ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಹಿವಾಟು ಸ್ಥಗಿತ: ರೈತರ ಪ್ರತಿಭಟನೆ

ಸಾರಿಗೆ ಏಜೆನ್ಸಿ– ಹಮಾಲರ ನಡುವೆ ಹೊಂದಾಣಿಕೆ ಕೊರತೆ ನೀಗಿಸಲು ಆಗ್ರಹ
Last Updated 24 ಡಿಸೆಂಬರ್ 2013, 5:34 IST
ಅಕ್ಷರ ಗಾತ್ರ

ಹರಪನಹಳ್ಳಿ:  ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರದ ದಾಸ್ತಾನು ಸಾಗಾಣಿಕೆ ಏಜೆನ್ಸಿ ಹಾಗೂ ಹಮಾಲರ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಖರೀದಿ ಕೇಂದ್ರದಲ್ಲಿ ವಹಿವಾಟು ಸ್ಥಗಿತಗೊಂಡ ಪರಿಣಾಮ ರೈತರು ಸೋಮವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಮುಂಭಾಗದ ಮೊಳಕಾಲ್ಮುರು– ಎಕ್ಕುಂಬಿ ರಾಜ್ಯ ಹೆದ್ದಾರಿ– 2ರಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

'ಬೆಂಬಲ ಬೆಲೆ ಕೇಂದ್ರದಲ್ಲಿ ಖರೀದಿಸಿದ ಮೆಕ್ಕೆಜೋಳದ ದಾಸ್ತಾನನ್ನು ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಿಗೆ ಸಾಗಣೆ ಮಾಡಲು ಹೊಸದಾಗಿ ಗುತ್ತಿಗೆ ಪಡೆದುಕೊಂಡಿರುವ ಶಿವಮೊಗ್ಗ ಮೂಲದ ಸಾರಿಗೆ ಏಜೆನ್ಸಿ, ಮೆಕ್ಕೆಜೋಳದ ಚೀಲಗಳನ್ನು ಲಾರಿ ಲೋಡ್‌ ಮಾಡಲು ಪ್ರತಿ ಕ್ವಿಂಟಲ್‌ಗೆ ಕೇವಲ 
₨ 6 ಕೊಡುವುದಾಗಿ ಹೇಳುತ್ತಾರೆ. ಆದರೆ, ಹಿಂದಿನ ಏಜೆನ್ಸಿ ಕ್ವಿಂಟಲ್‌ ಚೀಲಕ್ಕೆ ₨ 10 ಕೊಡುತ್ತಿತ್ತು. ಹೀಗಾಗಿ ಹಿಂದಿನ ದರ ಕೊಟ್ಟರೆ ಮಾತ್ರ ನಾವು ಕೇಂದ್ರದಲ್ಲಿ ಕೆಲಸ ಮಾಡುತ್ತೇವೆ’ ಎಂದು ಶನಿವಾರದಿಂದಲೇ ಕೆಲಸ ಸ್ಥಗಿತಗೊಳಿಸಿದ್ದರು.

ಮೂರು ದಿನಗಳಿಂದಲೂ ಲಾರಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ತಂದ ಉತ್ಪನ್ನವನ್ನು ಖರೀದಿಸಲು ಮುಂದಾಗದ ಉಗ್ರಾಣ ನಿಗಮದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿ ದಿನ ₨ 3–4 ಸಾವಿರಕ್ಕೆ ಬಾಡಿಗೆ ಒಪ್ಪಂದ ಮಾಡಿಕೊಂಡು ಮೆಕ್ಕೆಜೋಳದ ಚೀಲಗಳನ್ನು ಖರೀದಿ ಕೇಂದ್ರದಲ್ಲಿ ಮಾರಾಟಕ್ಕೆ ತಂದಿದ್ದೇವೆ. ಆದರೆ, ಇಲ್ಲಿನ ಹಮಾಲರು ಹಾಗೂ ಸಾರಿಗೆ ಏಜೆನ್ಸಿ ನಡುವಿನ ಹೊಂದಾಣಿಕೆ ಕೊರತೆಯಿಂದ ನಮ್ಮ ಉತ್ಪನ್ನ ಖರೀದಿಸುತ್ತಿಲ್ಲ. ಮೂರು ದಿನಕ್ಕೆ ಸಾವಿರಾರು ರೂಪಾಯಿ ವಾಹನ ಬಾಡಿಗೆಗೆ ಕೊಡಬೇಕಾಗಿದೆ. ಪ್ರತಿ ದಿನ ವಿನಾಕಾರಣ ನೂರಾರು ರೂಪಾಯಿ ಖರ್ಚಾಗುತ್ತಿದೆ. ಜತೆಗೆ, ವಿಪರೀತ ಚಳಿ
ಇದೆ. ಇನ್ನೂ ಎಷ್ಟು ದಿನ ಹೀಗೆ ಬೀದಿಗಳಲ್ಲಿ ಕಾಯಬೇಕು’ ಎಂದು ಖರೀದಿ ಕೇಂದ್ರದ ಏಜೆನ್ಸಿ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಉತ್ಪನ್ನವನ್ನು ಖರೀದಿಸುವಂತೆ ಉಗ್ರಾಣ ನಿಗಮದ ವ್ಯವಸ್ಥಾಪಕ ಚಂದ್ರನಾಯ್ಕ ಅವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು.
ವ್ಯವಸ್ಥಾಪಕ ಚಂದ್ರನಾಯ್ಕ ಮಾತನಾಡಿ, ಖರೀದಿಸಿದ ಉತ್ಪನ್ನವನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಗೋದಾಮು ವ್ಯವಸ್ಥೆ ಇಲ್ಲ. ಇದ್ದರೂ, ಕಿಟಕಿ, ವಿಮೆ ಸೇರಿದಂತೆ ಮೂಲಸೌಕರ್ಯ ಇಲ್ಲ. ಹೀಗಾಗಿ ಖರೀದಿಸಲು ಸಮಯಾವಕಾಶ ಕೊಡುವಂತೆ ಮನವಿ ಮಾಡಿದರು. ಇದರಿಂದ ರೈತರ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆ ನಡೆಸಿದರು.

ಸ್ಥಳಕ್ಕೆ ದೌಡಾಯಿಸಿದ ಉಪ ವಿಭಾಗಾಧಿಕಾರಿ ಪಿ.ಎನ್‌.ಲೋಕೇಶ್‌, ಖರೀದಿ ಕೇಂದ್ರದ ಹಾಗೂ ಸಾರಿಗೆ ಏಜೆನ್ಸಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕೂಡಲೇ ವಹಿವಾಟು ಆರಂಭಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ವಿನಾಕಾರಣ ರೈತರಿಗೆ ತೊಂದರೆ ಉಂಟಾಗದಂತೆ ಉತ್ಪನ್ನ ಖರೀದಿಸಲು ತಾಕೀತು ಮಾಡಿ, ವಾತಾವರಣ ತಿಳಿಗೊಳಿಸಿದರು.

ತಹಶೀಲ್ದಾರ್‌ ಸಿ.ಡಿ.ಗೀತಾ, ಎಪಿಎಂಸಿ ಅಧ್ಯಕ್ಷ ಕೆ.ಶಿವಪ್ಪ, ಹಮಾಲರ ಸಂಘದ ಅಧ್ಯಕ್ಷ ಉಚ್ಚಂಗೆಪ್ಪ, ಚಿಕ್ಕೇರಿ ಬಸಪ್ಪ, ಪಿಎಸ್‌ಐ ವಸಂತ ವಿ.ಅಸೋದಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT