಂಗ್ರೆಸ್ ನಾಯಕರೊಬ್ಬರನ್ನು `ಮಹಾರಾಜ~ ಎಂದು  ಕರೆಯುವ ಬಗ್ಗೆ ಯಾರೂ ಮುಜುಗರ ಅನುಭವಿಸುವುದಿಲ್ಲ. ಪ್ರಜಾತಂತ್ರದ ಆಶಯಗಳಿನ್ನೂ ಅಂತರ್ಗತವಾಗಬೇಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT