ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸೂಲಿ: ಆಟೋ ಚಾಲಕರಿಂದ ಪ್ರತಿಭಟನೆ

Last Updated 18 ಮಾರ್ಚ್ 2011, 7:30 IST
ಅಕ್ಷರ ಗಾತ್ರ

ಬೀದರ್: ಸಂಚಾರ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಟೋ ಚಾಲಕರು ನಗರದಲ್ಲಿ ಗುರುವಾರ ಆಟೋಗಳೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸಿದರು.ಭಾರತೀಯ ಜೈ ಭೀಮದಳ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಕ್ರಾಂತಿ ಗಣೇಶ, ಗಾವಾನ್ ಚೌಕ್, ಚೌಬಾರಾ, ಶಹಾಗಂಜ್, ಬಸವೇಶ್ವರ ವೃತ್ತ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಆಟೋಗಳು ಪಾಲ್ಗೊಂಡಿದ್ದವು.

ನಿರುದ್ಯೋಗಿ ಯುವಕರು ಜೀವನೋಪಾಯಕ್ಕಾಗಿ ಸಾಲ ಪಡೆದು ಆಟೋ ರಿಕ್ಷಾ, ಟಾಟಾ ಮ್ಯಾಜಿಕ್‌ಗಳನ್ನು ನಡೆಸುತ್ತಿದ್ದಾರೆ. ಆದರೆ, ಸಂಚಾರ ಪೊಲೀಸರು ವಿನಾಕಾರಣ ನಿತ್ಯ ಬಲವಂತವಾಗಿ ನೂರಾರು ರೂಪಾಯಿ ಕಸಿದು ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ಆಟೋ ಚಾಲಕರು ಸಂಕಟ ಅನುಭವಿಸುವಂತಾಗಿದೆ ಎಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.

ಸಂಚಾರ ಪೊಲೀಸರು ನಗರದ ವಿವಿಧೆಡೆಗಳಲ್ಲಿ ನಿಲ್ಲುವ ಮ್ಯಾಕ್ಸಿಕ್ಯಾಬ್, ಆಟೋ, ಟಾಟಾ ಮ್ಯಾಜಿಕ್, ಕ್ರೂಸರ್ ಮತ್ತು ಖಾಸಗಿ ಬಸ್‌ಗಳಿಂದ ಮಾಮೂಲು ಪಡೆಯುತ್ತಿದ್ದಾರೆ. ಈಗಿರುವ ಸರ್ಕಲ್ ಇನ್‌ಸ್ಪೆಕ್ಟರ್ ಬಂದಾಗಿನಿಂದ ಈ ಕೆಲಸ ನಡೆದಿದೆ. ಖಾಸಗಿ ಬಸ್‌ಗಳ ಮಾಲೀಕರಿಂದ ಲಂಚ ಪಡೆದು ನಗರದ ಬಸ್ ನಿಲ್ದಾಣ ಹತ್ತಿರ ಬಸ್‌ಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.

ನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಆಟೋ ನಿಲ್ದಾಣಗಳನ್ನು ಸ್ಥಾಪಿಸಬೇಕು. ವ್ಯಾಸಂಗ ಮಾಡದ ಆಟೋ ಚಾಲಕರಿಗೂ ಚಾಲನಾ ಪರವಾನಗಿ ನೀಡಬೇಕು. ಕೂಡಲೇ ಸಂಚಾರ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯ ಜೈಭೀಮ ದಳದ ಜಿಲ್ಲಾ ಅಧ್ಯಕ್ಷ ಮಾರುತಿ ಬಿ. ಕಂಟೆ, ಖಜಾಂಚಿ ತುಕಾರಾಮ ಗೌರೆ, ಪ್ರಮುಖರಾದ ರಮೇಶ ಸಾಗರ, ಅಂಬೇಡ್ಕರ್ ಸಾಗರ, ಕಪಿಲ್ ಧನಸಿರಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT