ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟಾಳ್‌ ಪಕ್ಷದ ಕಾರ್ಯಕರ್ತ, ಕುಟುಂಬ ಸದಸ್ಯರ ಆತ್ಮಹತ್ಯೆ

ಮಕ್ಕಳೊಂದಿಗೆ ಆಹಾರದಲ್ಲಿ ವಿಷ ತಿಂದ ದಂಪತಿ
Last Updated 12 ಡಿಸೆಂಬರ್ 2013, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಳವಳಿ ವಾಟಾಳ್‌ ಪಕ್ಷದ ಕಾರ್ಯಕರ್ತ ಗೋಪಿ (45) ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬುಧವಾರ ರಾತ್ರಿ ಆಹಾರದಲ್ಲಿ ವಿಷ ಬೆರೆಸಿ­ಕೊಂಡು ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಬೈಯಪ್ಪನಹಳ್ಳಿ ಬಳಿಯ ಸಂಜೀವಪ್ಪ ಲೇಔಟ್‌ನ 10ನೇ ‘ಬಿ’ ಅಡ್ಡರಸ್ತೆಯ ನಿವಾಸಿ ಗೋಪಿ, ಅವರ ಪತ್ನಿ ಜಯಶ್ರೀ (38), ಮಗ ದಿಲೀಪ್‌ (17) ಮತ್ತು ಮಗಳು ಸಂಚಿತಾ (14) ರಾತ್ರಿ ಊಟದಲ್ಲಿ ವಿಷ ಬೆರೆಸಿಕೊಂಡು ತಿಂದಿದ್ದಾರೆ. ನಂತರ ಗೋಪಿ, ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಮೊಬೈಲ್‌ಗಳಿಗೆ ಸಂಬಂಧಿ­ಕರು ಹಾಗೂ ಸ್ನೇಹಿತರು ಗುರುವಾರ ಬೆಳಿಗ್ಗೆ ಹಲವು ಬಾರಿ ಕರೆ ಮಾಡಿ­ದ್ದಾರೆ. ಆದರೆ, ಕರೆ ಸ್ವೀಕರಿಸಿಲ್ಲ. ಇದ­ರಿಂದ ಅನುಮಾನ­ಗೊಂಡ ನಾರಾಯ­ಣ­­ಸ್ವಾಮಿ ಎಂಬ ಸಂಬಂಧಿಕರೊಬ್ಬರು ಸಂಜೆ ಆರು ಗಂಟೆ ಸುಮಾರಿಗೆ ಮನೆಯ ಬಳಿ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ನಡುಮನೆಯಲ್ಲಿ ಗೋಪಿ ಮತ್ತು ದಿಲೀಪ್‌, ಮಲಗುವ ಕೊಠಡಿಯಲ್ಲಿ ಜಯಶ್ರೀ ಹಾಗೂ ಸಂಚಿತಾ ಅವರ ಶವಗಳು ಪತ್ತೆಯಾಗಿವೆ. ಅವರ ಮನೆಯ ಒಳ ಭಾಗದಲ್ಲಿ ಮತ್ತು ಮುಂಬಾಗಿಲ ಬಳಿ ಸಿ.ಸಿ ಟಿ.ವಿ ಕ್ಯಾಮೆರಾಗಳಿವೆ. ಆ ಕ್ಯಾಮೆರಾಗಳಿಂದ ಘಟನೆಯ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಗೋಪಿ, ಸುಮಾರು 20 ವರ್ಷಗಳಿಂದ ಜತೆಗಿದ್ದ. ನನ್ನ ಬಲಗೈನಂತಿದ್ದ ಆತನನ್ನು ಕಳೆದು­ಕೊಂಡು ತುಂಬಾ ದುಃಖವಾಗಿದೆ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗ­ರಾಜ್‌ ಸುದ್ದಿಗಾರರಿಗೆ ತಿಳಿಸಿದರು.

ಗೋಪಿ ಅವರು ಬೆನ್ನಿಗಾನಹಳ್ಳಿ, ನಾಗವಾರಪಾಳ್ಯ ಮತ್ತು ಹಲಸೂರಿನಲ್ಲಿ ಜೆರಾಕ್ಸ್‌ ಹಾಗೂ ಡಿ.ವಿ.ಡಿ ಅಂಗಡಿಗಳನ್ನು ಇಟ್ಟುಕೊಂ­ಡಿದ್ದರು. ದಿಲೀಪ್‌, ತುಮಕೂರಿನ ಸಿದ್ಧಗಂಗಾ ಮಠದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಸಂಚಿತಾ, ದೇವಸಂದ್ರದ ಭಾರತೀಯ ವಿದ್ಯಾನಿಕೇತನ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಜಯಶ್ರೀ, ಗೃಹಿಣಿಯಾಗಿದ್ದರು.

ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅನ್ಯೋನ್ಯವಾಗಿದ್ದರು: ‘ಅಣ್ಣನಿಗೆ ಆರ್ಥಿಕ ತೊಂದರೆ ಇರಲಿಲ್ಲ. ದಂಪತಿ ಅನ್ಯೋನ್ಯವಾಗಿದ್ದರು. ಅಣ್ಣ ಮತ್ತು ಆತನ ಕುಟುಂಬ ಸದಸ್ಯರು ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಗೊತ್ತಿಲ್ಲ’ ಎಂದು ಗೋಪಿ ಅವರ ತಮ್ಮ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.


‘ದೊಡ್ಡಪ್ಪ ಕುಟುಂಬ ಸದಸ್ಯರೊಂದಿಗೆ ಸೇರಿ ಮನೆಯ ಮುಂಭಾಗದಲ್ಲೇ ರಾತ್ರಿ ಸ್ನೇಹಿತರೊಬ್ಬರ ಹುಟ್ಟುಹಬ್ಬ ಆಚರಿಸಿದ್ದರು. ಎಲ್ಲರೂ ಒಟ್ಟಿಗೆ ಕೇಕ್‌ ತಿಂದು ಸಂಭ್ರಮಿಸಿದ್ದೆವು. ದಿಲೀಪ್‌, ಅನಾರೋಗ್ಯದ ಕಾರಣಕ್ಕೆ ನಾಲ್ಕು ದಿನಗಳ ಹಿಂದೆ ತುಮಕೂರಿನಿಂದ ಮನೆಗೆ ಬಂದಿದ್ದ’ ಎಂದು ಕೃಷ್ಣಮೂರ್ತಿ ಅವರ ಮಗಳು ಬಿಂದುಶ್ರೀ ಹೇಳಿದರು.

ಕೃಷ್ಣಮೂರ್ತಿ, ಕುಟುಂಬ ಸದಸ್ಯರೊಂದಿಗೆ ಗೋಪಿ ಅವರ ಮನೆಯ ಕೆಳಗಿನ ಅಂತಸ್ತಿನಲ್ಲೇ ನೆಲೆಸಿದ್ದಾರೆ.

ಸಾಲ ಕೊಡಬೇಕಿತ್ತು: ‘ಹಲವರು ನನಗೆ ಲಕ್ಷಾಂತರ ರೂಪಾಯಿ ಸಾಲ ಕೊಡಬೇಕಿತ್ತು. ನಾಗವಾರಪಾಳ್ಯದಲ್ಲಿ ಸಂಬಂಧಿಕರ ಮಳಿಗೆಯನ್ನು ರೂ 2.50 ಲಕ್ಷಕ್ಕೆ ಭೋಗ್ಯಕ್ಕೆ ಪಡೆದು ಡಿ.ವಿ.ಡಿ ಅಂಗಡಿ ಇಟ್ಟಿದ್ದೆ. ಆ ಹಣವನ್ನು ಸಂಬಂಧಿಕರ ಮಕ್ಕಳ ಮದುವೆ ಖರ್ಚಿಗೆ ಬಳಸಿ. ಸ್ನೇಹಿತನ ಜತೆ ಸೇರಿ ಮಂಡ್ಯದ ಬಳಿ ನಾಲ್ಕು ಎಕರೆ ಜಮೀನು ಖರೀದಿಸಿದ್ದೆ. ಆ ಜಮೀನಿನಲ್ಲಿ ಎರಡು ಎಕರೆಯನ್ನು ಸಂಬಂಧಿಕರಿಗೆ ಕೊಡಿ. ನಮ್ಮ ಸಾವಿಗೆ ಯಾರೂ ಕಾರಣರಲ್ಲ. ದಯವಿಟ್ಟು ಕ್ಷಮಿಸಿ’ ಎಂದು ಗೋಪಿ ಪತ್ರ ಬರೆದಿಟ್ಟಿದ್ದಾರೆ. ಅಲ್ಲದೇ, ಆ ಪತ್ರದ ಒಂದೊಂದು ಜೆರಾಕ್ಸ್‌ ಪ್ರತಿಯನ್ನು ಪತ್ನಿ ಮತ್ತು ಮಕ್ಕಳ ಶವದ ಬಳಿ ಇರಿಸಿದ್ದಾರೆ. ನಡುಮನೆಯಲ್ಲಿ ಆ ಪತ್ರದ ಜತೆಗೆ ರೂ 1 ಲಕ್ಷ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT