ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗ್ದಂಡನೆ ತಪ್ಪಿಸಿಕೊಂಡ ನ್ಯಾಯಮೂರ್ತಿ ಸೆನ್

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋಲ್ಕತ್ತ ಹೈಕೋರ್ಟ್ ನ್ಯಾಯಾಧೀಶರ ಸ್ಥಾನಕ್ಕೆ ನ್ಯಾಯಮೂರ್ತಿ ಸೌಮಿತ್ರ ಸೆನ್‌ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಯನ್ನು ಲೋಕಸಭೆ ಕೈಬಿಟ್ಟಿದೆ. ಇದರಿಂದಾಗಿ ಅವರು ವಾಗ್ದಂಡನೆಯಿಂದ ತಪ್ಪಿಸಿಕೊಂಡಂತೆ ಆಗಿದೆ.

ಲೋಕಸಭೆ ಸೋಮವಾರ ಮಧ್ಯಾಹ್ನದ ಕಲಾಪದಲ್ಲಿ ಸೆನ್ ವಿರುದ್ಧ ವಾಗ್ದಂಡನೆ ವಿಧಿಸಬೇಕಿತ್ತು. ಆದರೆ ಕಾನೂನು ಸಚಿವ ಸಲ್ಮಾನ್‌ಖುರ್ಷಿದ್ ಅವರು ಸೆನ್ ರಾಜೀನಾಮೆ ಮಾಹಿತಿ ನೀಡಿದ ಬಳಿಕ ಸದನದ ಅಭಿಪ್ರಾಯದಂತೆ ವಾಗ್ದಂಡನೆ ಕೈಬಿಡಲಾಯಿತು.

ಕೋಲ್ಕತ್ತ ಹೈಕೋರ್ಟ್‌ನಲ್ಲಿ ರಿಸೀವರ್ ಆಗಿದ್ದಾಗ (ವ್ಯಾಜ್ಯಕ್ಕೊಳಗಾದ ಆಸ್ತಿಯ ನಿರ್ವಹಣೆಗಾಗಿ ಕೋರ್ಟ್‌ನ ಆಜ್ಞೆಯಿಂದ ನೇಮಕವಾದ ಹುದ್ದೆ) ಸೆನ್ `ಹಣ ದುರುಪಯೋಗ~ ಮಾಡಿದ್ದಕ್ಕೆ ಮತ್ತು `ದುರ್ವರ್ತನೆ~ ತೋರಿದ್ದಕ್ಕೆ ಸದನವು ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಕೈಗೊಳ್ಳಬೇಕಿತ್ತು.

ಮಧ್ಯಾಹ್ನ 2 ಗಂಟೆಗೆ ಸಭೆ ಸಮಾವೇಶಗೊಂಡು ಕಲಾಪ ಆರಂಭವಾದಾಗ ಖುರ್ಷಿದ್ ಮಾತನಾಡಿ, ಸೆನ್‌ಸೆ.1ರಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ ಎಂದರು.ಆಗ ಸ್ಪೀಕರ್ ಮೀರಾಕುಮಾರ್‌ಅವರು, ನ್ಯಾ. ಸೆನ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಯನ್ನು ಕೈಬಿಡುವ ಬಗ್ಗೆ ಸದನದ ಅಭಿಪ್ರಾಯ ಕೋರಿದರು.

`ಕಾರ್ಯಕ್ರಮ ಪಟ್ಟಿಯಲ್ಲಿರುವ ಸಂಖ್ಯೆ 12ರ ವಿಷಯದೊಂದಿಗೆ ಮುಂದುವರಿಯುವುದು ಬೇಡವೆಂಬುದು ಸದನದ ಅಭಿಪ್ರಾಯವೇ~ ಎಂದು ಸ್ಪೀಕರ್ ಕೇಳಿದರು. ಸದಸ್ಯರು `ಹೌದು~ ಎಂದು ಉತ್ತರಿಸಿದಾಗ ಸ್ಪೀಕರ್ `ಸದನ ಇದನ್ನು ಒಪ್ಪಿದೆ~ ಎಂದರು.

ಇದಕ್ಕೂ ಮುನ್ನ, ಬೆಳಿಗ್ಗೆ ಸ್ಪೀಕರ್ ಈ ಬಗ್ಗೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಜತೆ ಚರ್ಚಿಸಿದ್ದರು. ನ್ಯಾ. ಸೆನ್ ವಾಗ್ದಂಡನೆಯನ್ನು ರಾಜ್ಯಸಭೆ ಆ.18ರಂದು ಅಂಗೀಕರಿಸಿತ್ತು. ಸೆನ್ ರಾಜೀನಾಮೆ ಬಗ್ಗೆ ಸರ್ಕಾರ ಭಾನುವಾರ ಅಧಿಸೂಚನೆ ಹೊರಡಿಸಿದ್ದರೂ ವಾಗ್ದಂಡನೆ ವಿಧಿಸುವ ವಿಷಯವು ಲೋಕಸಭೆಯು ಸೋಮವಾರದ ಕಾರ್ಯಕ್ರಮ ಪಟ್ಟಿಯಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT