ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಜಾರಿ

Last Updated 14 ಅಕ್ಟೋಬರ್ 2012, 7:20 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯೂ ಸೇರಿದಂತೆ ಬೆಂಗಳೂರು ಮತ್ತು ಮೈಸೂರು ವಿಭಾಗಗಳ 17 ಜಿಲ್ಲೆಗಳಲ್ಲಿ ಇಂದಿನಿಂದಲೇ (ಶನಿವಾರ) `ವಾಜಪೇಯಿ ಆರೋಗ್ಯ ಶ್ರೀ~ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಪ್ರಕಟಿಸಿದರು.

ಶುಭಮಂಗಳ ಸೇವಾ ಟ್ರಸ್ಟ್ ನಗರದ ಕೋಟೆ ರಸ್ತೆಯ ವಾಸವಿ ಶಾಲೆ ಮತ್ತು ಮಹಾವೀರ ಶಾಲಾ ಆವರಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ `ಆರೋಗ್ಯಕ್ಕಾಗಿ ಬೃಹತ್ ಮೇಳ~ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ ರೇಖೆಗಿಂತ ಕೆಳಗಿರುವವರಿಗೆ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ `ವಾಜಪೇಯಿ ಆರೋಗ್ಯ ಶ್ರೀ~ ಯೋಜನೆ ವ್ಯಾಪ್ತಿಗೆ ಶಿವಮೊಗ್ಗ ಜಿಲ್ಲೆಯನ್ನು ಇಂದಿನಿಂದಲೇ ಜಾರಿಗೆ ಬರಲಿದೆ. ಹೃದಯ, ಕ್ಯಾನ್ಸರ್, ನರರೋಗ ಸೇರಿದಂತೆ ಏಳು ಗಂಭೀರ ಕಾಯಿಲೆಗಳ ಶಸ್ತ್ರಚಿಕಿತ್ಸೆಗೆ ಆಯ್ದ 130 ಆಸ್ಪತ್ರೆಗಳಲ್ಲಿ ರೂ.1.50 ಲಕ್ಷಗಳ ವರೆಗೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದರು.

ಜಿಲ್ಲೆಯಲ್ಲಿ ನಂಜಪ್ಪ ಆಸ್ಪತ್ರೆ, ನಂಜಪ್ಪ ಲೈಫ್‌ಕೇರ್, ಮಲ್ನಾಡ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ, ಮಲ್ಲಿಕಾರ್ಜುನ ಆಸ್ಪತ್ರೆ, ಭದ್ರಾ ನರ್ಸಿಂಗ್ ಹೋಂನಲ್ಲಿ `ವಾಜಪೇಯಿ ಆರೋಗ್ಯ ಶ್ರೀ~ ಯೋಜನೆ ಸೌಲಭ್ಯ ದೊರೆಯಲಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತಾಯಿ-ಮಗು ಆರೈಕೆ: ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಸೂಚನೆ ಶೀಘ್ರದಲ್ಲೇ ತಾಯಿ ಮತ್ತು ಮಗುವಿನ ರಕ್ಷಣೆ ಮಾಡುವಂತಹ ಯೋಜನೆಯೊಂದನ್ನು ಜಾರಿಗೆ ತರಲಾಗುವುದು. ಈ ಕುರಿತ ರೂಪು-ರೇಷೆಗಳು ಸಿದ್ಧವಾಗುತ್ತಿವೆ ಎಂದರು.

ಮಗು ಹುಟ್ಟಿದಾಗಿನಿಂದ ಐದು ವರ್ಷದವರೆಗೂ ತಾಯಿ-ಮಗುವನ್ನು ಆರೈಕೆ ಮಾಡುವುದು ಈ ಯೋಜನೆಯ ಉದ್ದೇಶ ಎಂದು ವಿವರಿಸಿದರು.

ರಾಜಕೀಯ ಒತ್ತಡಗಳ ನಡುವೆಯೂ ಬಡಜನರ ಸೇವೆ ಮಾಡುತ್ತಿರುವುದು ಉತ್ತಮ ಕಾರ್ಯ. ಈ ಮೇಳದಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿರುವ ಬಿಪಿಎಲ್ ಕಾರ್ಡ್ ಹೊಂದಿದವರಿಗೆ `ವಾಜಪೇಯಿ ಆರೋಗ್ಯ ಶ್ರೀ~ ಯೋಜನೆಯಡಿ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಬಡಜನರ ನೆರವಿಗಾಗಿ `ವಾಜಪೇಯಿ ಆರೋಗ್ಯ ಶ್ರೀ~ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದರು.
13 ಸಾವಿರ ಜನ ನೋಂದಣಿ: ಪ್ರಾಸ್ತಾವಿಕ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಕೆ.ಇ. ಕಾಂತೇಶ್, ಇಂದಿನ ಆರೋಗ್ಯ ಮೇಳಕ್ಕೆ 13 ಸಾವಿರ ಜನ ನೊಂದಣಿ ಮಾಡಿಸಿಕೊಂಡಿದ್ದಾರೆ. ್ಙ 15 ಲಕ್ಷ ಔಷಧವನ್ನು ಉಚಿತವಾಗಿ ವಿತರಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ 150 ವೈದ್ಯರು ಆಗಮಿಸಿದ್ದಾರೆ ಎಂದರು.

 ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಶಾಸಕ ಕೆ.ಜಿ. ಕುಮಾರಸ್ವಾಮಿ, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಜಯದೇವ ಆಸ್ಪತ್ರೆಯ ಡಾ.ಜಯರಾಂ, ಸಂಜಯ್‌ಗಾಂಧಿ ಆಸ್ಪತ್ರೆಯ ಡಾ.ತಿಲಕ್, ವಾಸನ್ ಐ ಕೇರ್‌ನ ಡಾ.ಸುಂದರ ಮುರುಗಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ ರೆಡ್ಡಿ, ಡಾ.ಲೇಪಾಕ್ಷಿ, ಡಾ.ಗಂಗಧರ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT