ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ - ಉದ್ಯಮ ಮೈತ್ರಿಗೆ ಆದ್ಯತೆ

ಬ್ರಿಟನ್ ಪ್ರಧಾನಿ ಭಾರತ ಪ್ರವಾಸ
Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್‌ಎಸ್): ವಾಣಿಜ್ಯೋದ್ಯಮ ಕ್ಷೇತ್ರದ ನೂರು ಪ್ರತಿನಿಧಿಗಳು ಮತ್ತು ಸಚಿವರ ತಂಡದೊಂದಿಗೆ ಆಗಮಿಸಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರ ಪ್ರವಾಸದ ಕಾರ್ಯಕ್ರಮ ಪಟ್ಟಿಯಲ್ಲಿ ಭಾರತದೊಂದಿಗಿನ ವಾಣಿಜ್ಯ ಮತ್ತು ಉದ್ಯಮ ಸಂಬಂಧವೇ ಆದ್ಯತೆ ವಿಷಯವಾಗಿದೆ.

ಸೋಮವಾರ ಬೆಳಿಗ್ಗೆ ಮುಂಬೈನಲ್ಲಿ ಹಿಂದೂಸ್ತಾನ್ ಯುನಿಲಿವರ್  ಪ್ರಧಾನ ಕಚೇರಿಗೆ ಭೇಟಿ ನೀಡಿದ ಕೆಮರಾನ್, ನಂತರ ವಾಣಿಜ್ಯೋದ್ಯಮಿಗಳ ಜತೆ ಭೋಜನ ಕೂಟದಲ್ಲಿ ಭಾಗವಹಿಸಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅವಕಾಶಗಳ ಹುಡುಕಾಟ
2012ರ ಕಡೆಯ ಮೂರು ತ್ರೈಮಾಸಿಕಗಳಲ್ಲಿಯೂ ಪ್ರಗತಿಯ ಹಾದಿಯಲ್ಲಿ ಸತತವಾಗಿ ಮುಗ್ಗರಿಸಿದ ಬ್ರಿಟನ್, ಸದ್ಯ ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಭಾರತದಲ್ಲಿನ ವಾಣಿಜ್ಯ-ಉದ್ಯಮ ಕ್ಷೇತ್ರದಲ್ಲಿನ ಅವಕಾಶಗಳತ್ತ ದೃಷ್ಟಿ ನೆಟ್ಟಿರುವ ಪ್ರಧಾನಿ ಕೆಮರಾನ್, ಉದ್ಯಮಿಗಳ ತಂಡದೊಂದಿಗೇ ಆಗಮಿಸಿದ್ದಾರೆ.

ಪ್ರಸ್ತುತ ಭಾರತ-ಬ್ರಿಟನ್ ನಡುವಿನ ವಾಣಿಜ್ಯ ವಹಿವಾಟು 2010-11ರಲ್ಲಿ 1256 ಕೋಟಿ ಡಾಲರ್(ರೂ.66568 ಕೋಟಿ) ಇದ್ದುದು, 2011-12ರಲ್ಲಿ 1615.70 ಕೋಟಿ ಡಾಲರ್‌ಗೆ (ರೂ.85632 ಕೋಟಿಗೆ) ಹೆಚ್ಚಿದೆ. 2004ರಲ್ಲಿ ವಾಣಿಜ್ಯ ಪಾಲುದಾರಿಕೆ ಕಾರ್ಯಶೈಲಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡ ನಂತರ ಎರಡೂ ದೇಶಗಳ ನಡುವಿನ ರಫ್ತು-ಆಮದು ವಹಿವಾಟು ಹೆಚ್ಚುತ್ತಾ ಬಂದಿದೆ.

ಪ್ರಧಾನಿ ಕೆಮರಾನ್ ಅವರು ನವದೆಹಲಿಯಲ್ಲಿ ಮಂಗಳವಾರ ಭಾರತೀಯ ವಾಣಿಜ್ಯೋದ್ಯಮ ಸಂಘಟನೆ(ಸಿಐಐ), `ಅಸೋಚಾಂ', ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳ ಒಕ್ಕೂಟ(ಎಫ್‌ಐಸಿಸಿಐ) ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಎರಡೂವರೆ ವರ್ಷದ(2010ರ ಜುಲೈ) ನಂತರ ಮತ್ತೊಮ್ಮೆ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ, ಭಾರತ-ಬ್ರಿಟನ್ ವಾಣಿಜ್ಯ ಸಂಬಂಧ 21ನೇ ಶತಮಾನದ ಮಹತ್ವದ ಮೈತ್ರಿಯಾಗಿದೆ ಎಂದು ಬಣ್ಣಿಸಿದ್ದಾರೆ.

ಏಷ್ಯಾ-ಆಫ್ರಿಕಾ ಮಾರುಕಟ್ಟೆ: ಬ್ರಿಟನ್ ಪ್ರಧಾನಿ ಮತ್ತು ಉದ್ಯಮಿಗಳ ತಂಡಕ್ಕಾಗಿ ತಾಜ್ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಭೋಜನ ಕೂಟದಲ್ಲಿ ಮಾತನಾಡಿದ ರತನ್ ಟಾಟಾ, ಭಾರತ ಮತ್ತು ಬ್ರಿಟನ್ ವಾಣಿಜ್ಯ-ಉದ್ಯಮದಲ್ಲಿ ಉತ್ತಮ ಪಾಲುದಾರ ದೇಶಗಳಾದರೆ ಭಾರತದ ಮಾರುಕಟ್ಟೆಯಲ್ಲಷ್ಟೇ ಅಲ್ಲ, ಏಷ್ಯಾ ಮತ್ತು ಆಫ್ರಿಕಾದಂತಹ ಮೂರನೇ ಮಾರುಕಟ್ಟೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸಬಹುದು. ಹೆಚ್ಚಿನ ಪ್ರಗತಿ ಕಾಣಬಹುದು ಎಂದು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT